ಕಲ್ಪ ಮೀಡಿಯಾ ಹೌಸ್ | ಕಾರ್ಕಳ (ಉಡುಪಿ) |
ಮಕ್ಕಳ ದಿನಾಚರಣೆಯ ಅಂಗವಾಗಿ ಕಾರ್ಕಳದ (Karkala) ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳ (Christ King School) ಶಿಕ್ಷಕ-ರಕ್ಷಕ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ‘ಮಕ್ಕಳ ಹಬ್ಬ’ (Children’s Festival) ಕಾರ್ಯಕ್ರಮವು ಸ್ಥಳೀಯ ಗಾಂಧಿ ಮೈದಾನದಲ್ಲಿ ಸಂಭ್ರಮ ಮತ್ತು ಸಡಗರದಿಂದ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮಕ್ಕೆ ಕಾರ್ಕಳದ ಶ್ರೀನಿವಾಸ್ ಗ್ಲಾಸ್ ಟ್ರೇಡರ್ಸ್ ಮಾಲೀಕ ಎಂ. ಗಣಪತಿ ಪೈ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ದೀಪ ಬೆಳಗಿಸುವ ಮೂಲಕ ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೈಸ್ಟ್ಕಿಂಗ್ ವಿದ್ಯಾಸಂಸ್ಥೆಯು ದುರ್ಬಲ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಸಮಗ್ರ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ. ಇದೇ ಕಾರಣದಿಂದಾಗಿ ಈ ಶಿಕ್ಷಣ ಸಂಸ್ಥೆಯು ರಾಜ್ಯದಲ್ಲಿಯೇ ವಿಶೇಷ ಸ್ಥಾನಮಾನ ಪಡೆದುಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಆಗಮಿಸಿದ್ದ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಟಿ.ಆರ್. ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬದುಕಬೇಕು. ಶಿಸ್ತು, ಉತ್ತಮ ನಡವಳಿಕೆ ಹಾಗೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಕಳ ಹೆಲ್ತ್ಕೇರ್ನ ಖ್ಯಾತ ವೈದ್ಯ ಡಾ. ಪ್ರಕಾಶ್ ಶೆಣೈ ಮಾತನಾಡಿ, ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಮಾಡುತ್ತಿರುವ ಸಾಧನೆ ಹೆಮ್ಮೆ ತರುವಂತಿದೆ. ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತೋರುತ್ತಿರುವ ಪ್ರತಿಭೆ ಮತ್ತು ಸಾಧನೆ ಮುಂದೆಯೂ ಇದೇ ರೀತಿ ಮುಂದುವರಿಯಲಿ ಎಂದು ಹಾರೈಸಿದರು.
Karkala: ಕ್ರೀಡಾ ಸಾಧಕಿ ಶೈನಿ ಡಿಸೋಜ ಅಧ್ಯಕ್ಷತೆ
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಶೈನಿ ಡಿಸೋಜ ವಹಿಸಿದ್ದರು. ಇವರು ಸತತ ಎರಡು ಬಾರಿ ಈಜು ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಹಾಗೂ ಸತತ ಐದು ಬಾರಿ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಭಾಗೀಯ ಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿರುವ ಕ್ರೀಡಾಪಟುವಾಗಿದ್ದಾರೆ.
ನಂತರ ಗಣ್ಯರು ಹಾಗೂ ವಿದ್ಯಾರ್ಥಿಗಳು ಮಕ್ಕಳೇ ಸಿದ್ಧಪಡಿಸಿದ್ದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ, ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ, ಆಹಾರ ಮಳಿಗೆಗಳು ಹಾಗೂ ಮನೋರಂಜನಾ ಆಟಗಳ ಮಳಿಗೆಗಳನ್ನು ಉದ್ಘಾಟಿಸಿದರು.
ಮಕ್ಕಳ ಪ್ರತಿಭೆಗೆ ವೇದಿಕೆಯಾದ ವಿವಿಧ ಮಳಿಗೆಗಳು
ಮಕ್ಕಳ ಹಬ್ಬದ ಪ್ರಮುಖ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದಲೇ ಸಿದ್ಧಪಡಿಸಲಾದ ವಿಜ್ಞಾನ ಮಾದರಿಗಳ ಪ್ರದರ್ಶನ ಗಮನ ಸೆಳೆಯಿತು. ಇದರೊಂದಿಗೆ ಚಿತ್ರಕಲೆ, ಕ್ರಾಫ್ಟ್ ಹಾಗೂ ವಿವಿಧ ಕಲಾಕೃತಿಗಳ ಪ್ರದರ್ಶನವೂ ನಡೆಯಿತು. ವಿದ್ಯಾರ್ಥಿಗಳೇ ನಿರ್ವಹಿಸಿದ ಆಹಾರ ಮಳಿಗೆಗಳಲ್ಲಿ ವಿವಿಧ ತಿಂಡಿ-ತಿನಿಸುಗಳು ಲಭ್ಯವಿದ್ದವು.
ಮನೋರಂಜನಾ ಆಟಗಳ ಮಳಿಗೆಗಳು, ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಚಟುವಟಿಕೆಗಳು ಹಾಗೂ ಮಕ್ಕಳಿಂದಲೇ ಪ್ರಸ್ತುತಪಡಿಸಲಾದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದವು. ವಿದ್ಯಾರ್ಥಿಗಳ ಸೃಜನಶೀಲತೆ, ಕಲಾತ್ಮಕ ಅಭಿರುಚಿ, ವೈಜ್ಞಾನಿಕ ಚಿಂತನೆ ಮತ್ತು ಸಂಘಟನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಯಿತು.
Also Read>> ಕನ್ನಡದ ಪದಸಂಪತ್ತು ಬದುಕಿನ ಅಭಿವ್ಯಕ್ತಿಯಾಗಲಿ: ಗೋಪಾಲ್ ಯಡಗೆರೆ
ಕಾರ್ಯಕ್ರಮದಲ್ಲಿ ಕ್ರೈಸ್ಟ್ಕಿಂಗ್ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಟ್ರಸ್ಟ್ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್, ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಐ. ಕ್ರಿಸ್ಟೋಫರ್ ಕೋಟ್ಯಾನ್, ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿ. ಜಾಲಿ ಜೇಕಬ್ ಉಪಸ್ಥಿತರಿದ್ದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಪದವಿಪೂರ್ವ ವಿಭಾಗದ ನಿತೀಶ್ ಶೆಟ್ಟಿ, ಪ್ರೌಢಶಾಲಾ ವಿಭಾಗದ ವಿಶ್ವನಾಥ ಪೂಜಾರಿ, ಪ್ರಾಥಮಿಕ ವಿಭಾಗದ ವನಿತಾ ಶೆಟ್ಟಿ ಸೇರಿದಂತೆ ಕ್ರೀಡಾಕ್ಷೇತ್ರದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿ ಸಂಸ್ಥೆಯ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳಾದ ಸಿಯಾ ಅಂಚನ್, ಪ್ರಾನ್ವಿ ಎಸ್. ದೇವಾಡಿಗ, ಆಶಿ ಶೆಟ್ಟಿ, ಅಶೆಲ್ ಡಿ. ಅಲ್ಮೇಡ, ಅಕ್ಷಯ್ ಪ್ರಭು, ಸುಧೀಕ್ಷಾ, ಮೌಲ್ಯ, ವರುಣ್ ಕೆ. ಕಾಮತ್, ಸಾನ್ವಿ ಎಂ. ನಾಯಕ್, ರಿತು ಪ್ರಾನ್ಸಿಸ್, ಶಾನ್ ಡಿಸೋಜ, ಅಂಕುಶ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಸ್ವಾಗತಿಸಿದರು. ಆಂಗ್ಲ ಭಾಷಾ ಶಿಕ್ಷಕಿ ಆ್ಯಲಿಸ್ ಲೋಬೊ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










