ಕಲ್ಪ ಮೀಡಿಯಾ ಹೌಸ್ | ಲಾಸ್ ಏಂಜಲೀಸ್/ನವದೆಹಲಿ |
ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಸಹ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಆರ್’ಆರ್’ಆರ್ RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿಯ Oscar ಗರಿ ಮುಡಿಗೇರಿದ್ದು, ಈ ಮೂಲಕ ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದಂತಾಗಿದೆ.
ಅಕಾಡೆಮಿ ಅವಾರ್ಡ್ಸ್ ಸಮಾರಂಭದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಸಿಕ್ಕಿದ್ದು, ಅತ್ಯುತ್ತಮ ಹಾಡು ವಿಭಾಗದಲ್ಲಿ ನಾಟು ನಾಟು ಹಾಡಿಗೆ ಪ್ರಶಸ್ತಿ ಲಭ್ಯವಾಗಿದೆ.

ಅಮೆರಿಕಾದ ಲಾಸ್ ಏಂಜಲೀಸ್ ಡಾಲ್ಬಿ ಥಿಯೇಟರ್’ನಲ್ಲಿ ನಡೆಯುತ್ತಿರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಡೀ ಭಾರತ ಕುತೂಹಲದಿಂದ ವೀಕ್ಷಿಸುತ್ತಿತ್ತು. ನಾಟು ನಾಟು ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆಯೇ ಸಭಾಂಗಣದ ತುಂಬಾ ಚೆಪ್ಪಾಳೆಯ ಸದ್ದು ಜೋರಾಗಿತ್ತು. ಭಾರತದಲ್ಲೂ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್’ಟಿಆರ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಜಗತ್ತಿನ ಹೆಸರಾಂತ ಕಲಾವಿದರು ಹಾಗೂ ತಂತ್ರಜ್ಞರು ಭಾಗಿಯಾಗಿದ್ದಾರೆ. ಅಲ್ಲದೇ ನಿರ್ದೇಶಕ ರಾಜಮೌಳಿ, ನಟರಾದ ರಾಮ್ ಚರಣ್, ಜ್ಯೂನಿಯರ್ ಎನ್’ಟಿಆರ್ ಸೇರಿದಂತೆ ಆರ್’ಆರ್’ಆರ್ ಚಿತ್ರತಂಡ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.

ಪ್ರಧಾನಿ ಮೋದಿ ಅಭಿನಂದನೆ
ಇನ್ನು, ಆರ್’ಆರ್’ಆರ್ ಚಿತ್ರದ ಹಾಡಿಗೆ ಪ್ರಶಸ್ತಿ ಸಂದಿರುವ ಹಿನ್ನೆಲೆಯಲ್ಲಿ ಚಿತ್ರತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಇದು ಅಸಾಧಾರಣವಾಗಿದೆ. ನಾಟು ನಾಟು ಜನಪ್ರಿಯವಾಗಿದ್ದು, ಮುಂದಿನ ವರ್ಷಗಳಲ್ಲೂ ಸಹ ಇದು ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಇಂತಹ ಒಂದು ಸಾಧನೆಗಾಗಿ ಇಡಿ ತಂಡವನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.









Discussion about this post