ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ವಿದ್ಯಾರ್ಥಿಗಳಿಗೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯ, ಸ್ಕೌಟ್ ಮತ್ತು ಗೈಡ್ಸ್‌ನಂತವುಗಳು ಜೀವನದಲ್ಲಿ ಶಿಸ್ತು, ಸಮಾಜಸೇವೆ, ಪರಿಸರ ಕಾಳಜಿ ಮೂಡಿಸಲು ಸಹಕಾರಿ ಈ ಹಿನ್ನೆಯಲ್ಲಿ ಇಂತಹ ಚಟುವಟಿಕೆಗಳನ್ನು ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆಗಳು ಅಳವಡಿಸಿಕೊಂಡಿರುವುದು ಬಹಳ ಹೆಮ್ಮೆಯ ವಿಚಾರ ಎಂದು ಕಾರ್ಕಳ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಆಂಗ್ಲಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ವಿಶ್ವ ಸ್ಕೌಟ್ಸ್ ಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸರ್ವಧರ್ಮ ಪ್ರಾರ್ಥನೆಯಿಂದ ಕಾರ್ಯಕ್ರಮವು ಪ್ರಾರಂಭಗೊಂಡಿತು.
ಕಬ್ ಮತ್ತು ಬುಲ್ ಬುಲ್, ಬನ್ನೀಸ್, ಸ್ಕೌಟ್ ಮತ್ತು ಗೈಡ್ಸ್‌ನ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು, ಡ್ರಾಯಿಂಗ್, ಕ್ರಾಫ್ಟ್, ಬೆಂಕಿ ಇಲ್ಲದೆ ಅಡುಗೆ ಇತ್ಯಾದಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಗೈಡ್ಸ್ ತರಬೇತು ಆಯುಕ್ತೆ ಹಾಗೂ ಕಾರ್ಕಳ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆ ಸಾವಿತ್ರಿ ಮನೋಹರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಅವರು ಮಕ್ಕಳಿಗೆ ವಿವಿಧ ಹಾಡು ಹಾಗೂ ಚಟುವಟಿಕೆಗಳ ಮೂಲಕ ಸ್ಕೌಟ್ ಮತ್ತು ಗೈಡ್ಸ್‌ನ ಕಾರ್ಯಯೋಜನೆಗಳ ಅರಿವು ಮೂಡಿಸಿದರು.
Also read: ಶಿವಮೊಗ್ಗ | ಸ್ವಾಸ್ಥ್ಯ ಪರಿವಾರ ಸ್ಯಾಟಲೈಟ್ ಕ್ಲಿನಿಕ್‌ಗೆ ಚಾಲನೆ
ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಡೊಮಿನಿಕ್ ಅಂದ್ರಾದೆಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಪ್ ಕಿಶೋರ್ ಲೋಬೊ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಪ್ರಾಥಮಿಕ ವಿಭಾಗದ ಲಿನೆಟ್ ಮರಿನಾ ಡಿ’ಸೋಜ, ಪ್ರೌಢಶಾಲಾ ವಿಭಾಗದ ಪ್ರಕಾಶ್ ಡಿಸೋಜ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಥಮಿಕ ವಿಭಾಗದ ಬುಲ್ ಬುಲ್ ಶಿಕ್ಷಕಿ ರಮಿತಾ ವಿಜೇತರಾದವರ ಪಟ್ಟಿ ವಾಚಿಸಿದರು. ಗೈಡ್ಸ್ ಕ್ಯಾಪ್ಟನ್‌ಗಳಾದ ಆಶಾಜ್ಯೋತಿ ಸ್ವಾಗತಿಸಿ ರಶ್ಮಿ ವಂದಿಸಿದರು. ಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post