ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಬಹುಶಿಸ್ತೀಯ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನಿಸಲು ಅವಕಾಶ ನೀಡುವುದರಿಂದ ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಜ್ಞಾನಮಟ್ಟ ವೃದ್ಧಿಯಾಗಲಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಕುವೆಂಪು ವಿವಿ ಜ್ಞಾನ ಸಹ್ಯಾದ್ರಿ ಆವರಣದಲ್ಲಿರುವ ವಿಶ್ವವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜಿನ 2022-23ನೇ ಸಾಲಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ರಾಷ್ಟ್ರೀಯ ಸೇವಾ ಯೋಜನೆ, ಯುವರೆಡ್ ಕ್ರಾಸ್ ಘಟಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನೆಯನ್ನು ವಿವಿಯ ಬಸವ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೆರವೇರಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜೊತೆಗೆ ಪ್ರಸ್ತುತ ಇರುವ ಉನ್ನತ ಶಿಕ್ಷಣದ ನೊಂದಣಿ ಪ್ರಮಾಣವನ್ನು 50ಕ್ಕೆ ಏರಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಹುಶಿಸ್ತೀಯ ಅಧ್ಯಯನದತ್ತ ಮುಖಮಾಡಿ ಹೆಚ್ಚು ಜ್ಞಾನಗಳಿಸುವ ಅವಕಾಶ ಸದುಪಯೋಗಪಡಿಸಿಕೊಂಡು ಉತ್ತಮ ಜ್ಞಾನಕೌಶಲ್ಯಗಳೊಂದಿಗೆ ದೇಶದ ಬೆಳವಣಿಗೆಗೆ ತಮ್ಮಕೊಡುಗೆ ನೀಡಬೇಕು ಎಂದರು.
ವಿಶ್ವವಿದ್ಯಾಲಯ ಆವರಣದಲ್ಲಿರುವ ವಿಶ್ವವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜನ್ನು ವಿವಿಯ ಘಟಕ ಕಾಲೇಜಾಗಿ ಪರಿಗಣಿಸಲು ನಿರ್ಧರಿಸಲಾಗಿದ್ದು, ಸದ್ಯದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಎಂ. ಧರ್ಮೇಗೌಡ, ಸೇರಿದಂತೆ ಕಾಲೇಜಿನ ಎಲ್ಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post