ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ನಾಯಕತ್ವ ನೀಡಿದಾಗ ಮುಂದೆ ಸಮಾಜದಲ್ಲಿ ಉತ್ತಮ ನಾಯಕನಾಗಲು ಸಾಧ್ಯ ಇಂತಹ ನಾಯಕತ್ವದ ಗುಣವನ್ನು ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಈ ಸಂಸ್ಥೆ ನೀಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದು ರೆ. ಫಾ. ಪೌಲ್ ಕುಟಿನ್ಹ ಹೇಳಿದರು.
ಇಲ್ಲಿನ ಕ್ರೈಸ್ಟ್‌ಕಿಂಗ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ನೂತನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅವರು ದೀಪ ಬೆಳಗಿ ನೂತನ ವಿದ್ಯಾರ್ಥಿ ಸಂಘಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಹಿತಿ ಹಾಗು ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಅಧಿಕಾರಿ ಡಾ ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಜ್ಞಾನ, ಕೌಶಲ್ಯ, ಆರೋಗ್ಯ ಹಾಗೂ ಮೌಲ್ಯಗಳೆಂಬ ನಾಲ್ಕು ಅಂಶಗಳನ್ನು ಒಬ್ಬ ವಿದ್ಯಾರ್ಥಿ ತನ್ನಲ್ಲಿ ಅಳವಡಿಸಿಕೊಂಡಾಗ ಆತ ತನ್ನ ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದು ಹೇಳಿದರು.
ಇಸ್ರೋ ನಿವೃತ್ತ ವಿಜ್ಞಾನಿ ಜನಾರ್ಧನ ಇಡ್ಯ ಮಾತನಾಡಿ, ಬಾಲ್ಯದಲ್ಲಿಯೇ ತಮ್ಮಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಯಾರನ್ನು ದ್ವೇಷಿಸಿದೆ ಪ್ರಾಮಾಣಿಕರಾಗಿದ್ದು ಸತ್ಪ್ರಜೆಗಳಾಗಿ ಬಾಳಿ ಎಂದು ಹೇಳಿದರು.
ಕಾರ್ಕಳ ಜೆಸಿಐ ಅಧ್ಯಕ್ಷೆ ಶ್ವೇತಾ ಜೈನ್ ಮಾತನಾಡಿ, ನಾಯಕರಾದವರಲ್ಲಿ ಶಿಸ್ತು ಮತ್ತು ಸಮಯ ಪರಿಪಾಲನೆಯ ಗುಣವಿರಬೇಕು. ಈ ಗುಣವನ್ನು ನೀವೆಲ್ಲರೂ ನಿಮ್ಮಲ್ಲಿ ಅಳವಡಿಸಿಕೊಂಡು ಭವಿಷ್ಯದ ಉತ್ತಮ ನಾಯಕರಾಗಿ ಎಂದು ಹೇಳಿದರು.
ಸಂಸ್ಥೆಯ ವಿದ್ಯಾರ್ಥಿ ಸಮಾಲೋಚಕರಾಗಿರುವ ಡಾ. ಸಿಸ್ಟರ್ ಶಾರ್ಲೆಟ್ ಸಿಕ್ವೇರಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡಾಗ ಉತ್ತಮ ಪ್ರಜೆಗಳಾಗಿ ಬಾಳಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್‌ನ ಸದಸ್ಯ ಹಾಗೂ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ಫೆರ್ನಾಂಡಿಸ್ ಮಾತನಾಡಿ, ದೇವರು ಪ್ರತಿಯೊಬ್ಬರಿಗೂ ಒಂದೇ ರೀತಿಯ ಪ್ರತಿಭೆಯನ್ನು ನೀಡಿರುವುದಿಲ್ಲ ಆದರೆ ಒಂದೇ ರೀತಿಯ ಅವಕಾಶವನ್ನು ನೀಡಿರುತ್ತಾನೆ. ಸಿಕ್ಕಿದ ಅವಕಾಶವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಬದುಕಿನಲ್ಲಿ ಯಶಸ್ಸನ್ನು ಸಾಧಿಸಿ ಎಂದು ಹೇಳಿದರು.
ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೊರವರು ವಿದ್ಯಾರ್ಥಿ ಸಂಘದ ನೂತನ ಸದಸ್ಯರಿಗೆ ಪ್ರಮಾಣವಚನವನ್ನು ಬೋಧಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾರವರು ಪ್ರಸ್ತಾವನೆಗೈದರು. ಸಂಸ್ಥೆಯ ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಪ್ರೌಢಶಾಲಾ ವಿಭಾಗದ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಡಿಸೋಜ, ಪ್ರಾಥಮಿಕ ವಿಭಾಗದ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷೆ ಲಿನೆಟ್ ಮರೀನಾ ಡಿಸೋಜ ಹಾಗೂ ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಶಾಲಾ ನಾಯಕ ಪಾರ್ಥಿವ್‌ರವರು ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಶಾಲಾ ನಾಯಕಿ ಸಿಯೋನಾ ಲೋಬೋರವರು ವಂದಿಸಿದರು. ವಿದ್ಯಾರ್ಥಿನಿಯರಾದ ಆಯೆಷಾ ರುಬಾ ಮತ್ತು ಲೆನಿಶಾ ಡಿಸೋಜರವರು ಕಾರ್ಯಕ್ರಮ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post