ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ತನ್ನನ್ನು ತಾನು ನಿಯಂತ್ರಿಸಿಕೊಳ್ಳಬಲ್ಲ ವ್ಯಕ್ತಿ ಜಗತ್ತಿನ ಶ್ರೇಷ್ಟ ವ್ಯಕ್ತಿಯಾಗುತ್ತಾನೆ. ವಿಭಿನ್ನ ಕೆಲಸ ಮಾಡುವುದಕ್ಕಿಂತ ಮಾಡುವ ಕೆಲಸದಲ್ಲಿ ವಿಭಿನ್ನತೆ ಇದ್ದರೆ ಜಯ ಸುಲಭ ಸಾಧ್ಯವಾಗುತ್ತದೆ ಎಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ವಿನಾಯಕ ನಾಯ್ಕ್ ಹೇಳಿದರು.
ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಕರ್ನಾಟಕ ಸರಕಾರ ಹಾಗೂ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು, ಇವರ ಜಂಟಿ ಆಶ್ರಯದಲ್ಲಿ ಕಾರ್ಕಳದ ಗಾಂಧೀ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪದವಿಪೂರ್ವ ವಿಭಾಗದ ಬಾಲಕ ಮತ್ತು ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಗೆ ದೀಪ ಬೆಳಗುವುದರ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವನದಲ್ಲಿ ಯಶಸ್ಸು ಒಂದೇ ಬಾರಿಗೆ ಬರೋದಿಲ್ಲ, ಸೋತಾಗ ಎದೆಗುಂದದೆ ಮರಳಿ ಯತ್ನವನ್ನು ಮಾಡುತ್ತಲೇ ಇದ್ದರೆ ನಾವು ಸಾಧಕರಾಗುತ್ತೇವೆ ಎಂದು ಹೇಳಿದರು.
Also read: ಕಾಂಗ್ರೆಸ್’ಗೆ 136 ಸ್ಥಾನ ನೀಡಿದ ಜನರೇ ಈಗ 14 ತಿಂಗಳಲ್ಲಿ ಶಾಪ ಹಾಕುತ್ತಿದ್ದಾರೆ: ಸಂಸದ ರಾಘವೇಂದ್ರ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್ ಮಾತನಾಡಿ ದೈಹಿಕ ಚಟುವಟಿಕೆಗಳ ಕೊರತೆ ನಮ್ಮಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕ್ರೀಡೆ ಆಯಸ್ಸು ವೃದ್ಧಿಗೆ ಸಹಕಾರಿಯಾಗುತ್ತದೆ, ಕ್ರೀಡೆಯಲ್ಲಿ ಸೋಲು ಗೆಲುವುಗಿಂತ ಕ್ರೀಡಾ ಸ್ಪೂರ್ತಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ತಾಲೂಕು ಕ್ರೀಡಾ ಮೇಲ್ವಿಚಾರಕ ಹಾಗೂ ನಿಟ್ಟೆ ಎನ್‌ಎಸ್‌ಎಎಮ್ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವೀಂದ್ರ ಕುಮಾರ್ ಪ್ರಸ್ತಾವನೆಗೈದರು. ಸಂಸ್ಥೆಯ ಪದವಿಪೂರ್ವ ವಿಭಾಗದ ಉಪಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಪ್ ಕಿಶೋರ್ ಲೋಬೊ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಕಾಶ್ ನಾಯ್ಕ್ ಸ್ವಾಗತಿಸಿ ಕು.ಲಾವಣ್ಯ ಶೆಟ್ಟಿ ವಂದಿಸಿದರು. ಪಂದ್ಯಾಟದ ಬಾಲಕರ ವಿಭಾಗದಲ್ಲಿ ನಿಟ್ಟೆ ಎನ್‌ಎಸ್‌ಎಎಮ್ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದರೆ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ಬಾಲಕಿಯರ ವಿಭಾಗದಲ್ಲಿ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದರೆ ನಿಟ್ಟೆ ಎನ್‌ಎಸ್‌ಎಎಮ್ ಪದವಿಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಕನ್ನಡ ಉಪನ್ಯಾಸಕ ಉಮೆಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ರಸಾದ್ ಪಂದ್ಯಾಟ ಸಂಘಟಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post