ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟದ ಮಾಹಿತಿ ಸಿಕ್ಕಲ್ಲಿ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ವಿದ್ಯಾರ್ಥಿಗಳಿಗೆ ಕಾರ್ಕಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶಿವಕುಮಾರ್ ಕರೆ ನೀಡಿದರು.
ಇಲ್ಲಿನ ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜು ಹಾಗೂ ಅದರ ರೋವರ್ಸ್ ಮತ್ತು ರೇಂಜರ್ಸ್ ಘಟಕ, ಪ್ರೌಢಶಾಲಾ ವಿಭಾಗದ ಸ್ಕೌಟ್ ಮತ್ತು ಗೈಡ್ಸ್ ಘಟಕ ಇವುಗಳ ವತಿಯಿಂದ ಕಾರ್ಕಳ ನಗರ ಪೊಲೀಸ್ ಠಾಣೆಯ ನೇತೃತ್ವದಲ್ಲಿ ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಜನ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಮಾದಕ ದ್ರವ್ಯ ವಿರೋಧಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಿಗೆ ಡ್ರಗ್ಸ್ ಹಾಗೂ ಇತರ ಮಾದಕ ದ್ರವ್ಯಗಳ ಅಪಾಯಗಳು ಹಾಗೂ ಅವುಗಳ ಬಗ್ಗೆ ವಹಿಸಬೇಕಾದ ಎಚ್ಚರಿಕೆಗಳ ಕುರಿತಾಗಿ ಅವರು ಮಾಹಿತಿ ನೀಡಿದರು.
ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ಪ್ರೌಢಶಾಲಾ ವಿಭಾಗದ ಸ್ಕೌಟ್ ಮತ್ತು ಗೈಡ್ಸ್ ಘಟಕಗಳ ವಿದ್ಯಾರ್ಥಿಗಳು ಕಾರ್ಕಳದ ಬಂಡೀಮಠ ಬಸ್ಸು ನಿಲ್ದಾಣದಿಂದ ಗಾಂಧಿ ಮೈದಾನವರೆಗೆ ಮಾದಕ ದ್ರವ್ಯ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಕಳ ನಗರ ಠಾಣೆಯ ನೂತನ ಉಪ ನಿರೀಕ್ಷಕರಾದ ಮುರಳೀಧರ ನಾಯ್ಕ್ ಹಾಗೂ ನಗರ ಠಾಣೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಕ್ರೈಸ್ಟ್ಕಿಂಗ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಉಮೇಶ್ ಬೆಳ್ಳಿಪ್ಪಾಡಿ, ದೀಪಕ್, ಸುಕನ್ಯಾ, ಕು.ಅಭಿನಯ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್ ರ್ಯಾಲಿಯ ನೇತೃತ್ವ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post