ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕೊಪ್ಪಳ: ಶ್ರೀಗವಿಸಿದ್ದೇಶ್ವರರ ಮಹಾರಥೋತ್ಸವ ವೈಭವದಿಂದ ನೆರವೇರಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಈ ಸಂಭ್ರಮಕ್ಕೆ ಸಾಕ್ಷಿಯಾದರು.
ರಥೋತ್ಸವದ ಅಂಗವಾಗಿ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ಅಂತಾರಾಷ್ಟ್ರೀಯ ಕ್ರೀಡಾಪಟು ಡಾ. ಮಾಲತಿ ಹೊಳ್ಳ ಅವರು ಧ್ವಜಾರೋಹಣ ನೆರವೇರಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಜಾತ್ರೆಗಾಗಿ 300 ಜನ ಬಾಣಸುಗರು ಸೇರಿ 18 ಲಕ್ಷ ಮಿರ್ಚಿಗಳ ತಯಾರಿಸಿದ್ದು ವಿಶೇಷವಾಗಿತ್ತು. ಉತ್ತರ ಕರ್ನಾಟಕ ಅಂದರೆ ಸಾಕು, ಮಿರ್ಚಿ (ಮೆಣಸಿನಕಾಯಿ ಬೋಂಡಾ) ಮಂಡಕ್ಕಿ ತಿನಿಸು ಪಕ್ಕಾ. ಇಲ್ಲಿಯ ಜನರಿಗೆ ಊಟ ಇಲ್ಲದಿದ್ದರೂ ಪರವಾಗಿಲ್ಲ, ಮಿರ್ಚಿ-ಮಂಡಕ್ಕಿ ಇದ್ದರೆ ಸಾಕು. ಹೀಗಾಗಿ, ಕೊಪ್ಪಳದ ಸುಪ್ರಸಿದ್ಧ ಗವಿಸಿದ್ಧೇಶ್ವರ ಜಾತ್ರೆಯ ದಾಸೋಹದಲ್ಲಿ ವಿವಿಧ ಭಕ್ತರು ಮಿರ್ಚಿ ಸೇವೆ ಮಾಡುತ್ತಾರೆ. ಕಳೆದ ಐದು ವರ್ಷಗಳಿಂದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಗೆಳೆಯರ ಬಳಗದಿಂದ ಮಿರ್ಚಿ ಸೇವೆ ನಡೆಯುತ್ತಿತ್ತು. ಮಿರ್ಚಿಯ ಜನಪ್ರಿಯತೆ ಮನಗಂಡ ಗವಿಮಠ ಈ ವರ್ಷದಿಂದ, ದಾನಿಗಳ ನೆರವು ಪಡೆದು ಮಠದ ವತಿಯಿಂದಲೇ, ಮಿರ್ಚಿ ಸಿದ್ಧಪಡಿಸಿ ನೀಡಲು ಮುಂದಾಗಿದೆ.
18 ಲಕ್ಷ ಮಿರ್ಚಿಗಳನ್ನು ಸಿದ್ಧಪಡಿಸಲು 18 ಕ್ವಿಂಟಾಲ್ ಕಡಲೆ ಹಿಟ್ಟು, 15 ಕ್ವಿಂಟಾಲ್ ಹಸಿ ಮೆಣಸಿನಕಾಯಿ, 10 ಬ್ಯಾರಲ್ ಅಡುಗೆ ಎಣ್ಣೆ, ಜೀರಿಗೆ, ಅಡುಗೆ ಸೋಡಾ ಬಳಸಿಕೊಂಡು, 300 ಬಾಣಸಿಗರ ನೆರವಿನಿಂದ ಮಿರ್ಚಿ ಸಿದ್ಧಪಡಿಸಿದೆ. ಮಿರ್ಚಿ ಸೇವೆಯ ದಾನಿಗಳಾದ ವಿಜಯಕುಮಾರ ಗುಡಿಹಾಳ ರವರು ಸೇವೆ ಮೆಚ್ಚುಗೆ ಪಡೆಯಿತು.
ನಿತ್ಯದ ರೊಟ್ಟಿ, ಚಪಾತಿ, ಪಲ್ಯ, ಮಾದಲಿ (ಗೋಧಿಯಿಂದ ಸಿದ್ಧಪಡಿಸಿದ ಪುಡಿ ಸಿಹಿ ತಿನಿಸು), ಹಾಲು, ತುಪ್ಪ, ಅನ್ನ, ಸಾರು, ಚಟ್ನಿಪುಡಿ, ಉಪ್ಪಿನಕಾಯಿ ಮತ್ತು ಮಜ್ಜಿಗೆ ಜೊತೆಗೆ ಬಿಸಿ ಮಿರ್ಚಿಯನ್ನೂ ನೀಡಲಾಗಿದೆ
.
ತನ್ನ ನಾವಿನ್ಯತೆ, ಸೇವಾಪರತೆ ಹಾಗೂ ಅಚ್ಚುಕಟ್ಟು ಕೆಲಸದಿಂದ ನಾಡಿನ ಗಮನ ಸೆಳೆದಿರುವ ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ದಾಖಲೆ ಪ್ರಮಾಣದಲ್ಲಿ ಮಿರ್ಚಿ ಬಡಿಸುವ ಮೂಲಕ ಮತ್ತೆ ಗಮನ ಸೆಳೆದಿದೆ. ಭಕ್ತಾದಿಗಳ ಅಧ್ಯಾತ್ಮಿಕ ಹಸಿವಿನ ಜೊತೆಗೆ, ಹೊಟ್ಟೆಯ ಹಸಿವನ್ನೂ ಸಂತೃಪ್ತವಾಗಿ ತಣಿಸುತ್ತಿದೆ.
ಯಾರೆಲ್ಲಾ ಪಾಲ್ಗೊಂಡಿದ್ದರು?
ಜಾತ್ರೋತ್ಸವದಲ್ಲಿ ಶಾಸಕ ವೆಂಕಟರಾವ್ ನಾಡಗೌಡ, ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಸಂಸದ ಸಂಗಣ್ಣ ಕರಡಿ, ಸಿ.ವಿ. ಚಂದ್ರಶೇಖರ, ಅಮರೆಗೌಡ ಬಯ್ನಾಪೂರ, ರಾಘವೇಂದ್ರ ಹಿಟ್ನಾಳ, ಇಕ್ಬಾಲ್ ಅನ್ಸಾರಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸುಗೂರು, ಜಿಪಂ ಅಧ್ಯಕ್ಷ ವಿಶ್ವನಾಥ ರಡ್ಡಿ, ಜಿಲ್ಲಾಧಿಕಾರಿ ಸುನೀಲ್ ಕುಮಾರ ಇದ್ದರು.
ಮೋದಿ ಮೋದಿ
ಮಹಾ ರಥೋತ್ಸವ ಸಾಗುವ ಅರ್ಧ ಗಂಟೆಗೂ ಮುನ್ನ ಸಿ.ಟಿ. ರವಿ, ಬಿ.ವೈ. ವಿಜಯೇಂದ್ರ ಅವರು ಭಾಷಣ ಆರಂಭಿಸುತ್ತಿದ್ದಂತೆ ಕೆಲ ಯುವಕರ ದಂಡು ಮೋದಿ ಮೋದಿ’ ಎಂದು ಘೋಷಣೆ ಕೂಗಲಾರಂಭಿಸಿದರು. ಇದನ್ನರಿತು ಗವಿಸಿದ್ದಪ್ಪ ಕೊಪ್ಪಳ ಎಂಬ ಭಕ್ತರು ಕೂಡಲೇ ಮೈಕ್ ಹಿಡಿದು ಇದು ಮಠದ ಸಂಸ್ಕೃತಿಯಲ್ಲ. ಆ ರೀತಿ ವರ್ತಿಸುವುದು ಸರಿಯಲ್ಲ. ಮಠದ ಭಕ್ತರು ಗವಿಸಿದ್ದನಿಗೆ ಕಪ್ಪು ಚುಕ್ಕೆ ತಾರದಿರಲಿ ಎಂದು ಪದೇ ಪದೇ ಹೇಳಿ ಮನವಿ ಮಾಡಿದರು.
ಗವಿಸಿದ್ದೇಶ್ವರ ಮಹಾರಥೋತ್ಸವ ಸಾಗುವ ಕೆಲ ಗಂಟೆಯ ಸಮಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಹಾರಥೋತ್ಸವ ಸಾಗುವ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಜನಸಮೂಹ ಕೇಕೆ ಹಾಕಿತು. ಸಿದ್ದರಾಮಯ್ಯ ಅವರು ಧ್ವಜಾರೋಹಣದ ಸ್ಥಳಕ್ಕೆ ತೆರಳುತ್ತಿದ್ದಂತೆ ವ್ಯಕ್ತಿಯೋರ್ವ ಕಂಬಳಿ ಹಿಡಿದು ಬೀಸಲಾರಂಭಿಸಿದನು. ಇದನ್ನು ಕಂಡ ಕೆಲವರು ಕೇಕೆ ಹಾಕಿದರು.
ಇನ್ನು, ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ಗವಿಸಿದ್ದೇಶ್ವರ ಮಹಾರಥೋತ್ಸವ ವೇಳೆ ಭಾಷಣ ಆರಂಭಿಸಿದರು. ಗವಿಮಠದ ಜಾತ್ರೆ, ಗತ ವೈಭವ ಮಾತನಾಡುತ್ತಲೇ ಕೊನೆಗಳಿಗೆಯಲ್ಲಿ ಸಿದ್ದರಾಮಯ್ಯ ಅವರನ್ನು ನೋಡುತ್ತಲೇ ಈಗಎಲ್ಲವೂ ಹೌದ್ದ ಹುಲಿಯಾ ಎನ್ನುವ ಮಾತು ಕೇಳಿ ಬರುತ್ತಿವೆ.
ಶ್ರೀ ಗವಿ ಸಿದ್ದೇಶ್ವರ ಮಠ ಜಾತ್ರೆ
ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ, ದೇಶದಲ್ಲಿ ವಿಶೇಷವಾದ ಪಾತ್ರವನ್ನು ವಹಿಸುತ್ತದೆ. 15 ದಿನ ನೆಡೆಯುವ ಈ ಜಾತ್ರೆ ಉತ್ತರ ಕರ್ನಾಟಕ ಜನರಿಗೆ ಉತ್ಸವವಾಗಿ ಮುಂದುವರೆದುಕೊಂಡು ಬಂದಿದೆ. ದೇಶದ ಅನೇಕ ಮಠಗಳು ಅನ್ನ ದಾಸೋಹಕ್ಕೆ ಹೆಸರುವಾಸಿಯಾಗಿದೆ. ಆದರೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠ ಅನ್ನ ದಾಸೋಹ, ಅಕ್ಷರ ದಾಸೋಹ ಕೊಪ್ಪಳ ಕ್ಷೇತ್ರವು ಸಹ ಒಂದು.
ಗುಡದಯ್ಯ ಗವಿಸಿದ್ದನಾದದ್ದು…
ಕೊಪ್ಪಳದ ಗವಿಮಠ ಪುರಾತನ ಪರಂಪರೆ, ತತ್ವವನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿದೆ. ಅನ್ನ, ಅಕ್ಷರ, ಆರೋಗ್ಯ ಮುಂತಾದ ತ್ರಿವಿಧ ದಾಸೋಹಗಳು ಇಲ್ಲಿನ ಬುನಾದಿ. ಅದು ದೇವರ ಹೆಸರಿನಲ್ಲಿ ಜನಸಾಮಾನ್ಯನನ್ನು ತಲುಪಿದೆ.
ಮುಂದೊಂದು ದಿನ ನಂಬಿಕೆಯ ಜತೆ ಸ್ವಪ್ರಯತ್ನದಿಂದ ಬೆಳೆದು ಮುಂದೆ ಬಂದವರು ದೇವರಿಗೊಂದು ಕೃತಜ್ಞತೆ ಸಲ್ಲಿಸಲು ಸೇರುತ್ತಾರೆ. ಅಧ್ಯಾತ್ಮದ ಹೆಸರಿನ ವೇದಿಕೆ ಭಕ್ತರ ರೂಪದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ. ಮನಸ್ಸುಗಳನ್ನು ಒಂದಾಗಿಸುತ್ತದೆ. ವೀರಶೈವ ಸಿದ್ಧಾಂತದ ಮಠವಾದರೂ ಜಾತಿ, ಮತ ಬೇಧವಿಲ್ಲದೇ ಎಲ್ಲರನ್ನೂ ತನ್ನತ್ತ ಸೆಳೆದಿದೆ. ಎಲ್ಲರನ್ನೂ ಅಪ್ಪಿಕೊಂಡಿದೆ. ಜನರೂ ಅದನ್ನು ಒಪ್ಪಿಕೊಂಡಿದ್ದಾರೆ.
ಎಲ್ಲ ಕೈಗಳು ಸೇರಿ ರೊಟ್ಟಿ ತಟ್ಟಿವೆ, ಮಾದಲಿ ತಯಾರಿಸಿವೆ, ತರಕಾರಿ, ದವಸ ಧಾನ್ಯಗಳನ್ನು ಬೆಳೆದು ಗವಿಸಿದ್ದೇಶ್ವರನ ಹೆಸರಿಗೆ ಅರ್ಪಿಸಿ ಮಹಾದಾಸೋಹದ ಮೂಲಕ ಹಸಿದ ಹೊಟ್ಟೆಗಳಿಗೆ ಉಣಿಸುತ್ತಿವೆ. ಇಂಥ ಸಹಸ್ರ ಕೈಗಳು ಸೇರಿ ಈ ಮಹಾಜಾತ್ರೆಯನ್ನು ನಡೆಸುತ್ತಿವೆ ಎನ್ನುತ್ತಾರೆ ಮಠದ ಒಡನಾಡಿಗಳು.
ಕಾಲ ಬದಲಾಗಲಿ. ನಂಬಿಕೆ, ಭಕ್ತಿ ಬದಲಾಗಿಲ್ಲ. ಎಲ್ಲವೂ ಆಧುನಿಕ ವ್ಯವಸ್ಥೆಯ ತೆಕ್ಕೆಯೊಳಗೆ ಸೇರಿಕೊಳ್ಳಲು ಹವಣಿಸುತ್ತಿವೆ. ಆದರೆ, ಪರಂಪರೆ, ಸಂಪ್ರದಾಯ ತತ್ವಗಳು ಅಲ್ಲ. ಅವು ಸದಾ ಸ್ಥಿರ. ಮುಂದೆಯೂ ಹೀಗೇ ಇರುತ್ತವೆ ಎನ್ನುತ್ತಾರೆ ಭಕ್ತರು. ಮಠ ಎಲ್ಲರೊಳ ಗೊಂದಾಗಿದೆ. ಜನರೆಲ್ಲರೂ ಮಠದ ಜತೆ ಬೆರೆತಿದ್ದಾರೆ. ಇದು ವಿದಿತ ಮಹಾ ಕೊಪಣಪುರದ ವಿಶೇಷ.
ಗವಿಸಿದ್ದನ ಗದ್ದುಗೆಯಿಂದ…
ಶಾಲಿವಾಹನ ಶಕ 1008ರಲ್ಲಿ ರುದ್ರಮುನಿ ಶಿವಯೋಗಿ ಅವರಿಂದ ಸಂಸ್ಥಾನ ಗವಿಮಠ ಸ್ಥಾಪನೆಯಾಯಿತು. ಇದುವರೆಗೆ 18 ಪೀಠಾಧಿಪತಿಗಳನ್ನು ಕಂಡಿದೆ. 11ನೆಯ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಕಾಯಕ ತತ್ವ, ಪೂಜೆ, ಅನುಷ್ಠಾನ ಇಂಥ ಸಾಧನೆಗಳಿಂದ ಪ್ರಸಿದ್ಧರಾದರು. ಲಿಂಗಕ್ಕೆ ಬೆಳಗಿದ ಬೆಳಕಿನಲ್ಲೇ ಲೀನವಾದರು. ಹೀಗೆ ಸಜೀವ ಸಮಾಧಿ ಹೊಂದಿದ ಗವಿಸಿದ್ದೇಶ್ವರರ ಗದ್ದುಗೆ ಮಠದ ಹೃದಯ.
ಕೊಪ್ಪಳ ಸಮೀಪದ ಮಂಗಳಾಪುರ ಗ್ರಾಮ ಗವಿಸಿದ್ದೇಶ್ವರರ ಹುಟ್ಟೂರು. ಅಲ್ಲಿನ ಹಿರೇಮಠದ ಗುರುಲಿಂಗಮ್ಮ ಮಹಾದೇವಯ್ಯ ದಂಪತಿಯ ಪುತ್ರ. ಗುಡದಯ್ಯ ಮೂಲ ಹೆಸರು. ಕೊಪ್ಪಳ ನಗರದ ಹೊರವಲಯದಲ್ಲಿರುವ ಮಳೆಮಲ್ಲೇಶ್ವರ (ಮಳಲಮಲ್ಲೇಶ್ವರ) ಬೆಟ್ಟದಲ್ಲಿ ಗುಡದಯ್ಯ ಸದಾ ಧ್ಯಾನಾಸಕ್ತರಾಗಿರುತ್ತಿದ್ದರು.
ಅದೇ ಗುಡ್ಡದಲ್ಲಿ ಒಮ್ಮೆ ಮಾಲೀಗೌಡರ ಹಸು ಮರಣ ಹೊಂದಿತು. ಗೌಡರ ದುಃಖ ಅರಿತ ಗುಡದಯ್ಯ ತಮ್ಮ ಪವಾಡ ಶಕ್ತಿಯಿಂದ ಹಸುವನ್ನು ಬದುಕಿಸಿದರಂತೆ. ಈ ಪವಾಡವನ್ನು ಅರಿತ ಮಾಲಿಗೌಡರು ಗುಡದಯ್ಯನನ್ನು ತಮ್ಮ ಮನೆಗೆ ಕರೆತಂದರು. ಭಕ್ತರ ಕಷ್ಟ ಕಾರ್ಪಣ್ಯಗಳಿಗೆ ಗುಡದಯ್ಯ ಸ್ಪಂದಿಸುತ್ತಿದ್ದದ್ದು, ಪವಾಡ ತೋರುತ್ತಿದ್ದದ್ದು ನಡೆಯಿತು. ಮಾಲಿಗೌಡರ ಮನೆಯೇ ಮಠವಾಯಿತು. ಮುಂದೆ ಮಾಲಿಗೌಡರು ಗುಡದಯ್ಯರನ್ನು ಗವಿಮಠದ ಹತ್ತನೇ ಪೀಠಾಧಿಪತಿ ಚೆನ್ನಬಸವ ಸ್ವಾಮೀಜಿ ಅವರಿಗೆ ತಂದು ಒಪ್ಪಿಸಿದರು. ಗೌಡರ ಮನೆ ತೊರೆದು ಬರುವಾಗ ಗುಡದಯ್ಯ ತನ್ನ ಜಡೆಯನ್ನು ಮಾಲಿಗೌಡರ ಪತ್ನಿಗೆ ಅರ್ಪಿಸಿದರು. ಮುಂದೆ ಆ ಮನೆತನಕ್ಕೆ ಜಡೇಗೌಡರ ಮನೆತನ ಎಂಬ ಹೆಸರು ಬಂದಿತು.
ಮುಂದೆ ಚೆನ್ನಬಸವ ಸ್ವಾಮೀಜಿಯಿಂದ ಸಂಸ್ಕಾರ ಪಡೆದು ಗವಿಸಿದ್ದೇಶ್ವರ ಸ್ವಾಮೀಜಿ ಎಂದು ನಾಮಕರಣಗೊಂಡು ಮಠದ ಅಧಿಕಾರ ಪಡೆದರು. ಚೆನ್ನಬಸವ ಸ್ವಾಮೀಜಿ ಎಲ್ಲ ಜವಾಬ್ದಾರಿಯನ್ನು ಗವಿಸಿದ್ದೇಶ್ವರರಿಗೆ ಒಪ್ಪಿಸಿ ತಾವು ಲಿಂಗದೊಳಗೆ ಬೆರೆಯುವುದಾಗಿ ಹೇಳಿ ತಮ್ಮ ಸಮಾಧಿ ನಿರ್ಮಿಸಲು ತೊಡಗಿದರು. ಆದರೆ, ಗುರುವನ್ನು ಅಗಲಲು ಒಪ್ಪದ ಗವಿಸಿದ್ದೇಶ್ವರ ಗುರುಗಳಿಗಾಗಿ ನಿರ್ಮಾಣಗೊಳ್ಳುತ್ತಿದ್ದ ಸಮಾಧಿಯ ಮೇಲೆಯೇ ಜಪ ಮಾಡುತ್ತಲೇ ಕ್ರಿಶ 1816ರಲ್ಲಿ ಲಿಂಗದೊಳಗೆ ಲೀನವಾದರು. ಚೆನ್ನಬಸವ ಸ್ವಾಮೀಜಿಯೇ ಗವಿಸಿದ್ದೇಶ್ವರರ ಸಮಾಧಿ ಕಾರ್ಯ ಮಾಡಬೇಕಾಯಿತು. ಗವಿಸಿದ್ದೇಶ್ವರರು ಕಾಲವಾದ, ಗುರುಗಳಿಂದಲೇ ಗೌರವಿಸಲ್ಪಟ್ಟ ದಿನವನ್ನೇ ಗವಿಸಿದ್ದೇಶ್ವರ ಜಾತ್ರೆಯಾಗಿ ಆಚರಿಸಲಾಗುತ್ತಿದೆ.
ಮುಂದೊಂದು ದಿನ ನಂಬಿಕೆಯ ಜತೆ ಸ್ವಪ್ರಯತ್ನದಿಂದ ಬೆಳೆದು ಮುಂದೆ ಬಂದವರು ದೇವರಿಗೊಂದು ಕೃತಜ್ಞತೆ ಸಲ್ಲಿಸಲು ಸೇರುತ್ತಾರೆ. ಅಧ್ಯಾತ್ಮದ ಹೆಸರಿನ ವೇದಿಕೆ ಭಕ್ತರ ರೂಪದಲ್ಲಿ ಮನುಷ್ಯ ಸಂಬಂಧಗಳನ್ನು ಬೆಸೆಯುತ್ತದೆ. ಮನಸ್ಸುಗಳನ್ನು ಒಂದಾಗಿಸುತ್ತದೆ. ವೀರಶೈವ ಸಿದ್ಧಾಂತದ ಮಠವಾದರೂ ಜಾತಿ, ಮತ ಬೇಧವಿಲ್ಲದೇ ಎಲ್ಲರನ್ನೂ ತನ್ನತ್ತ ಸೆಳೆದಿದೆ.
ಎಲ್ಲ ಕೈಗಳು ಸೇರಿ ರೊಟ್ಟಿ ತಟ್ಟಿವೆ. ಮಾದಲಿ ತಯಾರಿಸಿವೆ. ತರಕಾರಿ, ದವಸ ಧಾನ್ಯಗಳನ್ನು ಬೆಳೆದು ಗವಿಸಿದ್ದೇಶ್ವರನ ಹೆಸರಿಗೆ ಅರ್ಪಿಸಿ ಮಹಾದಾಸೋಹದ ಮೂಲಕ ಹಸಿದ ಹೊಟ್ಟೆಗಳಿಗೆ ಉಣಿಸುತ್ತಿವೆ. ಇಂಥ ಸಹಸ್ರ ಕೈಗಳು ಸೇರಿ ಈ ಮಹಾ ಜಾತ್ರೆಯನ್ನು ನಡೆಸುತ್ತಾರೆ.
ಒಮ್ಮೆ ಭೇಟಿಯಾಗಿ ಅಜ್ಜನ ಆಶೀರ್ವಾದ ಪಡೆಯಿರಿ
ಸಂಸ್ಥಾನದ ಶ್ರೀ ಗವಿಮಠದ 16 ನೇ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀಶ್ರೀ ಮರಿಶಾಂತವೀರ ಶಿವಯೋಗಿಗಳು ತಪೋನಿಷ್ಠರು, ಆಯುರ್ವೇದ ಪಂಡಿತರು ಮತ್ತು ವಾಕ್ ಸಿದ್ಧಿಯನ್ನು ಪಡೆದಂತ ಮಹಾನ ತಪಸ್ವಿಗಳು, ಒರಗಾಲದ ಬವಣೆಯ ಈ ನಾಡ ಜನತೆಯ ಬದುಕನ್ನು ಉದ್ಧರಿಸಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅರಿತು 1951 ರಲ್ಲಿ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯನ್ನು ಆರಂಭಿಸಿದರು. 1963 ರಲ್ಲಿ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ಸ್ಥಾಪಿಸಿ ಶ್ರೀಗವಿಮಠದ ಸಮಸ್ತ ಆಸ್ತಿಯನ್ನು ಈ ಸಂಸ್ಥೆಗೆ ಧಾರೆ ಎರೆದು ತಮ್ಮ ಕೊನೆಯ ಕ್ಷಣದ ವರೆಗೂ ಸಮಸ್ತ ಭಕ್ತ ಕೋಟಿಯ ಉದ್ದಾರಕ್ಕಾಗಿ ತಮ್ಮನ್ನು ತಾವು ಶ್ರೀಗಂಧದಂತೆ ಸವೆಸಿಕೊಂಡ ಮಹಿಮಾಶೀಲರು ಇವರು.
ಇಂದಿನ 28 ನೇಯ ಪೀಠಾಧೀಶ್ವರರಾದ ಶ್ರೀಗವಿಸಿದ್ದೇಶ್ವರ ಶಿವಯೋಗಿಗಳು ವಾಗ್ಮಿಗಳು, ಪರಿಸರ ಪ್ರೇಮಿಗಳು, ವಿದ್ಯಾವಂತರು, ಹಾಗೂ ವಿದ್ಯಾ ಪ್ರೇಮಿಗಳು ಆಗಿದ್ದಾರೆ. ಪೂರ್ವದ ಶಿವಯೋಗಿಗಳು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಾ ಅವರ ಸತ್ಯ ಸಂಕಲ್ಪವನ್ನು ನೆರವೇರಿಸಿತ್ತಾ ಸಾಗಿದ್ದಾರೆ. ಇದು ನಮ್ಮ ಕೊಪ್ಪಳ ನಗರದ ಸಮಸ್ತ ಜನರ ಪುಣ್ಯವಾಗಿದೆ ಮತ್ತು ಭಾಗ್ಯವಾಗಿದೆ.
ಒಮ್ಮೆ ನೋಡಬೇಕು ಈ ವೈಭವವನ್ನು ಜನಪ್ರಿಯವಾದ ಗಾದೆಯಂತೆ ಕಣ್ಣೀರಾಗ ಕನಕಗಿರಿ ನೋಡಬೇಕು, ಕಾಲು ಗಟ್ಟಿ ಇದ್ದಾಗ ಹಂಪೆಯನ್ನು ನೋಡಬೇಕು. ಹಾಗೆ ಮನುಷ್ಯ ಜನ್ಮ ಇದ್ದಾಗ ಒಮ್ಮೆ ಕೊಪ್ಪಳದ ಜಾತ್ರೆಯನ್ನು ವೀಕ್ಷಿಸಬೇಕು.
(ವರದಿ: ಮುರುಳೀಧರ್ ನಾಡಿಗೇರ್, ಕೊಪ್ಪಳ)
Get in Touch With Us info@kalpa.news Whatsapp: 9481252093
Discussion about this post