ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಕನ್ನಡಪರ ಸಂಘಟನೆಗಳು ಇಂದು ಕರೆ ನೀಡಿದ್ದ ಕರ್ನಾಟಕ ಬಂದ್ ಕೊಪ್ಪಳ ಹಾಗೂ ಹೊಸಪೇಟೆಯಲ್ಲಿ ವಿಫಲವಾಗಿದ್ದು, ಎರಡೂ ನಗರಗಳು ಸಹಜಸ್ಥಿತಿಯಲ್ಲಿತ್ತು.
ಕೊಪ್ಪಳ ಮತ್ತು ಹೊಸಪೇಟೆ ಭಾಗದಲ್ಲಿ ಎಂದಿನಂತೆ ಬಸ್ ಸಂಚಾರ ಇತ್ತು, ಸಂಚಾರದಲ್ಲಿ ಯಾವುದೇ ವ್ಯತ್ಯಯ ಇರಲಿಲ್ಲ. ಎರಡೂ ಪ್ರದೇಶದಲ್ಲಿ ಆಟೋ ಚಾಲಕರ ಸಂಘವು ಬೆಂಬಲಕ್ಕೆ ಹೆಚ್ಚಿನ ಬೆಂಬಲ ನೀಡದೆ ಆಟೋಗಳನ್ನು ಸಂಚರಿಸಿ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಹಕರಿಸಿದರು. ಹೊಟೇಲ್, ಕಾರ್ಖಾನೆ, ಆಟೋ, ಟ್ಯಾಕ್ಸಿ ಸಂಚಾರ, ಬ್ಯಾಂಕ್ ವಹಿವಾಟು ಸೇರಿದಂತೆ ಎಲ್ಲವೂ ಸಹಜ ಸ್ಥಿತಿಯಲ್ಲಿಯೇ ಇತ್ತು.
ರಾಜ್ಯ ಸರ್ಕಾರವು ಕೆಲವು ದಿನಗಳ ಹಿಂದಷ್ಟೇ ಮರಾಠ ಅಭಿವೃದ್ದಿ ನಿಗಮ ರಚನೆ ಮಾಡುವುದಾಗಿ ಆದೇಶ ಹೊರಡಿಸಿತ್ತು. ಇದಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಜೊತೆಗೆ ಸರ್ಕಾರ ಈ ನಿರ್ಧಾರವನ್ನು ಕೈಬಿಡಬೇಕು ಎಂದು ವಾಟಾಳ್ ನಾಗರಾಜ್ ನವೆಂಬರ್ 30ರವರೆಗೆ ಗಡುವು ಕೊಟ್ಟಿದ್ದರು. ಆದರೆ ಸರ್ಕಾರ ಮಾತ್ರ ಹೋರಾಟಗಾರರ ಗಡುವಿಗೆ ಮಣಿದಿಲ್ಲ. ಇತ್ತ ಕನ್ನಡಪರ ಹೋರಾಟಗಾರರು ಸಹ ಸರ್ಕಾರದ ನಡೆಯನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ನಿರ್ಧರಿಸಿದ್ದರು.
ಆದರೆ, ಈ ಬಂದ್’ಗೆ ಎರಡೂ ನಗರಗಳಲ್ಲಿ ಬಂದ್’ಗೆ ಬೆಂಬಲ ನೀಡದೇ ಇದ್ದುದರಿಂದ ಕನ್ನಡಪರ ಹೋರಾಟಗಾರರ ಪ್ರಯತ್ನ ವಿಫಲವಾಗಿದೆ.
ಬಂದ್’ಗೆ ಅವಕಾಶವಿಲ್ಲ, ಅದನ್ನು ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಅದನ್ನು ಮೀರಿ ಸರ್ಕಾರದ ಎಚ್ಚರಿಕೆಗೂ ಜಗ್ಗದ ಕೆಲವು ಕನ್ನಡಪರ ಹೋರಾಟಗಾರರು ಇಂದು ಬಂದ್ ಮಾಡಿಯೇ ತೀರುತ್ತೇವೆ ಎಂದು ಪಣ ತೊಟ್ಟಿದ್ದರು.
ಕೊಪ್ಪಳ ಬಸ್ ನಿಲ್ದಾಣದ ಬಳಿ ಕನ್ನಡಪರ ಸಂಘಟನೆಗಳ ಮುಖಂಡರು ಟೈರ್’ಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಲು ಮುಂದಾದರು. ಆದರೆ, ಪೊಲೀಸರು ಮಧ್ಯ ಪ್ರವೇಶಿಸಿ ಇದನ್ನು ತಡೆದರು.
ಒಟ್ಟಿನಲ್ಲಿ ಕೊಪ್ಪಳ ಹಾಗೂ ಹೊಸಪೇಟೆ ನಗರಗಳಲ್ಲಿ ಇಂದಿನ ಬಂದ್ ಸಂಪೂರ್ಣ ವಿಫಲವಾಗಿದೆ.
(ವರದಿ: ಮುರುಳೀಧರ್ ನಾಡಿಗೇರ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post