ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಮಕ್ಕಳು ಮಾತೃಭಾಷೆಯನ್ನು ಪ್ರೀತಿಸಬೇಕು. ಹೊರ ಪ್ರಪಂಚದ ಅರಿವಿಗೆ ಮಕ್ಕಳು ಮಾತೃಭಾಷೆಯ ಜೊತೆಗೆ ಬೇರೆ ಭಾಷೆಗಳನ್ನೂ ಕಲಿಯಬೇಕು ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ವಿನೂತನ ಪರಿಕಲ್ಪನೆಯಾದ ‘ಗ್ರೂಮಿಂಗ್ ತರಗತಿ’ ಇದರ ಪಠ್ಯಪುಸ್ತಕ ಬಿಡುಗಡೆ ಹಾಗೂ ಕಿಚನ್ ಲ್ಯಾಬ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಗ್ರೂಮಿಂಗ್ ಪಠ್ಯಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಿಚನ್ ಲ್ಯಾಬ್ ಉದ್ಘಾಟಕರಾಗಿ ಆಗಮಿಸಿದ್ದ ಕ್ರೈಸ್ಟ್‌ಕಿಂಗ್ ಚರ್ಚ್‌ನ ಧರ್ಮಗುರುಗಳಾದ ರೆ.ಫಾ.ಕ್ಲೆಮೆಂಟ್ ಮಸ್ಕರೇನ್ಹಸ್ ಅವರು ಮಾತನಾಡಿ, ನಾವು ನಮ್ಮನ್ನು ಪ್ರೀತಿಸುವಂತೆ ಬೇರೆಯವರನ್ನೂ ಪ್ರೀತಿಸಬೇಕು. ಆಗ ಬದುಕು ಸವಿಯಾಗುತ್ತದೆ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ ಆರಂಭಿಸಿರುವ ಈ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಉದ್ಯಮಿ ವಿವೇಕಾನಂದ ಶೆಣೈ ಅವರು ಮಾತನಾಡಿ ತಂದೆ ತಾಯಿಯನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವ ಕಾರ್ಯ ಪುಣ್ಯಫಲದಿಂದ ಬರುವಂತದ್ದು. ಮಕ್ಕಳು ತಮ್ಮ ತಂದೆ ತಾಯಿಯನ್ನು ಗೌರವಿಸುವುದು ಮಾತ್ರವಲ್ಲದೆ ವೃದ್ಧಾಪ್ಯದಲ್ಲಿಯೂ ಪ್ರೀತಿ ಗೌರವಗಳಿಂದ ನೋಡಿಕೊಳ್ಳಬೇಕು. ಅಂತಹ ಸಂಸ್ಕಾರ ಬೆಳೆಸುವ ಶಿಕ್ಷಣವನ್ನು ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ ನೀಡುತ್ತಿದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಸ್ಕೌಟ್ ಮತ್ತು ಗೈಡ್ಸ್‌ನ ಕಾರ್ಕಳ ತಾಲೂಕು ಉಪಾಧ್ಯಕ್ಷೆ ಸಾವಿತ್ರಿ ಮನೋಹರ್, ಕಾರ್ಕಳ ಜೈನ್ ಮಿಲನ್ ಮಾಜಿ ಅಧ್ಯಕ್ಷೆ ಹಾಗೂ ನಿವೃತ್ತ ಆಂಗ್ಲಭಾಷಾ ಉಪನ್ಯಾಸಕಿ ಮಾಲತಿ ವಸಂತ್‌ರಾಜ್, ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷೆ ಹುಮೈರಾ ಸಂದರ್ಭೋಚಿತವಾಗಿ ಮಾತನಾಡಿ ಸಂಸ್ಥೆಯ ನೂತನ ಪರಿಕಲ್ಪನೆಯನ್ನು ಶ್ಲಾಘಿಸಿದರು.

ಸಂಸ್ಥೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಪ್ರಭಾರ ಮುಖ್ಯಶಿಕ್ಷಕಿ ಜೋಸ್ನಾ ಸ್ನೇಹಲತಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಕುಂದರ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿಯರಾದ ವಿಜೇತ ಸ್ವಾಗತಿಸಿ ಆಶಾಜ್ಯೋತಿ ವಂದಿಸಿದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post