ಕಲ್ಪ ಮೀಡಿಯಾ ಹೌಸ್ | ಕಾಸರಗೋಡು(ಕೇರಳ) | ವರದಿ: ಡಿ.ಎಲ್. ಹರೀಶ್
ಕಾಸರಗೋಡು ಜಿಲ್ಲೆ ಆಡಳಿತದ ದೃಷ್ಟಿಯಿಂದ ಕೇರಳ ರಾಜ್ಯಕ್ಕೆ ಒಳಪಟ್ಟರೂ ಸಹ ನಮ್ಮ ರಾಜ್ಯದ ಕನ್ನಡಿಗರ ಮನಸ್ಸು, ಹೃದಯದಲ್ಲಿ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿ ಕಾಸರಗೋಡಿನ ಕನ್ನಡಿಗರ ಹಾಗೂ ಕನ್ನಡ ಪತ್ರಕರ್ತರ ಕ್ಷೇಯೋಭಿವೃದ್ದಿಗೆ ಸದಾ ರಾಜ್ಯ ಸರ್ಕಾರ ಬದ್ಧವಾಗಿರುತ್ತದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ #Minister Cheluvarayaswamy ಹೇಳಿದರು.
ಇಲ್ಲಿನ ಸೀತಾಂಗೋಳಿಯಲ್ಲಿ ನಡೆದ ಕೆ.ಯು.ಡಬ್ಲೂಜೆ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಕನ್ನಡ ಸಂಸ್ಕೃತಿ ಉತ್ಸವ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸರ್ಕಾರ ಯಾವಾಗಲೂ ಗಡಿನಾಡು ಕನ್ನಡಿಗರ ಹಾಗೂ ಪತ್ರಕರ್ತರ ಹಿತ ಕಾಪಾಡಲು ಸಿದ್ದವಾಗಿದೆ. ಗಡಿ ಪ್ರದೇಶದ ಕನ್ನಡಿಗರ ರಕ್ಷಣೆ, ಅಭಿವೃದ್ಧಿ, ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡಲು ಆದ್ಯತೆ ನೀಡಲಾಗುವುದು ಎಂದರು.
ಕಾಸರಗೋಡಿನ ಪತ್ರಕರ್ತರು ಸೇರಿದಂತೆ ಕನ್ನಡಿಗರ ಯಾವುದೇ ನೆರವು ಬೇಕಾಗಿದ್ದಲ್ಲಿ ತಕ್ಷಣವೇ ಒದಗಿಸುವ ಕೆಲಸ ಸರ್ಕಾರ ಮಾಡ್ತಾ ಇದ್ದು, ಹಂತ ಹಂತವಾಗಿ ಅನುದಾನವನ್ನು ಸಹ ಸರ್ಕಾರದಿಂದ ನೀಡಲಾಗುವುದು ಎಂದರು.
ನಮ್ಮ ರಾಜ್ಯ ಸೇರಿದಂತೆ ಬೇರೆ, ಬೇರೆ ರಾಜ್ಯಗಳ ಕನ್ನಡಿಗ ಪತ್ರಕರ್ತರನ್ನು ಒಗ್ಗೂಡಿಸುವ ಕೆಲಸವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾಡುತ್ತಾ ಇದ್ದು, ಅವರ ಪರಿಶ್ರಮದಿಂದ ಕಾಸರಗೋಡಿನಲ್ಲಿ ಕನ್ನಡ ಪತ್ರಕರ್ತರ ಘಟಕ, ಅತ್ಯತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಕಾಸರಗೋಡು ಪತ್ರಕರ್ತರಿಗೆ ಗುರುತಿನಚೀಟಿ ವಿತರಿಸಿ ಮಾತನಾಡಿದ ಶಿವಾನಂದ ತಗಡೂರು ಅವರು, ಕೆಯುಡಬ್ಲ್ಯೂಜೆ ಘಟಕ ಕಾಸರಗೋಡಿನಲ್ಲಿ ಅಸ್ಥಿತ್ವಕ್ಕೆ ಬಂದ ಮೇಲೆ ವರ್ಷದಿಂದ ವರ್ಷಕ್ಕೆ ಹತ್ತು ಹಲವಾರು ಕಾರ್ಯಕ್ರಮವನ್ನು ಕ್ರೀಯಾತ್ಮಕವಾಗಿ ಮಾಡುತ್ತಿದೆ ಎಂದು ಪ್ರಶಂಸಿಸಿದರು.
ಕಾಸರಗೋಡು ಪತ್ರಕರ್ತರ ಆಶೋತ್ತರಗಳಿಗೆ ಕೆಯುಡಬ್ಲ್ಯೂಜೆಸ್ಪಂದಿಸುತ್ತಾ ಬಂದಿದೆ. ಸಿಎಂ ಸಿದ್ದರಾಮಯ್ಯ ಮತ್ತು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಸಹಕಾರದಿಂದ 25 ಲಕ್ಷ ರೂ ಅನುದಾನ ಕೊಡಿಸಲಾಗಿದೆ. ನೆರವು ನೀಡಿದ ಸರ್ಕಾರಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.
ಕಾಸರಗೋಡು ಜಿಲ್ಲೆಯಲ್ಲಿ ಇಂದಿಗೂ ಕನ್ನಡ ಭಾಷೆ ಉಳಿವಿಗಾಗಿ ಶ್ರಮಿಸುತ್ತಿದ್ದು, ಕನ್ನಡ ಪತ್ರಕರ್ತರು ಶ್ರಮಿಸುತ್ತಿದ್ದು, ಇಂತಹ ಕಾರ್ಯಕ್ರಮಗಳು ಇತರೆ ಗಡಿನಾಡು ಕನ್ನಡಿಗರಿಗೆ ಮಾದರಿಯಾಗಿದೆ ಎಂದರು.
ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮಾತನಾಡಿ, ನಾವೆಲ್ಲ ಕೇರಳದಲ್ಲಿದ್ದರೂ ಕನ್ನಡಾಭಿಮಾನಿಗಳಾಗಿದ್ದೇವೆ. ಗಡಿಯಲ್ಲಿನಕನ್ನಡ ಉಳಿಸಿ ಬೆಳೆಸಲು ಕಂಕಣಬದ್ದರಾಗಿದ್ದೇವೆ ಎಂದರು.
ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು, ಮಂಡ್ಯದ ಮತ್ತಿಕೇರಿ ಜಯರಾಮ್, ಶಿವಮೊಗ್ಗದ ಎನ್.ರವಿಕುಮಾರ್, ಕೊಪ್ಪಳದ ನಾಗರಾಜ್. ವೈ, ಬೆಳಗಾಂನ ಮಲ್ಲಿಕಾರ್ಜುನ ರೆಡ್ಡಿ ಗೋಂದಿ, ಮಂಗಳೂರಿನ ವೇಣು ವಿನೋಧ, ಸತ್ಯವತಿ ಸೇರಿದಂತೆ ಒಟ್ಟು 21 ಜನ ಪತ್ರಕರ್ತರಿಗೆ, ಸಾಧಕರಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ಕೃಷಿ ಸಚಿವರಾದ ಎನ್.ಚೆಲುವರಾಯಸ್ವಾಮಿ ಪ್ರದಾನ ಮಾಡಿದರು.
ತುಮಕೂರಿನಲ್ಲಿ ರಾಜ್ಯ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ್ದ ಅಲ್ಲಿನ ಜಿಲ್ಲಾಧ್ಯಕ್ಷ ಚೀ.ನಿ.ಪುರುಷೋತ್ತಮ ಮತ್ತು ಪ್ರಧಾನ ಕಾರ್ಯದರ್ಶಿ ರಘುರಾಮ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಸಾನಿಧ್ಯವನ್ನು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸದಾಶಿವಶೆಟ್ಟಿ ಕೂಳೂರು, ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಮತ್ತಿತರರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಶೋಭಾ ಯಾತ್ರೆ ನಡೆಯಿತು. ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post