ಕಲ್ಪ ಮೀಡಿಯಾ ಹೌಸ್ | ಕಾರ್ಕಳ (ಮಂಗಳೂರು) |
ಕಾರ್ಕಳದ (Karkala) ಕ್ರೈಸ್ಟ್ಕಿಂಗ್ (Christ King) ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, ವಾಲಿಬಾಲ್ (Volleyball) ಹಾಗೂ ತ್ರೋಬಾಲ್ ವಿಭಾಗಗಳಲ್ಲಿ ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.
Karkala: ವಾಲಿಬಾಲ್ನಲ್ಲಿ ಪ್ರಥಮ ಸ್ಥಾನ
ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಇರ್ವತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ 14ರ ವಯೋಮಾನದ ಪ್ರಾಥಮಿಕ ಶಾಲಾ ಬಾಲಕಿಯರ ಕಾರ್ಕಳ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಅತ್ಯುತ್ತಮ ಪ್ರದರ್ಶನ ನೀಡಿದ ತಂಡವು ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಅರ್ಹತೆ ಗಳಿಸಿದೆ. ತಂಡದಲ್ಲಿ 7ನೇ ತರಗತಿಯ ತ್ರಿಷ್ಮ, ಸೃಷ್ಟಿ ಎಸ್. ಪೂಜಾರಿ, ಕೇಟ್ಲಿನ್ ಏಂಜಲ್ ಪಿಂಟೊ, ಎಲ್ಸಿ ರುಬೇಲ್ ಡಿಸೋಜ, ಅನ್ವಿತಾ ಬಿ. ಶೆಟ್ಟಿ ಹಾಗೂ ಪ್ರನ್ವಿ ಎಸ್. ದೇವಾಡಿಗ, 6ನೇ ತರಗತಿಯ ನಿಶಾ ಡಿಸೋಜ, ಅಲಿಷ ಡಿಸೋಜ, ಸಾತ್ವಿ ಶೆಟ್ಟಿ ಹಾಗೂ ಆಯುಷಾ ಮನ್ ಭಾಗವಹಿಸಿದ್ದರು.
ತಂಡದ ಈ ಸಾಧನೆಗೆ ಕ್ರೈಸ್ಟ್ಕಿಂಗ್ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿ, ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದ್ದಾರೆ.
ತ್ರೋಬಾಲ್ನಲ್ಲಿ ಮೂವರು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ
ಇದೇ ವೇಳೆ ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ ಪದವಿಪೂರ್ವ ಬಾಲಕ-ಬಾಲಕಿಯರ ತ್ರೋಬಾಲ್ ಪಂದ್ಯಾವಳಿಯಲ್ಲಿಯೂ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
Also Read>> ಪ್ರಧಾನಿ ಮೋದಿ–ಪೇಜಾವರ ಶ್ರೀ ಭೇಟಿ: ವಿಶ್ವೇಶತೀರ್ಥರ ಜನ್ಮಶತಮಾನೋತ್ಸವ ಲಾಂಛನ ಅನಾವರಣ
ಬಾಲಕಿಯರ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ದೀಪ್ತಿ ಶೆಟ್ಟಿ ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಶೇಕ್ ಇಮಾದ್ ಹಾಗೂ ಪ್ರಥಮ ವಾಣಿಜ್ಯ ವಿಭಾಗದ ಗಗನ್ ಶೆಟ್ಟಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಾಲಿಬಾಲ್ ಹಾಗೂ ತ್ರೋಬಾಲ್ ಕ್ರೀಡಾಕೂಟಗಳಲ್ಲಿ ವಿದ್ಯಾರ್ಥಿಗಳು ತೋರಿದ ಸಾಧನೆಗೆ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯ ಶಿಕ್ಷಕರು, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










