ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಇತ್ತೀಚೆಗೆ ಕರ್ನಾಟಕ ಸರ್ಕಾರ #GovtofKarnataka ವಿವಿಧ ವಿಶ್ವವಿದ್ಯಾಲಯಗಳಿಗೆ ಪಿಂಚಣಿ ಅನುದಾನವನ್ನು ಮಂಜೂರು ಮಾಡಿದ್ದು, ಈ ಬಗ್ಗೆ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಲೋಕನಾಥ್ ಅವರು ನೀಡಿರುವ ಪ್ರತಿಕ್ರಿಯೆಗೆ #KuvempuUniversity ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಕೆಲ ವರ್ಷಗಳಿಂದ ಪಿಂಚಣಿ ಅನುದಾನ ಬಿಡುಗಡೆಯಾಗದೆ ನಿವೃತ್ತ ನೌಕಕರ ಸಂಕಷ್ಟಕ್ಕೆ ಕಾರಣವಾಗಿದ್ದ ವಿಚಾರಕ್ಕೆ ತಾತ್ಕಾಲಿಕವಾಗಿ ಮುಕ್ತಿ ದೊರಕಿದ್ದು ಸರ್ಕಾರ ಆರು ವಿಶ್ವವಿದ್ಯಾಲಯಗಳಿಗೆ ವಿಶ್ರಾಂತಿ ವೇತನ ಅನುದಾನ ಬಿಡುಗಡೆ ಮಾಡಿದೆ. ಮೈಸೂರು ವಿವಿ, ಕರ್ನಾಟಕ ವಿವಿ, ಬೆಂಗಳೂರು, ಗುಲ್ಬರ್ಗಾ, ಮಂಗಳೂರು ಮತ್ತು ಕುವೆಂಪು ವಿವಿಗಳಿಗೆ ಅನುದಾನ ಮಂಜೂರಾಗಿದೆ.
ಈ ಕುರಿತು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರೊ. ಲೋಕನಾಥ್, ಮೈಸೂರು ವಿವಿಗೆ ಮಂಜೂರಾಗಿರುವ 25 ಕೋಟಿ ಅನುದಾನ ಏನೂ ಸಾಲದು. ಇನ್ನೂ ಸುಮಾರು 82 ಕೋಟಿ ರೂ. ಆರ್ಥಿಕ ಹೊರೆ ಮುಂದುವರೆದಿದೆ. ಅನುದಾನಕ್ಕಾಗಿ #MysoreUniversity ಮೈಸೂರು ವಿವಿ, ಕರ್ನಾಟಕ ವಿವಿ ಬಹಳಷ್ಟು ಶ್ರಮವಹಿಸಿದ್ದವು. ಆದರೆ ಕುವೆಂಪು ವಿವಿ, ಗುಲ್ಬರ್ಗಾ ಮತ್ತು ಮಂಗಳೂರು ವಿವಿಗಳಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಅವುಗಳಿಗೆ ಅಷ್ಟು ಹಣ ಬೇಕಾಗಿರಲಿಲ್ಲ. ಈ ಮೂರು ವಿವಿಗಳಿಗೆ ಹೆಚ್ಚಿನ ಲಾಭವಾಗಿದೆ ಎಂದು ಹೇಳಿಕೆ ನೀಡಿರುವುದು ವರದಿಯಾಗಿದೆ.
ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ರಾಜ್ಯದ ಈ ಆರು ವಿಶ್ವವಿದ್ಯಾಲಯಗಳು ಆರ್ಥಿಕ ಹೊರೆಯಲ್ಲಿದ್ದು, ಸರ್ಕಾರ ಅನುದಾನ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಕುವೆಂಪು ವಿವಿಯಲ್ಲಿ ಸುಮಾರು 300ಕ್ಕೂ ಹೆಚ್ಚು ಪಿಂಚಣಿದಾರರರಿದ್ದು, ಕಳೆದ ಐದು ವರ್ಷಗಳಲ್ಲಿ ನಿವೃತ್ತರಾದ ನೌಕರರಿಗೆ ಇದುವರೆಗೂ ಪಿಂಚಣಿ ಕೊಡಲು ಸಾಧ್ಯವಾಗಿರಲಿಲ್ಲ. ಕುವೆಂಪು ವಿವಿಯು ಪಿಂಚಣಿಗಾಗಿ ಹೆಚ್ಚುವರಿಯಾಗಿ ಸುಮಾರು 29 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಇದರಲ್ಲಿ ನಮಗೆ 15 ಕೋಟಿ ರೂ. ಬಿಡುಗಡೆಯಾಗಿದೆ. ಉಳಿದಂತೆ ಆರ್ಥಿಕ ಹೊರೆ ಹಾಗೆ ಮುಂದುವರೆದಿದೆ.
ಈ ಹಿನ್ನೆಲೆಯಲ್ಲಿ ಕುವೆಂಪು ವಿವಿಗೆ ಹೆಚ್ಚಿನ ಲಾಭವಾಗಿದೆ ಎಂಬ ಪ್ರೊ. ಲೋಕನಾಥ್ ಅವರ ಹೇಳಿಕೆ ಅಸಮಂಜಸವಾಗಿದ್ದು, ಇದಕ್ಕೆ ತಮ್ಮ ತೀವ್ರ ವಿರೋಧವಿದೆ. ಅವರು ತಮ್ಮ ವಿವಿಯ ಅಹವಾಲನ್ನು ಸರ್ಕಾರದ ಮುಂದೆ ಮಂಡಿಸುವುದರ ಬದಲು, ಇತರ ವಿವಿಗಳ ಬಗ್ಗೆ ಲಘುವಾದ ಹೇಳಿಕೆ ನೀಡುವುದು ಖಂಡನೀಯ. ನಿವೃತ್ತಿ ವೇತನ ಸೌಲಭ್ಯವನ್ನು ಸರ್ಕಾರವು ಎಚ್’ಆರ್’ಎಂಎಸ್ ವ್ಯವಸ್ಥೆಗೆ ಅಳವಡಿಸಿದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ ಎಂದು ಪ್ರೊ. ಶರತ್ ಅನಂತಮೂರ್ತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















