ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕಾರ್ತಿಕ ಮಾಸದ ಅಂಗವಾಗಿ ಬಾಳೆಬೈಲು ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಡಿಸೆಂಬರ್ 14 ರವರೆಗೆ ಪ್ರತಿದಿನ ಸಾಯಂಕಾಲ ದೀಪೋತ್ಸವ ನಡೆಯಲಿದೆ.
ದೇವಾಲಯದ ಬಗ್ಗೆ
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೆಲವೇ ಕಿಮೀ ಸಾಗಿದರೆ ಬಾಳೆಬೈಲು ಶ್ರೀ ವೆಂಕಟರಮಣ ಸ್ವಾಮಿ ದೇವಸ್ಥಾನವಿದೆ. ರಾಜರ- ಅರಸರ ಆಡಳಿತ ಅವಧಿಯಲ್ಲಿ ಈ ಗ್ರಾಮವನ್ನು ನಲ್ಲೂರು ಅಗ್ರಹಾರ ಎಂದು ಕರೆಯಲಾಗುತ್ತಿತ್ತು.
ಮುಂಜಾನೆಯ ಸೂರ್ಯ ಉದಯಿಸುವ ಹೊತ್ತಿನಲ್ಲಿ ಮಲೆನಾಡಿನ ಪ್ರಕೃತಿಯ ಸೊಬಗು ಹಕ್ಕಿಗಳ ಕಲರವ ಜುಳು-ಜುಳು ಹರಿಯುವ ತುಂಗೆಯ ನಿನಾದ. ಇವೆಲ್ಲರ ನಡುವೆ ತುಂಗೆಯ ತಟದ್ಡಲ್ಲಿ ಬಿದನೂರು ಶಿವಪ್ಪ ನಾಯಕನ ಕಾಲದಲ್ಲಿ ಕಟ್ಟಲ್ಪಟ್ಟ ದೇವಾಲಯದಲ್ಲಿ ಸುಂದರ ಕೆತ್ತನೆಯ ಶ್ರೀ ವೆಂಕಟರಮಣ ಸ್ವಾಮಿಯ ಶಿಲಾ ಮೂರ್ತಿ ವೀರಾಜಮಾನರಾಗಿ ನಿಂತು ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ನೆರವರಿಸುತ್ತಿದ್ದಾನೆ ಶ್ರೀ ಸ್ವಾಮಿ. ಶಂಖ, ಚಕ್ರ, ಗಧಾದಾರಿಯಾಗಿ ನಿಂತಿರುವ ಶ್ರೀ ಸ್ವಾಮಿಯನ್ನು ನೋಡಿ ಭಕ್ತಿಯಿಂದ ಕೈ ಮುಗಿದು ನಿಂತರೆ ಶ್ರೀಸ್ವಾಮಿಯ ಸನ್ನಿಧಿಯಲ್ಲಿ ಮನಸ್ಸಿಗೆ ಆಹ್ಲಾದ ಉಂಟಾಗುವುದು!
ತುಂಗಾ ತೀರದಲ್ಲಿರುವ ಶ್ರೀಸ್ವಾಮಿಯ ದೇವಸ್ಥಾನದ ಕೆತ್ತನೆಗಳು ಮನಮೋಹಕ ಶಿಲ್ಪ ಶಾಸ್ತ್ರಗಳಿಗೆ ಅನುಗುಣವಾಗಿವೆ. ಪೂರ್ವಭಿಮುಖವಾಗಿ ನಿಂತಿರುವ ಶ್ರೀಸ್ವಾಮಿಯ ಶಿಲಾಮೂರ್ತಿಗೆ ಮುಂಜಾನೆಯಲ್ಲಿ ಬೀಳುವ ಸೂರ್ಯನ ರಶ್ಮಿಗಳು ಶ್ರೀಸ್ವಾಮಿಯ ಸೊಬಗನ್ನು ಹೆಚ್ಚಿಸಿ, ಭಕ್ತರು ಸ್ವಾಮಿಯನ್ನು ಕಣ್ತುಂಬಿಕೊಳ್ಳುವಂತೆ ಭಗವಂತ ಅವಕಾಶ ಕಲ್ಪಿಸುತ್ತಾನೆ.
ಶಿಲಾಶಾಸ್ತ್ರದ ಪ್ರಕಾರ ದೇವರಿಗೆ ಅಭಿಷೇಕವಾದ ನೀರು ಹರಿದು ಹೋಗುವುದ್ದಕ್ಕೆ ಸಿಂಹಮುಖಿಯಾಗಿದ್ದಲ್ಲಿ ಮಹಾರಾಜರಿಂದ ನಿರ್ಮಿಸಲ್ಪಟ್ಟಿತೆಂದು ಗೋಮುಖಿಯಾಗಿದ್ದಲ್ಲಿ ಮಂತ್ರಿಗಳಿಂದ ಕಟ್ಟಲ್ಪಟಿತೆಂದು ಹಾಗೂ ಬೋಳು – ಬೋಳು ಆಗಿದ್ದಲ್ಲಿ ಪ್ರಜೆಗಳಿಂದ ನಿರ್ಮಿಸಲಾಗಿದೆ ಎಂಬ ಪ್ರತೀತಿ ಇದೆ!
ಶ್ರೀಸ್ವಾಮಿಯ ಅಭಿಷೇಕವಾದ ನೀರು ಹರಿದು ಹೋಗುವುದ್ದಕ್ಕೆ ಸಿಂಹಮುಖಿಯಾಗಿದ್ದು ಮಹಾರಾಜರ ಕಾಲದ್ದಲ್ಲಿ ನಿರ್ಮಿಸಲಾಗಿದೆ.
ಸನ್ನಿಧಾನ
ಶ್ರೀ ಸ್ವಾಮಿಯ ಸನ್ನಿಧಿಯಲ್ಲಿ ಶ್ರೀಮುಖ್ಯಪ್ರಾಣದೇವರು, ಶ್ರೀ ಸುಬ್ರಮಣ್ಯ ಸ್ವಾಮಿ, ಪಂಚ ಲೋಹದಿಂದ ನಿರ್ಮಿಸಿದ ಶ್ರೀರಾಘವೇಂದ್ರ ಸ್ವಾಮಿಗಳ ಸಣ್ಣ ಮೂರ್ತಿ, ಸಾಲಿಗ್ರಾಮ, ಶ್ರೀಸ್ವಾಮಿಯ ಶಿಲಾ ಮೂರ್ತಿಯನ್ನು ಗರುಡ ಪೀಠದ ಮೇಲೆ ಕೋರಿಸಲಾಗಿದೆ ಹಾಗೂ ದೇವಾಲಯದ ಮುಂಭಾಗದಲ್ಲಿ ಶ್ರೀತುಳಸಿ ದೇವಿಯ ತುಳಸಿ ಕಟ್ಟೆ ಇದೆ!
ಶ್ರೀಸ್ವಾಮಿಗೆ ಆಳಗಂಭಟ್ ಮನೆತನದವರು ವಂಶ ಪಾರಂಪಾರ್ಯವಾಗಿ ಪೂಜೆ ಸಲ್ಲಿಸುತ್ತಿದ್ದು, ಪ್ರಸುತ ಶ್ರೀಯುತ ಅನಿಲ್ ಅವರು ಶ್ರೀಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ಧಾರೆ.
ಭಗವಂತನಿಗೆ ಅರ್ಪಿಸಿದ ಮಾಲೆ ಹರಾಜು ಹಿಡಿದವರಿಗೆ ಕಂಕಣ ಬಲ ಪ್ರಾಪ್ತಿ
ಆರಾಧನೆ ಅಥವಾ ದೀಪ ಅಥವಾ ಉತ್ಸವದಲ್ಲಿ ಭಗವಂತನ ಅರ್ಪಿಸಿದ ಫಲ, ಪುಷ್ಪ, ಹಾರ ತುರಾಯಿಗಳನ್ನು ಹರಾಜು ಹಾಕಲಾಗುತ್ತದೆ. ವಿವಾಹಕ್ಕೆ ಪ್ರಯತ್ನಿಸುತ್ತಿರುವ ಕನ್ಯೆಯರ ತಂದೆ ತಾಯಿಯರು ಇದರಲ್ಲಿ ಪಾಲ್ಗೊಂಡು ತೆಗೆದುಕೊಳ್ಳುತ್ತಾರೆ. ಈ ರೀತಿ ಪಾಲ್ಗೊಂಡು ಪಡೆದ ನಂತರ ತಮ್ಮ ಮಕ್ಕಳ ವಿವಾಹಕ್ಕಾಗಿ ಬೇಡಿಕೊಂಡರೆ ಒಂದು ವರ್ಷದ ಒಳಗಾಗಿ ವಿವಾಹ ಆಗುತ್ತದೆ ಎಂಬ ನಂಬಿಕೆಯಿದೆ.
ತುಂಗಾ ನದಿಯ ತಟದಲ್ಲಿ ಪ್ರತಿನಿತ್ಯ ಯೋಗ
ದೇವಾಲಯದ ಸುತ್ತಲೂ ಹಸಿರಿನ ವನಸಿರಿ, ಗಿರಿಗಳ ಸಮೂಹ, ಪ್ರಶಾಂತ ವಾತಾವರಣ, ಜುಳು ಜುಳು ಹರಿಯುವ ನದಿ, – ಇವೆಲ್ಲವೂ ಇಲ್ಲಿನ ವಿಶೇಷ. ಇಲ್ಲಿ ದೇವರನ್ನು ಪ್ರಾರ್ಥಿಸಿದರೆ, ಪ್ರಕೃತಿಯನ್ನು ಪ್ರಾರ್ಥಿಸಿದ ಅನುಭವವೂ ಸೇರಿಕೊಳ್ಳುತ್ತದೆ.
ದೇವಸ್ಥಾನದ ಸುತ್ತ ಸುಂದರ ಪ್ರಾಂಗಣವಿದ್ದು, ಅಲ್ಲಿ ಪ್ರತಿ ನಿತ್ಯ ಮುಂಜಾನೆ 4.30 ರಿಂದ 7.30 ರವರೆಗೆ ಭಾರತೀಯ ಯೋಗ ಶಿಕ್ಷಣ ಟ್ರಸ್ಟ್, ಬಾಳೆಬೈಲು ಶಾಖೆ ವತಿಯಿಂದ ಯೋಗಾಭ್ಯಾಸ ನಡೆಸಲಾಗುತ್ತದೆ.
ಪುರಾಣಗಳ ಪ್ರಕಾರ ಕಾರ್ತಿಕ ಮಾಸದ ಆಚರಣೆಗೆ ವಿಶೇಷ ಮಹತ್ವವಿದ್ದು, ಕಾರ್ತಿಕ ಮಾಸ ವ್ರತಾಚರಣೆಯಿಂದ ಹಿಂದಿನ ಕರ್ಮಗಳನ್ನು ಕಳೆದುಕೊಳ್ಳಲು ಸಾಧ್ಯವಿದೆ ಎಂದು ಹೇಳಲಾಗಿದೆ.
ಕಾರ್ತಿಕ ಮಾಸದಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತದ ವೇಳೆಯಲ್ಲಿ ತುಪ್ಪದ ದೀಪ ಹಚ್ಚಿದರೆ ಅಭ್ಯುದಯ, ಸಂಪತ್ತು, ಆರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯೂ ಇದ್ದು, ಲೌಕಿಕ ಬಯಕೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತದೆ ಎಂದೂ ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಕಾರ್ತಿಕ ಮಾಸಕ್ಕೆ ಪಂಚಾಂಗದಲ್ಲಿ ವಿಶೇಷ ಮನ್ನಣೆ ಇದೆ. ಈ ಮಾಸವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಸಮುದ್ರ ಸಾನ, ಸಂಗಮ ಸಾನ ಮಾಡುವುದು ರೂಢಿ. ದೇವಾಲಯದಲ್ಲಿ ಮಾಸದುದ್ದಕ್ಕೂ ವಿಶೇಷ ಭಜನೆ – ಕೀರ್ತನೆಗಳು ನಡೆಯುತ್ತವೆ.
ಮಾಸ್ಕ್ ಧಾರಣೆ ಕಡ್ಡಾಯ
ಕೊರೋನಾ ವೈರಸ್ ಹರಡುತ್ತಿರುವ ಭೀತಿಯಿರುವ ಕಾರಣ ಭಕ್ತರ ಆರೋಗ್ಯ ಮತ್ತು ದೇವಾಲಯದ ಹಿತದೃಷ್ಟಿಯಿಂದ ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಯಾವುದೇ ಆತಂಕವಿಲ್ಲದೆ ಶ್ರೀ ಸ್ವಾಮಿಯ ದರ್ಶನ ಪಡೆದು ಅನುಗ್ರಹಕ್ಕೆ ಪಾತ್ರರಾಗಿ ಎಂದು ದೇವಾಲಯದ ಆಡಳಿತ ಮಂಡಳಿಯು ವಿನಂತಿಸಿಕೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post