ಕಲ್ಪ ಮೀಡಿಯಾ ಹೌಸ್ | ಹಾಸನ |
ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮವಾಗಿ ಶಿರಾಡಿ ಘಾಟ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ.
ಸಕಲೇಶಪುರ ತಾಲೂಕಿನ ಕಪ್ಪಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಗುಡ್ಡದ ಮಣ್ಣು ಮತ್ತು ಗಿಡಗಳು ರಸ್ತೆಯತ್ತ ಜಾರಿಬಂದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ನಿರಂತರ ಮಳೆಯಿಂದ ಗುಡ್ಡದ ಮಣ್ಣು ಸಡಿಲಗೊಂಡು ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಹೆದ್ದಾರಿ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣನ್ನು ತೆರವುಗೊಳಿಸಿದರು. ಇದರಿಂದ ವಾಹನ ಸಂಚಾರಕ್ಕೆ ಯಾವುದೇ ದೊಡ್ಡ ಮಟ್ಟದ ಅಡಚಣೆ ಉಂಟಾಗದೆ, ಸಂಚಾರವು ಸದ್ಯ ಸಾಮಾನ್ಯವಾಗಿ ಮುಂದುವರಿಯುತ್ತಿದೆ.
ಇದೀಗ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯಲ್ಲಿ ಗುಡ್ಡಗಳನ್ನು ಆಳವಾಗಿ ಕತ್ತರಿಸಿರುವುದರಿಂದ ಈ ರೀತಿಯ ಭೂಕುಸಿತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಳೆಗಾಲದಲ್ಲಿ ಇಂತಹ ಘಟನೆಗಳು ಮರುಕಳಿಸುವ ಸಾಧ್ಯತೆ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ.
Also read: ಶಿವಮೊಗ್ಗ ಪೊಲೀಸರ ಅಪಹಾಸ್ಯ ರೀಲ್ಸ್: ಬೈಕ್ ಸವಾರರ ವಿರುದ್ಧ ಕ್ರಮ
ಜಿಲ್ಲಾಡಳಿತವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಹಾಗೂ ಭಾರೀ ಮಳೆಯ ಸಂದರ್ಭಗಳಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ ನೀಡಿದೆ. ಭೂಕುಸಿತ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಸರ್ಕಾರವನ್ನು ಸ್ಥಳೀಯರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









