ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಪ್ರಚಾರ ಕಾರ್ಯಗಳೊಂದಿಗೆ ಸೋಲು ಗೆಲುವಿನ ಚರ್ಚೆಗಳು ಆರಂಭವಾಗಿದ್ದು, ಈಗಲೇ ಮತಗಳ ಅಂತರಗಳ ಕುರಿತಾಗಿಯೂ ಎಲ್ಲೆಡೆ ಚರ್ಚೆಯಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ವಿನೂತನ ಸಾಹಸಕ್ಕೆ ಕೈ ಹಾಕಿರುವ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ, ‘ಕಲ್ಪ ನ್ಯೂಸ್ ಲೋಕಾ ಯಾತ್ರೆ’ ಎಂಬ ಹೆಸರಿನ ಅಡಿಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹ ಮಾಡುವ ಸಾಹಸಕ್ಕೆ ಕೈಹಾಕಿದೆ.
ಚುನಾವಣಾ ನೀತಿ ಸಂಹಿತೆಯಿರುವ ಹಿನ್ನೆಲೆಯಲ್ಲಿ ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಎಷ್ಟು ಶೇಕಡಾವಾರು ಮತ ಬೀಳಬಹುದು, ಒಟ್ಟಾರೆ ಯಾರ ಗೆಲುವು ನಿಶ್ಚಿತ ಎಂಬುದನ್ನು ನಾವು ಸ್ಪಷ್ಟವಾಗಿ ಹೇಳುವುದಿಲ್ಲ. ಇಲ್ಲಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳ ಪರವಾಗಿ ಅಥವಾ ವಿರೋಧವಾಗಿ ಸಮೀಕ್ಷೆ ನಡೆಸದೇ, ಸದರಿ ಭಾಗದ ಸಮಸ್ಯೆಗಳು, ಜನರ ಮನದಾಳದ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ಜನರಿಗೆ ತಿಳಿಸುವ ಸಲುವಾಗಿ ಸ್ವತಂತ್ರವಾಗಿ ವಾಸ್ತವ ಸಮೀಕ್ಷೆಯನ್ನು ನಡೆಸಲಾಗಿದೆ. ಪ್ರತಿನಿತ್ಯ ನಮ್ಮ ತಂಡ ನೂರಾರು ಮತದಾರರನ್ನು ಮಾತನಾಡಿಸುತ್ತಿದ್ದು, ಇದರಲ್ಲಿ ಆಯ್ದ ಕೆಲವರ ಅನಿಸಿಕೆಗಳನ್ನು ಮಾತ್ರ ಪ್ರಕಟಿಸಿ, ಒಟ್ಟಾರೆಯಾಗಿ ಸದರಿ ಭಾಗದಲ್ಲಿನ ಒಲವು ಯಾರಿಗಿದೆ ಎಂಬುದನ್ನು ಓದುಗರಿಗೆ ತಿಳಿಸಿ, ನಿರ್ಧಾರವನ್ನೂ ಅವರಿಗೇ ಬಿಡುತ್ತೇವೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಾರ್ವಜನಿಕ ಚುನಾವಣೆ-2019: ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಯನೂರು ಕೋಟೆ, ಹಾರನಹಳ್ಳಿ, ಸಿರಿಗೆರೆ ಭಾಗದ ಮತದಾರರ ಸಮೀಕ್ಷೆ ಒಲವು-ನಿಲುವು ಹೀಗಿದೆ:
ಶಿವಮೊಗ್ಗ ಗ್ರಾಮಾಂತರ ಶಾಸಕರು: ಶ್ರೀ ಅಶೋಕ್ ನಾಯ್ಕ್
ಸಮೀಕ್ಷೆಯ ಒಟ್ಟಾರೆ ನಿರೀಕ್ಷಿತ ಫಲಿತಾಂಶ: ಬಿಜೆಪಿ-ಜೆಡಿಎಸ್-60:40
ಬಿಜೆಪಿಯವರ ಬಂದಿದ್ದಾರೆ ಆದರೆ, ಮೈತ್ರಿ ಪಕ್ಷದವರು ಹೆಚ್ಚಾಗಿ ಬರುತ್ತಿಲ್ಲ. ನಮ್ಮಲ್ಲಿ ಕಷ್ಟಗಳು ಸಾಕಷ್ಟಿವೆ. ಯಾರು ಬಂದರೂ ನಮ್ಮ ಸಮಸ್ಯೆ ಕೇಳೋರು ಯಾರೂ ಇಲ್ಲ. ಆದರೆ, ಮೋದಿ ಅವರನ್ನು ನೋಡಿ ನಾವು ಮತ ಚಲಾಯಿಸುತ್ತೇವೆ.
ನಮ್ಮೂರಲ್ಲಿ ಚುನಾವಣೆ ಕಾವು ಅಷ್ಟಾಗಿ ಕಾಣುತ್ತಿಲ್ಲ. ಎರಡೂ ಪಕ್ಷದವರು ಒಂದು ಬಾರಿ ಬಂದಿದ್ದಾರೆ. ಇಲ್ಲಿ ಬಿಜೆಪಿ ಹಾಗೂ ಜೆಡಿಎಸ್’ಗೆ 60:40 ಕಾದಾಟ ಇದೆ. ಆದರೆ, ನಮ್ಮೂರಿನ ಸಮಸ್ಯೆಗಳು ಹಲವಿದೆ. ಹಿಂದುಳಿದ ವರ್ಗಗಳ ಕಾಲೋನಿ ಅಭಿವೃದ್ದಿ ಆದ ಹಾಗೆ ಮುಂದುವರೆದವರ ಕಾಲೋನಿಗಳು ಆಗುತ್ತಿಲ್ಲ. ನಮ್ಮೂರಿಗೆ ಇರುವ ರೈಲು ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೆ ನಿಲುಗಡೆ ಬೇಕು. ಪ್ರಮುಖವಾಗಿ, ನಮ್ಮಲ್ಲಿ ಒಂದೇ ಬ್ಯಾಂಕ್ ಇದ್ದು, ಇದು ಸಾರ್ವಜನಿಕರ ಬ್ಯಾಂಕ್ ವ್ಯವಹಾರಗಳಿಗೆ ತೊಂದರೆಯಾಗಿದೆ. ಹೀಗಾಗಿ, ಇನ್ನೂ ಒಂದೆರಡು ಬ್ಯಾಂಕ್ ಬರುವ ಹಾಗೆ ಆಗಬೇಕು. ಮತದಾನ ಕುರಿತಾಗಿ ಹೇಳುವುದಾದರೆ ಕಳೆದಬಾರಿ ಸುಮಾರು ಶೇ.72ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.80ರಷ್ಟು ಮತದಾನ ನಿಶ್ಚಿತ. ನಮ್ಮ ಹಕ್ಕನ್ನು ನಾವು ಚಲಾಯಿಸುತ್ತೇವೆ.
ನಮ್ಮೂರಲ್ಲಿ ರಸ್ತೆ ಸಮಸ್ಯೆಯೇ ದೊಡ್ಡದಿದೆ. ಕುಂಸಿಯಿಂದ ಚಾಮೇನಹಳ್ಳಿಯವರೆಗೂ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದರ ಅಭಿವೃದ್ಧಿಗೆ ಹಣ ಮಂಜೂರಾಗಿದೆ ಎನ್ನುತ್ತಾರೆ. ಆದರೆ, ಈವರೆಗೂ ಕೆಲಸ ಆಗಿಲ್ಲ. ಓಡಾಡುವುದೇ ಕಷ್ಟವಾಗಿದೆ.
ನಮ್ಮೂರಲ್ಲಿ ಮೋದಿ ಅಲೆ ಇದ್ದು, ಇದನ್ನು ನೋಡಿಯೇ ನಾವು ಮತ ಹಾಕೋದು.
ನಮಗೆ ದೇಶ ಮುಖ್ಯ ಆನಂತರ ನಮ್ಮೂರು. ನಮ್ಮ ದೇಶವನ್ನು ಉಳಿಸಲು ಮೋದಿ ಮತ್ತೆ ಪ್ರಧಾನಿಯಾಗಬೇಕು. ಆದರೆ, ನಮ್ಮೂರಿನಲ್ಲಿ ಒಟ್ಟಾರೆ ನೋಡುವುದಾದರೆ 50:50 ಸೆಣೆಸಾಟವಿದೆ.
ಸಾಲಮನ್ನಾ ಆಗಿದೆ ಅಂತಾರೆ. ಆದರೆ, ನಮ್ಮೂರಲ್ಲಿ ಕೆಲವರಿಗೆ ಪತ್ರ ಬಂದಿದೆ ಬಿಟ್ಟರೆ ಸಾಲಮನ್ನಾ ಯಾರಿಗೂ ಆಗಿಲ್ಲ. ಈ ಚುನಾವಣೆ ದೇಶಕ್ಕೆ ಸಂಬಂಧಿಸಿದ್ದು ಆದ್ದರಿಂದ ದೇಶವನ್ನು ರಕ್ಷಣೆ ಮಾಡುವ ವ್ಯಕ್ತಿಗೆ ನಾವು ಬೆಂಬಲಿಸುತ್ತೇವೆ. ಮೋದಿ ಮತ್ತೆ ಪ್ರಧಾನಿಯಾಗಬೇಕು. ಅದರೊಂದಿಗೆ, ನಮ್ಮೂರಲ್ಲಿ ಕಾಡುತ್ತಿರುವುದು ರಸ್ತೆ ಸಮಸ್ಯೆ. ಇದನ್ನು ಸರಿಪಡಿಸುವವರಿಗೆ ಇನ್ನೂ ಬೆಂಬಲ ಹೆಚ್ಚಾಗುತ್ತದೆ.
ಕುಂಸಿಯಿಂದ ಬಾಳೆಕೊಪ್ಪಕ್ಕೆ ಹೋಗುವ ರಸ್ತೆಯದ್ದೇ ನಮಗೆ ದೊಡ್ಡ ಸಮಸ್ಯೆ. ಇದಕ್ಕಾಗಿ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿದ್ದೆವು. ಆದರೆ, ಬಿಜೆಪಿಯವರು ಬಂದು ಮಾಡಿಕೊಡುವ ಭರವಸೆ ನೀಡಿದ್ದಾರೆ. ನೋಡುತ್ತೇವೆ ಮತ ಹಾಕುವ ಬಗ್ಗೆ ಮನಸ್ಸು ಮಾಡುತ್ತಿದ್ದೇವೆ. ಆದರೆ, ದೇಶಕ್ಕಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬುದು ನಮ್ಮ ಆಸೆ.
ಇಲ್ಲಿ ಸಮಸಮ ಕಾದಾಟ ಇದೆ ಸರ್. ರಾಘವೇಂದ್ರ ಹಲವು ಬಾರಿ ಬಂದಿದ್ದಾರೆ. ಆದರೆ, ಸೋತ ಮೇಲೆ ಮಧು ಮುಖವನ್ನೇ ನಾವು ನೋಡಿಲ್ಲ. ಆದರೆ, ಹಾಲಿ ಸಂಸದರು ಇನ್ನೂ ಹೆಚ್ಚು ನಮಗೆ ಸ್ಪಂದಿಸಬೇಕಿತ್ತು.
ನಮ್ಮಲ್ಲಿ ಮೋದಿ ಅಲೆ ಇದೆ ಸರ್. ಜಿಎಸ್’ಟಿ ಅನುಷ್ಠಾನ, ದೇಶವನ್ನು ಸಾಲಮುಕ್ತವಾಗುವತ್ತ ಹೆಜ್ಜೆ, ದೇಶದ ಭದ್ರತೆ ಹಾಗೂ ಭಾರತೀಯರು-ಮೋದಿಯವರು ವಿಚಾರವಂತರು ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ನಮ್ಮಲ್ಲಿ 70:30 ಕಾದಾಟ ಇದೆ ಎಂಬುದಂತೂ ನಿಶ್ಚಿತ.
ನಮ್ಮಲ್ಲಿ ಪಕ್ಷ ನೋಡಲ್ಲ ಸರ್ ವ್ಯಕ್ತಿ ನೋಡುತ್ತೇವೆ. ನಮಗೆ ಬಂಗಾರಪ್ಪ ಬಗ್ಗೆ ಅಭಿಮಾನವಿದೆ. ಮೋದಿ ನೋಡಿ ಮತ ಹಾಕಿದರೆ ನಮಗೇನು ಪ್ರಯೋಜನವಿಲ್ಲ. ಅವರು ತಂದ ಜಿಎಸ್’ಟಿ ನಮ್ಮಂತವರಿಗೂ ಸಹ ಹೊಡೆತ ನೀಡಿದೆ. ನಮ್ಮೂರಿಗೆ ಸಂಬಂಧಿಸಿದಂತೆ ಸೀಗೆಹಳ್ಳ ನೀರಾವರಿ ಯೋಜನೆ ಮಾಡಿಕೊಟ್ಟರೆ ಅಂತಹವರಿಗೆ ಬೆಂಬಲ ನೀಡುತ್ತೇವೆ.
ಯಾರು ಏನೇ ಹೇಳಲಿ ಸರ್. ಬಿಜೆಪಿ ಗೆಲ್ಲುತ್ತೆ.
-ಅವಿನಾಶ್, ಸಿರಿಗೆರೆ
ನಮ್ಮಲ್ಲಿ ಜೆಡಿಎಸ್ ಕಡೆ ಒಲವು ಹೆಚ್ಚಾಗಿದೆ. ನಮ್ಮ ಕ್ಷೇತ್ರದ ಹಿಂದಿನ ಶಾಸಕಿ ಹೆಚ್ಚು ಕೆಲಸ ಮಾಡಿದ್ದಾರೆ. ಆದರೆ, ಈಗಿನ ಶಾಸಕರಿಂದ ನಮಗೆ ಅಷ್ಟಾಗಿ ಸ್ಪಂದನೆಯಿಲ್ಲ. ನಮ್ಮೂರಿಗೆ ಸಂಬಂಧಿಸಿದಂತೆ ರಸ್ತೆ ಅಭಿವೃದ್ದಿ ಮೊದಲು ಆಗಬೇಕು. ಮಲೆ ಶಂಕರ ದೇವಾಲಯಕ್ಕೆ ಸಾವಿರಾರು ಮಂದಿ ಬರುತ್ತಾರೆ. ಆದರೆ, ಇಲ್ಲಿನ ರಸ್ತೆಯೇ ಅದ್ವಾನವಾಗಿದೆ.
ನಮ್ಮಲ್ಲಿ ಹೆಚ್ಚು ಉಪಕಾರ ಆಗಿರುವುದು ರಾಘವೇಂದ್ರ ಅವರಿಂದಲೇ. ಸೋಲಾರ್ ದೀಪಗಳು, ರಸ್ತೆ, ಕುಡಿಯುವ ನೀರು ಅಭಿವೃದ್ಧಿ ಆಗಿದೆ. ಆದರೆ, ಈಗಿನ ಶಾಸಕರು ಇನ್ನೂ ಹೆಚ್ಚಿನ ಸ್ಪಂದನೆ ಕೊಡಬೇಕು. ಇವೆಲ್ಲಾ ಸ್ಥಳೀಯ ಸಮಸ್ಯೆಗಳು, ಹೇಗೋ ಸರಿಹೋಗುತ್ತವೆ. ಆದರೆ, ಈಗ ದೇಶದ ಚುನಾವಣೆಯಾದ್ದರಿಂದ ಮೋದಿ ಮತ್ತೆ ಪ್ರಧಾನಿಯಾಗುವುದೇ ಸೂಕ್ತ ಎಂಬುದು ನಮ್ಮ ಅನಿಸಿಕೆ. ಜೆಡಿಎಸ್-ಬಿಜೆಪಿಗೆ ಶೇ.60:40ರಷ್ಟು ಬೆಂಬಲ ಇದೆ.
ಮೋದಿಯಿಂದ ರೈತರಿಗೆ ಮಾತ್ರವಲ್ಲ ಹೈನುಗಾರಿಗೆ ಮಾಡುವವರಿಗೂ ಸಹ ಸಹಾಯವಾಗಿದೆ. ಈಗಿನ ಶಾಸಕರು ಕೆಲಸ ಮಾಡುತ್ತಿಲ್ಲ. ಹಿಂದಿನ ಶಾಸಕರ ಕೆಲಸ ಇಂದಿಗೂ ನಮ್ಮ ಮನಸ್ಸಿನಲ್ಲಿದೆ. ಆದರೆ, ದೇಶದ ಚುನಾವಣೆ ದೃಷ್ಠಿಯಿಂದ ಮೋದಿಯೇ ಪ್ರಧಾನಿಯಾಗಬೇಕು. ಅವರು ದೇಶ ಹಾಗೂ ಸೈನಿಕರನ್ನು ರಕ್ಷಿಸಿದ್ದಾರೆ. ದೇಶ ರಕ್ಷಣೆ ಮುಖ್ಯ. ದೇಶ ಉಳಿದರೆ ನಾವು.
ಸೊಸೈಟಿ ಸಾಲಮನ್ನಾ ಆಗುತ್ತಿದೆ. ಬ್ಯಾಂಕ್’ಗಳಲ್ಲಿನ ಸಾಲವೂ ಮನ್ನಾ ಆಗಬೇಕು. ಎಲ್ಲ ವರ್ಗದವರನ್ನೂ ಸಮಾನವಾಗಿ ಕಾಣುವ ವ್ಯಕ್ತಿ ಆಯ್ಕೆಯಾಗಬೇಕು.
-ಸಂಗೀತಾ, ಗಿರಿಜಮ್ಮ: ತಮ್ಮಡಿಹಳ್ಳಿ
ಈ ಭಾಗದ ಸಮೀಕ್ಷೆ ಕುರಿತಾಗಿ ನಮ್ಮ ಒಟ್ಟಾರೆ ಅಭಿಪ್ರಾಯ:
ಆಯನೂರು ಕೋಟೆ, ಹಾರನಹಳ್ಳಿ, ಬಾಳೆಕೊಪ್ಪ, ಚಾಮೇನಹಳ್ಳಿ, ಹಳೇಕುಂಸಿ, ಸಿರಿಗೆರೆ, ಮಲೆ ಶಂಕರ, ತಮ್ಮಡಿಹಳ್ಳಿ ಭಾಗಗಳು ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಕ್ಕೆ ಒಳಪಟ್ಟಿದ್ದು, ಹಿಂದಿನ ಶಾಸಕ ಶಾರದಾ ಪೂರ್ಯಾನಾಯ್ಕ್ ಅವರ ಕೆಲಸಗಳ ಬಗ್ಗೆ ಒಳ್ಳೆಯ ಹೆಸರಿದೆ. ಈಗಿನ ಶಾಸಕರಿಗಿಂತಲೂ ಹಿಂದಿನ ಶಾಸಕಿಯ ಬಗ್ಗೆಯೇ ಹೆಚ್ಚಿನ ಒಲವಿದೆ.
ಆದರೆ, ಇದು ದೇಶದ ಚುನಾವಣೆಯಾದ್ದರಿಂದ ಶಾಸಕರ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳು ಈ ಭಾಗದಲ್ಲಿ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎನಿಸಿದೆ.
ಒಟ್ಟಾರೆಯಾಗಿ ಈ ಭಾಗದಲ್ಲಿಯೂ ಸಹ ಮೋದಿ ಅಲೆಯಿದ್ದು, ಬಿ.ಎಸ್. ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರ ಕುರಿತಾಗಿ ಒಳ್ಳೆಯ ಅಭಿಪ್ರಾಯವಿದೆ. ಇದೇ ವೇಳೆ ಜೆಡಿಎಸ್ ಮಾಜಿ ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರ ಬಗ್ಗೆ ಸದಭಿಪ್ರಾಯವಿದ್ದರೂ, ಮಧು ಬಂಗಾರಪ್ಪ ಅವರು ಇನ್ನೂ ಹೆಚ್ಚು ಜನರೊಂದಿಗೆ ತೊಡಗಿಕೊಳ್ಳಬೇಕು ಎಂಬುದು ಇಲ್ಲಿನ ಜನರ ಮಾತಿನಿಂದ ತಿಳಿಯುತ್ತದೆ.
ಒಟ್ಟಾರೆಯಾಗಿ ಈ ಭಾಗದಲ್ಲಿ ಬಿಜೆಪಿ-ಜೆಡಿಎಸ್ ನಡುವೆ 60:40 ಕಾದಾಟವಿದೆ.
-ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಟೀಂ
ವಿಶೇಷ ಸೂಚನೆ: ಈ ಚುನಾವಣಾ ಸಮೀಕ್ಷಾ ವರದಿ ಯಾವುದೇ ಪಕ್ಷಕ್ಕೆ ಅಥವಾ ಅಭ್ಯರ್ಥಿಯ ಪರವಾಗಿ ನಡೆಸಲಾಗಿರುವುದಿಲ್ಲ. ಬದಲಾಗಿ, ನಮ್ಮ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಪ್ರತಿನಿಧಿಗಳು ಜನಸಾಮಾನ್ಯರನ್ನು ಖುದ್ದು ಸಂಪರ್ಕಿಸಿ, ಅವರ ಕಷ್ಟ-ಸುಖ ಹಾಗೂ ಚುನಾವಣೆ ಕುರಿತಾಗಿನ ಅವರ ಮನದಾಳದ ಭಾವನೆ ಹಾಗೂ ಅಭಿಪ್ರಾಯವನ್ನು ಸಂಗ್ರಹಿಸಿ, ಓದುಗರಿಗೆ ವಾಸ್ತವಾಂಶವನ್ನು ತೆರೆದಿಡುವ ಪ್ರಾಮಾಣಿಕ ಸೇವಾ ಕಾರ್ಯವನ್ನಷ್ಟೇ ಮಾಡಿದೆ.
Discussion about this post