ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಅಂತರ್ಜಲ ಮಟ್ಟ ಕುಂದುವಿಕೆ, ಪ್ರವಾಹ, ಭೂಕುಸಿತ, ಭೂಕಂಪನಗಳಂತಹ ಪ್ರಾಕೃತಿಕ ವಿಕೋಪಗಳು ಸಾಮಾನ್ಯವೆಂಬಂತೆ ಆಗುತ್ತಿರುವ ದಿನಮಾನಗಳಲ್ಲಿ ಭೂವಿಜ್ಞಾನಿಗಳ ಜ್ಞಾನದ ಸದ್ಭಳಕೆ ಮತ್ತು ಸಂಶೋಧನೆ ಇಂದಿನ ತುರ್ತು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯವು ವಯೋನಿವೃತ್ತಿ ಹೊಂದಿದ ಭೂವಿಜ್ಞಾನ ವಿಭಾಗದ ಪ್ರೊ.ಜಿ. ಚಂದ್ರಕಾಂತ್ ಅವರಿಗೆ ಪ್ರೊ.ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಗೌರವಾರ್ಪಣೆ ಹಾಗೂ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಿದ್ದು, ಪ್ರತೀವರ್ಷ ಒಂದಿಲ್ಲೊಂದು ಅವಘಡಗಳಿಗೆ ನಾವು ಸಾಕ್ಷಿಯಾಗುತ್ತಿರುವುದು ದುರಾದೃಷ್ಟಕರ ಎಂದರು.
ಕಳೆದ ವರ್ಷ ರಾಜ್ಯದಾದ್ಯಂತ ಸುರಿದ ಭಾರೀ ಮಳೆಯ ಪರಿಣಾಮ ಪ್ರವಾವ ಪರಿಸ್ಥಿತಿ ಸೃಷಿಯಾಗಿತ್ತು. ಮಲೆನಾಡು ಭಾಗಗಳಲ್ಲಿಯೂ ಪ್ರವಾಹ ಉಂಟಾದದ್ದು, ಊರುಗಳು ಮುಳುಗಡೆಯಾದದ್ದು ಭಾರೀ ಬಿಕ್ಕಟ್ಟು ಸೃಷ್ಟಿಸಿತ್ತು. ಮಡಿಕೇರಿ ಸುತ್ತುಮುತ್ತ ಗುಡ್ಡಗಳ ಕುಸಿತವು ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತು. ಇಂತಹ ಪರಿಸ್ಥಿತಿಗಳು ಮರುಕಳಿಸದಂತೆ ಆಸ್ಥೆ ವಹಿಸಲು ಭೂ ವಿಜ್ಞಾನ ಜ್ಞಾನದ ಬಳಕೆ ಅಗತ್ಯವಾಗಿದೆ. ಅಂತಹ ವಿಷಯಗಳ ಕುರಿತು ಆಳವಾದ ಜ್ಞಾನ, ಅಧ್ಯಯನ ಮತ್ತು ಸಂಶೋಧನೆ ಕೈಗೊಂಡವರು ಡಾ.ಜಿ. ಚಂದ್ರಕಾಂತ್. ಅವರ ಪಾಂಡಿತ್ಯದ ಸದ್ಭಳಕೆಯನ್ನು ವಿಶ್ವವಿದ್ಯಾಲಯ ಬಳಸಿಕೊಳ್ಳಲಿದೆ ಎಂದರು.
ಭೂ ವಿಜ್ಞಾನಿಗಳ ಕೊರತೆ
ಭೂವಿಜ್ಞಾನ ವಿದ್ಯಾರ್ಥಿಗಳನ್ನು, ತಜ್ಞರನ್ನು ರೂಪುಗೊಳಿಸುತ್ತಿರುವ ಕರ್ನಾಟಕದ ಮತ್ತೊಂದು ಸಂಸ್ಥೆ ಕುವೆಂಪು ವಿಶ್ವವಿದ್ಯಾಲಯ. ಭೂ ವಿಜ್ಞಾನಿಗಳು ಕಡ್ಡಿ ಹಿಡಿದು ನೀರಿನ ಬಗ್ಗೆ ಹೇಳುವುದಿಲ್ಲ. ಅವರು ಭೂಮಿ ಸ್ಕ್ಯಾನ್ ಮಾಡಿ ನೋಡಿ ಹೇಳುತ್ತಾರೆ. ಹಾಗಾಗಿ ಶೇ.95ರಷ್ಟು ಯಶಸ್ವಿಯಾಗುತ್ತಾರೆ. ಶೇ.5ರಷ್ಟು ಮಾತ್ರ ವಿಫಲವಾಗುತ್ತದೆ. ರಾಜ್ಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಇದೆ. ಆದರೆ ಭೂ ವಿಜ್ಞಾನಿಗಳ ಕೊರತೆ ಇದೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಭೂ ವಿಜ್ಞಾನ ಅಧ್ಯಯನಕ್ಕೆ ಅವಕಾಶ ಇದೆ. ಆದರೆ ಬರುವವರೆಲ್ಲ ಕೇರಳಿಗರೇ ಆಗಿದ್ದಾರೆ. 80 ಸೀಟ್‌ನಲ್ಲಿ 75 ಅವರೇ ಇದ್ದಾರೆ. ಸಂಪೂರ್ಣ ಕನ್ನಡಿಗ ಮತ್ತು ಗ್ರಾಮೀಣ ಭಾಗದ ಭೂ ವಿಜ್ಞಾನಿಗಳನ್ನು ರೂಪುಸುತ್ತಿರುವ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಕುವೆಂಪು ವಿಶ್ವವಿದ್ಯಾಲಯ ಕೂಡ ಒಂದು. ಇದರ ಶ್ರೇಯ ಪ್ರೊ. ಚಂದ್ರಕಾಂತ ಅವರಂತಹ ಪ್ರಾಧ್ಯಾಪಕರುಗಳಿಗೆ ಸಲ್ಲಬೇಕು ಎಂದು ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್ ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಯ ಕುಲಸಚಿವ ಪ್ರೊ.ಎಸ್.ಎಸ್. ಪಾಟೀಲ್, ಪ್ರೊ.ಪಿ. ಕಣ್ಣನ್, ವಿಶ್ರಾಂತ ಪ್ರಾಧ್ಯಾಪಕ ಡಾ. ಅನಂತಮೂರ್ತಿ, ಡಾ. ಅಶ್ಫಕ್ ಅಹಮದ್ ಮಾತನಾಡಿದರು. ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post