ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ದಿನೇದಿನೇ ಹೆಚ್ಚುತ್ತಿರುವ ಕೊರೋನ ಸೋಂಕಿನ ನಿಯಂತ್ರಣಕ್ಕಾಗಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಅವರು ಇಂದು ಆಸ್ಪತ್ರೆಯ ಸಭಾಂಗಣದಲ್ಲಿ ಸೋಂಕನ್ನು ನಿಯಂತ್ರಿಸುವ ಕುರಿತು ವೈದ್ಯಾಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸೋಂಕಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಕೂಡ ತಪಾಸಣೆಯನ್ನು ತೀವ್ರ ಗೊಳಿಸಲಾಗಿತ್ತು. ನಾಳೆಯಿಂದ ಈ ಸಂಖ್ಯೆಯನ್ನು 2000ಕ್ಕೆ ಹೆಚ್ಚಿಸಲಾಗುವುದು ಎಂದರು.
ಹೆಚ್ಚುತ್ತಿರುವ ಈ ಸೋಂಕು ಗರಿಷ್ಠ ಹಂತವನ್ನು ತಲುಪಿ ಇಳಿಕೆಯಾಗುವ ಬಗ್ಗೆ ತಜ್ಞರು ವರದಿ ನೀಡಿದ್ದಾರೆ. ಆದಾಗ್ಯೂ ಜಿಲ್ಲೆಯಲ್ಲಿ ರೋಗಿಗಳಿಗೆ ತಪಾಸಣೆ ಹಾಗೂ ಚಿಕಿತ್ಸೆ ನೀಡಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವೈದ್ಯಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದರು.
ಪ್ರಸ್ತುತ ಆಸ್ಪತ್ರೆಯಲ್ಲಿ ಖಾಲಿ ಇರುವ ಡಿ ಗ್ರೂಪ್, ನರ್ಸ್ ಹಾಗೂ ವೈದ್ಯ ಅಧಿಕಾರಿಗಳನ್ನು ಕೂಡ ಸಿ ಆಡಳಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಶೇಷವಾಗಿ ’ಡಿ’ಗ್ರೂಪ್ 50, ನರ್ಸ್-50, ಹಾಗೂ 25 ವೈದ್ಯರನ್ನು ನೇಮಕಾತಿ ಮಾಡಿಕೊಳ್ಳಲಾಗುವು. ಈ ಸಂಬಂಧ ಬೆಂಗಳೂರಿನ ಆರೋಗ್ಯ ಇಲಾಖೆ ಕೇಂದ್ರ ಕಚೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಹೊಸದಾಗಿ ವೈದ್ಯಕೀಯ ಪದವಿಯನ್ನು ಪೂರೈಸಿದ ಪ್ರಶಿಕ್ಷಣಾರ್ಥಿ ವೈದ್ಯರುಗಳು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಸರ್ಕಾರದ ಆದೇಶವಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಸಿಮ್ಸ್’ನಲ್ಲಿ ಸೇವೆ ಸಲ್ಲಿಸಲು ಆಸಕ್ತಿ ತೋರುವ ವೈದ್ಯರಿಗೆ ಮೊದಲು ಅವಕಾಶ ನೀಡಲಾಗುವುದು. ಅಂತೆಯೇ ಸ್ಥಳೀಯವಾಗಿ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗುವುದು. ಇಂತಹ ವೈದ್ಯರಿಗೆ ನೀಡುವ ಸಂಭಾವನೆಯ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದರು.
ಉಳಿದಂತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಆಕ್ಸಿಜನ್ ಸೇರಿದಂತೆ ಯಾವುದೇ ಪರಿಕರಗಳ ಕೊರತೆಯಿಲ್ಲ. ಇದರೊಂದಿಗೆ ನಗರದ ಕೆಲವು ಖಾಸಗಿ ಆಸ್ಪತ್ರೆಗಳ ಸೇವೆ ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ ಶಿಕಾರಿಪುರ, ಭದ್ರಾವತಿ ಹಾಗೂ ತೀರ್ಥಹಳ್ಳಿಯಲ್ಲಿಯೂ ಕೂಡ ಸೋಂಕಿನ ನಿಯಂತ್ರಣಕ್ಕೆ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ವೈದ್ಯಾಧಿಕಾರಿಗಳಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಮೆಗ್ಗಾನ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿದ್ದಪ್ಪ, ಡಾ.ವಾಣಿಕೋರಿ, ದಿವಾಕರ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.
Get In Touch With Us info@kalpa.news Whatsapp: 9481252093
Discussion about this post