ಭದ್ರಾವತಿ: ಜ್ಞಾನಾಭಿವೃದ್ದಿ ಹೆಚ್ಚಾಗಲಿರುವ ಕಾರಣದಿಂದ ಪತ್ರಿಕೆಗಳನ್ನು ಓದುವುದು ಅವಶ್ಯಕವಾಗಿ ಬುದ್ದಿಶಕ್ತಿಗೆ ಸಹಕಾರಿಯಾಗಿವೆ, ಸಾತ್ವಿಕ ಮನಸ್ಸು, ಆಧ್ಯಾತ್ಮಿಕ ಚಿಂತನೆ ಪ್ರಾಂಜನ ಮನಸ್ಸು ಇರುವೆಡೆ ಸಮಾಧಾನ ಲಭಿಸಲಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವೈದ್ಯ ಹೇಳಿದರು.
ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸಾಯಿಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಭಗವಾನ್ ಸತ್ಯಸಾಯಿಬಾಬ ಸೇರಿದಂತೆ ಎಲ್ಲಾ ದಾರ್ಶನಿಕರು ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಇತರರಿಗೆ ಹೇಗೆ ಬದುಕಬೇಕೆಂದು ತಿಳಿಸಿದ್ದಾರೆ. ಆದರೆ ಇಂದು ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗಿ, ಬದುಕಿನಲ್ಲಿ ಶಾಂತಿ, ನೆಮ್ಮದಿಯಿಲ್ಲದೆ ಕಂಗಾಲಾಗಿದ್ದೇವೆ. ದಾರ್ಶನಿಕರು ಹಾಕಿಕೊಟ್ಟ ಹಾದಿಯಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿಗಾಗಿ ಅವರ ಮಾತುಗಳನ್ನು ಜವಾಬ್ದಾರಿಯಿಂದ ಕಾಯ್ದುಕೊಳ್ಳಬೇಕಿದೆ.
ಶಿಕ್ಷಣ ಕೇವಲ ಭವಿಷ್ಯದ ಉದ್ಯೋಗಕ್ಕಾಗಿ ಅಥವಾ ಉತ್ತಮ ಅಂಕಗಳಿಸಲು ಇರುವ ಒಂದು ಪ್ರಕ್ರಿಯೆಯಲ್ಲ. ಜ್ಞಾನಾರ್ಜನೆಗಾಗಿ ವಿವಿಧ ವಿಷಯಗಳನ್ನು ನಾನಾ ಮಾರ್ಗಗಳಿಂದ ಪಡೆಯುವ ಸಾಧನೆಯಾಗಿದೆ. ಇಂತಹ ಸಾಧನೆಗೆ ವೃತ್ತ ಪತ್ರಿಕೆಗಳು ಉತ್ತಮ ಸಾಧನೆಯಾಗಿದ್ದು ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದುವುದರಿಂದ ನೂತನ ಪದಗಳನ್ನು ಗ್ರಹಿಸಲು ಸಾಧ್ಯವಾಗಲಿದೆ ಎಂದರು.
ತಾಲೂಕು ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ ಪಾಸ್ತಾವಿಕ ನುಡಿಗಳನ್ನಾಡಿ ಆಧುನಿಕ ಆವಿಷ್ಕಾರಗಳಾದ ಟಿವಿ, ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಇಂದು ಸಮೂಹ ಸುದ್ಧಿಮಾದ್ಯಮ ನಾಗಲೋಟದಲ್ಲಿ ಬೆಳೆಯುತ್ತಿವೆ. ದೃಶ್ಯ ಮಾಧ್ಯಮದಲ್ಲಿ ದೊರಕುವ ಜ್ಞಾನ ಕ್ಷಣಿಕ. ಇವೆಲ್ಲದರ ನಡುವೆಯೂ ದಿನಪತ್ರಿಕೆಗಳು ಹಿಂದಿನಂತೆ ಸಮಾಜ ಮುಖಿಯಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಾ ಜನಪ್ರಿಯತೆಯನ್ನು ಉಳಿಸಿಕೊಂಡು ಬೆಳೆಯುತ್ತಾ ಬಂದಿವೆ. ಪತ್ರಿಕೆಗಳನ್ನು ಓದುವ ಹಾಗು ಬರೆಯುವುದರಿಂದ ಲಭಿಸುವ ಜ್ಞಾನ ಸಂಪತ್ತು ಅಚ್ಚಳಿಯದೆ ಉಳಿಯುವ ಪ್ರಭಾವ ಬೀರುವಷ್ಟರ ಮಟ್ಟಿಗೆ ಸಶಕ್ತವಾಗಿರುವ ಕಾರಣದಿಂದ ಪತ್ರಿಕೆಗಳು ಇಂದಿಗೂ ಉಳಿದು ಬೆಳೆದಿರುವುದಕ್ಕೆ ಕಾರಣವಾಗಿದೆ ಎಂದರು.
ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಆಢಳಿತಾಧಿಕಾರಿ ಡಿ.ಪ್ರಭಾಕರ್‍ಬೀರಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣ ಎಂದರೆ ಪಠ್ಯಪುಸ್ತಕ ಓದುವುದಕ್ಕೆ ಸೀಮಿತವಾದ ಕ್ರಿಯೆ ಎಂದು ಭಾವಿಸದೆ ವಿದ್ಯಾರ್ಥಿ ಜೀವನದಿಂದಲೇ ಹೊಸ, ಹೊಸ ಸಂಗತಿಗಳನ್ನು ತಿಳಿಸಲು ಸಹಕಾರಿಯಾಗಿರುವ ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕ್ರೀಡೆ, ಸಂಸ್ಕøತಿ, ವಿಜ್ಞಾನ, ಸೌಂದರ್ಯ, ಸಿನಿಮಾ, ಮನರಂಜನೆ, ದೇಶ ವಿದೇಶಗಳ ಪ್ರಸ್ತುತ ವರ್ತಮಾನ ಸೇರಿದಂತೆ ಅನೇಕ ವಿಷಯಗಳನ್ನು ತಿಳಿಯಲು ಸಾಧ್ಯ ವಾಗುವುದರೊಂದಿಗೆ ಜ್ಞಾನದ ಪರಮಾವದಿ ವಿಸ್ತಾರಗೊಳ್ಳುತ್ತದೆ.
ವಿದ್ಯಾರ್ಥಿಗಳು ಡಾಕ್ಟರ್ ಅಥವ ಇಂಜಿನಿಯರ್ ಆಗುವುದಕ್ಕಾಗಿ ಓದಬೇಕು ಎಂಬ ಮನಸ್ಥಿತಿಯಿಂದ ಹೊರಬಂದು ಬೇರೆ ವೃತ್ತಿಗಳ ಹೊರತಾಗಿಯೂ ಸಾಧಿಸಲು ಅನೇಕ ವೃತ್ತಿಗಳಿವೆ. ಸ್ಪರ್ಧಾತ್ಮಕವಾದ ಇಂದಿನ ದಿನಗಳಲ್ಲಿ ಐಎಎಸ್, ಐಪಿಎಸ್ ಹಾಗು ಪತ್ರಿಕೋಧ್ಯಮಗಳಂತಹ ಹೊಸ ಅವಿಷ್ಕಾರಗಳನ್ನು ರೂಪಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಸಂಘದ ಉಪಾಧ್ಯಕ್ಷ ನಿಂಗನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಪತ್ರಿಕಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿನಿಯರಾದ ಕವನ, ಚಂದ್ರಕಲಾ, ಅಂಕಿತ ಮಾತನಾಡಿ ಪತ್ರಿಕೆಗಳನ್ನು ಓದುವುದರಿಂದ ಪ್ರಪಂಚದ ಆಗು ಹೋಗುಗಳ ತಿಳುವಳಿಕೆಯ ಜೊತೆಗೆ ಪದಗಳ ಬಳಕೆ ಮತ್ತು ಜ್ಞಾನ ಸಂಪತ್ತಿನ ವಿಕಸನ ವಾಗುತ್ತದೆ ಎಂದರು.
ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಬಸವರಾಜ್, ಸತ್ಯಸಾಯಿ ಶಿಕ್ಷಣ ಸಂಸ್ಥೆಯ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಉಪಸ್ಥಿತರಿದ್ದರು. ಪ್ರಾಂಶುಪಾಲ ಮೃತ್ಯಂಜಯ ಕಾನಿಟ್ಕರ್ ಸ್ವಾಗತಿಸಿ, ಇಂಪನಾ ಪ್ರಾರ್ಥಿಸಿ, ಶ್ಯಾಮರಾಯಾಚಾರ್ ವಂದಿಸಿದರೆ, ಭವಾನಿಬೇಂದ್ರೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹತ್ತನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post