ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಪ್ರಜಾಪ್ರಭುತ್ವ ಉಳಿಯುವಲ್ಲಿ ಪತ್ರಿಕಾ ಮಾಧ್ಯಮದ ಕೊಡುಗೆ ಅನನ್ಯ, ಪತ್ರಿಕೆಗೆ ಹಾಗೂ ಪತ್ರಕರ್ತರಿಗೆ ಪತ್ರಿಕಾ ಧರ್ಮವೇ ಧರ್ಮವಾಗಬೇಕು ಎಂದು ವಿಶ್ರಾಂತ ಪತ್ರಕರ್ತ ಬಿಪಿನ್ ಚಂದ್ರ ಪಾಲ್ ನಕ್ರೆ ಅಭಿಪ್ರಾಯಪಟ್ಟರು.
ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವ ಉಳಿಯುವಲ್ಲಿ ಪತ್ರಿಕಾ ಮಾಧ್ಯಮದ ಕೊಡುಗೆ ಅನನ್ಯ, ಪತ್ರಿಕೆಗೆ ಹಾಗೂ ಪತ್ರಕರ್ತರಿಗೆ ಪತ್ರಿಕಾ ಧರ್ಮವೇ ಧರ್ಮವಾಗಬೇಕು. ಆಧುನಿಕ ಕಾಲದಲ್ಲಿ ಪತ್ರಕರ್ತರ ಕಾರ್ಯ ಅನೇಕ ಸವಾಲುಗಳಿಂದ ಕೂಡಿದೆ. ಆದರೆ ಅವುಗಳಿಗೆ ಹೆದರದೆ ನೇರ ಹಾಗೂ ದಿಟ್ಟತನದಿಂದ ವರದಿಗಾರಿಕೆ ಮಾಡಬೇಕು. ಪತ್ರಕರ್ತರು ಎಲ್ಲರವರಾಗಿರಬೇಕು ಹೊರತು ಯಾರೋ ಒಬ್ಬ ವ್ಯಕ್ತಿಯವನಾಗಿರಬಾರದು ಎಂದರು.
ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್’ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ, ಈ ಸಮಾಜದಲ್ಲಿ ಧ್ವನಿಯಿಲ್ಲದವರ ಧ್ವನಿಯಾಗಿರುವವರು ಪತ್ರಕರ್ತರು. ಇಂದಿನ ಸಂಕೀರ್ಣ ಸಮಾಜದಲ್ಲಿ ಹಾಗೂ ಸಾಮಾಜಿಕ ಮಾಧ್ಯಮಗಳ ಭರಾಟೆಯ ನಡುವಿನಲ್ಲಿ ಪತ್ರಿಕೆಗಳು ಇಂದಿಗೂ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿವೆ. ದೇಶದಲ್ಲಿರುವ ಪ್ರಜೆಗಳಿಗೆ ಸೇವೆ ಸಲ್ಲಿಸುವುದೇ ದೇಶಪ್ರೇಮ. ಈ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದು ನಿಜವಾಗಿಯೂ ಅವರು ಅಭಿನಂದನಾರ್ಹರು ಎಂದರು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಮಹಮ್ಮದ್ ಷರೀಫ್ ಅವರು ಮಾತನಾಡಿ, ಪತ್ರಕರ್ತರು ಸುದ್ದಿಯ ಬಗ್ಗೆ ಸಮಗ್ರ ವಸ್ತುನಿಷ್ಟ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸಿ ವರದಿ ಮಾಡಬೇಕು. ರಾಗ ದ್ವೇಷ ಪಕ್ಷಪಾತಗಳಿಲ್ಲದೆ ಪತ್ರಿಕಾ ಧರ್ಮ ಹಳಿ ತಪ್ಪದಂತೆ ಕಾರ್ಯನಿರ್ವಹಿಸಬೇಕು ಎಂದರು.ಮಾಧ್ಯಮಬಿಂಬ ಪತ್ರಿಕೆಯ ಹಿರಿಯ ವರದಿಗಾರ ಸತೀಶ ಎಚ್ ಶೆಟ್ಟಿ ಅವರನ್ನು ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿದ ಸತೀಶ ಶೆಟ್ಟಿ ಅವರು ತಮ್ಮ ವರದಿಗಾರಿಕೆಯ ಅನುಭವವನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಾಜರಿದ್ದ ವಿವಿಧ ಪತ್ರಿಕೆಗಳ ಪತ್ರಕರ್ತರು, ವರದಿಗಾರರು, ಛಾಯಾಗ್ರಾಹಕರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಮಾಧ್ಯಮ ಬಿಂಬ ಹಾಗೂ ಸ್ವಯಂ ಟೈಮ್ಸ್ ಚಾನಲ್‌ನ ವಸಂತ್ ಕುಮಾರ್, ನಿವೃತ್ತ ಪತ್ರಕರ್ತರಾದ ಪ್ರದೀಪ್ ನಾಯಕ್ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಖ್ಯಾಶಾಸ್ತ್ರ ಉಪನ್ಯಾಸಕಿ ಮೇಘಶ್ರೀ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post