ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆಯ ತನಕ ಬಹುತೇಕ ಹದಿನೈದು ದಿನಗಳ ಈ ಕಾಲವನ್ನು “ಪಿತೃ ಪಕ್ಷ” “ಪಕ್ಷಮಾಸ” ಎನ್ನುತ್ತಾರೆ.ಯಾವ ಶ್ರಾದ್ಧಾಧಿಕಾರಿಗಳು ಈ ಅವಧಿಯಲ್ಲಿ ಪಕ್ಷ ಶ್ರಾದ್ಧವನ್ನು ಮಾಡುತ್ತಾರೋ ಅವರಿಗೆ ಪಿತೃಗಳು ಜ್ಞಾನ, ಭಕ್ತಿ, ಸಂಪತ್ತು, ಸಂತಾನ ಮೊದಲಾದ ಅಖಂಡ ಫಲಗಳನ್ನಿತ್ತು ಆಶೀರ್ವಾದ ಮಾಡುತ್ತಾರೆ. ಮಾಡದವರಿಗೆ ಅನೇಕ ವಿಚಾರಗಳಲ್ಲಿ ಶಾಪವನ್ನು ನೀಡುತ್ತಾರೆ. ಪಿತೃಗಳ ಶಾಪದಿಂದ ವಂಶಾಭಿವೃದ್ಧಿ ಆಗುವುದಿಲ್ಲ.ಆದರೂ ಅಂಗವೈಕಲ್ಯ, ಬುದ್ಧಿಹೀನತೆ, ರೋಗಾದಿ ಪೀಡಿತ ಸಂತಾನವಾಗಬಹುದು.
ಮಹಾಭಾರತ ಪುರಾಣದ ಪ್ರಕಾರ ಕರ್ಣ ಯುದ್ಧದಲ್ಲಿ ಹತನಾದ ಮೇಲೆ, ಸ್ವರ್ಗವನ್ನು ಸೇರಿದಾಗ ಅವನಿಗೆ ಬಂಗಾರ ಮತ್ತು ಆಭರಣಗಳನ್ನು ಆಹಾರವಾಗಿ ನೀಡಲಾಯಿತು. ಆದರೆ ಕರ್ಣನಿಗೆ ಬೇಕಾಗಿದ್ದು ನಿಜವಾದ ಆಹಾರ. ಇದರಿಂದ ಬೇಸತ್ತ ಕರ್ಣ ಇಂದ್ರನಲ್ಲಿ ಕೇಳುತ್ತಾನೆ. ಆಗ ಇಂದ್ರ ಹೇಳುತ್ತಾನೆ “ನೀನು ನಿನ್ನ ಪೂರ್ವಿಕರಿಗೆ ಅವರ ಶ್ರಾದ್ಧದಲ್ಲಿ ಅನ್ನವನ್ನು ದಾನವಾಗಿ ನೀಡಿಲ್ಲ. ಜೀವಮಾನ ಪೂರ್ತಿ ಬೇಕಾದಷ್ಟು ಬಂಗಾರಾದಿ ಆಭರಣಗಳನ್ನು ದಾನವಾಗಿ ನೀಡಿದ್ದೆ. ಅದಕ್ಕಾಗಿ ನಿನಗೆ ನಿಜವಾದ ಆಹಾರ ದೊರಕುತ್ತಿಲ್ಲ”. ನನಗೆ ನನ್ನ ಪೂರ್ವಜರ ಬಗ್ಗೆ ಏನೂ ಗೊತ್ತಿಲ್ಲದಿದ್ದರಿಂದ ಯಾವ ಶ್ರಾದ್ಧವನ್ನು ಮಾಡಲಾಗಿಲ್ಲ ಎಂದು ಕರ್ಣ ಹೇಳುತ್ತಾನೆ. ಇದಕ್ಕಾಗಿ ಅವನಿಗೆ ವಿಶೇಷವಾಗಿ ಪರಿಹಾರ ರೂಪವಾಗಿ ೧೫ ದಿನಗಳ ಕಾಲ ಭೂಲೋಕಕ್ಕೆ ಹೋಗಿ ಶ್ರಾದ್ಧ ಮಾಡಿ ಅವರ ನೆನಪಿನಲ್ಲಿ ಆಹಾರವನ್ನು ದಾನ ಮಾಡಲು ಅನುಮತಿ ನೀಡುತ್ತಾರೆ. ಆ ಕಾಲಕ್ಕೆ ಪಕ್ಷಮಾಸವೆನ್ನುತ್ತಾರೆ.
ಮಹಾಲಯ ಅಂದರೆ – “ಮಹಾ” – ದೊಡ್ಡ “ಲಯ” – ನಾಶ – ಸಮುದ್ರ ಮಥನ ಸಂದರ್ಭದಲ್ಲಿ ಬಹಳ ಋಷಿಗಳು ಮತ್ತು ದೇವತೆಗಳು ದೈತ್ಯರಿಂದ ಸಂಹರಿಸಲ್ಪಟ್ಟರು. ಈ ಋಷಿಗಳು ನಮ್ಮ ಪೂರ್ವಜರಾಗಿದ್ದುದರಿಂದ ಅವರ ನೆನಪಿನಲ್ಲಿ ಮಹಾಲಯ ಪಕ್ಷವನ್ನು ಆಚರಿಸುತ್ತೇವೆ. ಅದುವೇ ಸರ್ವಪಿತೃ ಅಮಾವಾಸ್ಯೆ.
ಪಿತೃಗಳಿಗೆ ತಿಲ ತರ್ಪಣವೇಕೆ?
ಎಳ್ಳುಗಳ ಅಭಿಮಾನಿ ದೇವತೆ ಸೋಮ (ಚಂದ್ರ). ಅವು ಅವನ ವೃದ್ಧಿಗೂ ಕಾರಣವಾಗಿವೆ. ಅವನೇ ಪಿತೃಗಳಿಗೆ ಆಧಾರ. ಪಿತೃಲೋಕ ಚಂದ್ರನ ಮೇಲ್ಭಾಗದಲ್ಲಿದೆ. ಚಂದ್ರನ ಕಲೆಗಳೇ ಪಿತೃಗಳಿಗೆ ಆಹಾರ. ಆದ್ದರಿಂದ ಚಂದ್ರನಿಗೆ ಪ್ರಿಯವಾದ ಎಳ್ಳು ಪಿತೃದೇವತೆಗಳಿಗೂ ಪ್ರಿಯವಾಗಿವೆ. ಭೂಮಿಯಲ್ಲಿ ಸೂರ್ಯನ ಚಲನೆಗೆ ಅನುಗುಣವಾಗಿ ರಾತ್ರಿ ಹಗಲಾಗುವಂತೆ ಪಿತೃಲೋಕದಲ್ಲೂ ಸೂರ್ಯನ ಚಲನೆಗೆ ಕಾಲವು ನಡೆಯಲು ಕಾರಣವಾಗಿವೆ. ಭೂಮಿಯಲ್ಲಿ ೨೪ ಘಂಟೆಗೆ ಒಂದು ದಿನವಾದರೆ ಚಂದ್ರನಲ್ಲಿ ಶುಕ್ಲಪಕ್ಷದ ಹದಿನೈದು ದಿನ ರಾತ್ರಿ, ಕೃಷ್ಣಪಕ್ಷದ ಹದಿನೈದು ದಿನ ಹಗಲು ಹೀಗೆ ಒಂದು ತಿಂಗಳ ನಮ್ಮ ಕಾಲವು ಅವರಿಗೆ ಒಂದು ದಿನವಾಗುವುದು. ಶುಕ್ಲಪಕ್ಷದ ಅಷ್ಟಮಿಯಿಂದ ಕೃಷ್ನಪಕ್ಷದ ಅಷ್ಟಮಿಯವರೆಗೆ ಪಿತೃಗಳಿಗೆ ರಾತ್ರಿಯಾದರೆ, ಕೃಷ್ಣಪಕ್ಷದ ಅಷ್ಟಮಿಯಿಂದ ಶುಕ್ಲ ಪಕ್ಷದ ಅಷ್ಟಮಿಯವರೆಗೆ ಹಗಲು. (ಪೂರ್ಣ ದಿವಾರಾತ್ರಿ) ಅಂದರೆ ನಮ್ಮ ಒಂದು ತಿಂಗಳು ಪಿತೃಗಳಿಗೆ ಒಂದು ದಿನ. ಆಗ ಪಿತೃಗಳಿಗೆ ಅಮಾವಾಸ್ಯೆ ನಡು ಮಧ್ಯಾಹ್ನವೆನಿಸುತ್ತದೆ. ಆದ್ದರಿಂದ ಅಮಾವಾಸ್ಯೆಯಂದು ಪಿತೃಗಳಿಗೆ ತಿಲ ತರ್ಪಣಕ್ಕೆ ಮಹತ್ತ್ವ. ದಕ್ಷಿಣಾಯಣದ ಕನ್ಯಾಮಾಸದಲ್ಲಿ ಸೂರ್ಯನು ಭೂಮಿಗೆ ಅತಿ ಸಮೀಪದಲ್ಲಿರುವುದರಿಂದ ಪಿತೃಪಕ್ಷದಲ್ಲಿ ತರ್ಪಣ ಶ್ರಾದ್ಧಕ್ಕೆ ಹೆಚ್ಚಿನ ಮಹತ್ವವಿದೆ.
ದರ್ಬೆಯನ್ನು “ಪವಿತ್ರ” ಎಂದು ಏಕೆ ಕರೆಯುತ್ತಾರೆ?
ದರ್ಬೆ, ಕುಶ, ಕಾಶ,ಬರ್ಹಿ, ಇವುಗಳು ಪವಿತ್ರ ದರ್ಬೆಯ ವಿವಿಧ ನಾಮಗಳು. ಒಮ್ಮೆ ಗರುಡನು ತನ್ನ ತಾಯಿಯಾದ ವಿನತೆಗೆ, ಸರ್ಪಗಳ ತಾಯಿಯಾದ ಕದ್ರುವಿನಿಂದ ದಾಸ್ಯದ ಮುಕ್ತಿ ಪಡೆಯಲು, ದೇವೇಂದ್ರನಿಂದ ಅಮೃತವನ್ನು ಪಡೆದು ಅದನ್ನು ಸರ್ಪಗಳಿಗೆ ನೀಡುವುದಕ್ಕಾಗಿ ನೀವೆಲ್ಲರೂ ಸ್ನಾನ ಮಾಡಿ ಶುದ್ಧರಾಗಿ ಬರಲು ಹೇಳುತ್ತಾನೆ. ಮತ್ತು ಆ ಸರ್ಪಗಳು ಪುನಃ: ಬರುವವರೆಗೂ ಅಮೃತವನ್ನು ದರ್ಬೆಯ ಮೇಲೆ ಇಟ್ಟಿರುತ್ತಾನೆ. ಅಷ್ಟರಲ್ಲಿ ದೇವೇಂದ್ರನು ಬಂದು ಅಮೃತವನ್ನು ಹೊತ್ತುಕೊಂಡು ಹೋಗುವಾಗ ಅಮೃತದ ಒಂದು ಬಿಂದು ದರ್ಭೆಯ ಮೇಲೆ ಬೀಳುತ್ತದೆ. ಆದ್ದರಿಂದ ದರ್ಭೆಯು ಶುದ್ಧವಾಗಿದೆ ಮತ್ತು ಪವಿತ್ರವೆನಿಸಿದೆ.ಅಲ್ಲದೇ ಯಜ್ಞ ವರಾಹ ರೂಪೀ ಭಗವಂತನ ರೋಮದಿಂದ ದರ್ಭೆಯೂ, ಬೆವರಿನಿಂದ ಎಳ್ಳೂ ಹೊರ ಬಂದ ಕಾರಣ ಇವು ಎಲ್ಲಾ ಕಾರ್ಯಗಳಿಗೂ ಪಾವಿತ್ರ್ಯತೆ ನೀಡಲು ಬೇಕಾಗುತ್ತವೆ.
ಶ್ರಾದ್ಧದಲ್ಲಿ ಒಟ್ಟು 5 ಪವಿತ್ರಗಳ ಧಾರಣೆ ಇದೆ.
- ಆರಂಭದಲ್ಲಿ 1 ಪವಿತ್ರ ಧಾರಣೆ, ಪಾದಪ್ರಕ್ಷಾಲನ ನಂತರ ವಿಸರ್ಜನೆ.
- ಪಾದ ಪ್ರಕ್ಷಾಲನ ಬಳಿಕ ಮತ್ತೊಂದು ಪವಿತ್ರ ಧಾರಣೆ. ಪಿಂಡ ಆಘ್ರಾಣದ ತರುವಾಯ ವಿಸರ್ಜನೆ.
- ಆಘ್ರಾಣವಾದ ಮೇಲೆ ಇನ್ನೊಂದು ಪವಿತ್ರ ಧಾರಣೆ ಉಚ್ಚಷ್ಟ ಪಿಂಡ ಪ್ರದಾನ ನಂತರ ವಿಸರ್ಜನೆ
- ಉಚ್ಚಷ್ಟ ಪಿಂಡ ಪ್ರದಾನ ನಂತರ ಮತ್ತೊಂದು ಪವಿತ್ರ ಧಾರಣೆ ಇದು ಶ್ರಾದ್ಧಾಂತ್ಯದಲ್ಲಿ ವಿಸರ್ಜನೆ.
- ಕೃಷ್ಣಾರ್ಪಣ ನಂತರ ಇನ್ನೊಂದು ಪವಿತ್ರ ಧಾರಣೆ ಅದು ಪರಿಹನಿ ತರ್ಪಣ ನಂತರ ವಿಸರ್ಜನೆ.
” ಶ್ರಾದ್ಧ ವಿಚಾರ “
” ಶ್ರಾದ್ಧದಲ್ಲಿ ಅಗ್ನಿಗೆ ಆಹುತಿ ”
ನಿಮಿಷರಾಜನು ಶ್ರಾದ್ಧ ಪ್ರಾರಂಭಿಸಿದ ನಂತರ ಎಲ್ಲಾ ಮಹರ್ಷಿಗಳೂ ಶ್ರಾದ್ಧ ವಿಧಿಗೆ ಅನುಸಾರವಾಗಿ ” ಪಿತೃಯಜ್ಞ ” ಮಾಡಲು ಆರಂಭಿಸಿದರು. ಹೀಗೆ ಶ್ರಾದ್ಧ ಮಾಡುವವರ ಸಂಖ್ಯೆ ಬೆಳೆದಂತೆ ದೇವತೆಗಳೂ ಮತ್ತು ಪಿತೃಗಳೂ ಅಜೀರ್ಣ ರೋಗದಿಂದ ಪೀಡಿತರಾದರು.ಅತಿಯಾದ ಶ್ರಾದ್ಧಾನ್ನದಿಂದ ಪೀಡಿತರಾದ ಅವರು ಅಜೀರ್ಣ ರೋಗೋಪಾಯವನ್ನು ಕಂಡುಕೊಳ್ಳಲು ಸೋಮನ ಬಳಿಗೆ ಹೋಗಿ ಅವನಲ್ಲಿ ತಮ್ಮ ಅಜೀರ್ಣ ರೋಗದ ಕುರಿತು ತಿಳಿಸಿ ನಿವಾರಣೋಪಾಯ ಕೇಳಿದರು.ಆಗ ಸೋಮನು…ದೇವತೆಗಳೇ! ನೀವು ಶ್ರೇಯಸ್ಸನ್ನು ಬಯಸುವವರಾಗಿದ್ದರೆ, ಈಗಲೇ ಬ್ರಹ್ಮ ಭವನಕ್ಕೆ ಹೋಗಿ ಶ್ರೀ ಚತುರ್ಮುಖ ಬ್ರಹ್ಮದೇವರನ್ನು ಪ್ರಾರ್ಥಿಸಿರಿ.ಎಂದನು. ಸೋಮನು ತಿಳಿಸಿದಂತೆ ದೇವತೆಗಳು ಮೇರು ಶಿಖರದಲ್ಲಿ ವಿರಾಜಮಾನರಾದ ಶ್ರೀ ಬ್ರಹ್ಮದೇವರ ಬಳಿಗೆ ಬಂದು ತಮ್ಮ ಕಷ್ಟವನ್ನು ನಿವೇದಿಸಿದರು.” ಪೂಜ್ಯರೇ! ನಾವು ಅಪಾರವಾದ ಶ್ರಾದ್ಧಾಣ್ಣವನ್ನು ಉಂಡು ಅಜೀರ್ಣ ರೋಗದಿಂದ ಕಷ್ಟ ಪಡುತ್ತಿದ್ದೇವೆ. ನಮ್ಮ ವಿಷಯದಲ್ಲಿ ಕೃಪೆ ತೋರಬೇಕು ” ಎಂದರು.ಆಗ ಶ್ರೀ ಚತುರ್ಮುಖ ಬ್ರಹ್ಮದೇವರು….ದೇವ, ಪಿತೃಗಳಿಗೆ ನನ್ನ ಸಮೀಪದಲ್ಲಿರುವ ಆ ಅಗ್ನಿದೇವನು ಶ್ರೇಯಸ್ಸನ್ನು ಉಂಟು ಮಾಡುತ್ತಾನೆ!ಎಂದು ಹೇಳಲು ಅಗ್ನಿಯು ದೇವತೆಗಳನ್ನು ಸಂತೈಸುತ್ತಾ…
ಮಹಾಭಾರತ ಅನುಶಾಸನ ಪರ್ವದಲ್ಲಿ…..ಸಹಿತಾಸ್ತಾತ ಭೋಕ್ಷ್ಯಾಮೋ ನಿವಾಪೇ ಸಮುಪಸ್ಥಿತೇ ।ಜರಯಿಷ್ಯಥ ಚಾಪ್ಯನ್ನಂ ಮಯಾಸರ್ಥಂ ಸಂಶಯಃ ।। ದೇವ ಪಿತೃಗಳೇ! ಶ್ರಾದ್ಧದ ಸಮಯದಲ್ಲಿ ನಾವೆಲ್ಲರೂ ಸೇರಿಯೇ ಭೋಜನವನ್ನು ಮಾಡೋಣ! ನಮ್ಮೊಡನೆ ಭೋಜನ ಮಾಡುವ ನೀವು ಶ್ರಾದ್ಧನ್ನವನ್ನು ಅರಿಗಿಸಿಕೊಳ್ಳುವಿರಿ. ಇದರಲ್ಲಿ ಸಂಶಯವಿಲ್ಲ!ಆಗ್ನಿಯ ಈ ಮಾತನ್ನು ಕೇಳಿ ಪಿತೃ ದೇವತೆಗಳು ನಿಶ್ಚಿಂತರಾದರು. ಈ ಕಾರಣದಿಂದ ಶ್ರಾದ್ಧ ಕಾಲದಲ್ಲಿ ಅಗ್ನಿಗೆ ಆಹುತಿ ಕೊಡುವುದು ವಾಡಿಕೆಯಾಗಿ ಬಂತು.
ಆಹುತಿ ಕೊಡುವ ಕ್ರಮ….
ಸೋಮಾಯೇತಿ ಚ ವಕ್ತವ್ಯ೦ ತಥಾ ಪಿತೃಮತೇತಿ ಚ ।ಪಿಂಡ ಪ್ರಧಾನ ಮಾಡುವ ಮೊದಲು ಅಗ್ನಿಗೂ ಹಾಗೂ ಸೋಮನಿಗೂ ಆಹುತಿಯನ್ನು ಕೊಡಬೇಕು ಮಂತ್ರ…..
ಅಗ್ನಏ ಕಾವ್ಯವಾಹನಾಯ ಸ್ವಧಾ ನಮಃ ।ಸೋಮಾಯ ಪಿತೃಮತೇ ಸ್ವಧಾ ನಮಃ ।।
ಹೀಗೆ ಅಗ್ನಿಗೆ ಹವಿರ್ಭಾಗವನ್ನು ಕೊಟ್ಟು ನಂತರ ಪಿತೃಗಳಿಗೆ ಪಿಂಡಪ್ರದಾನ ಮಾಡಬೇಕು. ಅಂಥಹ ಪಿಂಡವನ್ನು ಬ್ರಹ್ಮ ರಾಕ್ಷಸರು ದೂಷ್ಯವನ್ನಾಗಿ ಮಾಡುವುದಿಲ್ಲ. ಓಡಿ ಹೋಗುತ್ತಾರೆ. ನಂತರ ಮೊದಲು ತಂದೆಗೆ ಪಿಂಡ ಪ್ರದಾನವನ್ನು ಮಾಡಬೇಕು. ನಂತರ ಪಿತಾಮಹನಿಗೆ, ತದನಂತರ ಪ್ರಪಿತಾಮಹನಿಗೆ ಪಿಂಡ ಪ್ರದಾನ ಮಾಡಬೇಕು. ಇದನ್ನೇ ” ಶ್ರಾದ್ಧವಿಧಿ ” ಎನ್ನುತ್ತಾರೆ.ಶ್ರಾದ್ಧದಲ್ಲಿ ಒಂದೊಂದು ಪಿಂಡವನ್ನು ಇಡುವಾಗಲೂ ಏಕಾಗ್ರಚಿತ್ತದಿಂದ ಮನಸ್ಸಿನಲ್ಲಿ ” ಗಾಯತ್ರೀ ಮಂತ್ರ ” ವನ್ನು ಉಚ್ಛರಿಸುತ್ತಿರಬೇಕು.
” ದರ್ಭೆಯು ಹಾಸುವ ಕ್ರಮ ”
” ಶ್ರೀ ಯೋಗಿ ಯಾಜ್ಞವಲ್ಕ್ಯರ ವಚನ “ಅಪಾ೦ ಹ್ಯಪೂರ್ವವನ್ಮ೦ತ್ರೈರಾಸ್ತೀರ್ಯ ಚ ಕುಶಾನ್ಬಹೂನ್ ।ಪಾಗ್ರಗ್ರೇಷು ಸುರಾನ್ ಸಮ್ಯಗ್ದಕ್ಷಿಣಾಗ್ರೇಷು ವೈ ಪಿತ್ರೂನ್ ।।ದರ್ಭೆಯ ತುದಿಯನ್ನು ಪೂರ್ವಾಭಿಮುಖವಾಗಿ ಹಾಸಿ ದೇವತೆಗಳನ್ನು ದಕ್ಷಿಣಾಭಿಮುಖವಾಗಿ ಹಾಸಿ ಪಿತೃಗಳನ್ನೂ ಉದ್ಧೇಶಿಸಿ ಆಯಾ ಮಂತ್ರಗಳಿಂದ ತರ್ಪಣವನ್ನು ಕೊಡಬೇಕು!!” ಶುಚಿಯಾದ ಭೂಮಿಯಿಲ್ಲದಿರುವಾಗ ಜಲದಲ್ಲಿ ತರ್ಪಣವನ್ನು ಕೊಡಬೇಕು ”
” ಶ್ರೀ ವಿಷ್ಣು ವಚನ “ಯತ್ರಾಶುಚಿ ಸ್ಥಲಂ ವಾ ಸ್ಯಾದುದಕೇ ದೇವತಾಃ ಪಿತ್ರೂನ್ ।ತರ್ಪಯೇತ್ತು ಯಥಾ ಕಾಮಮಪ್ಸು ಸರ್ವಂ ಪ್ರತಿಷ್ಠಿತಮ್ ।।ಯಾವ ಸ್ಥಳದಲ್ಲಿ ಭೂಮಿಯು ಅಶುಚಿಯಾಗಿದೆಯೋ ಆ ಸ್ಥಳದಲ್ಲಿ ದೇವತೆಗಳಿಗೂ, ಪಿತೃಗಳಿಗೂ ನೀರಿನಲ್ಲೇ ತರ್ಪಣವನನ್ನು ಕೊಡಬಹುದು. ನೀರಿನಲ್ಲಿಯೇ ಎಲ್ಲ ಸನ್ನಿಧಾನವೂ ಇರುತ್ತದೆ.
” ಶ್ರೀ ಕಾರ್ಷ್ಣಾಜಿನಿ ವಚನ “ದೇವತಾನಾ೦ ಪಿತ್ರೂಣಾ೦ ಚ ಜಲೇ ದದ್ಯಾಜ್ಜಲಾಂಜಲೀಮ್ ।ಅಸಂಸ್ಕೃತಪ್ರಮೀತಾನಾ೦ ಸ್ಥಾನೇ ದದ್ಯಾಜ್ಜಲಂ ಪುನಃ ।।ದೇವತೆಗಳಿಗೂ, ಪಿತೃಗಳಿಗೂ ನೀರಿನಲ್ಲಿ ತರ್ಪಣವನ್ನು ಕೊಡಬೇಕು. ಕೆಲವರು ಸತ್ತಾಗ ಅವರಿಗೆ ಅಗ್ನಿ ಸಂಸ್ಕಾರವು ನಡೆದಿರುವುದಿಲ್ಲ. ಅವರಿಗೆ ಭೂಮಿಯಲ್ಲಿ ಒಂದೇ ಒಂದು ತರ್ಪಣವನ್ನು ಕೊಡಬೇಕು.
” ಅಸಂಸ್ಕೃತ ಪ್ರಮೀತರಿಗೆ ಕೊಡುವ ತರ್ಪಣಕ್ಕೆ ಮಂತ್ರ “ಅಗ್ನಿದಗ್ಧಾಶ್ಚ ಯೇ ಜಾತಾ ಯೇ ವಾ ದಗ್ಧಾ: ಕುಲೇ ಮಮ ।ಭೂಮೌ ದತ್ತೇನ ತೋಯೇನ ತೃಪ್ತಾ ಯಾಂತು ಪರಾಂ ಗತಿಮ್ ।।
Get In Touch With Us info@kalpa.news Whatsapp: 9481252093
Discussion about this post