ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಹೊಸನಗರ, ನಗರ, ನಿಟ್ಟೂರು, ಸಂಪೆಕಟ್ಟೆ, ರಿಪ್ಪನ್’ಪೇಟೆ, ಆಯನೂರುಗಳಲ್ಲಿ ಒಲವು-ನಿಲುವು ಹೀಗಿದೆ:
ಹೊಸನಗರ:
ಸಾಗರದ ಶಾಸಕರು ಈ ಭಾಗದಲ್ಲಿ ಜನಗಳ ಒಡನಾಟವಿಟ್ಟುಕೊಂಡಿದ್ದಾರೆ. ಅಧಿಕಾರಿಗಳೊಂದಿಗೆ ಒಳ್ಳೆಯ ಬಾಂಧವ್ಯವಿದ್ದು ಪ್ರಗತಿಕೆಲಸ ನಡೆಯುತ್ತಿರುವುದೂ ಒಂದು ಪ್ಲಸ್ ಪಾಯಿಂಟ್. ಇನ್ನು ಹೊಸನಗರದ ಕಡೆ ಅಲ್ಲಿನ ಗ್ರಾಮ ಮಟ್ಟದಲ್ಲಿ ಶಿಸ್ತುಬದ್ಧವಾದ ಸಂಘಟನೆಯಿಂದ ಬಿಜೆಪಿಯ ಮತಗಳು ಹಂಚಿಹೋಗದಂತೆ ನೋಡಿಕೊಳ್ಳಲಾಗುತ್ತಿದೆ.
-ದೇವಾನಂದ್ ಹಾಗೂ ಶ್ರೀಪತಿರಾವ್, ಬಿಜೆಪಿ ಕಟ್ಟಾಳುಗಳು
ಇಲ್ಲಿ ನಮಗೀಗ ದೇಶಕ್ಕೆ ಮೋದಿ, ರಾಜ್ಯಕ್ಕೆ ಯಡ್ಯೂರಪ್ಪ, ಜಿಲ್ಲೆಗೆ ರಾಘವೇಂದ್ರ ಎಂದಷ್ಟೇ ಹೇಳುತ್ತೇನೆ.
-ದೇವಾನಂದ್
“““““““““““““““`
ನಿಟ್ಟೂರು:
ಇಲ್ಲಿ ಬಿಜೆಪಿಗೇ ಈ ಬಾರಿ ಹೆಚ್ಚಿನ ಮತ. ಇಲ್ಲಿ ಜನರಲ್ಲಿ ಮತದಾನದ ಬಗ್ಗೆ ಜಾಗೃತಿಯಿದೆ. ಸ್ಥಳೀಯವಾಗಿ ಡಾಂಬರ್ ರಸ್ತೆಗಳು ಬೇಕಿದೆ. ನಿಟ್ಟೂರು ಪ್ರಸ್ತುತ ಕೊಲ್ಲೂರು, ಸಿಗಂಧೂರು, ಕೊಡಚಾದ್ರಿ ಪ್ರವಾಸೀ ತಾಣಗಳ ಮಧ್ಯೆ ಇದೆ. ಇಲ್ಲಿ ಪ್ರವಾಸಿಗರಿಗೆ ಮಾರ್ಗಾಯಾಸ ಪರಿಹಾರಕ್ಕೆ ಯಾವುದೇ ಸೌಕರ್ಯಗಳು ಪರಿಪೂರ್ಣವಾಗಿಲ್ಲ. ಸದ್ಯ ಇರುವ ಶೌಚಾಲಯ ಕ್ಕೆ ಸರ್ರನೆ ಯಾರೂ ಪ್ರವೇಶಿಸಲು ಸಾಧ್ಯವಿಲ್ಲ. ಅಷ್ಟು ದುರ್ನಾತ. ಇಲ್ಲಿ ಬಸ್ ಶೆಲ್ಟರ್ ಇದ್ದು, ಅದು ಮಾತ್ರ ಸಾಕಾದೀತೆ? ನವೀನ ಬಸ್ ನಿಲ್ದಾಣವೇ ನಿರ್ಮಾಣವಾಗಬೇಕಿದೆ. ಪ್ರವಾಸೋದ್ಯಮದ ಬೆಳವಣಿಗೆ ದೃಷ್ಟಿಯಿಂದ ನಿಟ್ಟೂರಿನಿಂದ ಹತ್ತಿರದ ಕಲ್ಯಾಣಿ ಚೌಕ ಕ್ಕೆ ನಾಕು ಕಿಮೀ ರಸ್ತೆ, ಹಿಂಡ್ಲಮನೆ ಫಾಲ್ಸ್ ಗೆ ಏಳು ಕಿಮೀ ರಸ್ತೆ ಜರೂರು ಆಗಬೇಕಿದೆ. ಮಳೆಗಾಲದಲ್ಲಿ ಈ ರಸ್ತೆಗಳು ನಡೆದಾಡಲು, ವಾಹನ ಸಂಚರಿಸಲು ದುಸ್ಸಾಧ್ಯವಾಗಿವೆ. ಸಾಗರ ವಿಧಾನ ಸಭಾಕ್ಷೇತ್ರಕ್ಕೆ ಸೇರುವ ಈ ಪ್ರದೇಶಕ್ಕೆ ಈಗಿನ ಶಾಸಕರು ಈವರೆಗೂ ಭೇಟಿ ನೀಡಿಲ್ಲ. ಸಂಸದರ ಒಮ್ಮೆ ಮಾತ್ರ ಭೇಟಿ ನೀಡಿದ್ದಾರೆ.
ಇಲ್ಲಿ ಎಲ್ಲಾ ಕಡೆ ಮೋದಿಯ ಬಗ್ಗೆಯೇ ಹೆಚ್ಚು ಒಲವು. ಹೀಗಾಗಿ, ಇಲ್ಲಿ ಬಿಜೆಪಿಗೇ ಲೀಡ್ ಗ್ಯಾರೆಂಟಿ.
ಈ ಬಾರಿ ಲೋಕಸಭೆಗೆ ಸಮ ಸಮ ಕಾದಾಟ. ಅಲ್ಲಿನ ಮತದಾರ ಜಾಗೃತನಾಗಿದ್ದಾನೆ. ಈ ಬಾರಿ ಶೇ.90ರಷ್ಟು ಮತದಾನವಾಗುತ್ತದೆ. ಇದು ನಮ್ಮೂರಿನ ಹೆಮ್ಮೆ.
ಇಲ್ಲಿನ ಕುಡಿಯುವ ನೀರಿನ ಸಮಸ್ಯೆ ಪೂರ್ಣ ಬಗೆಹರಿದಿಲ್ಲ. ನಾಲ್ಕು ವರ್ಷದ ಹಿಂದೆ ಸುಮಾರು 25 ಲಕ್ಷ ರೂ. ಖರ್ಚು ಮಾಡಿದ ಯೋಜನೆ ಫಲಕಾರಿಯಾಗಿಲ್ಲ. ಅದಕ್ಕೀಗ 60 ಲಕ್ಷ ರೂ. ಖರ್ಚು ಮಾಡಿದರೆ ಶಾಶ್ವತ ವ್ಯವಸ್ಥೆಯಾಗುತ್ತದೆ.
ಇಲ್ಲಿನ ಬೆನ್ನಟ್ಟೆ ಚಾಮುಂಡೇಶ್ವರಿ ದೇವಾಲಯಕ್ಕೆ ಸರ್ವ ಋತು ರಸ್ತೆ ನಿರ್ಮಿಸಬೇಕು ಎನ್ನುವುದು ನಮ್ಮ ಬಲವಾದ ಬೇಡಿಕೆ. ಇದನ್ನು ಯಾರು ಮಾಡಿಕೊಡುತ್ತಾರೋ ನೀಡುತ್ತಾರೋ ಅವರಿಗೇ ನಮ್ಮ ಓಟು.
ನಿಟ್ಟೂರಿನಿಂದ ಕೋಟೆ ಶಿರೂರಿಗೆ ಐದು ಕಿಮೀ ರಸ್ತೆ ಹಾಗೂ ಹೆಬ್ಬಿಗೆಗೆ ಐದು ಕಿಮೀ ರಸ್ತೆ ಅವಶ್ಯವಿದೆ. ಈ ಕೆಲಸ ಮಾಡಿದವರು ಇಲ್ಲಿ ಎಂದೂ ಸೋಲುವುದಿಲ್ಲ.
ನಿಟ್ಟೂರಿನಲ್ಲೊಂದು ಹಾರ್ಡ್’ವೇರ್ ಶಾಪ್ ಇದೆ. ಅದರ ಮಾಲೀಕರು ವಿನಾಯಕ ಭಟ್. ಅವರ ಸಂಗಡ ಈರ್ವರು ಮಿತ್ರರಿದ್ದರು.
ಭಟ್ಟರು ಮೋದೀಜಿ ಕಡೆ. ಮಹಾಬಲ ಎನ್ನುವ ಅವರ ಸ್ನೇಹಿತರು ಜೆಡಿಎಸ್ ಆದರೆ, ಅವರ ಇನ್ನೊಬ್ಬ ಸ್ನೇಹಿತ ಸುಬ್ರಮಣ್ಯ ಕಾಂಗ್ರೆಸ್ ಇಷ್ಟಪಡುವವರು.
ಇಲ್ಲೊಂದು ಸಣ್ಣ ಚರ್ಚೆಯೇ ನಡೆಯಿತು. ಸಾಧನೆ ಮಾಡಿದ್ದರೂ ಪ್ರಚಾರದ ಕೊರತೆಯಿಂದ ಕಾಂಗ್ರೆಸ್ ದುರ್ಬಲವಾಗಿದೆ. ದೇಶವನ್ನು ಕಟ್ಟಿದ್ದಾರೆ ಮೋದೀಜಿ ನಿಜ ಅಂತ ಕಾಂಗ್ರೆಸ್ ನ ಸುಬ್ರಮಣ್ಯ. ರೈತರಿಗೆ ನಿಜವಾಗಿ ಸಾಲಮನ್ನಾ ಮುಟ್ಟಿದೆ ಎಂದು ಜೆಡಿಎಸ್’ನ ಮಹಾಬಲ. ಮೋದೀಜಿ ಸದ್ಯಕ್ಕೆ ಇನ್ನೂ ಎರಡು ಅವಧಿಗೆ ಬೇಕಿದೆ ಅಂತ ಭಟ್ಟರು ಪಟಪಟನೆ ಅನಿಸಿಕೆ ಮುಂದಿಟ್ಟರು.
ಮೋದೀಜಿ ಮೂರು ಕೆಲಸಗಳನ್ನ ಸಮರ್ಥವಾಗಿ ಪೂರೈಸಿದ್ದಾರೆ. ಒಂದು ಹಣಕಾಸು ಎರಡು ವಿದೇಶಗಳಲ್ಲಿ ಭಾರತಕ್ಕೆ ಗೌರವ ಗಳಿಕೆ ಮೂರು, ಭಯೋತ್ಪಾದನೆ ನಿಗ್ರಹ. ಸಾಕು ಅವರಿಗೆ ಪ್ರಸ್ತುತ ಅಧಿಕಾರ ನೀಡಬೇಕಿದೆ.
“““““““““““““““`
ಮತ್ತಿಮನೆ:
ನಮ್ಮ ಗ್ರಾಮದಲ್ಲಿ ಎಲ್ಲರೂ ಜಾಗೃತ ಮತದಾರರು. ಮತದಾನ ಮಾಡಬೇಕು ಎನ್ನುವ ರಾಷ್ಟ್ರಪ್ರಜ್ಞೆ ಇದೆ. ಶೇ.95ರಷ್ಟು ಮತಚಲಾವಣೆ ಆಗುವಂತೆ ಮಾಡುತ್ತೇವೆ. ಇಲ್ಲಿ ಮೋದೀಜಿ ಮೇಲೆ ಒಲವು ಜಾಸ್ತಿಯಿದೆ.
ಅರಮನೆ ಪಂಚಾಯತ್’ಗೆ ಸೇರಿದೆ ಮತ್ತಿಮನೆ ಗ್ರಾಮ. ಏಳು ಕಿಮೀ ರಸ್ತೆ ಹೊಸನಗರದಿಂದ ಮತ್ತಿಮನೆ ಗ್ರಾಮಕ್ಕೇ ಆಗಬೇಕಿದೆ. ಆದರೆ, ಸ್ಥಳೀಯರಲ್ಲಿ ಬಂದು ಕೇಳುವವರು ಯಾರೂ ಇಲ್ಲ. ಆದರೆ, ದೇಶದ ವಿಚಾರದಲ್ಲಿ ನಮಗೆ ಮೋದಿಜಿ ಅವರೇ ಭರವಸೆ. ಹೀಗಾಗಿ, ಅವರನ್ನೇ ಬೆಂಬಲಿಸುತ್ತೇವೆ.
“““““““““““““““`
ಹೊಸೂರು ಗ್ರಾಮ:
ನಮ್ಮೂರಿಗೆ ರಸ್ತೆ ಸರಿಯಿಲ್ಲ. ಸೇತುವೆ ಅಗತ್ಯವಿದೆ ಎಂದು ಕೇಳುತ್ತಾ ವರ್ಷಗಳೇ ಕಳೆದಿದೆ. ಮಳೆಗಾಲ ಬಂದರೆ ನಮ್ಮೂರ ರಸ್ತೆಯಲ್ಲಿ ವಾಹನಗಳು ಸಂಚರಿಸುವುದು ಹಾಗೂ ನಡೆದಾಡುವುದೇ ಕಷ್ಟ. ಇದನ್ನು ಪರಿಹಾರ ಮಾಡಿಕೊಡಬೇಕಾದವರು ಯಾರು? ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಇಲ್ಲಿ ಒಲವು ಜಾಸ್ತಿ.
“““““““““““““““`
ನಗರ ಮೂಡುಕೊಪ್ಪ:
ನಗರ ಮೂಡುಗೊಪ್ಪದಲ್ಲಿ ಆಟೋಚಾಲಕರಾಗಿರುವ ಸಂತೋಷ್ ಮತ್ತು ಮಂಜುನಾಥ್ ಸಿಕ್ಕರು. ಸಂತೋಷ್ ಹೇಳುತ್ತಾರೆ ಇಲ್ಲಿ ಬಿಜೆಪಿಗೇ ಹೆಚ್ಚು ಮತಗಳು. ಮಂಜುನಾಥ್ ಅವರದ್ದು ಇದಕ್ಕಿಂತ ಭಿನ್ನ. ಈ ಸಾರಿ ಬದಲಾವಣೆ ಬಯಸಿದ್ದೇವೆ. ಜೆಡಿಎಸ್’ಗೇ ಇಲ್ಲಿ ಲೀಡ್.
ಸರ್ ನಾನು ಒಂದೇ ಮಾತಿನಲ್ಲಿ ಹೇಳುತ್ತೇನೆ. ನಮ್ಮಲ್ಲಿ ಲೀಡ್ ಬಿಜೆಪಿ ಅಷ್ಟೆ.
-ರಾಘವೇಂದ್ರ, ದೇವಗಂಗೆಯ ಕೃಷಿಕ
ನಮ್ಮೂರಿನಲ್ಲಿ ಸರಿಯಾದ ಸಮುದಾಯ ಭವನವಿಲ್ಲ, ರಸ್ತೆ ಚರಂಡಿ ಸರಿಯಿಲ್ಲ. ಬಸ್ ಸ್ಟಾಂಡ್ ಇಲ್ಲ… ನಮ್ಮ ಬೇಡಿಕೆ ಸಾರ್ವಜನಿಕವಾಗಿವೆ. ಇದನ್ನು ಪರಿಹಾರ ಮಾಡುವಲ್ಲಿ ಹೆಚ್ಚಿನ ಆಸಕ್ತಿ ಯಾರಿಗೂ ಇಲ್ಲ. ಆದರೆ ದೇಶದ ಹಿತದೃಷ್ಠಿಯಿಂದ ಈಗ ಕೇಂದ್ರದಲ್ಲಿ ಮೋದಿಯವರೇ ಬರಬೇಕು.
ಸರ್, ಇಲ್ಲಿನ ಸಮಸಮ ಸೆಣೆಸಾಟ ಇದೆ. ಇಬ್ಬರೂ ಅಭ್ಯರ್ಥಿಗಳು ಸಮ ಮತ ಪಡೆಯತ್ತಾರೆ.
ರಾಜ್ಯದ ವಿಚಾರ, ಸ್ಥಳೀಯ ವಿಚಾರ ಬೇರೆ ಸರ್. ಆದರೆ, ಇದು ದೇಶದ ಚುನಾವಣೆಯಾದ್ದರಿಂದ ದೇಶಕ್ಕಾಗಿ ಮೋದಿ ದುಡಿಯುತ್ತಿದ್ದಾರೆ. ಕೇಂದ್ರದಲ್ಲಿ ಅವರೇ ಪ್ರಧಾನಿಯಾಗಬೇಕು. ಬ್ಯಾಂಕುಗಳಲ್ಲಿ ಕೈಸಾಲ ಮಾಡಿರುವ ತಮ್ಮಂಥವರಿಗೆ ಸಾಲಮನ್ನಾ ಯೋಜನೆ ಬರಬೇಕು. ಬದಲಿಗೆ ಶ್ರೀಮಂತ ರೈತರಿಗೆ ಯೋಜನೆ ಮಾಡುವುದು ಯಾವ ನ್ಯಾಯ? ಸಾಲಮನ್ನಾ ಆಗಿದೆ ಎನ್ನುತ್ತಾರೆ. ಆದರೆ, ಅದು ಶ್ರೀಮಂತರಿಗೆ ಮಾತ್ರವೇ ಪ್ರಯೋಜನವಾಗುತ್ತಿದೆ. ನಮ್ಮಂತವರಿಗೆ ಅದು ತಲುಪಿಯೇ ಇಲ್ಲ.
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಪ್ರಸ್ತುತ ಹೊಸನಗರ ತಾಲೂಕು ಮತದಾರರು ಶೇ.60ರಷ್ಟು ಸಾಗರ ವಿಧಾನಸಭಾ ಕ್ಷೇತ್ರ ಮತ್ತು ಶೇ.40ರಷ್ಟು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಹಂಚಿಹೋಗಿದ್ದಾರೆ.
ಹೊಸನಗರ ಪಾಕೆಟ್’ನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್’ನ ಸಾಧನೆ ಮತ್ತು ಪ್ರಭಾವ ಅಲ್ಲಿನ ಜನಮನದಲ್ಲಿ ಗಾಢವಾಗಿಲ್ಲ. ಇದಕ್ಕೆ ಮೂಲ ಕಾರಣ ಇಲ್ಲಿಯ ಗ್ರಾಮಸ್ತರದಲ್ಲಿ ಅರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಿರುವ ಬಿಜೆಪಿ ಪಡೆ.
ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಮುನ್ನಡೆಯನ್ನು ಇಲ್ಲಿನ ಮತದಾರರು ಬಿಜೆಪಿಗೆ ನೀಡಿದ್ದಾರೆ. ಅಯನೂರಿನಲ್ಲಿ ಈ ಪ್ರತಿಕ್ರಿಯೆ ಸ್ವಚ್ಛ ಸ್ಫಟಿಕದಂತೆ ಸಿಕ್ಕಿತು.
ಬಿಜೆಪಿ ಶಾಸಕ ಹರತಾಳು ಹಾಲಪ್ಪನವರ ಕೆಲಸದ ಬಗ್ಗೆ ತೃಪ್ತಿಯಿದೆ. ಇಲ್ಲಿ ಬಿಜೆಪಿಗೆ ಮತದಾರರ ಒಲವು ಬಲವಾಗಿದೆ. ಅದರಲ್ಲೂ ಮೋದಿ ಅವರ ವ್ಯಕ್ತಿತ್ವದ ಬಗ್ಗೆ ಅಭಿಮಾನ ವ್ಯಕ್ತವಾದದ್ದು ರಿಪ್ಪನ್ ಪೇಟೆಯ ಸಮೀಕ್ಷೆಯಲ್ಲಿ.
ಈಗ ಐದು ವರ್ಷ ಮೋದೀಜಿ ಪ್ಲಾನ್ ಮಾಡಿದ್ದಾರೆ. ಅವರ ಈ ಎಲ್ಲ ಪ್ಲಾನುಗಳು ಈಡೇರಬೇಕಾದರೆ ಈ ಸಲದ ಚುನಾವಣೆಯಲ್ಲಿ ನಾವು ಗೆಲ್ಲಿಸಬೇಕು ಎಂಬುದು ರಿಪ್ಪನ್ ಪೇಟೆಯ ಮತದಾರ ಪ್ರಭುವಿನ ನಿಚ್ಚಳ ಅಭಿಪ್ರಾಯ.
ತೀರ್ಥಹಳ್ಳಿ ಕ್ಷೇತ್ರದಲ್ಲಿ ಸದ್ಯ ಡಿಕೆಶಿ ಅವರ ಮಧ್ಯಸ್ತಿಕೆಯಲ್ಲಿ ಜೆಡಿಎಸ್(ಆರ್’ಎಂಎಂ ಮತ್ತು ಕಿಮ್ಮನೆ )ಕಾಂಗ್ರೆಸ್ ಬೆಸೆಯುವ ಯತ್ನ ಎಂದೂ ಶಾಶ್ವತ ಸಮಾಧಾನ ತಾರದು ಎಂಬ ಅಭಿಪ್ರಾಯವೂ ಈಗ ಹುಟ್ಟಿಕೊಂಡಿದೆ. ಹೀಗಾಗಿ, ಅಲ್ಲಿಗೆ ಹಂಚಿಹೋಗಿರುವ ಮತಗಳೂ ಬಿಜೆಪಿಯ ಕಣ್ಗಾವಲಿನಲ್ಲಿವೆ ಎನ್ನುವ ಆಶಾದಾಯಕ ಸನ್ನಿವೇಶ ಸೃಷ್ಟಿಯಾಗಿದೆ.
ಇನ್ನು ನಿಟ್ಟೂರು ಭಾಗದಲ್ಲಿ ಪ್ರಸ್ತುತ ಬಿಜೆಪಿ ಬೆಂಬಲಿತರು ಅಧಿಕಾರ ಹಿಡಿದಿದ್ದಾರೆ.(8 ಬಿಜೆಪಿ- 7 ಕಾಂಗ್ರೆಸ್, ಐದು ವಾರ್ಡುಗಳಲ್ಲಿ ಬಿಜೆಪಿ ಮತ್ತು ಮೂರು ವಾರ್ಡುಗಳಲ್ಲಿ ಕಾಂಗ್ರೆಸ್) ಸುಮಾರು ಹತ್ತು ಹಳ್ಳಿಗಳ ವ್ಯಾಪ್ತಿಯ ಪಂಚಾಯತ್’ನಲ್ಲಿ ಆರು ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ಕಳೆದ ಲೋಕಸಭಾ ಉಪಚುನಾವಣೆಯಲ್ಲಿ ಶೇ.72ರಷ್ಟು ಮತದಾನವಾಗಿದೆ.
ಒಟ್ಟಾರೆಯಾಗಿ ಈ ಭಾಗದಲ್ಲಿ ನೋಡುವುದಾದರೆ, ಬಿಜೆಪಿಯ ಭದ್ರಕೋಟೆ ಎನ್ನಬಹುದಾಗಿದ್ದು, ಕೆಲವು ಗ್ರಾಮಗಳಲ್ಲಿ ಮಾತ್ರ ಜೆಡಿಎಸ್ ಹೆಚ್ಚಿನ ಮತಗಳಿಸುವ ಸಾಧ್ಯತೆಯಿದೆ.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post