ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಸಮೀಪದ ಸೋಗಾನೆ ಬಳಿ ನಿರ್ಮಾಣಗೊಳ್ಳುತ್ತಿರುವ ವಿಮಾನ ನಿಲ್ದಾಣಕ್ಕಾಗಿ ಭೂಮಿ, ಆಸ್ತಿಯನ್ನು ಕಳೆದುಕೊಂಡ ಸಂತ್ರಸ್ಥರಿಗೆ ಈ ಹಿಂದೆ ಮಾನ್ಯ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದಂತೆ ಪರಿಹಾರ ಕ್ರಮಗಳನ್ನು ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕ ಕೆ.ಬಿ. ಅಶೋಕ ನಾಯ್ಕ ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಂತ್ರಸ್ಥರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖಾ ಅಧಿಕಾರಿಗಳ ನಡುವೆ ನಡೆದ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮದ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು.
ಈಗಾಗಲೇ ಭೂಮಿ ಕಳೆದುಕೊಂಡ ಸಂತ್ರಸ್ಥ ಪ್ರತಿ ಕುಟುಂಬಕ್ಕೆ ಒಂದು ನಿವೇಶನ ನೀಡಲು ಮಾತಿನಂತೆ ಈಗಲೂ ಬದ್ಧವಾಗಿದ್ದು ಸಂತ್ರಸ್ಥರಿಗೆ ನಿವೇಶನ ನೀಡಲು ಸೂಕ್ತ ಸ್ಥಳಾವಕಾಶವನ್ನು ಶೋಧಿಸಲಾಗುತ್ತಿದೆ. ಬಿ.ಎಸ್. ಯಡಿಯೂರಪ್ಪನವರು ನೀಡಿದ ಭರವಸೆಯಂತೆ ವಿಮಾನ ನಿಲ್ದಾಣಗೊಂಡ ನಂತರ ಪ್ರತಿ ಕುಟುಂಬದ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಒದಗಿಸಲು ಸಂತ್ರಸ್ಥರು ಸಲ್ಲಿಸಿರುವ ಕೋರಿಕೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಈಗಾಗಲೇ ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಂತ್ರಸ್ಥರೊಂದಿಗೆ ಸಮಾಲೋಚನೆ ಅನೇಕ ಸಭೆ ನಡೆಸಲಾಗಿದ್ದು, ನಿರ್ಣಯದಂತೆ ಸಂತ್ರಸ್ಥರ ಬೇಡಿಕೆಗಳನ್ನು ಪೂರೈಸುವುದಾಗಿ ತಿಳಿಸಿದ ಅವರು, ಈಗಾಗಲೇ ಪ್ರತಿ ಕುಟುಂಬಕ್ಕೆ 30×40ಆಕಾರದ ನಿವೇಶನ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಕರ್ನಾಟಕ ಗೃಹ ಮಂಡಳಿಯ ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ನಿವೇಶನ ಹಂಚಿಕೆ ಸಮ್ಮತಿ ಸೂಚಿಸಿದ್ದಾರೆ ಎಂದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಭೂಸಂತ್ರಸ್ಥರೂ ಕೂಡ ಜಿಲ್ಲಾಡಳಿತದ ನಿರ್ಧಾರವನ್ನು ಸ್ವಾಗತಿಸಿದ್ದು, ಭರವಸೆಯಂತೆ ನಿವೇಶನ ನೀಡುವಂತೆ ಹಾಗೂ ಸರ್ಕಾರದ ವಿಶೇಷ ಯೋಜನೆಯನ್ನು ರೂಪಿಸಿ ನೀಡಲಾಗುವ ನಿವೇಶನದಲ್ಲಿ ಮನೆಯನ್ನು ಕಟ್ಟಿಕೊಡುವಂತೆ ಅವರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಅಲ್ಲದೇ ನ್ಯಾಯಾಲಯದಲ್ಲಿ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯುವುದಾಗಿ ತಿಳಿಸಿದ್ದರು.
Get In Touch With Us info@kalpa.news Whatsapp: 9481252093
Discussion about this post