ಭದ್ರಾವತಿ: ಹಿಂದೂಗಳಲ್ಲಿ 33 ಲಕ್ಷ ಕೋಟಿ ದೇವತೆಗಳಿದ್ದಾರೆ ಎಂದು ಪುರಾಣಶಾಸ್ತ್ರಗಲ್ಲಿ ಉಲ್ಲೇಖಗಳಿದ್ದು, ಇದರಲ್ಲಿ ನೂರಾರು ದೇವರುಗಳನ್ನು ನಂಬಿಕೊಂಡು ಆರಾಧಿಸುತ್ತಿರುವವರ ಸಂಖ್ಯೆ ಕೋಟ್ಯಂತರವಿದೆ.
ದೇವರನ್ನು ನಂಬುವ, ಆರಾಧಿಸುವ ಆಸ್ತಿಕರಲ್ಲಿ ಸಂಪ್ರದಾಯವಾದಿಗಳು ತಮ್ಮ ಕುಟುಂಬದಲ್ಲಿ ನಡೆದುಕೊಂಡು ಬಂದಿರುವ ದೇವರನ್ನು ಪೂಜಿಸುವ ವರ್ಗ ಒಂದೆಡೆಯಾದರೆ, ತಮಗೆ ಇಷ್ಟವಾಗುವ ಅಥವಾ ತಾವು ನಂಬುವ ದೇವರಿಗೇ ಸಂಪೂರ್ಣವಾಗಿ ಶರಣಾಗುವ ವರ್ಗ ಇನ್ನೊಂದೆಡೆ.
ಇದು ಹಿಂದೂಗಳಲ್ಲಿನ ಧಾರ್ಮಿಕ ನಂಬಿಕೆಯ ವಿಚಾರವಾದರೆ, ಕ್ರಿಶ್ಚಿಯನ್ನರಲ್ಲಿ ಪ್ರಮುಖವಾಗಿ ಏಸುಕ್ರಿಸ್ತನೇ ಸರ್ವಶಕ್ತನಾಗಿದ್ದರೆ, ಮುಸಲ್ಮಾನರಿಗೆ ಅಲ್ಲಾಹುವೇ ಸರ್ವಾಂತರ್ಯಾಮಿ. ಸಾಮಾನ್ಯವಾಗಿ ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಧರ್ಮಕ್ಕೆ ಸೇರಿದ ಜನರು ಹಿಂದೂ ಧರ್ಮವನ್ನು ಗೌರವಿಸಬಹುದೇ ವಿನಾ ಅನುಸರಣೆ ಮಾಡುವವರ ಸಂಖ್ಯೆ ತೀರಾ ವಿರಳ.
ಇದು ಧಾರ್ಮಿಕ ಭಾವನೆಯ ವಿಚಾರವಾದ ಕಾರಣ ಇತರೆ ಧರ್ಮವನ್ನು ಅನುಸರಣೆ ಮಾಡಲು ಮುಂದಾಗುವುದಿಲ್ಲ. ಅದರಲ್ಲೂ ಹಿಂದೂ ಹಾಗೂ ಮುಸಲ್ಮಾನದಲ್ಲಿ ಧಾರ್ಮಿಕ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯ ಯಾವಾಗಲೂ ಕಿಡಿ ರೂಪದಲ್ಲೇ ಇರುವ ಕಾರಣ ಇಲ್ಲಿ ಅದರ ಅಂತರ ಇನ್ನೂ ಹೆಚ್ಚು. ಆದರೆ, ಇದೆಲ್ಲವನ್ನೂ ಮೀರಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಮುಸ್ಲಿಂ ಕುಟುಂಬ ತಮ್ಮ ಮನೆ ದೇವರನ್ನಾಗಿ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಆರಾಧಿಸುತ್ತಿದೆ.
ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿಗಳಾಗಿರುವ ಈ ಮುಸ್ಲಿಂ ಕುಟುಂಬವೊಂದು ಇದೇ ನಗರದಲ್ಲಿರುವ ಐತಿಹಾಸಿಕ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯನ್ನು ತಮ್ಮ ಮನೆ ದೇವರನ್ನಾಗಿ ಆರಾಧಿಸುತ್ತಾ, ನಂಬಿಕೊಂಡು ಬಂದಿದೆ.
ತಮ್ಮ ಹೆಸರು ಹಾಗೂ ವೈಯಕ್ತಿಕ ವಿವರಗಳನ್ನು ಹಂಚಿಕೊಳ್ಳಲು ಬಯಸದ ಇವರು, ಪ್ರತಿವರ್ಷ ಯುಗಾದಿಯಂದು ದೇವಾಲಯಕ್ಕೆ ಆಗಮಿಸಿ, ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಸಲ್ಲಿಸುತ್ತಾರೆ. ಅದೇ ರೀತಿಯಲ್ಲಿ ಈ ಯುಗಾದಿಯಂದೂ ಸಹ ಕುಟುಂಬ ಸಹಿತ ಆಗಮಿಸಿ ಶ್ರೀಸ್ವಾಮಿಗೆ ಶರಣಾದರು.
ಯುಗಾದಿ ಹಬ್ಬದಂದು ಮಾತ್ರವಲ್ಲ ಇವರ ಕುಟುಂಬದಲ್ಲಿ ಯಾವುದೇ ರೀತಿಯ ಶುಭ ಕಾರ್ಯಗಳಾದರೂ ದೇವಾಲಯಕ್ಕೆ ಆಗಮಿಸುತ್ತಾರೆ. ಅಲ್ಲದೇ, ಶುಭ ಕಾರ್ಯದ ಆಮಂತ್ರಣ ಪತ್ರಿಕೆಯನ್ನು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಸನ್ನಿಧಿಗೆ ಅರ್ಪಿಸಿ, ಮುಂದಿನ ಹೆಜ್ಜೆ ಇಡುತ್ತಾರೆ. ಮಾತ್ರವಲ್ಲ ಯಾವುದೇ ಶುಭ ಕಾರ್ಯಕ್ಕೂ ಮುನ್ನ ಶ್ರೀಸ್ವಾಮಿಯ ಆರ್ಶೀವಾದ ಪಡೆಯದೇ ಯಾವುದೇ ಕಾರ್ಯ ಮಾಡುವುದಿಲ್ಲ ಎನ್ನುವುದು ವಿಶೇಷ.
ಅರ್ಚಕರು ಏನನ್ನುತ್ತಾರೆ?
ನಾನು ನೋಡುತ್ತಿರುವಂತೆ ಈ ಮುಸ್ಲಿಂ ಕುಟುಂಬದ ಸದಸ್ಯರು ಹಲವು ವರ್ಷಗಳಿಂದ ದೇವಾಲಯಕ್ಕೆ ಆಗಮಿಸಿ, ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಆರಾಧಿಸುತ್ತಾರೆ. ಶ್ರೀಸ್ವಾಮಿಯನ್ನು ತಮ್ಮ ಮನೆ ದೇವರನ್ನಾಗಿ ಆರಾಧಿಸುತ್ತಾರೆ. ಯಾವುದೇ ಶುಭ ಕಾರ್ಯಕ್ಕೂ ಮುನ್ನ ಸ್ವಾಮಿಯ ಸನ್ನಿಧಿಗೆ ಆಗಮಿಸುತ್ತಾರೆ ಎನ್ನುವುದು ಸಂತಸದ ವಿಚಾರ. ಇವರ ಕುಟುಂಬಕ್ಕೆ ಸದಾ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಯ ಅನುಗ್ರಹ ಇರಲಿ ಎಂದು ನಾವೂ ಪ್ರಾರ್ಥಿಸುತ್ತೇವೆ.
-ಶ್ರೀರಂಗನಾಥ ಶರ್ಮಾ
ಪ್ರಧಾನ ಅರ್ಚಕರು
ಇನ್ನು, ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸುವುದು ಮಾತ್ರವಲ್ಲ ತರಕಾರಿ ಹಾಗೂ ಹಣ್ಣುಗಳನ್ನು ದೇವಾಲಯಕ್ಕೆ ಸಮರ್ಪಿಸುವ ಜೊತೆಯಲ್ಲಿ ಬಡವರಿಗೂ ಸಹ ದಾನ ಮಾನ ಮಾಡುವ ಮೂಲಕ ಈ ನೆಲೆದ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿದ್ದಾರೆ.
ಕೋಮುಗಲಭೆ, ಧರ್ಮದ್ವೇಷ ಸೇರಿದಂತೆ ಇವೇ ಮೊದಲಾದ ವಿಚಾರಗಳಿಂದ ಸಮಾಜದ ಸ್ವಾಸ್ಥ್ಯ ಕದಡುತ್ತಿರುವ ವೇಳೆಯಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿರುವ ಈ ಕುಟುಂಬ, ಹಿಂದೂ ದೇವರನ್ನು ಆರಾಧಿಸುತ್ತಾ, ನಿಜವಾದ ಸಾಮರಸ್ಯದ ಸಂದೇಶ ಸಾರಿದ್ದಾರೆ.
Discussion about this post