ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಭಾಷೆಯ ಬಳಕೆಯ ಬಗ್ಗೆ ಯಾರೂ ಹಿಂಜರಿಕೆ ಹೊಂದಬಾರದು. ನಮ್ಮ ದೈನಂದಿನ ಮಾತುಕತೆ, ಸಂವಹನ ಹಾಗೂ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಸಾಧ್ಯವಾದಷ್ಟು ಕನ್ನಡ ಪದಗಳನ್ನು ಬಳಸುವ ಮೂಲಕ ಭಾಷೆಯನ್ನು ಬದುಕಿನ ಅಭಿವ್ಯಕ್ತಿಯನ್ನಾಗಿ ರೂಪಿಸಬೇಕು ಎಂದು ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಕರೆ ನೀಡಿದರು. ಶಿವಮೊಗ್ಗ (Shivamogga) ನಗರದ ಸಿ. ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದಲ್ಲಿ (C Bheemasenarao Law College) ಸ್ನಾತಕೋತ್ತರ ಅಧ್ಯಯನ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (NSS) ವತಿಯಿಂದ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂವಹನದಲ್ಲಿ ಕನ್ನಡದ ಬಳಕೆಗೆ ಆದ್ಯತೆ ಇರಲಿ
ಸಮಾಜವನ್ನು ತಿದ್ದುವ ಮತ್ತು ಸಮಾಜದಲ್ಲಿ ನ್ಯಾಯವನ್ನು ಸ್ಥಾಪಿಸುವ ಕಾರ್ಯದಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ವಕೀಲರು ಬಳಸುವ ಮಾತು, ಭಾಷೆ ಹಾಗೂ ಸಂವಹನದ ರೀತಿ ಬಹಳ ಮುಖ್ಯವಾಗುತ್ತದೆ. ಕಕ್ಷಿದಾರರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಲು ಮಾತೃಭಾಷೆಯ ಮೇಲಿನ ಹಿಡಿತ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ನಮ್ಮ ಪ್ರತಿಯೊಂದು ಮಾತಿನಲ್ಲಿಯೂ ಇಂಗ್ಲಿಷ್ ಪದಗಳು ಸಹಜವಾಗಿ ಸೇರಿಕೊಂಡಿವೆ. ಇಂಗ್ಲಿಷ್ ಭಾಷೆ ಬಳಸುವುದು ತಪ್ಪು ಎಂಬುದು ನಮ್ಮ ಉದ್ದೇಶವಲ್ಲ. ಆದರೆ ಇಂಗ್ಲಿಷ್ ಪದಗಳನ್ನು ಬಳಸುವ ಸಂದರ್ಭದಲ್ಲಿಯೇ ಅದಕ್ಕೆ ಸಮಾನವಾದ ಕನ್ನಡ ಪದಗಳನ್ನು ಬಳಸುವ ಪ್ರಯತ್ನ ಮಾಡಬಹುದಲ್ಲವೇ ಎಂಬುದನ್ನು ಪ್ರತಿಯೊಬ್ಬರೂ ಆಲೋಚಿಸಬೇಕು. ಕನ್ನಡದಲ್ಲಿ ಮಾತನಾಡುವಾಗ ಕನ್ನಡ ಪದಗಳ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
Shivamogga: ಮಕ್ಕಳಲ್ಲಿ ಮಾತೃಭಾಷೆಯ ಆಸಕ್ತಿ ಮನೆಯಲ್ಲೇ ಬೆಳೆಯಲಿ
ಇಂದಿನ ದಿನಗಳಲ್ಲಿ ಮಕ್ಕಳೊಂದಿಗೆ ಸಂವಹನ ನಡೆಸುವಾಗಲೂ ಪೋಷಕರು ಇಂಗ್ಲಿಷ್ ಭಾಷೆಯನ್ನೇ ಬಳಸಬೇಕೆಂಬ ವ್ಯಾಮೋಹ ಬೆಳೆಸಿಕೊಂಡಿದ್ದಾರೆ. ಇದರಿಂದ ಮಕ್ಕಳು ತಮ್ಮ ಮಾತೃಭಾಷೆಯ ಪದಸಂಪತ್ತಿನಿಂದ ದೂರವಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಯಾವುದೇ ಭಾಷೆಯಲ್ಲಿಯೂ ಸಮರ್ಪಕ ಪರಿಣಿತಿ ಪಡೆಯದ ಸ್ಥಿತಿಯೂ ನಿರ್ಮಾಣವಾಗಬಹುದು.
ಮಕ್ಕಳಲ್ಲಿ ಕನ್ನಡ ಭಾಷೆಯ ಮೇಲಿನ ಪ್ರೀತಿ ಹಾಗೂ ಉತ್ತಮ ಪದಸಂಪತ್ತನ್ನು ಬೆಳೆಸುವ ಜವಾಬ್ದಾರಿ ಮನೆಗಳಿಂದಲೇ ಆರಂಭವಾಗಬೇಕು. ಪೋಷಕರು ಮಕ್ಕಳೊಂದಿಗೆ ಕನ್ನಡದಲ್ಲಿ ಮಾತನಾಡಬೇಕು. ಕನ್ನಡ ಪುಸ್ತಕಗಳು, ಪತ್ರಿಕೆಗಳು ಹಾಗೂ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಬೇಕು. ವಿಶೇಷವಾಗಿ ಮುದ್ರಣ ಮಾಧ್ಯಮಗಳ ನಿರಂತರ ಓದು ಹೊಸ ಕನ್ನಡ ಪದಗಳನ್ನು ಕಲಿಯಲು ಮತ್ತು ಭಾಷಾ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ನಮ್ಮ ನೆಲದಲ್ಲಿ ಬದುಕುತ್ತಿರುವ ಅನ್ಯಭಾಷಿಕರೊಂದಿಗೂ ಕನ್ನಡದಲ್ಲಿಯೇ ಮಾತನಾಡುವ ಪ್ರಯತ್ನ ಮಾಡಬೇಕು. ಕನ್ನಡ ಭಾಷೆಯನ್ನು ಕಲಿಯಲು ಮತ್ತು ಬಳಸಲು ಇತರರಿಗೂ ಪ್ರೋತ್ಸಾಹ ನೀಡಬೇಕು. ಕನ್ನಡ ರಾಜ್ಯೋತ್ಸವವನ್ನು ಕೇವಲ ಒಂದು ದಿನದ ಆಚರಣೆಗೆ ಸೀಮಿತಗೊಳಿಸದೆ, ಪ್ರತಿದಿನದ ಬದುಕಿನಲ್ಲಿ ಕನ್ನಡವನ್ನು ಬಳಸುವುದೇ ರಾಜ್ಯೋತ್ಸವ ಆಚರಣೆಯ ನಿಜವಾದ ಸಾರ್ಥಕತೆ ಎಂದು ಗೋಪಾಲ್ ಯಡಗೆರೆ ಹೇಳಿದರು.
ಕನ್ನಡದ ಜೊತೆಗೆ ಇತರ ಭಾಷೆಗಳಿಗೂ ಗೌರವವಿರಲಿ
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ಒಂದು ಜನಾಂಗದ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಗುರುತಿಸುವಲ್ಲಿ ಭಾಷೆ, ಕಲೆ ಹಾಗೂ ಆಹಾರ ಪದ್ಧತಿಗಳು ಪ್ರಮುಖ ಮಾನದಂಡಗಳಾಗಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಅದರ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಕಂಡುಬರುತ್ತಿಲ್ಲ ಎಂದು ವಿಷಾದಿಸಿದರು.
ಕನ್ನಡ ಕಲಿಯದೆಯೂ ಬದುಕು ಸಾಗಿಸಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದು ಭಾಷೆಯ ಬಳಕೆ ಕಡಿಮೆಯಾಗಲು ಒಂದು ಪ್ರಮುಖ ಕಾರಣವಾಗಿದೆ. ಹಾಗೆಂದು ಇತರ ಭಾಷೆ ಅಥವಾ ಸಂಸ್ಕೃತಿಯನ್ನು ಗೌರವಿಸಬಾರದು ಎಂಬ ಸಂಕುಚಿತ ಮನೋಭಾವ ಹೊಂದಬಾರದು. ಎಲ್ಲ ಭಾಷೆ ಮತ್ತು ಸಂಸ್ಕೃತಿಗಳನ್ನು ಗೌರವಿಸುವ ವಿಶಾಲ ಮನೋಭಾವದೊಂದಿಗೆ ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
Also Read>> ಶಿವಮೊಗ್ಗ | ‘ಮನುಷ್ಯರಾಗೋಣ’ ಬೀದಿನಾಟಕದ ಮೂಲಕ ಕಾನೂನು ಅರಿವು
ವ್ಯಾಕರಣಬದ್ಧ ಕನ್ನಡ ಕಲಿಯುವುದು ಅಗತ್ಯ
ಮಾತೃಭಾಷೆಯಲ್ಲಿ ಪ್ರೌಢಿಮೆ ಸಾಧಿಸುವುದರ ಜೊತೆಗೆ ವ್ಯಾಕರಣಬದ್ಧವಾಗಿ ಕನ್ನಡವನ್ನು ಕಲಿಯಬೇಕು. ಭಾಷೆಯ ಉಚ್ಚಾರಣೆ, ಪದಗಳ ಅರ್ಥ ಹಾಗೂ ಅವುಗಳಲ್ಲಿರುವ ಸೂಕ್ಷ್ಮತೆಯನ್ನು ಅರಿತುಕೊಳ್ಳುವುದು ಮುಖ್ಯ. ಕನ್ನಡ ಅತ್ಯಂತ ಶ್ರೀಮಂತ ಹಾಗೂ ವೈಜ್ಞಾನಿಕ ಭಾಷೆಯಾಗಿದ್ದು, ಅನೇಕ ಭಾಷೆಗಳ ಪದಗಳನ್ನು ತನ್ನೊಳಗೆ ಅಳವಡಿಸಿಕೊಂಡು ಸಮೃದ್ಧವಾಗಿ ಬೆಳೆದಿದೆ ಎಂದು ವಿವರಿಸಿದರು.
ನ್ಯಾಯಾಲಯದ ವ್ಯವಹಾರಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡುತ್ತಿರುವುದು ಅಭಿನಂದನಾರ್ಹ ಬೆಳವಣಿಗೆಯಾಗಿದೆ. ವಕೀಲ ವೃತ್ತಿಯಲ್ಲಿ ಕಕ್ಷಿದಾರರಿಗೆ ಕಾನೂನಿನ ವಿಚಾರಗಳನ್ನು ಅರ್ಥಮಾಡಿಸುವುದು ಮತ್ತು ಅವರಲ್ಲಿ ಆತ್ಮವಿಶ್ವಾಸ ಮೂಡಿಸುವುದು ಮುಖ್ಯ. ಈ ಹಿನ್ನೆಲೆಯಲ್ಲಿ ವಕೀಲರು ಕನ್ನಡದಲ್ಲಿ ಪರಿಣಾಮಕಾರಿಯಾಗಿ ಸಂವಹನ ನಡೆಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎ. ಅನಲಾ ವಹಿಸಿದ್ದರು. ಸಹ ಪ್ರಾಧ್ಯಾಪಕ ಡಾ. ಕಾಂತರಾಜ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










