ಅಮ್ಮ ಎನ್ನುವುದೊಂದು ಅದ್ಬುತವಾದ ಪದ. ಎಷ್ಟೇ ಬಳಸಿದರೂ ಸವೆಯದ, ಬಳಸಿದಷ್ಟೂ ಪ್ರೀತಿಯ ಹೆಚ್ಚಿಸುವ ಅನನ್ಯವಾದ ಶಬ್ದ ಅಮ್ಮ. ಇಂತಹಾ ಅಮ್ಮಂದಿರ ದಿನದ ಅಂಗವಾಗಿ ಪವಿತ್ರಾಂಗಣದಲ್ಲಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಲೆ ಮತ್ತು ಸಾಹಿತ್ಯ ಎರಡೂ ಒಂದಾದ ಕಾರ್ಯಕ್ರಮವದು. ಅಂದರೆ ಶಿವಮೊಗ್ಗೆಯ ಖ್ಯಾತ ಕತೆಗಾರ್ತಿ, ಸಾಹಿತಿ ಶ್ರೀಮತಿ ವಿಜಯಾ ಶ್ರೀಧರ್ ಅವರ ಸಮಗ್ರ ಕಥಾಸಂಕಲನದ ಬಿಡುಗಡೆಯ ಸಮಾರಂಭವದು.
‘ನಮ್ಮ ಅಮ್ಮನ ಸಮಗ್ರ ಕಥಾ ಸಂಕಲನದ ಬಿಡುಗಡೆಯ ಸಮಾರಂಭ…’ ಹೀಗೆ ಹೇಳಿಕೊಳ್ಳುವಾಗ ನಿರೂಪಕಿ ಡಾ.ಕೆ.ಎಸ್. ಚೈತ್ರಾರ ಮುಖದಲ್ಲಿ ಅದೇನೋ ಹೆಮ್ಮೆಯ ಭಾವ. ನಿರೂಪಣೆಗೆ ಹೇಳಿ ಮಾಡಿಸಿದಂತಹ ಧ್ವನಿ ಇರುವ ಚೈತ್ರಾರ ಎಲ್ಲರಿಗೂ ನಮಸ್ಕಾರ ಎಂಬ ನಗುಮೊಗದೊಂದಿಗೆ ಆರಂಭವಾದ ಕಾರ್ಯಕ್ರಮ ಎಲ್ಲರನ್ನೂ ತಮ್ಮ ತಮ್ಮ ಅಮ್ಮಂದಿರ ನೆನಪಲ್ಲಿ ಮುಳುಗಿಸಿದ್ದಂತೂ ನಿಜ.

ಪುಸ್ತಕ ಬಿಡುಗಡೆ ಮಾಡಿ ಅದರ ಬಗ್ಗೆ ಒಂದು ಕಿರು ಪರಿಚಯ ಮಾಡಿಕೊಟ್ಟ ಅತಿಥಿಗಳು ಸ.ಉಷಾರವರು. ಅವರ ಮೆಲುದನಿ, ಹಸನ್ಮುಖ, ಹಾಸ್ಯಪ್ರಜ್ಞೆ ಹಾಗೂ ಅವರು ಪುಸ್ತಕವನ್ನು ಪರಿಚಯ ಮಾಡಿಕೊಟ್ಟ ಶೈಲಿ ಅಭೂತಪೂರ್ವವಾದುದು. ವಿಜಯಾ ಶ್ರೀಧರ್ ಅವರ ಅದ್ಬುತ ಕಥೆಗಳ ಕುರಿತು ಅಮೋಘವಾಗಿ ಮಾತನಾಡಿದ ಉಷಾರವರು ವಿಜಯಾ ಶ್ರೀಧರ್ ಅವರ ಕಥೆಗಳನ್ನು ನಾವು ಓದಲೇ ಬೇಕೆಂಬ ಹಂಬಲವನ್ನು ಹುಟ್ಟು ಹಾಕಿದರು.
ನಂತರ ಮಾತನಾಡಿದ ಲೇಖಕಿ ವಿಜಯಾ ಶ್ರೀಧರ್, ತಮ್ಮ ಮಕ್ಕಳು ತಮಗೆ ಈ ಪುಸ್ತಕವನ್ನು ಹೊರತರಲು ಮಾಡಿದ ಸಹಾಯಗಳನ್ನು ನೆನೆದರು. ಹೆಣ್ಣು ಮಕ್ಕಳಾದರೇನು ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ನೃತ್ಯ, ವೈದ್ಯಕೀಯ, ಸಾಹಿತ್ಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಮಕ್ಕಳ ತಾಯಿ ಎಂಬ ಹೆಮ್ಮೆಯು ವಿಜಯಾ ಶ್ರೀಧರ್ ಅವರ ಮೊಗದಲ್ಲಿ ತೋರುತ್ತಿತ್ತು.
ನಿಜ ಡಾ.ಕೆ.ಎಸ್. ಚೈತ್ರ, ಡಾ.ಕೆ.ಎಸ್. ಪವಿತ್ರ, ಡಾ.ಕೆ.ಎಸ್. ಶುಭ್ರತಾ ಎಂಬ ಮೂರು ಮಾಣಿಕ್ಯದಂತಹ ಪುತ್ರಿಯರನ್ನು ಪಡೆದ ಆ ತಾಯಿಯ ಮೊಗದಲ್ಲಿ ಹೆಮ್ಮೆಯ ಭಾವನೆ ಸಹಜವೇ. ಇನ್ನು ಕಡೆಯದಾಗಿ ಮಾತಿಗೆ ನಿಂತ ಅಧ್ಯಕ್ಷ ಸ್ಥಾನ ವಹಿಸಿದ್ದ ಡಾ.ಕೆ.ಆರ್. ಶ್ರೀಧರ್ ಅವರು ತಮ್ಮ ಶ್ರೀಧರ ನರ್ಸಿಂಗ್ ಹೋಂನಲ್ಲಿ ಹೊಸದಾಗಿ ಉದ್ಘಾಟನೆಯಾದ ತಾಯಿ-ಮಗು ಎಂಬ ಘಟಕದ ಕುರಿತು ಮಾತನಾಡುವಾಗ ಭಾವುಕರಾದರು.
ಅಮ್ಮ ಮತ್ತು ತಾಯಿ-ಮಗುವಿನ ಸಂಬಂಧವೆಂಬ ಭಾವನೆಯೇ ಹಾಗೆ ಎಂಥವರನ್ನೂ ಭಾವುಕರನ್ನಾಗಿಸುತ್ತಿತ್ತು. ಇಷ್ಟೆಲ್ಲದರ ನಡುವೆ ಸಭಾ ಕಾರ್ಯಕ್ರಮ ಮುಗಿಯಿತು.

ಇನ್ನು ನೃತ್ಯ ಕಾರ್ಯಕ್ರಮ ‘ಕರುಳಬಳ್ಳಿ’ ಅದೂ ಕೂಡಾ ಹಾಗೆ ಒಂದು ವಿಶಿಷ್ಟ ಕಾರ್ಯಕ್ರಮವೇ. ಅಂದರೆ ವೇದಿಕೆಯ ಮೇಲೆ ನರ್ತಿಸಿದ್ದು, ತಾಯಿ-ಮಗಳು ಅಂದರೆ ಡಾ.ಕೆ.ಎಸ್. ಪವಿತ್ರಾ ಹಾಗೂ ಅವರ ಸುಪುತ್ರಿ ಕುಮಾರಿ ಕೆ. ಭೂಮಿ. ವೇದಿಕೆಯ ಮೇಲೆ ಹೀಗೆ ತಾಯಿ-ಮಗಳು ಒಟ್ಟಿಗೆ ನರ್ತಿಸುವುದನ್ನು ನೋಡುವ ಭಾಗ್ಯ ಅದೆಷ್ಟು ಮಂದಿಗೆ ಸಿಕ್ಕೀತು ಹೇಳಿ.
ವೇದಿಕೆಯ ಮೇಲೆ ನರ್ತಿಸುವ ಇವರನ್ನು ಕಂಡ ಸಭಿಕರಾಗಿ ಕುಳಿತಿದ್ದ ತಾಯಂದಿರಿಗೆ ಅದೇನೋ ರೋಮಾಂಚನ. ದೇವಿಯರಿಗೆ ಪ್ರಾರ್ಥನೆ ಸಲ್ಲಿಸಿ ಮಗುವೊಂದು ತಾಯಿಯ ಗರ್ಭದಲ್ಲಿ ತಾಯಿಯ ಉಸಿರನ್ನು ಹಂಚಿಕೊಂಡಾಗಿದ್ದಾಗಿನಿಂದಲೂ ಮುದ ನೀಡುವಂತಹುದು.
ತನ್ನ ಮಗನು ಸನ್ಯಾಸಿಯಾಗುವುದನ್ನು ಒಪ್ಪದ ತಾಯಿಗೆ ಭವವೆಂಬ ಮೊಸಳೆಯು ನನ್ನ ಕಾಲನ್ನು ಹಿಡಿದಿದೆ. ದೀಕ್ಷೆಯ ನೀಡಮ್ಮ ಎಂದು ಬೇಡುವ ಶಂಕರನನ್ನು ನೃತ್ಯದ ಮೂಲಕ ತೋರಿಸಿದ್ದ ಎಲ್ಲರ ಮೈನವಿರೇಳಿಸಿದರೆ, ತಾಯ್ತನವನ್ನು ಬೆಣ್ಣೆ ಕಾಯಿಸಿ ತುಪ್ಪ ಮಾಡುವುದಕ್ಕೆ ಹೋಲಿಸಿದ ಅಮ್ಮನಾಗುವುದೆಂದರೆ ಹೀಗೆ ಮತ್ತು ಅಮ್ಮನಾ ಸೀರೆ. ಅಮ್ಮ ಸೀರೆಯನ್ನು ಉಡುವ, ಮಡಚಿ ಇಡುವ ಪರಿಯನ್ನು ಹೇಳುವ ಈ ನೃತ್ಯವು ಮುಗಿದಾಗ ನೋಡುಗರೆಲ್ಲರ ಕಣ್ಣಂಚು ಒದ್ದೆಯಾಗಿತ್ತು. ಎಲ್ಲರೂ ತಮ್ಮ ತಾಯಿಯ ನೆನಪಿಸಿಕೊಳ್ಳುತ್ತಿದ್ದರು. ಹೀಗೆ ನೋಡುತ್ತಾ ಮಂಗಳವೂ ಮುಗಿದು ಕಾರ್ಯಕ್ರಮ ಮುಕ್ತಾಯವಾಯಿತೆಂದರೆ ಎಲ್ಲರಿಗೂ ನಂಬಲಸಾಧ್ಯ.
ಈಗ ಶುರುವಾದ ಹಾಗಿತ್ತು ಎಂಬ ಭಾವ ಅಷ್ಟರ ಮಟ್ಟಿಗೆ ಕಾರ್ಯಕ್ರಮವು ಎಲ್ಲರನ್ನೂ ಸೆಳದಿತ್ತು. ನಂತರ ಏರ್ಪಡಿಸಿದ್ದ ಭೋಜನ ಕೂಟವನ್ನು ಮುಗಿಸಿ ಮನೆಗೆ ಬಂದರೂ ಕಾರ್ಯಕ್ರಮವು ನಮ್ಮಿಂದ ದೂರಾಗಲೇ ಇಲ್ಲ. ಕಾರ್ಯಕ್ರಮ ಹೆಚ್ಚು ಕಡಿಮೆ 3 ಗಂಟೆಗೆ ನಡೆಯಿತೆಂದರೆ ನಂಬಲು ಆಗುತ್ತಿಲ್ಲ.
ಲೇಖನ: ಬ್ರಾಹ್ಮಿ(ಧನ್ಯ ಪಿ. ರಾವ್), ಶಿವಮೊಗ್ಗ
















