ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಗಣೇಶ ಉತ್ಸವವನ್ನು ಅತ್ಯಂತ ಸರಳವಾಗಿ, ಒಂದೇ ದಿನ ಆಚರಿಸಬೇಕು ಎಂದು ಸಿಪಿಐ ಆರ್.ಡಿ. ಮರುಳಸಿದ್ದಪ್ಪ ಹೇಳಿದರು.
ಪಟ್ಟಣದ ವೃತ್ತ ನಿರೀಕ್ಷಕರ ಕಚೇರಿ ಮುಂಭಾಗ ವಿವಿಧ ಗಣೇಶೋತ್ಸವ ಆಚರಣಾ ಸಮಿತಿಯವರ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಂತೆ ಕೆಲವು ನಿಯಮಗಳನ್ನು ಅಳವಡಿಸಿ ತಾಲ್ಲೂಕಿನಲ್ಲಿ ಗಣೇಶೋತ್ಸವ ಆಚರಿಸಬೇಕು. ಹಿಂದಿನ ವರ್ಷ ಗಣೇಶನ ಪ್ರತಿಷ್ಠಾಪನೆ ಮಾಡಿದ್ದ ಸಂಘಟನೆಗಳು ಈ ಬಾರಿಯೂ ಗಣೇಶನ ಪ್ರತಿಷ್ಠಾಪನೆ ಮಾಡಲು ಅವಕಾಶವಿದೆ. ಆದರೆ, ಪ್ರತಿಷ್ಠಾಪಿಸಿದ ದಿನವೇ ಅತ್ಯಂತ ಕಡಿಮೆ ಸಂಖ್ಯೆಯ ಜನರೊಂದಿಗೆ ವಿಸರ್ಜನೆ ಮಾಡಬೇಕು ಎಂದರು.
ಅತ್ಯಂತ ಸರಳವಾಗಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ಹಾಗೂ ಜನರ ಧಾರ್ಮಿಕ ಭಾವನೆಗಳಗೆ ಧಕ್ಕೆಯಾಗದಂತೆ ಸರ್ಕಾರ ಕೆಲವು ನಿಬಂಧನೆಗಳನ್ನು ಹೇರಿದ್ದು, ಯಾವುದೇ ಕಾರಣಕ್ಕೂ ಮೆರವಣಿಗೆಗೆ ಅವಕಾಶವಿಲ್ಲ. ಜನಪರವಾದ ಕಾರ್ಯದಲ್ಲಿ ಸಾರ್ವಜನಿಕರು ಸಹಕಾರ ಅಗತ್ಯ ಎಂದರು.
ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್ ಮಾತನಾಡಿ, ಮನೆಯಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡುವವರು 2 ಅಡಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವವರು ಗರಿಷ್ಠ 4 ಅಡಿ ಎತ್ತರದ ವಿಗ್ರಹ ಪ್ರತಿಷ್ಠಾಪಿಸಬಹುದು. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳನ್ನು ಆದಷ್ಟು ಮನೆಯ ಆವರಣದಲ್ಲಿಯೇ ವಿಸರ್ಜನೆ ಮಾಡಬೇಕು. ಸಂಘಟಕರು ಸ್ಥಳೀಯ ಆಡಳಿತ ಸೂಚಿಸಿದ ಸ್ಥಳದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.
ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ನಮ್ಮ ಸಂಘಟನೆಯಿಂದ ಕಳೆದ 15 ವರ್ಷಗಳಿಂದ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈಗಾಗಲೇ ಸರ್ಕಾರ ಕೈಗೊಂಡ ನಿರ್ಣಯದಂತೆ ಹಬ್ಬ ಸರಳವಾಗಿ ಆಚರಿಸಲು ಸಂಘಟನೆಗಳ ಹಲವು ಮುಖಂಡರು ಒಪ್ಪಿಗೆ ನೀಡುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯನ್ವಯ ಈ ಭಾರಿ ಗಣೇಶ ಉತ್ಸವದ ಬದಲು ಗಣೇಶ ಆಚರಣೆ ಮಾಡುವುದಾಗಿ ಸಂಘಟಕರ ಪರವಾಗಿ ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಪಪಂ ಸದಸ್ಯರಾದ ಮಧುರಾಯ್ ಜಿ. ಶೇಟ್, ನಟರಾಜ ಉಪ್ಪಿನ, ಗಣೇಶೋತ್ಸವ ಆಚರಣಾ ಸಮಿತಿಗಳ ಪ್ರಮುಖರಾದ ರವಿ ಜೆ. ಗುಡಿಗಾರ್, ಸಂಜೀವ್ ಆಚಾರ್, ಪ್ರಶಾಂತ್ ಶೇಟ್ ಚಂದ್ರಗುತ್ತಿ, ಪರಮೇಶ್ವರ ಮಣ್ಣತ್ತಿ, ಜಿ. ಕೆರಿಯಪ್ಪ, ವಿನಯ್ ಇತರರಿದ್ದರು.
(ವರದಿ: ಮಧುರಾಮ್, ಸೊರಬ)
Get In Touch With Us info@kalpa.news Whatsapp: 9481252093
Discussion about this post