ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
(ವರದಿ: ಡಾ.ಸುಧೀಂದ್ರ, ಹಿರಿಯ ಸಲಹಾ ಸಂಪಾದಕರು, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ)
ಶಿಕಾರಿಪುರದಲ್ಲಿಂದು ಸರಳ ಸುಂದರ ಸಮಾರಂಭ. ಜನಪ್ರಿಯ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರ 47 ನೆಯ ಹುಟ್ಟುಹಬ್ಬದ ಆಚರಣೆ.
ಕೋವಿಡ್19 ವಾತಾವರಣದ ನಡುವೆ ವೈಭವದ ಆಚರಣೆ ಬೇಡವೆಂದು ಸಂಸದ ರಾಘವೇಂದ್ರ ಅವರ ನಿರ್ಧಾರವಾಗಿತ್ತು. ಕುಟುಂಬದ ಸದಸ್ಯರೊಂದಿಗೆ ನಲಿವನ್ನು ಹಂಚಿಕೊಳ್ಳೋಣವೆಂದು ಬಯಸಿದ್ದರು. ಆದರೆ ಶಿಕಾರಿಪುರದ ಅಭಿಮಾನಿಗಳು ಸುಮ್ಮನಿರಲಿಲ್ಲ. ಕೋವಿಡ್’ನ ಎಲ್ಲ ಷರತ್ತುಗಳನ್ನು ಪಾಲಿಸಿಯೇ ಜನ್ಮದಿನ ಆಚರಣೆ ಏರ್ಪಡಿಸಿದ್ದರು.
ಸ್ಥಳೀಯ ಕುಮುದ್ವತಿ ಕಾಲೇಜಿನ ಸಭಾಭವನದಲ್ಲಿ ಸರಳತೆಯೇ ಮೈವೆತ್ತ ಸಮಾರಂಭ. ಸ್ವತಃ ಸಂಸದ ರಾಘಣ್ಣನವರೇ ಎಲ್ಲರಿಗೂ ಸ್ವಾಗತ ಕೋರಿದರು. ಬಿ.ವೈ. ರಾಘವೇಂದ್ರ ಅವರ ಶ್ರೀಮತಿ ಅವರು ಆರತಿ ಬೆಳಗಿ ಶುಭಾಶಯ ಕೋರಿದರು. ವಿಧಾನ ಪರಿಷತ್ ಸದಸ್ಯ ಶ್ರೀ ರುದ್ರೇಗೌಡರು, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀ ಗುರುಮೂರ್ತಿ, ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಸದಸ್ಯ ಶ್ರೀ ಲಕ್ಷ್ಮೀನಾರಾಯಣ ಕಾಶಿ, ಮಾಜಿ ಶಾಸಕ ಶ್ರೀ ಚಂದ್ರಶೇಖರ್, ಬೈಂದೂರು ಶಾಸಕ ಶ್ರೀ ಸುಕುಮಾರ ಶೆಟ್ಟಿ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬೈಂದೂರು ಶಾಸಕ ಶ್ರೀ ಸುಕುಮಾರ ಶೆಟ್ಟಿ ಅವರು ಮಾತನಾಡಿ, ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಶಾಸಕನಾದೆ. ನನಗೆ ರಾಜಕೀಯ ಗುರುಗಳೇ ಅವರು. ಅಂತಹ ಹಿರಿಯರ ಪುತ್ರರಾದ ಶ್ರೀರಾಘವೇಂದ್ರ ಅವರು ಸಂಸದರಾಗಿ ಅಚ್ಚುಮೆಚ್ಚಿನ ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಬೈಂದೂರು ಕ್ಷೇತ್ರದ ಪ್ರಗತಿ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಕೊಲ್ಲೂರಿನ ತಾಯಿ ಮೂಕಾಂಬಿಕಾ ಪ್ರಸಾದವನ್ನು ಅವರಿಗೆ ಅರ್ಪಿಸಿರುವೆ. ತಾಯಿಯ ಆಶೀರ್ವಾದದಿಂದ ಅವರಿಗೆ ಇನ್ನೂ ಉನ್ನತ ಸ್ಥಾನಮಾನಗಳು ದೊರೆಯಲಿ ಎಂದು ಆಶಿಸಿದರು.
ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಸದಸ್ಯ ಶ್ರೀ ಲಕ್ಷ್ಮೀ ನಾರಾಯಣ ಕಾಶಿ ಅವರು ಮಾತನಾಡಿ, ಸಂಸದರಾಗಿ ರಾಘವೇಂದ್ರ ಅವರು ಸಾಮಾಜಿಕ- ಸಾರ್ಥಕ ಬದುಕನ್ನು ಕಂಡಿದ್ದಾರೆ. ಯುವ ನಾಯಕರುಗಳಿಗೆ ಯುವ ರಾಜಕಾರಣಿಗಳಿಗೆ ಈ ದೇಶದಲ್ಲಿ ಅವರು ಒಬ್ಬ ಮಾದರಿ. ಇಡೀ ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಎದುರಿಗಿಟ್ಟುಕೊಂಡು ಎಲ್ಲಾ ರೀತಿಯ ಪ್ರಯತ್ನ ಮಾಡಿ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗಿದ್ದಾರೆ. ಸರ್ವರ ಹಿತ ಸಮಾನ-ಸಾಮಾಜಿಕ ಹಿತ ಹಾಗೂ ಸಮಪಾಲಿನ ಸಮ ಬಾಳಿಗೆ ಅಗತ್ಯ ಇರುವ ಹಲವು ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಇದು ಚಿಕ್ಕ ವಯಸ್ಸಿನಲ್ಲಿ ಅವರು ಸಾಧಿಸಿ ತೋರಿಸಿದ ಸಾರ್ಥಕ ಕ್ಷಣಗಳು. ಅವರು ಇನ್ನೂ ಬಹುದೂರ ಸಾಗಬೇಕಾಗಿದೆ. ತುಂಬಾ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಹಲವು ಉನ್ನತೋನ್ನತ ಹುದ್ದೆಗಳನ್ನು ಅಲಂಕರಿಸಿ ಇಡೀ ರಾಜ್ಯಕ್ಕೆ ರಾಘಣ್ಣನವರ ಸೇವೆ ಸಲ್ಲುವಂತೆ ಆಗಲಿ. ದೇವರು ಅವರಿಗೆ ಆಯುಷ್ಯ, ಆರೋಗ್ಯ ಸಾಮರ್ಥ್ಯಗಳನ್ನು ದಯಪಾಲಿಸಲೆಂದು ಶುಭ ಕೋರುತ್ತೇನೆ. ಮತ್ತೊಮ್ಮೆ ಜನ್ಮದಿನದ ಶುಭಾಶಯಗಳು ಎಂದು ನುಡಿದು ಸಂಸದರಿಗೆ ಶಾಲು ಹೊದಿಸಿ ಅಭಿನಂದಿಸಿದರು.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶ್ರೀಗುರುಮೂರ್ತಿ ಅವರು ಮಾತನಾಡಿ, ಸಂಸದರಾದ ರಾಘವೇಂದ್ರ ಅವರು ರಾಘಣ್ಣ ಎಂದೇ ಚಿರಪರಿಚಿತರು. ಅವರು ಮಾತೆ ಮೈತ್ರಮ್ಮನವರ ಮಡಿಲಲ್ಲಿ ರಾಜಕೀಯದ ಪಾಠ ಕಲಿತು ಬಂದವರು. ನಂತರ ತಂದೆಯವರಾದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ಪಳಗಿದವರು. ಇಡೀ ಕುಟುಂಬವೇ ಸಾಮಾಜಿಕ ಸೇವೆಗೆ ಅರ್ಪಿತಗೊಂಡಿದೆ. ಕುಟುಂಬದ ಸದಸ್ಯರು ಒಂದಿಲ್ಲೊಂದು ರೀತಿ ಸಮಾಜವನ್ನ ಪ್ರೀತಿಸುವವರಾಗಿದ್ದಾರೆ. ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿರುವ ರಾಘಣ್ಣನವರು ಬರುವ ವರ್ಷದಲ್ಲಿಯೇ ಕೇಂದ್ರ ಸಚಿವರಾಗುವ ಭಾಗ್ಯವನ್ನು ಹೊಂದಲಿ ಎಂದು ಹಾರೈಸಿದರು.
ಮಾಜಿ ಶಾಸಕ ಶ್ರೀ ಚಂದ್ರಶೇಖರಪ್ಪನವರು ಮಾತಾನಾಡಿ, ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಪ್ರವೇಶಿಸಿ ದೊಡ್ಡ ಹೆಸರುಗಳಿಸುವುದು ಅಪರೂಪ. ಹಲವಾರು ಸಾಮಾಜಿಕ ಆರ್ಥಿಕ ಕಾರ್ಯಕ್ರಮಗಳ ಮೂಲಕ ರಾಘವೇಂದ್ರ ಅವರು ಜನಮನ್ನಣೆ ಪಡೆದಿದ್ದಾರೆ ಎಂದು ಪ್ರಶಂಸಿಸಿದರು.
ವಿಶೇಷವೆಂದರೆ ಕವಲೆದುರ್ಗ ಶ್ರೀಗಳು, ಜಡೆ ಶ್ರೀಗಳು ಮತ್ತು ತೊಗರ್ಸಿ ಶ್ರೀಗಳು ಆಗಮಿಸಿ ಸಂಸದ ರಾಘವೇಂದ್ರ ಅವರಿಗೆ ಪುಷ್ಪಾಶೀರ್ವಾದಗೈದರು. ಕಲ್ಪ ನ್ಯೂಸ್ ಮೀಡಿಯಾ ಪರವಾಗಿ ಹಿರಿಯ ಸಲಹಾ ಸಂಪಾದಕ ಡಾ. ಸುಧೀಂದ್ರ ಅವರು ಶ್ರೀ ಬಿ.ವೈ. ರಾಘವೇಂದ್ರ ಅವರಿಗೆ ಹೂಗುಚ್ಛ ನೀಡಿ ಶುಭ ಹಾರೈಸಿದರು. ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ಉಪಾಧ್ಯಕ್ಷ ಶ್ರೀ ಕೆ.ಜಿ. ಮಂಜುನಾಥ ಶರ್ಮ ಅವರು ಸಂಘದ ಪರವಾಗಿ ಸಂಸದರಿಗೆ ಪುಷ್ಪಗುಚ್ಛ ನೀಡಿ ಶುಭಾಶಯ ಕೋರಿದರು. ಶಿವಮೊಗ್ಗ ಜೀವ ವಿಮಾ ಕಚೇರಿಯ ಶ್ರೀಭಟ್ ಅವರು ಸಂಸದರಿಗೆ ಶಿವಪಾರ್ವತಿ ಭಾವಚಿತ್ರ ನೀಡಿ ಶುಭ ಕೋರಿದರು.
Get In Touch With Us info@kalpa.news Whatsapp: 9481252093
Discussion about this post