ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಭ್ರಷ್ಟಾಚಾರವು ಅಭಿವೃದ್ಧಿಗೆ ಮಾರಕವಾದ ಬೆಳವಣಿಗೆಯಾಗಿದ್ದು, ಪ್ರತಿಯೊಬ್ಬ ಜಾಗೃತ ನಾಗರೀಕನು ಇದರ ವಿರುದ್ಧ ಹೋರಾಟ ನಡೆಸಿದಲ್ಲಿ ಸಂಪೂರ್ಣ ಸ್ವಸ್ಥ, ಅಭಿವೃದ್ಧಿಯುತ ಸಮಾಜವನ್ನು ನಿರ್ಮಿಸಬಹುದು ಎಂದು ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಲೋಕಾಯುಕ್ತದ ಶಿವಮೊಗ್ಗ ವಿಭಾಗವು ಕುವೆಂಪು ವಿವಿಯ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಭ್ರಷ್ಠಾಚಾರ ವಿರುದ್ಧ ಜಾಗೃತಿ ಸಪ್ತಾಹ-2022ರ ಭಾಗವಾಗಿ ಅಭಿವೃದ್ಧಿ ಹೊಂದಿದ ರಾಷ್ಟçಕ್ಕಾಗಿ, ಭ್ರಷ್ಟಾಚಾರ ಮುಕ್ತ ಭಾರತ ಘೋಷಣೆಯಡಿ ಭ್ರಷ್ಟಾಚಾರ ವಿರುದ್ಧ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಎಲ್ಲ ಸಚಿವಾಲಯಗಳು, ಸಂಸ್ಥೆಗಳು, ಕಛೇರಿಗಳು ಸಹ ಭ್ರಷ್ಟಾಚಾರ ತಡೆ ವಿಚಾರದಲ್ಲಿ ಲೋಕಾಯುಕ್ತಕ್ಕೆ ಅಧೀನಕ್ಕೆ ಒಳಪಡಲಿದ್ದು, ಪ್ರತಿಯೊಬ್ಬ ನಾಗರೀಕನು ಭ್ರಷ್ಟಾಚಾರ ತಡೆಗೆ ಕೈಜೋಡಿಸಬೇಕು. ವಿಶೇಷವಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಲಂಚಕ್ಕೆ ಬೇಡಿಕೆಯಿಡುವವರ ಹಾಗೂ ಭ್ರಷ್ಟಾಚಾರಕ್ಕೆ ಪ್ರಯತ್ನಿಸುವವರ ವಿರುದ್ಧ ಹೋರಾಟ ಆರಂಭಿಸಬೇಕು. ಭ್ರಷ್ಠಾಚಾರವನ್ನು ತೊಡೆದುಹಾಕಿದಲ್ಲಿ ಅಭಿವೃದ್ಧಿಯುತ ಭಾರತ ನಿರ್ಮಾಣ ಸಾಧ್ಯ ಎಂದು ಕರೆಕೊಟ್ಟರು.
ಇಂದಿನ ವಿದ್ಯಾರ್ಥಿಗಳು ಭವಿಷ್ಯದ ಯುವಪ್ರಜೆಗಳಾಗಿರುತ್ತಾರೆ. ನಿಷ್ಠೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದು ದೇಶಪ್ರೇಮವಾಗಿರುತ್ತದೆ. ಲಂಚ ಕೊಡುವುದು ಮತ್ತು ಪಡೆದುಕೊಳ್ಳುವುದು ಎರಡೂ ಸಹ ಅಪರಾಧವಾಗಿದ್ದು, ಪ್ರಾಮಾಣಿಕವಾಗಿ ಕೆಲಸ ಕಾರ್ಯಗಳನ್ನು, ಮಾಡುವುದು ಮತ್ತು ವ್ಯವಸ್ಥೆಯಲ್ಲಿ ಸೇವೆಗಳನ್ನು ಪಡೆಯುವ, ಕೊಡುವ ಮೂಲಕ ನೌಕರರು, ಆಧಿಕಾರಿಗಳು ದೇಶಪ್ರೇಮ ಮೆರೆಯಬೇಕು ಎಂದು ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ತಿಳಿಸಿದರು.
ಯುವಜನಾಂಗವು ದೇಶವನ್ನು ಮುನ್ನಡೆಸಲಿದ್ದು, ಲಂಚಮುಕ್ತ ವ್ಯವಸ್ಥೆ ನಿರ್ಮಾಣಕ್ಕೆ ಅವರೆಲ್ಲರೂ ಈಗಲೇ ಪಣ ತೊಡಬೇಕು. ಸರ್ಕಾರಿ ವ್ಯವಸ್ಥೆಯಲ್ಲಿ ಸೇವೆಗಳು ವಿಳಂಬವಾಗುವುದನ್ನು ತಪ್ಪಿಸಲು ಅಲ್ಲಿನ ನಿಯಮಗಳ ಕುರಿತು ಅರಿವು ಹೊಂದಬೇಕು. ವ್ಯವಸ್ಥೆಯಲ್ಲಿ ಪಾರದರ್ಶಕವಾಗಿ ಪ್ರಕ್ರಿಯೆಗಳು ನಡೆಯಲು ಸಹಕರಿಸಿ, ಭ್ರಷ್ಠಾಚಾರದ ಸುಳಿವು ಸುಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಂಚ ನೀಡುವುದಿಲ್ಲ ಹಾಗೂ ಪಡೆಯುವುದಿಲ್ಲ ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿವಿಯ ವಿವಿಧ ವಿಭಾಗಗಳ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post