ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯು ವಿಜ್ಞಾನ ಕೇಂದ್ರ ಅಥವಾ ವಿಜ್ಞಾನ ಪ್ರಯೋಗಾಲಯವನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಲಭ್ಯ ಸಂಶೋಧನಾ ಸಾಮರ್ಥ್ಯ ಪರಿಶಿಲಿಸಲು ಡಾ.ಎ.ಕೆ. ಸಿಂಗ್ ನೇತೃತ್ವದ ಉನ್ನತ ನಿಯೋಗ ಬುಧವಾರ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿತು.
ವಿಷಮ ಪರಿಸ್ಥಿತಿಯಲ್ಲಿ ಮತ್ತು ಅಷ್ಟೇನು ಅನುಕೂಲಕರವಲ್ಲದ ವಾತಾವರಣದಲ್ಲಿ ಭಾರತದ ಗಡಿಗಳನ್ನು ಕಾಯುತ್ತಿರುವ ಯೋಧರಿಗೆ ಸಹಾಯಕವಾಗುವಂತಹ ರಕ್ಷಣಾ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ದೇಶದ ವಿವಿದೆಡೆ ಡಿಆರ್‌ಡಿಒ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಪಶ್ಚಿಮ ಘಟ್ಟಗಳಲ್ಲಿ ಯಥೇಚ್ಚವಾಗಿ ಲಭ್ಯವಿರುವ ಔಷಧೀಯ ಸಸ್ಯಗಳ ಮುಲಕ ರಕ್ಷಣಾ ಪಡೆಗಳಿಗೆ ಪೂರಕವಾಗುವಂತಹ ಆಹಾರ ಪದಾರ್ಥಗಳು, ಔಷಧಿಗಳು ಮತ್ತಿತರ ವಸ್ತುಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯ ಒಂದನ್ನು ಸ್ಥಾಪಿಸಲು ಚಿಂತಿಸಲಾಗುತ್ತಿದೆ.
ಮಲೆನಾಡು ಭಾಗ ಔಷಧೀಯ ಸಸ್ಯಗಳು ಅತ್ಯಂತ ವಿರಳವಾದ ಸಸ್ಯ ಪ್ರಭೇದಗಳು ಮತ್ತು ಜೀವ ವೈವಿಧ್ಯತೆಯನ್ನು ಹೊಂದಿದ್ದು, ಈ ಅಗಾದ ಸಂಪನ್ಮೂಲವನ್ನು ದೇಶದ ಯೋಧರ ಒಳಿತಿಗಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಡಿಆರ್‌ಡಿಒ ಪ್ರಯೋಗಾಲಯವನ್ನು ಶಿವಮೊಗ್ಗದಲ್ಲಿ ತರಲು ಉದ್ದೇಶಿಸಲಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಇದರ ಸಾಧಕ ಭಾದಕಗಳನ್ನು ಮನವರಿಕೆ ಮಾಡಿಕೊಡಲಾಗಿದ್ದು, ಧನಾತ್ಮಕ ಸ್ಪಂದನೆ ದೊರೆತಿದೆ. ಈ ಹಿನ್ನೆಲೆಯಲ್ಲಿ ಡಿಆರ್‌ಡಿಒ ನಿಯೋಗದ ಭೇಟಿ ಮಹತ್ವದ್ದಾಗಿದೆ.
-ಬಿ.ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ
ಇದರ ಪ್ರಾರಂಭಿಕ ಪ್ರಯತ್ನವಾಗಿ ಇಗಾಗಲೇ ಡಿಆರ್‌ಡಿಒ ದ ಒಂದು ನಿಯೋಗ ಇತ್ತೀಚಿಗೆ ಭೇಟಿ ನೀಡಿದ್ದು, ಡಾ.ಎ.ಕೆ. ಸಿಂಗ್, ಡಾ.ಮಣಿಮೋಳಿ ಥಿಯೊಡರ್, ಕೆ.ಕೆ. ಪಾಠಕ್. ದೇವಕಾಂತ ಪಹಾಡ್ ಸಿಂಗ್ ಅವರನ್ನೊಳಗೊಂಡ ನಿಯೋಗ ಸಂಶೋಧನಾ ಸೌಲಭ್ಯಗಳ ಪರಿಶೀಲನೆಗಾಗಿ ಎರಡನೇ ಬಾರಿ ಭೇಟಿ ನೀಡಿದೆ.
ಈ ಸಂದರ್ಭದಲ್ಲಿ ವಿಜ್ಞಾನ ನಿಕಾಯದ ಪ್ರಾಧ್ಯಾಪಕರುಗಳು, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಿಯೋಗ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಸಂಶೋಧನಾ ಚಟುವಟಿಕೆಗಳ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿತು. ವಿಶ್ವವಿದ್ಯಾಲಯದ ಪ್ರಸ್ಥಾವನೆಯನ್ನು ಪರಿಶೀಲಿಸಿದ ನಿಯೋಗ ಸಕಾರಾತ್ಮಕ ಪ್ರತಿಕ್ರಿಯೆ ನೀಡಿತು. ಬಳಿಕ ವಿವಿಧ ಸಂಶೋಧನಾ ಪ್ರಯೋಗಾಲಯಗಳಿಗೆ ಭೇಟಿ ನೀಡಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post