ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಎಂಪಿಎಂ ನಿವೃತ್ತ ನೌಕರ, ರಂಗದಾಸೋಹಿ, ಶಿಲ್ಪಾಕಲಾಕಾರ ಎಸ್.ಜಿ. ಶಂಕರಮೂರ್ತಿ ಇಂದು ಬೆಳಗ್ಗೆ ಅನಾರೋಗ್ಯದಿಂದ ಶಿವಮೊಗ್ಗದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಪತ್ನಿ, ಓರ್ವ ಪುತ್ರ, ಸೊಸೆ, ಮೊಮ್ಮಗ, ಸಹೋದರರನ್ನು ಹೊಂದಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಶಂಕರಮೂರ್ತಿಯವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಎಸ್.ಜಿ ಶಂಕರಮೂರ್ತಿ ಹಾಗು ಎಸ್.ಜಿ ಸಂಗಮೇಶ್ವರ ಸಹೋದರರು ಕಳೆದ ೫ ದಶಕಗಳಿಂದ ಸಾಹಿತ್ಯ, ಶಿಲ್ಪ ಕಲೆ ಹಾಗು ರಂಗ ಕಲಾ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದು, ಶಂಕರಮೂರ್ತಿಯವರು ಮೂಲತಃ ಶಿಲ್ಪ ಕಲಾವಿದರಾಗಿದ್ದು, ವರನಟ ಡಾ. ರಾಜ್‌ಕುಮಾರ್ ಕುಟುಂಬದೊಂದಿಗೆ ಒಡನಾಡ ಹೊಂದಿದ್ದರು. ಡಾ. ರಾಜ್‌ಕುಮಾರ್‌ರವರು ಬೆಂಗಳೂರಿನಲ್ಲಿ ನಿರ್ಮಿಸಿರುವ ಮನೆಯ ವಾಸ್ತು ಶಿಲ್ಪದ ಜವಾಬ್ದಾರಿಯನ್ನು ಅಂದು ಶಂಕರಮೂರ್ತಿ ಕುಟುಂಬದವರು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಅಲ್ಲದೆ ರಾಜ್‌ಕುಮಾರ್‌ರವರ ಹಲವು ಪ್ರತಿಮೆಗಳನ್ನು ನಿರ್ಮಿಸಿಕೊಟ್ಟಿದ್ದರು.
ಶಂಕರಮೂರ್ತಿಯವರು ಎಂಪಿಎಂ ಕಾರ್ಖಾನೆ ಉದ್ಯೋಗಿಯಾಗಿದ್ದರು. ಸಹೋದರ ಸಂಗಮೇಶ್ವರ ವಿಐಎಸ್‌ಎಲ್ ಕಾರ್ಖಾನೆ ಉದ್ಯೋಗಿದ್ದರು. ಸುಮಾರು 4 ದಶಕಗಳ ಹಿಂದೆಯೇ ವಿಐಎಸ್‌ಎಲ್ ವಸ್ತು ಸಂಗ್ರಹಾಲಯದಲ್ಲಿ ಭಾರತರತ್ನ ಸರ್.ಎಂ ವಿಶ್ವೇಶ್ವರಾಯನವರ ಪ್ರತಿಮೆಯನ್ನು ನಿರ್ಮಿಸಿಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದರು.
ಇತ್ತೀಚಿನ ಕೆಲವು ವರ್ಷಗಳ ಹಿಂದೆ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಮಹಾತ್ಮಗಾಂಧಿ ಪ್ರತಿಮೆ, ಕಳೆದ ತಿಂಗಳು ನಗರದ ರೈಲ್ವೆ ನಿಲ್ದಾಣ ಮುಂಭಾಗ ಅನಾವರಣಗೊಂಡ ಸರ್.ಎಂ ವಿಶ್ವೇಶ್ವರಾಯ ಪ್ರತಿಮೆಗಳನ್ನು ಶಂಕರಮೂರ್ತಿ ನಿರ್ಮಿಸಿಕೊಟ್ಟಿದ್ದರು. ಅಲ್ಲದೆ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಭದ್ರೆ ಮಾತೆಯ ಮೂರ್ತಿ ನಿರ್ಮಾಣಕ್ಕೆ ಸಿದ್ದತೆ ಕೈಗೊಂಡು ಬಹುತೇಕ ಪೂರ್ಣಗೊಳಿಸಿದ್ದರು. ಪ್ರತಿ ವರ್ಷ ಗೌರಿ-ಗಣೇಶ ಹಬ್ಬಕ್ಕೆ ಮೂರ್ತಿಗಳನ್ನು ತಯಾರಿಸಿಕೊಡುತ್ತಿದ್ದರು. ಸುಮಾರು ೨ ದಶಕಗಳಿಗೂ ಹೆಚ್ಚು ಕಾಲದಿಂದ ಆಂಧ್ರ ಪ್ರದೇಶಕ್ಕೆ ತೆರಳಿ ಮೂರ್ತಿಗಳನ್ನು ನಿರ್ಮಿಸಿಕೊಟ್ಟು ಬರುತ್ತಿದ್ದರು.
ಶಿಲ್ಪ ಕಲಾ ಚಟುವಟಿಕೆಗಳಿಗಿಂತ ರಂಗ ಚಟುವಟಿಕೆಗಳಲ್ಲಿ ಶಂಕರ ಮೂರ್ತಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಅಂದು ನಗರದಲ್ಲಿ ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಖಾನೆಗಳ ಆರಂಭದ ಜೊತೆ ಜೊತೆಗೆ ರಂಗ ಚಟುವಟಿಕೆಗಳು ಸಹ ಆರಂಭಗೊಂಡಿದ್ದವು. ಇಂತಹ ಸಂದರ್ಭದಲ್ಲಿ ರಂಗಕಲಾವಿದರ ಒಡನಾಡಿಯಾಗಿ ಬೆಳೆದು ರಂಗ ವಿನ್ಯಾಸಕರಾಗಿ, ನಾಟಕ ರಚನೆಗಾರರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಶಾಂತಲ ಆರ್ಟ್ಸ್ ಮತ್ತು ಶಾಂತಲ ಕಲಾ ವೇದಿಕೆಯನ್ನು ಸ್ಥಾಪಿಸುವ ಮೂಲಕ ಅನೇಕ ಶಿಲ್ಪ ಹಾಗು ರಂಗ ಕಲಾವಿದರು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದರು. ಅಲ್ಲದೆ ಹಲವು ವರ್ಷಗಳಿಂದ ನಗರದಲ್ಲಿ ಪಾಳುಬಿದ್ದಿದ್ದ ಕನಕಮಂಟಪ ಪುನರ್ ನಿರ್ಮಾಣಗೊಳ್ಳಲು ಪ್ರಮುಖ ಪಾತ್ರವಹಿಸಿದ್ದರು. ರಂಗ ಸೇವೆಯ ತಮ್ಮ ಬದುಕಿನ ಚಿತ್ರಣವನ್ನು ರಂಗಗೊಂಚಲು ಎಂಬ ಪುಸ್ತಕದ ಮೂಲಕ ಹಂಚಿಕೊಂಡಿದ್ದರು.
ಇವರ ಸೇವೆಯನ್ನು ಗುರುತಿಸಿ ಜಿಲ್ಲಾಡಳಿತ, ತಾಲೂಕು ಆಡಳಿತ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ವಿವಿಧ ರಂಗ ಚಟುವಟಿಕೆಗಳ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇವರ ನಿಧನದೊಂದಿಗೆ ಕಳೆದ 6 ದಶಕಗಳಿಂದ ಸಾಹಿತ್ಯ, ಶಿಲ್ಪ ಕಲೆ, ರಂಗ ಚಟುವಟಿಕೆಗಳ ಕೊಂಡಿಯಾಗಿದ್ದ ಹಿರಿಯ ಜೀವಿಯೊಂದು ಕಳಚಿಬಿದ್ದಂತಾಗಿದೆ. ಇವರ ನಿಧನ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ.
ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಶಾಂತಲ ಕಲಾವೇದಿಕೆ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ವಿರೂಪಾಕ್ಷಪ್ಪ, ಕನ್ನಡ ಪರಿಷತ್ ಸಾಹಿತ್ಯ ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ, ಎಂಪಿಎಂ ಮತ್ತು ವಿಐಎಸ್‌ಎಲ್ ಕಾರ್ಮಿಕರು, ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.
ಇವರ ಅಗಲಿಕೆಯಿಂದ ಕಲೆ ಬರಿದಾಗಿದೆ ಎಂದು ಎಂಪಿಎಂ ನೌಕರರ ಸಂಘದ ಅಧ್ಯಕ್ಷ ಎಸ್. ಚಂದ್ರಶೇಖರ್, ಕಲಾವಿದ ಗುರು ಸಂತಾಪ ಸೂಚಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post