ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗಣೇಶ ವಿದ್ಯೆ
ಇದು ಕರ್ಮ, ಜ್ಞಾನ ಮತ್ತು ಭಕ್ತಿಗಳ ಸುಂದರ ಸಮನ್ವಯ ವಿದ್ಯೆಯಾಗಿದೆ. ಉಪಾಸಕನು ತನ್ನ ಶರೀರದ ಮೂಲಕ ಈ ಜಗತ್ತಿನಲ್ಲಿ ಯಾವುದಾದರೂ ವೃತ್ತಿಯನ್ನು ಸ್ವೀಕರಿಸಿ, ದುಡಿಯಲೇಬೇಕು. ಹಾಗೆ ದುಡಿಯುವಾಗ, ಜಗತ್ತೇ ಶರೀರವಾಗಿರುವ ಪ್ರತ್ಯಕ್ಷ ಗಣಪತಿಯ ಸೇವೆಯನ್ನೇ ಮಾಡುತ್ತಿದ್ದೇನೆ ಎಂಬ ಭಾವನೆಯನ್ನು ದೃಢಪಡಿಸಿಕೊಳ್ಳುತ್ತಿರಬೇಕು. ಇದೇ ಕರ್ಮಯೋಗ.
ಇದರೊಂದಿಗೆ ಗಣೇಶ ಮಂತ್ರ (ಅಥರ್ವ ಶೀರ್ಷಾ) ವನ್ನು ಅರ್ಥ ಮಾಡಿಕೊಂಡು, ಗಣೇಶ ವಿದ್ಯೆಯ ಈ ಜ್ಞಾನವನ್ನು ಜಗತ್ತಿನೊಂದಿಗೆ ಸಮೀಕರಿಸುತ್ತಾ ನರಾಕಾರ ಗಜಾಕಾರ ಗಣಪತಿಯನ್ನು ಈ ಜಗತ್ತಿನಲ್ಲೇ ಪ್ರತ್ಯಕ್ಷವಾಗಿ ನೋಡಲು ಕಲಿಯಬೇಕು. ಇದು ಜ್ಞಾನಯೋಗ.
ಪ್ರತಿದಿನವೂ ಸಾಧ್ಯವಾದಾಗಲೆಲ್ಲಾ ಏಕಾಕ್ಷರ ಗಣಪತಿ ಮಹಾಮಂತ್ರವನ್ನು ಜಪಿಸುತ್ತಿರಬೇಕು. ಇಂದ್ರಿಯಗಳನ್ನು ಪ್ರತಿಕ್ಷಣವೂ ಅಂತರ್ಮುಖಿಗೊಳಿಸಿ, ಬುದ್ಧಿಯಲ್ಲಿ (ಧ್ಯಾನ ಸ್ಥಿತಿ) ಉದ್ಗೀಥ ಮಹಾ ಸಾಮಗಾನವನ್ನು ಕೇಳಬೇಕು.
ನಮ್ಮ ಕಿವಿಗಳು ಕೇಳಲಾರದ ವಿಶೇಷ ನಾದವೊಂದು ಈ ಜಗತ್ತಿನಲ್ಲಿ ಸದಾ ಮೊಳಗುತ್ತಿದೆ. ಅಂತಹ ಗಂಭೀರ ನಾದವೇ ಓಂಕಾರ. ಗಣೇಶ ವಿದ್ಯೆಯಲ್ಲಿ ಅದನ್ನೇ ‘ಗಂ’ ಎಂದು ಸೂಚಿಸಿದೆ. ಉದ್ಗೀಥ ಮಹಾ ಸಾಮಗಾನ ವೆಂದರೂ ಇದೇ ಆಗಿದೆ. ಸಮುದ್ರದ ದಡದಲ್ಲಿ ನಿಂತರೆ, ಸಮುದ್ರದ ಗಂಭೀರ ಘೋಷ ಕೇಳಿಸುವುದಿಲ್ಲವೇ? ಇದು ಕೇವಲ ನಿರಂತರ ನಾದಕ್ಕೆ ಒಂದು ಉದಾಹರಣೆ ಮಾತ್ರ. ನಮ್ಮ ಕಿವಿಗಳನ್ನು ಬೆರಳಿನಿಂದ ಮುಚ್ಚಿಕೊಂಡಾಗ, ಅಂಥದ್ದೇ ನಿರಂತರ ಗಂಭೀರ ಘೋಷ ಕೇಳಿಸುತ್ತದೆ. ಅದು ನಮ್ಮ ಶರೀರದೊಳಗೆ ಪ್ರಾಣದೇವತೆಯು ಉಂಟುಮಾಡುವ ಸಾಮಗಾನ. ಬೆರಳು ತೆಗೆದಾಗ ಅದು ಕೇಳಿಸುವುದಿಲ್ಲ. ಜಗತ್ತೆಂಬ ಗಣಪತಿಯ ಶರೀರಕ್ಕೆ ಉದ್ಗೀಥ ಸಾಮಗಾನವೇ ಪ್ರಾಣವಾಗಿದೆ. ಅಲ್ಲಿ ನಮಗೆ ಅನನ್ಯ ಗುರುವಾದ ನರಾಕಾರ ಗಣಪತಿ ಇದ್ದಾನೆ. ಅವನಿಗೆ ಶರಣು ಹೋಗಬೇಕು. ಪ್ರತಿದಿನ ಯಾವುದಾದರೂ ಒಂದು ವೇಳೆ ಗಣೇಶ ಏಕಾಕ್ಷರ ಮಂತ್ರ ಧ್ಯಾನ ಅಭ್ಯಾಸ ಮಾಡಬೇಕು. ಇದು ಭಕ್ತಿಯೋಗ.
ಗಣಪತಿ ತತ್ವ
ಗಣಪತಿ ಗಜಾನನನಾಗುವುದಕ್ಕೂ ಮೊದಲು ಆತನು ಒಂದು ಜೀವಾತ್ಮ ಮಾತ್ರನಾಗಿದ್ದ. ಪ್ರಕೃತಿಯ ಒಂದು ಮಗುವಾಗಿದ್ದ. ಗಜಾನನನಾಗುವುದರ ಜೊತೆಜೊತೆಯಲ್ಲಿಯೇ ಗಣಗಳ ಅಧೀನದಲ್ಲಿದ್ದ ಜೀವಾತ್ಮನು ಮುಂದೆ ಗಣಾಧೀಶನೆನಿಸಿಕೊಳ್ಳುತ್ತಾನೆ. ಗಣ ಎಂದರೆ ಮರುದ್ಗುಣಗಳು. ಮರುತ್ ಎಂದರೆ ವಾಯು. ಪ್ರತಿಯೊಂದು ಜೀವಿ ಯಲ್ಲಿಯೂ ಪ್ರಾಣ-ಅಪಾನ-ವ್ಯಾನ-ಉದಾನ-ಸಮಾನ ವಾಯುಗಳು ಸತತವಾಗಿ ಕ್ರಿಯಾಶೀಲವಾಗಿರುತ್ತವೆ. ಪ್ರಾಣವಾಯುವಿನ ಸ್ಥಾನ ಹೃದಯ; ಮಲಿನ ಅಥವಾ ಅಶುದ್ಧ ರಕ್ತದ ಶುದ್ಧೀಕಾರ್ಯವು ಇದರ ಕೆಲಸ. ಅಪಾನವಾಯುವಿನ ಸ್ಥಾನ ಮುಖ್ಯವಾಗಿ ಗುದಮಂಡಲ; ದೇಹಕ್ಕೆ ಬೇಡವಾದ ವಸ್ತುಗಳನ್ನು ಅರ್ಥಾತ್ ಮಲ, ಮೂತ್ರಾದಿಗಳನ್ನು ಹೊರತಳ್ಳುವುದು ಇದರ ಕಾರ್ಯ. ಸಮಾನವಾಯುವಿನ ಸ್ಥಾನ ನಾಭಿಮಂಡಲ; ಇದು ಆಹಾರದ ಪಚನಕ್ಕೆ ಶಕ್ತಿಯನ್ನು ಒದಗಿಸುವುದು. ಉದಾನವಾಯುವು ಕಂಠಮಧ್ಯದಲ್ಲಿದ್ದು ಶ್ವಾಸೋಚ್ಛಾಸ ಕ್ರಿಯೆಯಲ್ಲಿ ಪ್ರಾಮುಖ್ಯತೆಯನ್ನು ಇದು ಪಡೆದಿದೆ. ವ್ಯಾನವಾಯುವು ಸಮಸ್ತ ದೇಹವನ್ನೆಲ್ಲಾ ಆವರಿಸುವಂಥದ್ದು. ಈ ಐದು ವಾಯುತತ್ವಗಳು ಸೇರಿ ಪಂಚಪ್ರಾಣಗಳೆನಿಸಿವೆ. ಈ ಪಂಚಪ್ರಾಣಕ್ಕೆ ಒಡೆಯ ಗಣಪತಿ; ಅಂದರೆ ಬುದ್ಧಿ ಪ್ರಧಾನವಾದ ಚೇತನವೇ ಗಣಪತಿ. ಈ ಅರ್ಥದಲ್ಲಿಯೇ ಗಣಪತಿಯು ಪಂಚಕರ್ಮೇಂದ್ರಿಯಗಳಾದ ವಾಕ್-ಪಾಣೆ-ಪಾದ-ಪಾಯು-ಉಪಸ್ಥಾನಗಳಿಗೆ ಹಾಗೂ ಪಂಚಜ್ಞಾನೇಂದ್ರಿಯಗಳಾದ ಚಕ್ಷು-ತ್ವಕ್-ಶ್ರೋತೃ-ಜಿಹ್ವ- ನಾಸಿಕಗಳಿಗೆ ಒಡೆಯನು. ಅಂದರೆ ಜೀವಾತ್ಮನು ಶ್ವಾಸವನ್ನು ಹೊರಗೆ ಬಿಡುವಾಗ ಉಂಟಾಗುವ ‘ಹಂ’ ಶಬ್ಧ ಮತ್ತು ಶ್ವಾಸವನ್ನು ಒಳಗೆಳೆದುಕೊಳ್ಳುವಾಗ ಉಂಟಾಗುವ ‘ಸ’ ಶಬ್ಧಗಳನ್ನು ಅವಲೋಕಿಸಿ, ಅದಕ್ಕೆ ‘ಹಂಸ’ ಅನುಗುಣವಾಗಿ ಜೀವಾತ್ಮನನ್ನು ಎಂದು ಗುರುತಿಸಲಾಗುತ್ತದೆ. ಪರಮಹಂಸನಾದ ಗುರುವೊಬ್ಬನ ಅನುಗ್ರಹದಿಂದಾಗಿ ಜೀವಾತ್ಮನು ಪರಮಾತ್ಮ ಸ್ಥಿತಿಗೆ ಏರಿದಾಗ, ತಾನೂ ಪರಮಹಂಸನೆನಿಸಿಕೊಳ್ಳುತ್ತಾನೆ. ಈಶ್ವರನಿಂದ ಮಗನೆಂದು ಪರಿಗ್ರಹಿಸಲ್ಪಟ್ಟ ಗಜಾನನನು ‘ಆತ್ಮಾವೈಪುತ್ರನಾಮಾಸಿ’ ಎನ್ನುವ ವೇದೋಕ್ತಿಗೆ ಅನುಗುಣವಾಗಿ ಸಾಕ್ಷಾತ್ ಜಗದೀಶ್ವರನೇ ಆಗುತ್ತಾನೆ; ಅಂದರೆ ಜ್ಞಾನಘನನಾಗುತ್ತಾನೆ.
ವಿಶ್ವವ್ಯಾಪಿ ಗಣಪತಿ
ಭಾರತೀಯ ಪೂರ್ವಜರು ಕೂಪಮಂಡೂಕರಲ್ಲ. ಅಗಸ್ತ್ಯರು ಉತ್ತರ ಧ್ರುವಕ್ಕೆ, ಕಶ್ಯಪರು ಈಜಿಪ್ಟಕ್ಕೆ ಹೋಗಿ ಬಂದವರು ಎಂದು ಪುರಾಣ ಇತಿಹಾಸಗಳು ಸ್ಪಷ್ಟ ಪಡಿಸಿವೆ.ಭಾರತೀಯ ಸಂಸ್ಕೃತಿಯ ಸಸಿ ನೆಟ್ಟು ಬಂದರು ಎಂದೇ 2000 ವರ್ಷಗಳಷ್ಟು ಹಿಂದೆಯೇ ಗಣಪತಿ ಸಾಗರದಾಚೆಗೆ ಪ್ರಯಾಣ ಬೆಳೆಸಿದ. ಇಂದು ವಿಶ್ವದ ನಾನಾ ಭಾಗಗಳಲ್ಲಿ ಗಣಪತಿ ಮೂರ್ತಿಗಳಿವೆ. ಕೊಲಂಬಸನ ಅನ್ವೇಷಣೆಗೂ ಮೊದಲೇ ಅಮೇರಿಕಾದಲ್ಲಿ ಗಣಪತಿಯ ಮೂರ್ತಿಗಳಿದ್ದವೆಂದು ಸಂಶೋಧಕರು ವಾದಿಸಿದ್ದಾರೆ. ನಮ್ಮ ಸಿದ್ಧಿವಿನಾಯಕ ಇಂದು ವಿಶ್ವನಾಯಕನೂ ಹೌದು.
ಗೌರೀಪುತ್ರ – ವಿನಾಯಕ
ವಿನಾಯಕನನ್ನು ಶಿವಪುತ್ರನೆನ್ನುವುದಕ್ಕಿಂತ ಗೌರೀಪುತ್ರನೆನ್ನುವ ವಾಡಿಕೆ ಹೆಚ್ಚು. ಇದು ಕೇವಲ ವ್ಯಾವಹಾರಿಕ ವೈಶಿಷ್ಟ್ಯವೆಂದಲ್ಲ. ಪುರಾಣಗಳಲ್ಲಿಯೂ, ಸ್ಮೃತಿಗಳಲ್ಲಿಯೂ, ಕಲ್ಪಗಳಲ್ಲಿಯೂ ಗಣಪತಿಗೂ ಗೌರಿಗೂ ಇರುವ ಸಂಬಂಧ ಗಣಪತಿಗೂ ಶಿವನಿಗೂ ಇಲ್ಲ. ಗೌರೀಪೂಜೆ ಸಂದರ್ಭದಲ್ಲಿಯೇ ಗಣಪತಿಯ ಪೂಜೆಯು ಒದಗುವುದು. ಶಿವರಾತ್ರಿಗೂ ಗಣೇಶ ಚತುರ್ಥಿಗೂ ಯಾವ ನಂಟೂ ಇಲ್ಲದಿರುವುದು ಆಕಸ್ಮಿಕವಲ್ಲ. ಶಕ್ತಿಪೂಜೆಯ ಅಂಗವಾಗಿಯೇ ಗಣಪತಿ ಪೂಜೆ ಮೈದಳೆಯಿತು. ಕ್ರಿಸ್ತಾಬ್ಧದ ಆರಂಭದ ದೆಸೆಯಲ್ಲಿ ಪ್ರಚಲಿತವಾಗಿದ್ದ ಮಾತೃಕ ಪೂಜೆಯೊಂದಿಗೇ ಗಣಪತಿ ಪೂಜೆ ಬಳಕೆಗೆ ಬಂದಿತು.
‘ಮಾತೃ’ ಎಂದರೆ ಪ್ರಪಂಚದ ಸೃಷ್ಟಿಗೆ ಕಾರಣರಾದ ತಾಯಿ. ಅವಳ ವಿಭಿನ್ನ ಲಕ್ಷಣವನ್ನೂ ಶಕ್ತಿಯನ್ನೂ ಮಾತೃಕೆಯರೆಂದು ಪರಿಗಣಿಸಿ, ಒಂದೊಂದಕ್ಕೂ ವಿಶಿಷ್ಟ ರೂಪವನ್ನು ಮೂಡಿಸಿಟ್ಟ ಪ್ರಾಚೀನ ಪದ್ಧತಿ ಇದು.
ಸಪ್ತ ಮಾತೃಕೆಯರಿಗೂ ಗಣಪತಿಗೂ ಹಿಂದಿನ ಕಾಲದಿಂದ ನಂಟು. ಶೈವಾಲಯಗಳಲ್ಲಿ ಸಪ್ತಮಾತೃಕೆಯರೊಂದಿಗೆ ಗಣೇಶನನ್ನು ಕೂರಿಸಿ, ಪೂಜಿಸುವುದು ವಾಡಿಕೆ.
ಗೌರಿ-ಗಣೇಶ, ಇವರ ನಡುವೆ ಇರುವ ಅಪ್ರಾಕೃತವಾದ ಸಂಬಂಧದ ವಿಚಾರವಾಗಿ ಕೆಲವು ಕಥೆಗಳಿವೆ. ಅವುಗಳಲ್ಲಿ ಒಂದು ಗಣೇಶನ ‘ಮದುವೆ’ ಗೆ ಸಂಬಂಧಿಸಿದ್ದು. ನಮ್ಮ ನಾಣ್ಣುಡಿಯಲ್ಲಿ ‘ಗಣೇಶನ ಮದುವೆ’ ಎಂದರೆ ಅಸಾಧ್ಯವಾದ ಕೆಲಸವೆಂದಷ್ಟೆ. ಗಣೇಶನು ಪ್ರಾಪ್ತ ವಯಸ್ಕನಾದಾಗ ಗೌರಿಯು ಅವನಿಗೆ ಮದುವೆ ಮಾಡುವ ಮನಸ್ಸು ಮಾಡಿದಳಂತೆ. ಆಕೆ ತೋರಿಸಿದ ಹೆಣ್ಣುಗಳಲ್ಲಿ ಒಂದನ್ನೂ ಗಣೇಶನು ಒಪ್ಪಲಿಲ್ಲ. ತನ್ನ ತಾಯಿಯ ಲಕ್ಷಣವನ್ನೇ ಉಳ್ಳ ಹೆಣ್ಣು ದೊರೆತರೆ ಮದುವೆಯಾಗುವೆನೆಂದು ಹಠ ಹಿಡಿದನಂತೆ. ಅದ್ವಿತೀಯಳಾದ ಲೋಕಮಾತೆಯಂತಹ ಹೆಣ್ಣು ಸಿಗುವುದಾದರೂ ಹೇಗೆ? ಹೀಗಾಗಿ ಗಣೇಶನು ಮದುವೆಯಿಲ್ಲದೆ ಉಳಿದನಂತೆ. ಮದುವೆಯಿಲ್ಲದೆ ನಿಂತಿರುವ ಕನ್ಯಾಕುಮಾರಿಗೂ ಗಣೇಶನಿಗೂ ಗಂಟು ಹಾಕುವ ಕಥೆಗಳಿವೆ. ಕನ್ಯಾಕುಮಾರಿಯು ಪಾರ್ವತಿಯ ಅಂಶಸಂಭೂತೆಯಷ್ಟೇ. ಈ ಪ್ರವೃತ್ತಿಯು ಮನೋವಿಶ್ಲೇಷಣೆಯ ಪರಿಭಾಷೆಯಲ್ಲಿ ಸ್ವಮಾತೃಗತ ಲೈಂಗಿಕ ಪ್ರವೃತ್ತಿ (ಒಣಡಿ ಈಚಿಣಟಿ) ಎನ್ನಿಸಿಕೊಳ್ಳುತ್ತದೆ. ಮಗನಿಗೆ ತಾಯಿಯ ಮೇಲೆ ಅನುರಕ್ತಿ. ತಾಯಿಗೆ ಮಗನ ಮೇಲೆ ವ್ಯಾಮೋಹ. ಇದು ಜಟಿಲವಾದ ಕಾಮನೆಯಾಗಿ ಪರಿಣಮಿಸಬಹುದೆಂದು ಮನಃಶಾಸ್ತ್ರಜ್ಞರ ತರ್ಕ. ಗಣಪತಿಯ ಪುರಾಣವನ್ನು ್ರಯ್ಡನ ಸಿದ್ಧಾಂತಗಳಿಗೆ ಅನುಗುಣವಾಗಿ ಎಳೆಯುವುದು ಸಾಧ್ಯ. ಆದರೆ ಇದು ಬೇರೆಯ ಮಾತು. ಇಲ್ಲಿ ಅಪ್ರಾಕೃತ. -(ಸಾಧಾರ)
ವಿಶ್ವವಂದಿತ ವಿನಾಯಕ
ಸರ್ವಧರ್ಮೀಯರಿಗೂ ಜನಪ್ರಿಯನಾದ ದೇವತೆಯಾದ ಗಣಪತಿಯ ಉಗಮ, ಬೆಳವಣಿಗೆಗಳ ಬಗ್ಗೆ ಇದುವರೆಗೂ ಒಮ್ಮತದ ಅಭಿಪ್ರಾಯವಿಲ್ಲ. ಆದರೆ ಆತನ ಕುರಿತು ಸುತ್ತ ಇರುವ ಅನೇಕ ಕಥೆ, ಪುರಾಣ, ಉಲ್ಲೇಖ ರಂಜನೀಯ, ರೋಚಕವಂತೂ ಹೌದು.
ಶ್ರೀ ಗಣಪತಿ ಮಹಾನುಭಾವ, ಸಕಲಜನಪ್ರೇಮಿ, ಸಕಲಮುನಿದಂದ್ವ, ಸಕಲ ಕಾರ್ಯಗಳಿಗೂ ಅಗ್ರ ಪೂಜಾರ್ಹ, ವಿದ್ಯಾಭಿಮಾನಿ, ವೈರಾಗ್ಯಮೂರ್ತಿ, ಸದಾನೈಷ್ಠಿಕ ಬ್ರಹ್ಮಚರ್ಯದಲ್ಲಿರುವ ಮಹಾಯೋಗಿ, ಸಕಲ ದೇವತೆಗಳು, ಯಕ್ಷರು, ಕಿನ್ನರು, ಕಿಂಪುರುಷರು, ಸಾತ್ವಿಕರು ಹಾಗೂ ದೈತ್ಯರಿಂದಲೂ ಸಹ ಪೂಜಿತನಾದ ಜಗದ್ವಂದ್ವ. ಅನೇಕ ವೈದಿಕ ಗ್ರಂಥಗಳೂ ಹಾಗೂ ಪುರಾಣಗಳಲ್ಲಿ ವರ್ಣಿತವಾಗಿರುವ ಸರ್ವಗುಣ ಪರಿಪೂರ್ಣ. ಭಜಕರ ಸಕಲ ಅನಿಷ್ಟಗಳನ್ನೂ ನಿವೃತ್ತಿಗೊಳಿಸಿ, ಸರ್ವದಾ ಸಂರಕ್ಷಿಸುವ ಪರಮಪೂಜ್ಯ ಕೃಪಾಳು.
ಶ್ರೀ ಗಣಪತಿ ಮಹಾ ವಿವೇಕಿ. ಒಮ್ಮೆ ತನ್ನ ತಂದೆತಾಯಿಗಳಾದ ಉಮಾಶಂಕರರನ್ನೇ ಪ್ರದಕ್ಷಿಣೆ ಮಾಡಿ, ಭೂಮಂಡಲವನ್ನೇ ಸುತ್ತಾಡಿ ಬಂದೆ ಎಂದು ಸಾರಿ ಹೇಳಿ, ಸಾಹಸಿಯಾದ ಷಣ್ಮುಖನಿಗೆ ಅಚ್ಚರಿಯನ್ನುಂಟು ಮಾಡಿದ ಮಹಾಜ್ಞಾನಿ ಗಣಪತಿ.
ಮತ್ತೊಮ್ಮೆ ರಾವಣನನ್ನು ಮಂಕುಗೊಳಿಸಿ, ಗೋಕರ್ಣ ಕ್ಷೇತ್ರ ಮಹಿಮೆಗೆ ಕಾರಣನಾಗಿ, ಸಜ್ಜನರ ಕಾರ್ಯಕ್ಕೆ ಸಾಧಕನೂ, ದುಷ್ಟ ಜನರ ಕಾರ್ಯಕ್ಕೆ ವಿಘ್ನಕರ್ತನೂ ಆಗಿರುವನೆಂದು ಪ್ರತೀತಿ ಪಡೆದು, ವಿಶ್ವಮಾನ್ಯ ಗಣಪತಿಗೆ ಮಹಾಮಹಿಮರಾದ ದೇವವ್ಯಾಸರು ಗಂಗಾಪ್ರವಾಹದಂತೆ ಸಕಲ ಶಾಸ್ತ್ರಗಳನ್ನೊಳಗೊಂಡ ಪಂಚಮವೇದವೆನಿಸಿದ ಮಹಾಭಾರತವನ್ನು ಹೇಳುತ್ತಿರಲು ಲಕ್ಷಾಂತರ ಪುಟ ತಾಳೆಗರಿಯ ಮೇಲೆ ಅರ್ಥ ಮಾಡಿಕೊಂಡು ಬರೆದಿರುವ ಕಾರಣ ಸೇತುಬಂಧನ ಕಾಲದಲ್ಲಿ ಶ್ರೀರಾಮಚಂದ್ರನಿಂದ, ತ್ರಿಪುರಾಸುರನ ಸಂಹಾರ ಕಾಲದಲ್ಲಿ ಶಿವನಿಂದ ಗಂಗಾವತರಣ ಕಾಲದಲ್ಲಿ ಭಗೀರಥನಿಂದ, ಸಮುದ್ರಮಥನಕಾಲದಲ್ಲಿ ದೇವತೆಗಳಿಂದಲೂ ಪೂಜಿಸಲ್ಪಟ್ಟು, ಅವರವರ ಕಾರ್ಯಗಳಿಗೆ ಸಾಧಕನಾಗಿದ್ದುದರಿಂದ, ಆದ್ದರಿಂದಲೇ ವಿಶ್ವವ್ಯಾಪಕವಾದ ವಿಭೂತಿ ವೈಭವದಿಂದ ಬೆಳಗುವ ಸರ್ವಪೂಜ್ಯನಾದ ದೇವಾಧಿದೇವ. ಸಿದ್ಧಿ-ಬುದ್ಧಿಗಳಿಗೆ ಸ್ವಾಮಿಯೂ, ಸಮಸ್ತ ಮಂಗಳಗಳಿಗೆ ಈಶನೂ ಆದ ಈ ದೇವನನ್ನು ಪರಬ್ರಹ್ಮನೂ ಕೂಡ ವಂದಿಸುವ ಪ್ರಸಂಗವೂ ಮುದ್ಗಲ ಪುರಾಣದಲ್ಲಿ ಉಕ್ತವಾಗಿದೆ.
ಯೋಗಿಶ್ರೇಷ್ಠರೂ ಜ್ಞಾನವರೇಣ್ಯರೂ ಆದ ಶ್ರೀ ಶಂಕರಭಗವತ್ಪಾದರು ಈ ದೇವನನ್ನು ‘‘ ಹೃದಂತರೇ ನಿರಂತರಂ ವಸಂತಮೇಮ ಯೋಗಿನಾಂ ’’ – ಈ ದೇವನು ಸದಾ ಯೋಗಿಗಳ ಹೃದಯದಲ್ಲಿ ವಾಸಿಸುವನು – ಎಂದು ಸ್ತುತಿಸಿದ್ದಾರೆ. ಗಣೇಶನು ಭಕ್ತಿ-ಮುಕ್ತಿಗಳೆರಡನ್ನೂ ನೀಡುವ ಸರ್ವಶಕ್ತನಾದ ದೇವನು. ಸಕಲಶುಭ ಕರ್ಮಗಳು ನಿರ್ವಿಘ್ನವಾಗಿ ನೆರವೇರಲೆಂದು ಆದಿಯಲ್ಲಿ ಪೂಜ್ಯನಾಗುವನು ಶ್ರೀ ಗಣೇಶನೇ. ಇತರ ದೇವತೆಗಳನ್ನು ಪೂಜಿಸು ವಾಗಲೂ ಪ್ರಥಮ ಪೂಜ್ಯನಾದ ಪ್ರಥಮ ಪತಿಯು ಇವನೇ.
ಪಂಚಾಯತನ ಪೂಜೆಯಲ್ಲಿ ಗಣೇಶನಿಗೆ ವಿಶೇಷವಾದ ಮಹತ್ವವಿದೆ. ಪಂಚಭೂತಾತ್ಮಕವಾದ ಈ ಜಗತ್ತಿನ ಮೂಲಶಕ್ತಿಗಳ ಪ್ರಸನ್ನತೆಗಾಗಿ ಪಂಚಾತನ ಪೂಜೆಯು ಅತ್ಯಂತ ತಾತ್ವಿಕವಾಗಿದೆ. ಆದಿತ್ಯ, ಗಣೇಶ, ಅಂಬಿಕೆ, ವಿಷ್ಣು ಮತ್ತು ಶಿವ, ಇವರೆ ಪಂಚಾಯತನಕ್ಕೆ ಸೇರಿದ ಐದು ಮಂದಿ ದೇವತೆಗಳು.
ದೇಶದಲ್ಲಿ ಮೂಲಾಧಾರ ಚಕ್ರದಲ್ಲಿ ಬೆಳಗುವ ದೇವನು ಶ್ರೀ ಗಣೇಶನು. ಮೂಲಾಧಾರ ಚಕ್ರದಲ್ಲಿ ಬೆಳಗುವ 21 ದಿವ್ಯ ಶಕ್ತಿಗಳಲ್ಲಿ ಈ ದೇವನು ಶ್ರೀ ಗಣೇಶನಾಗಿಯೋ ಅಥವಾ ವಿಶ್ವಕ್ಸೇನನಾಗಿಯೋ ಪೂಜಿತನಾಗುತ್ತಾನೆ. ಶ್ರೀ ಗಣೇಶ ಹಾಗೂ ವಿಶ್ವಕ್ಸೇನನನ್ನು ಭಾವಿಸುವ ಧ್ಯಾನ ಶ್ಲೋಕವು ಒಂದೇ ಆಗಿರುವುದು. ದೇವತೆಯ ಪರಮಾರ್ಥ ತತ್ವದ ಕಡೆಗೆ ಉಪಾಸಕರ ದೃಷ್ಟಿಯನ್ನು ತೆರೆಸುತ್ತದೆ. ಶ್ರೀ ಗಣೇಶನಿಗೆ ವಿಶೇಷವಾಗಿ ದೂರ್ವೆಯು ಅರ್ಪಿತವಾಗುತ್ತದೆ. ದೂರ್ವೆಯ ದರ್ಶನ, ಸ್ಪರ್ಶನ, ಸೇವನೆಗಳಿಂದ ಮೂಲಾಧಾರ ಚಕ್ರದ ಪರಿಶುದ್ಧಿಯು ಪ್ರಾಪ್ತವಾಗಿ, ದೇವತೋಪಾಸನೆಯು ಚೆನ್ನಾಗಿ ಸಿದ್ಧಿಸುತ್ತದೆ.
ಓಂಕಾರವೇ ಗಣಪತಿ ಪ್ರತೀಕದಲ್ಲಿ ಪೂಜಿಸಲ್ಪಡುತ್ತದೆಂಬುದು ಶಾಸ್ತ್ರಸಿದ್ಧವಾದ ಮಾತು (ಗಣಪತಿಯ ಮುಖ ಸಂಸ್ಕೃತ ಲಿಪಿಯ ಓಂಕಾರವನ್ನು ಹೋಲುತ್ತದೆ). ಗಣಪತಿ ಪೂಜೆಯೆಂದರೆ ಗಣಪತಿ ಅಂತರ್ಯಾಮಿಯಾದ ಪರಬ್ರಹ್ಮನ ಪೂಜೆಯೆಂದು ಕೆಲವರ ಅಭಿಪ್ರಾಯ. ಇಂಥ ಮಹಾಗಣಪತಿ ನಮ್ಮನ್ನು ಸದಾ ರಕ್ಷಿಸಲಿ.
ಗಣೇಶನ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇದೇ ಲೇಖಕರ ನೂತನ ಕೃತಿ – ವಿಶ್ವವಂದಿತ ವಿನಾಯಕ ನೋಡಬಹುದು www. vishwavinayaka108.blogspot.com
Get In Touch With Us info@kalpa.news Whatsapp: 9481252093
Discussion about this post