ಮಂಗಳೂರು: ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿರುವ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿದ್ದು, ಸಂಚಾರ ಸ್ಥಗಿತಗೊಂಡಿದೆ.
ಬೆಳ್ತಂಗಡಿ ಸಮೀಪ ನಿನ್ನೆ ತಡ ರಾತ್ರಿ ಗುಡ್ಡ ಕುಸಿದ ಪರಿಣಾಮ ರಸ್ತೆಗಳು ಮುಚ್ಚಿಹೋಗಿದ್ದು, ಎರಡೂ ಕಡೆಯಿಂದ ವಾಹನಗಳು ಸಾಲುಗಟ್ಟಿ ನಿಂತಿವೆ. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದ್ದು, ರಾತ್ರಿಯಿಂದ ರಸ್ತೆ ಮಧ್ಯೆ ಸಿಲುಕಿರುವ ಪ್ರಯಾಣಿಕರಿಗೆ ಕೆಲ ಸ್ವಯಂ ಸೇವಕರು ಆಹಾರ ಮತ್ತು ನೀರು ಒದಗಿಸಿದ್ದಾರೆ.
ರಸ್ತೆಗೆ ಬಿದ್ದಿರುವ ಕಲ್ಲು ಬಂಡೆಗಳು ಮತ್ತು ಮಣ್ಣನ್ನು ತೆಗೆಯಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸತತ ಕಾರ್ಯೋನ್ಮುಖರಾಗಿದ್ದಾರೆ. ರಸ್ತೆ ಬದಿಯಲ್ಲಿ ನೂರಾರು ವಾಹನಗಳು ಚಲಿಸಲಾಗದೆ ನಿಂತಿವೆ. ಕೆಲ ದಿನಗಳಿಂದ ಸತತ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಗುಡ್ಡದಿಂದ ಮಣ್ಣು ಮತ್ತು ಬಂಡೆಗಳು ಕುಸಿದು ಬೀಳುತ್ತಿದ್ದು ಇಂದು ಬೆಳಗ್ಗೆ ಕೂಡ ಎರಡು ಕಡೆಗಳಲ್ಲಿ ಭೂ ಕುಸಿತವಾಗಿದೆ. ಘಾಟಿಯ ಎರಡು ಮತ್ತು ಮೂರನೇ ತಿರುವಿನಲ್ಲಿ ಭೂ ಕುಸಿತದಿಂದಾಗಿ ಸಂಚಾರ ನಿರ್ಬಂಧವಾಗಿದೆ.
ರಸ್ತೆಯಲ್ಲಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸಲು ಈಗಾಗಲೇ ಹಿಟಾಚಿ, ಜೆಸಿಪಿಗಳು ಸ್ಥಳಕ್ಕಾಗಮಿಸಿದ್ದು, ಕಾರ್ಯನಿರತವಾಗಿವೆ. ಆದರೆ, ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಕೆಲಸ ಆಮೆಗತಿಯಲ್ಲಿ ಸಾಗಿದೆ. ಹೀಗಾಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, 500ಕ್ಕೂ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿವೆ.
ಇನ್ನು, ಘಟನೆಯಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಸಹಕಾರ ನೀಡಲು ನೀರು ಹಾಗೂ ಬಿಸ್ಕತ್ ಪೂರೈಕೆ ಮಾಡಲಾಗಿದೆ.
Discussion about this post