ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಹೊಡೆತ ಬೀಳುವ ಸಾಧ್ಯತೆ ಇದ್ದು, ಕರ್ನಾಟಕ (Karnataka) ಹಾಲು ಮಹಾಮಂಡಳಿಯ (KMF) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹8 ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆಗೆ ಬಹುತೇಕ ಸಚಿವರು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್ 27ರ ಬಳಿಕ ನಿರ್ಧಾರ ಸಾಧ್ಯತೆ
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಹಾಗೂ ಉಪಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ, ಹಾಲಿನ ದರ ಏರಿಕೆ ನಿರ್ಧಾರವನ್ನು ತಕ್ಷಣ ಪ್ರಕಟಿಸದಿರಲು ಚರ್ಚಿಸಲಾಗಿದೆ.
ಚುನಾವಣಾ ಆಯೋಗದ ಅನುಮತಿ ದೊರೆತ ಬಳಿಕ ಅಥವಾ ನೀತಿ ಸಂಹಿತೆ ಮುಕ್ತಾಯವಾಗಲಿರುವ ಅಕ್ಟೋಬರ್ 27ರ ನಂತರ ದರ ಏರಿಕೆಯನ್ನು ಜಾರಿಗೊಳಿಸುವ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ಸಚಿವ ಸಂಪುಟ ವಹಿಸಿದೆ ಎಂದು ತಿಳಿದುಬಂದಿದೆ.
ಬಸ್ ಟಿಕೆಟ್ ದರ ಏರಿಕೆಗೂ ಸಹಮತ
ನಂದಿನಿ ಹಾಲಿನ ದರ ಏರಿಕೆ ಜತೆಗೆ ರಾಜ್ಯದಲ್ಲಿ ಬಸ್ ಟಿಕೆಟ್ ದರ ಪರಿಷ್ಕರಣೆಗೂ ಸಚಿವ ಸಂಪುಟದಲ್ಲಿ ಸಹಮತ ವ್ಯಕ್ತವಾಗಿದೆ ಎಂದು ತಿಳಿದುಬಂದಿದೆ.
ಡೀಸೆಲ್ ಬೆಲೆ ಸೇರಿದಂತೆ ಸಾರಿಗೆ ಸಂಸ್ಥೆಗಳ ಕಾರ್ಯಾಚರಣೆಯ ವೆಚ್ಚಗಳು ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟ ಎದುರಿಸುತ್ತಿವೆ.
Also Read>> ಚಿನ್ನದ ಮುಖದ ಚಾಮುಂಡೇಶ್ವರಿ, ಮೂರು ಆನೆಗಳು: ಶಿವಮೊಗ್ಗ ದಸರಾಕ್ಕೆ ಭರ್ಜರಿ ತಯಾರಿ
Karnataka: ಸಾರಿಗೆ ದರ ಪರಿಷ್ಕರಣೆಗೆ ಶಿಫಾರಸು
ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯು ಬಸ್ ದರ ಪರಿಷ್ಕರಣೆ ಕುರಿತು ತನ್ನ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸಚಿವ ಸಂಪುಟವು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದರೆ, ಇದೇ ತಿಂಗಳಲ್ಲಿ ಬಸ್ ಟಿಕೆಟ್ ದರ ಏರಿಕೆ ಜಾರಿಗೆ ಬರುವ ಸಾಧ್ಯತೆಯಿದೆ.
ಹಾಲಿನ ದರ ಹಾಗೂ ಬಸ್ ಟಿಕೆಟ್ ದರ ಏರಿಕೆ ಜಾರಿಗೆ ಬಂದರೆ, ಸಾರ್ವಜನಿಕರ ದಿನನಿತ್ಯದ ಖರ್ಚಿನ ಮೇಲೆ ಮತ್ತಷ್ಟು ಹೊರೆ ಬೀಳುವ ಸಾಧ್ಯತೆಯಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











