ಕಲ್ಪ ಮೀಡಿಯಾ ಹೌಸ್ | ಕಾಸರಗೋಡು |
ಕಾಸರಗೋಡು ಸಪ್ತಭಾಷಾ ಸಂಗಮದ ಕನ್ನಡದ ಬೀಡಾಗಿದೆ. ನಿತ್ಯ ಕನ್ನಡತನವೇ ಮೇಳೈಸಿರುವ, ಕನ್ನಡತನವನ್ನೇ ಆಚರಿಸುತ್ತಿರುವ ಕನ್ನಡದ ಬೀಡು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅಭಿಪ್ರಾಯಪಟ್ಟರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಹಮ್ಮಿಕೊಂಡಿದ್ದ ಗಡಿನಾಡ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿದ ಬಳಿಕ ನಾನಾ ಕ್ಷೇತ್ರಗಳ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಿಸಿ ಮಾತನಾಡಿದರು.

ಕೊಂಕಣಿ ಮನೆಮಾತಾಗಿದ್ದ ಮಂಜೇಶ್ವರದ ಗೋವಿಂದ ಪೈಗಳು ಕನ್ನಡದ ಮೊದಲ ರಾಷ್ಟ್ರಕವಿಗಳು.
ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ’ ಎಂದು ತಮ್ಮ ಕವನದ ಮೂಲಕ ಇಲ್ಲಿನ ಕನ್ನಡ ಸಮುದಾಯವನ್ನು ಎಚ್ಚರಿಸಿದ ಶತಾಯುಷಿ ಕಯ್ಯಾರ ಕಿಞ್ಣಣ್ಣ ರೈ ಅವರ ಮನೆ ಮಾತು ತುಳು. ಇವರು ಕೊನೆಯ ಉಸಿರಿನವರೆಗೂ ನಾನು ಸಾಯುವುದು “ಕರ್ನಾಟಕದಲ್ಲಿ ಕಾಸರಗೋಡು ವಿಲೀನವಾದ ನಂತರ” ಎನ್ನುತ್ತಲೇ ಇದ್ದರು.

ಕಾಸರಗೋಡು ಕನ್ನಡದ ಬೀಡು, ಇಲ್ಲಿರುವುದು ಕನ್ನಡದ ನೆಲೆ’ ಎನ್ನುವುದು ಇಲ್ಲಿನ ಕನ್ನಡದ ವಾತಾವರಣ ನೋಡಿ ಮನದಟ್ಟಾಗಿದೆ. ಬೆಂಗಳೂರು ಕೇಂದ್ರಿತ ಕನ್ನಡ ಹೋರಾಟಗಾರರ ಅಭಿಪ್ರಾಯ ಭಿನ್ನವಾಗಿರಬಹುದು. ಆದರೆ ನಾನು ಇಲ್ಲಿಗೆ ಬರುವಾಗ ದಾರಿಯುದ್ದಕ್ಕೂ ಕನ್ನಡದ ಫಲಕ ಮತ್ತು ಬ್ಯಾನರ್ ಗಳನ್ನು ನೋಡಿಕೊಂಡೇ ಬಂದೆ. ಇಲ್ಲಿನ ಕನ್ನಡದ ವಾತಾವರಣ ಗಟ್ಟಿಯಾಗಿದೆ ಎಂದರು.
ಈಗ ಈ ನಾಡನ್ನು ಸಪ್ತಭಾಷಾ ಸಂಗಮ ಭೂಮಿ ಎಂದು ಕರೆಯುವ ಮೂಲಕ ಕೇರಳ ಸರ್ಕಾರ ಹಂತಹಂತವಾಗಿ ಕನ್ನಡ ನುಡಿ, ಸಂಸ್ಕೃತಿಗೆ ಮಾರಕ ಆಗುತ್ತಿದೆ ಎನ್ನುವ ಅಸಮಾಧಾನ ಹಲವರಲ್ಲಿದೆ. ಇದು ಸಪ್ತಭಾಷಾ ಸಂಗಮದ ನಾಡು ಎನ್ನುವುದು ನಿಜವೇ. ಆದರೆ, ಇದು ಸಪ್ತ ಭಾಷಾ ಸಂಗಮದ ಕನ್ನಡದ ಬೀಡು” ಎನ್ನುವುದು ಇಲ್ಲಿನ ಕನ್ನಡದ ವಾತಾವರಣ ಋಜು ಮಾಡುತ್ತಿದೆ ಎಂದರು.

ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ನಾಡಿಗೆ ಸೇವೆ ಸಲ್ಲಿಸಿದ ಹಲವರಿಗೆ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಇದೇ ಸಂದರ್ಭದಲ್ಲಿ ನೀಡಿ ಸನ್ಮಾನಿಸಲಾಯಿತು.
ಒಡೆಯೂರು ಸಂಸ್ಥಾನದ ಮಾತೆ ಅಮೃತಾನಂದಮಯಿ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದ ರಮೇಶ್ ಜಿಗಜಿಣಗಿ ಸೇರಿ ಅಕಾಡೆಮಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.











Discussion about this post