ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಜಂಕ್ಷನ್, ಉಂಬ್ಳೇಬೈಲ್ ಸೇರಿದಂತೆ ಭದ್ರಾವತಿ ಗ್ರಾಮೀಣ ಭಾಗ ಮತದಾರರ ಒಲವು-ನಿಲುವು ಹೀಗಿದೆ:
ತಿಮ್ಲಾಪುರ ಗ್ರಾಮ(ಭದ್ರಾವತಿ ನಗರಸಭೆಯ 23ನೆಯ ವಾರ್ಡ್):
ಪ್ರಸ್ತುತ ಲೋಕಸಭಾ ಚುನಾವಣಾ ಪ್ರಚಾರ ಪ್ರಕ್ರಿಯೆಯ ಬಗ್ಗೆ ಇಲ್ಲಿಯವರೆಗೂ ಯಾರೂ ಬಂದು ನಮ್ಮನ್ನ ಕಂಡಿಲ್ಲ, ಮಾತಾಡಿಸಿಲ್ಲ. ಐನೂರು ಮನೆಗಳಿವೆ. ನಾವು ಕೇಳೋದಿಷ್ಟೆ, ಎಂಪಿಎಂ ಶುರು ಮಾಡಿ ಮತ್ತೆ ವಿಐಎಸ್’ಎಲ್’ಗೆ ಚೇತರಿಕೆ ತನ್ನಿ. ಆದರೆ ಯಾರೂ ಈವರೆಗೆ ಮಾಡಿಲ್ಲ. ಸಾವಿರದ ನೂರು ಮತಗಳಿವೆ. ಲೋಕಲ್ ಆಗಿ ನಮಗೆ ಸಮಸ್ಯೆ ಇದೆ. ಹಾಗಾಗಿ ನಾವು ಜೆಡಿಎಸ್ ಪರ. ಆದರೆ ಕೇಂದ್ರದಲ್ಲಿ ನಮ್ಮ ಒಲವು ಮೋದೀಜಿಗೇ…!
“““““““““““
ಇಲ್ಲಿನ ಹಳೇಮಂದಿ ಪಕ್ಷಾಧರಿತ. ಅವರು ಕಾಂಗ್ರಸ್ಸು ಅಂದ್ರೆ ಯಾವತ್ತಿಗೂ ಅದೇ. ಅಂಥವರನ್ನ ಬದಲಿಸಲಿಕ್ಕೆ ಸಾಧ್ಯವಿಲ್ಲ. ಸ್ಥಳೀಯ ನಮ್ಮ ಬೆಂಬಲ ಜೆಡಿಎಸ್, ಕೇಂದ್ರದಲ್ಲಿ ಮೋದೀಜಿಯನ್ನು ಕೂರಿಸಬೇಕು .ಇಲ್ಲಿಗೆ ಯಡ್ಯೂರಪ್ಪನವರಾಗಲೀ ರಾಘವೇಂದ್ರ ಆಗಲೀ ಭೇಟಿ ನೀಡಿಯೇ ಇಲ್ಲ. ಬಡವರನ್ನ ಮಾತಾಡಿಸುವವರೇ ಇಲ್ಲ ಎಂದು ದುಮ್ಮಾನ ತೋಡಿಕೊಂಡರು. ಇದಕ್ಕೂ ಮಿಗಿಲಾಗಿ ವಿಐಎಸ್’ಎಲ್ ವೀಕು, ಎಂಪಿಎಂ ಮುಚ್ಚಿತು. ಬಿಜೆಪಿ ಆಡಳಿತದಲ್ಲಿದ್ದಾಗಲೂ ಯಾಕೆ ಕ್ರಮಕೈಗೊಳ್ಳಲಿಲ್ಲ? ಅವರದ್ದೇ ಸರ್ಕಾರ ಕೇಂದ್ರದಲ್ಲಿದೆ. ಆದರೆ, ಏನು ಮಾಡಿದರು?
ಬಾಳೆಮಾರನಹಳ್ಳಿ, ಅರಳಿಕೊಪ್ಪ ಪಂಚಾಯತ್’ನ ಮುಖ್ಯಗ್ರಾಮ:
ಸುಮಾರು ಮುನ್ನೂರು ಮತದಾರರಿದ್ದಾರೆ. ಕೃಷಿಕ ಮೋಹನ್ ಮಾತನಾಡಿ, ಇಲ್ಲಿ ವೋಟು ಕೇಳಲು ಇನ್ನೂ ಯಾರೂ ಬಂದಿಲ್ಲ. ಜೆಡಿಎಸ್ ಪರ ಒಲವೇ ಜಾಸ್ತಿ ಇದೆ. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಜೆಡಿಎಸ್ ಗೆ ಲೀಡ್ ಬಂದಿತ್ತು. ಈ ಸಾರಿ ಐಟಿ ದಾಳಿ ಮಾಡಿಸಿದ ಬಿಜೆಪಿ ಕೇಂದ್ರ ಸರ್ಕಾರದ ಕ್ರಮ ಸಾಧುವಲ್ಲ. ಯಾಕ್ರೀ ಕೇವಲ ಕಾಂಗ್ರೆಸ್ಸು, ಜೆಡಿಎಸ್ ನವರ ಹತ್ತಿರ ಮಾತ್ರ ಹಣ ಇದ್ಯಾ? ಬಿಜೆಪಿ ಅವರ ಹತ್ರ ಇಲ್ವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನೋರ್ವ ರೈತ ಶಿವಕುಮಾರ್ ಇದಕ್ಕೆ ಅವರು ಕೂಡಲೇ ಮಾತಿನ ಜಟಾಪಟಿ ಶುರು ಮಾಡಿದರು. ಟೀವಿ ಕಾರ್ಯಕ್ರಮದ ರೀತಿಯಿತ್ತು ಅವರೀರ್ವರ ಮಾತುಕತೆ. ಅಲ್ಲಿಂದ ನಮ್ಮ ತಂಡ ಹೊರಡುವಷ್ಟರಲ್ಲಿ ಸಾಕುಸಾಕಾಯಿತು.
ಅರಳಿಕೊಪ್ಪ ಗ್ರಾಮ:
ಒಂದು ಸಾವಿರ ಮತದಾರರಿದ್ದಾರೆ. ಇಲ್ಲಿಗೆ ಯಾರೂ ಬಂದಿಲ್ಲ. ಎಲೆಕ್ಷನ್ ಮೂರುದಿನ ಇದ್ದಾಗ ಬರ್ತಾರೆ. ಇಲ್ಲಿ ಕೂಲಿಜನ ಜಾಸ್ತಿ. ಹಣದ ಪ್ರಭಾವ ನಡೆಯುತ್ತೆ ಎನ್ನು ಅರ್ಥ ಬರುವಂತೆ ಮೂಗಿಮ್ಮಾಗಿ ಮಾತಾಡಿ… ಹೀಗಾಗಿ ಮೋದಿ ಇಲ್ಲ, ಮೈತ್ರೀನೂ ಇಲ್ಲ…
ಬೊಮ್ಮನಕಟ್ಟೆ(ಭದ್ರಾವತಿ ನಗರಸಭೆಯ 24ನೆಯ ವಾರ್ಡ್)
ಅಂದಾಜು 3800 ಮತದಾರರಿರುವ ಗ್ರಾಮ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಕ್ಕೆ ಲೀಡ್ ಕೊಡಲಾಗಿತ್ತು. ಈಗ ಮೋದಿ ಬಗ್ಗೆ ಒಲವು ಕಂಡುಬರುತ್ತಿದೆ.
ಹಿರಿಯೂರು ಪಂಚಾಯತ್ ಕೇಂದ್ರ
ಅಂದಾಜು 4000 ಮತಗಳಿರುವ ಪ್ರದೇಶ ಇದು. ಇಲ್ಲಿ ಎರಡೂ ಪಕ್ಷಗಳಿಗೂ ಸಮ ಸಮ ಬಲವಿದೆ. ಇಬ್ಬರೂ ಹೋರಾಡಲೇಬೇಕು. ಆದರೆ, ಈವರೆಗೂ ಯಾರೂ ಬಂದಿಲ್ಲ.
ಲಕ್ಕವಳ್ಳಿ ಜಂಕ್ಷನ್:
ಈ ಭಾಗದಲ್ಲಿ ಎರಡೂ ಪಕ್ಷಗಳು ಬಹುತೇಕ ಸಮಬಲ ಹೊಂದಿದ್ದರೂ, ಜೆಡಿಎಸ್’ಗೆ ಹೆಚ್ಚು ಒಲವಿದೆ ಎಂದೇ ಹೇಳಬಹುದು. ಸ್ಥಳೀಯ ಜೆಡಿಎಸ್ ಮುಖಂಡರು ಹಾಗೂ ಮಾಜಿ ಶಾಸಕರಿಂದಾಗಿ ಇಲ್ಲಿ ಆ ಪಕ್ಷದ ಪ್ರಭಾವ ಹೆಚ್ಚು.
ಇಲ್ಲಿ ಸುಮಾರು 4400 ಮತಗಳಿವೆ. ವಿಧಾನಸಭೆಗೆ ನಾವು ಜೆಡಿಎಸ್ ಪರ. ಆದರೆ, ಈಗ ಲೋಕಸಭಾ ಚುನಾವಣೆಯಾದ್ದರಿಂದ ನಾವು ಬಿಜೆಪಿಗೆ ಬೆಂಬಲಿಸೋದು. ದೇಶಕ್ಕೆ ಮೋದಿ ಮತ್ತೆ ಪ್ರಧಾನಿಯಾಗಲೇಬೇಕು.
ಮಲ್ಲಿಗೇನಹಳ್ಳಿ:
ನಮ್ಮ ಗ್ರಾಮದ ಮತದಾರ ದೊಡ್ಡ ಆಕಾಂಕ್ಷೆಯಿಟ್ಟುಕೊಂಡಿದ್ದಾನೆ. ಆ ಗ್ರಾಮದಲ್ಲಿ ಚಾಮುಂಡೇಶ್ವರಿ ದೇವಸ್ಥಾನ ನಿರ್ಮಾಣವಾಗಬೇಕಿದೆ. ಯಾರು ಭರವಸೆ ಕೊಡುತ್ತಾರೋ ಅವರಿಗೇ ಸಾರಾಸಗಟು ಓಟು. ಇದು ಅಲ್ಲಿ ಒಮ್ಮತದ ನಿರ್ಧಾರ. ಹಿಂದಿನ ಜೆಡಿಎಸ್ ಶಾಸಕರಿಂದ ರಸ್ತೆ, ಚರಂಡಿಯಾಗಿದೆ.
ಈಗ ದೇವಾಲಯ ಬೇಕು.
ಕಣಗಲಸರ(ಉಂಬ್ಳೆಬೈಲ್ ಪಂಚಾಯತ್)
ಮಹೇಶ್, ಪ್ರಶಾಂತ್ ಮತ್ತು ಕಿರಣ್ ಎಂಬ ಯುವಕರು ಮೊದಲ ಬಾರಿಗೆ ವೋಟಿನ ಹಕ್ಕು ಪಡೆದ ಖುಷಿಯಲ್ಲಿದ್ದರು. ಇಲ್ಲಿ ಸುಮಾರು 450 ಮತಗಳಿದ್ದು, 40-45ರಿಂದ ಯುವ ಮತದಾರಿದ್ದಾರೆ. ಮೋದಿಗೇ ನಮ್ಮ ಮತ ಎಂದರು.
ಉಂಬ್ಳೇಬೈಲು:
800 ಮನೆಗಳಿರುವ ಗ್ರಾಮ. ಅಂದಾಜು 1800 ಮತಗಳಿವೆ. ಇಲ್ಲಿನ ಅಭಿಪ್ರಾಯ ಪ್ರಕಾರ ಶೇ.75 ಬಿಜೆಪಿ, ಶೇ.25 ಜೆಡಿಎಸ್.
ಸಮಸ್ಯೆಯೆಂದರೆ ಕುಡಿಯುವ ನೀರಿನ ಸರಬರಾಜು ಸರಿಯಾಗಿಲ್ಲ. ಪದೇಪದೇ ಕೆಟ್ಟು ಹೋಗುತ್ತಿರುತ್ತದೆ. ಅನಿಯಂತ್ರಿತವಾಗಿ ಸ್ಥಾಪನೆಯಾಗುತ್ತಿರುವ ಕೋಳಿ ಫಾರ್ಮ್’ಗಳಿಂದ ಮನೆ ನೊಣಗಳ ಕಾಟ ಸಹಿಸಲಸಾಧ್ಯವಾಗಿದೆ. ಇದನ್ನು ಎಲ್ಲ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಹೋಗಿದ್ದಾರೆ. ಸಮಸ್ಯೆ ಬಗೆಹರಿದಿಲ್ಲ. ಸಮಸ್ಯೆ ಪರಿಹಾರಕ್ಕೆ ಯಾವ ರಾಜಕೀಯ ಪಕ್ಷದವರೂ ಬಂದಿಲ್ಲ.
ಲಕ್ಕಿನಕೊಪ್ಪ ಎ ಮತ್ತು ಬಿ ಸರ್ಕಲ್’ಗಳ ಬಸ್ ಸ್ಟಾಪ್ ನಲ್ಲಿ ಹೆಸರು ಹೇಳಲಿಚ್ಛಿಸದ ಗ್ರಾಮಸ್ಥರ ಪ್ರಕಾರ ಅಲ್ಲಿ ಸುಮಾರು 800 ವೋಟುಗಳಲ್ಲಿ ಶೇ.70 ಮೈತ್ರಿ ಪಕ್ಷಕ್ಕೇ ಅಂತೆ.
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಭದ್ರಾವತಿಯ ಗ್ರಾಮೀಣ ಭಾಗದಲ್ಲಿ ಕಲ್ಪ ನ್ಯೂಸ್ ‘ಲೋಕಾ’ಯಾತ್ರೆ ತಂಡ ನೂರಾರು ಮಂದಿಯನ್ನು ಮಾತನಾಡಿಸಿದ್ದು, ಇಲ್ಲಿ ಬಹುತೇಕ ಮಂದಿ ಎಂಪಿಎಂ ಹಾಗೂ ವಿಐಎಸ್’ಎಲ್ ಕಾರ್ಖಾನೆಗಳ ಇಂದಿನ ಸ್ಥಿತಿಗೆ ಕಾರಣರಾದ ರಾಜಕಾರಣಿಗಳ ಕುರಿತಾಗಿ ಕಿಡಿ ಕಾರುತ್ತಾರೆ. ಪ್ರಮುಖವಾಗಿ, ಬಿಜೆಪಿ ವಿರುದ್ಧ ಇಲ್ಲಿ ಬಹಳಷ್ಟು ಆಕ್ರೋಶವಿದ್ದರೂ ಸಹ ಮೋದಿಯ ಪ್ರಭಾವವೂ ಸಹ ಇದೆ.
ಇಡಿಯ ಭಾಗದಲ್ಲಿ ಯಾವುದೇ ರಾಜಕೀಯ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಈವರೆಗೂ ಇಲ್ಲಿಗೆ ಚುನಾವಣಾ ಪ್ರಚಾರಕ್ಕೆ ಬಂದಿಲ್ಲ. ಇಲ್ಲಿನ ಮಂದಿ ಪತ್ರಿಕೆ ಹಾಗೂ ಟಿವಿ ನೋಡಿ ತಿಳಿದುಕೊಳ್ಳುತ್ತಿದ್ದಾರೆ. ಇದರೊಂದಿಗೆ ಹಣ ಪಡೆದು ಮತ ಹಾಕುವ ಚಾಳಿಯೂ ಸಹ ಸಾಕಷ್ಟು ಕಾಣುತ್ತಿದ್ದು, ಈ ವಿಚಾರದಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಜಾಗೃತಿ ಮೂಡಿಸುವ ಕಾರ್ಯವನ್ನೂ ಸಹ ಮಾಡಬೇಕಿದೆ.
ಒಟ್ಟಾರೆ ಈ ಭಾಗದ ಜನಮನದಲ್ಲಿ ಚುನಾವಣೆಯ ಕಾವು ಇನ್ನೂ ಮುಟ್ಟಿಲ್ಲ. ಆದರೆ ಜನನಾಯಕರು ಹೋಗಲಿ ಕಾರ್ಯಕರ್ತರು ತಮ್ಮತ್ತ ಬಂದಿಲ್ಲ, ಸಮಸ್ಯೆ ಆಲಿಸಿಲ್ಲ ಎಂಬ ಮುನಿಸನ್ನು ಮಡಿಲಲ್ಲಿ ಇಟ್ಟುಕೊಂಡಿದ್ದಾರೆ. ಮೈತ್ರಿ ಪಕ್ಷ ಮತ್ತು ಬಿಜೆಪಿ ಅಛ್ಯರ್ಥಿಗಳಲ್ಲಿ ಯಾರು ಇಲ್ಲಿನ ಪರಿಸ್ಥಿತಿಯ ಲಾಭ ಪಡೆಯುವ ಜಾಣತನ ತೋರುತ್ತಾರೋ ಕಾದು ನೋಡಬೇಕಿದೆ. ಇಲ್ಲಿ ಅವಕಾಶ ತೆರೆದ ಪುಸ್ತಕದಂತಿದೆ.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post