ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಹಲವು ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹವಾಮಾನ ಇಲಾಖೆಯ ವರದಿಯಂತೆ ಗಂಟೆಗೆ 35ರಿಂದ 45ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಕೇರಳ, ಲಕ್ಷದ್ವೀಪದಲ್ಲಿ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಇದೇ ವೇಳೆ, ಇಡುಕ್ಕಿ, ವಯನಾಡ್ ಸೇರಿದಂತೆ ಆರಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು, ಭಾರೀ ಮಳೆಗೆ ಇದುವರೆಗೂ 40 ಮಂದಿ ಬಲಿಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಈ ಕುರಿತಂತೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ್ದು, ಕೇರಳದ ಪರಿಸ್ಥಿತಿ ಗಂಭೀವಾಗಿದ್ದು, ತುರ್ತು ಕ್ರಮಗಳನ್ನು ನಿರಂತರವಾಗಿ ನಡೆಸಲು ಆದೇಶ ನೀಡಿದೆ. ಪರಿಸ್ಥಿತಿ ಕುರಿತಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಎಲ್ಲ ರೀತಿಯ ಕಾರ್ಯಾಚರಣೆ ನಡೆಸಲು ಆದೇಶ ನೀಡಿದ್ದು, ಕೇರಳ ರಾಜ್ಯಕ್ಕೆ ಎಲ್ಲ ರೀತಿಯ ನೆರವನ್ನು ಕೇಂದ್ರ ಸರ್ಕಾರ ಸಿದ್ವಿವಿದೆ ಎಂದಿದ್ದಾರೆ.
ಎರ್ನಾಕುಲಂ, ಇಡುಕ್ಕಿ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿರುವ ರಾಜನಾಥ್ ಸಿಂಗ್, ರಾಜ್ಯದ ಜನತೆ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪ್ರವಾಹ ಪೀಡಿತ ರಾಜ್ಯಕ್ಕೆ ಕೇಂದ್ರದಿಂದ ಎಲ್ಲಾ ರೀತಿಯ ನೆರವನ್ನೂ ನೀಡಲಾಗುವುದು. ಪ್ರವಾಹದಲ್ಲಿ ನೆಲೆ ಕಳೆದುಕೊಂಡವರ ಸಮಸ್ಯೆಗಳನ್ನೂ ಇದೇ ವೇಳೆ ರಾಜನಾಥ್ ಸಿಂಗ್ ಆಲಿಸಿದ್ದಾರೆ.
ಇಂದು ಮುಂಜಾನೆ ಮತ್ತೆ ಭಾರೀ ಮಳೆಯಾಗಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. ಪ್ರವಾಹ ಹಾಗೂ ಮಳೆಯಿಂದಾಗಿ ಕೇರಳದಲ್ಲಿ ಒಟ್ಟು ಸುಮಾರು 10 ಸಾವಿರ ಕಿಮೀಗಳಷ್ಟು ರಸ್ತೆ ಹಾನಿಯಾಗಿದ್ದು, 8,316 ಕೋಟಿ ರೂ.ಗೂ ಅಧಿಕ ಹಾನಿಯಾಗಿದೆ.
ಪ್ರವಾಸೋದ್ಯಮಕ್ಕೆ ಹೆಚ್ಚು ಮಹತ್ವ ಕೊಡುವ ಹಾಗೂ ಇದರಿಂದ ಭಾರೀ ಪ್ರಮಾಣದ ಆದಾಯ ಹೊಂದಿರುವ ಕೇರಳದಲ್ಲಿ ಸಂಭವಿಸಿದ ಮಳೆ ಹಾಗೂ ಪ್ರವಾಹದಿಂದ ಪ್ರವಾಸೋದ್ಯಮಕ್ಕೆ ತೀವ್ರ ನಷ್ಟ ಉಂಟಾಗಿದೆ. ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಹಲವೆಡೆ ಈಗಾಗಲೇ ಪ್ರವಾಸಿಗರ ಬುಕ್ಕಿಂಗ್ ರದ್ದು ಮಾಡಲಾಗಿದೆ.
Discussion about this post