ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅನಂತಾ ಹಿತದಾತಾರಃ ಸರ್ವಮಂಗಲಕಾರಿಣೀ ll
ಗೋಮಾತಾ ಧನದಾತ್ರೀ ಚ ಪೋಷಿಣೀ ಪುಷ್ಟಿಕಾರಿಣೀ |
ಗೋಮಯಂ ಗೋಮಧುಃ ವ್ಯಾಧಿ ನಾಶಿನೀ ಶುಭದಾಯಿನೀ ll
ಗಾವೋ ಮೇತ್ರಪ್ರದಾ ನಿತ್ಯಂ ಗಾವೋ ದೈವಸ್ವರೂಪಿಣೀ l
ಗೋಸೇವಾ ಗೋ ಪ್ರದಾನಂ ಚ ಪುನಾತಿ ಪರಮಂ ಪಥಮ್ ll
ಈ ಮೇಲಿನ ಎಲ್ಲ ಶ್ಲೋಕಗಳೂ ಸಹ ಗೋವಿನ ಮಹತ್ವವನ್ನು ಹೇಳುವಂತವುಗಳು. ಇದರಲ್ಲಿಯೂ ಬಹು ಮುಖ್ಯವಾಗಿ ಮಹಾಭಾರತದ ಗಾವೋ ವಿಶ್ವಸ್ಯ ಮಾತರಃ ಪಾವನೀ ಪಾಪನಾಶನೀ ಸಾಲುಗಳಂತೂ ಗೋವು ನಮಗೆಲ್ಲರಿಗೂ ಮಾತೃ ಸ್ವರೂಪಿಣಿ ಎಂದು ತಿಳಿಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೊಂದು ವಿಶೇಷವಾದ ಸ್ಥಾನವನ್ನೇ ನೀಡಿ ಗೌರವಿಸಿರುವುದು ಕಾಣುತ್ತೇವೆ. ಆ ಕಾರಣಕ್ಕಾಗಿಯೇ ಗೋವಿನಲ್ಲಿ ಮುಕ್ಕೋಟಿ ದೇವತೆಗಳ ಆವಾಸ ಸ್ಥಾನ ಎಂಬ ಕಾರಣಕ್ಕಾಗಿಯೇ ಅತ್ಯಂತ ಪೂಜನೀಯ ಎಂದು ಹೇಳಿದ್ದಾರೆ.
ಗಾವೋ ಮೇತ್ರಪ್ರದಾ….ಎನ್ನುವಲ್ಲಿ ಗೋವುಗಳನ್ನು ಕುಟುಂಬದ ಸದಸ್ಯರಲ್ಲಿ ಒಬ್ಬರಂತೆ ಕಂಡು ಅವುಗಳಿಂದಲೇ ಗ್ರಾಮೀಣ ಜೀವನದಲ್ಲಿ ಐಕ್ಯತೆ ಸಹಬಾಳ್ವೆ ವೃದ್ಧಿಯಾಗುತ್ತಿತ್ತು. ಅಷ್ಟೇ ಅಲ್ಲದೆ ಗೋ ಸೇವೆಯು ಹಾಗೂ ಗೋದಾನವು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯಬಲ್ಲ ಸಾಧನವಾಗಬಲ್ಲದು ಎಂದು ನಮ್ಮ ವೇದ ಮಂತ್ರಗಳು ಹೇಳಿದ್ದರಿಂದಲೇ ಮನೆಯಲ್ಲಿ ಯಾರಾದರೂ ಮೃತರಾದಾಗ ಅವರ ಹೆಸರಿನಲ್ಲಿ ಗೋದಾನ ಮಾಡಿದರೆ ಆ ಜೀವಕ್ಕೆ ಮುಕ್ತಿ ಎಂದು ಇಂದಿಗೂ ನಂಬಿಕೆ ಇದೆ.
ಇಷ್ಟೆಲ್ಲ ಮಹತ್ವವನ್ನು ಹೊಂದಿರುವಂತಹ ಗೋವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ. ಭಾರತೀಯ ಸಂಸ್ಕೃತಿಯಲ್ಲಿ ಶ್ರೀಕೃಷ್ಣನು ಗೋವುಗಳನ್ನು ರಕ್ಷಿಸಿ ಗೋಪಾಲನಾದನು ಆತನು ಗೋ ರಕ್ಷಣೆ, ಧರ್ಮ, ಕೃಷಿ ಹಾಗೂ ಜೀವನಕ್ಕೆ ಆಧಾರವೆಂದು ಗೋವುಗಳನ್ನು ಸಾರಿದನು. ಗೋಮಾತೆ ಎಂದು ಪೂಜಿಸುವ ನಮ್ಮ ಸಂಸ್ಕೃತಿಯಲ್ಲಿ ಭಾರತೀಯ ನಾರಿಯರ ನಿತ್ಯ ಕರ್ಮಗಳಲ್ಲಿ ಗೋಪೂಜೆಯೂ ಒಂದು ಸಂಪ್ರದಾಯವೇ ಆಗಿ ಹೋಗಿದೆ. ಗೋವಿಗೆ ಅಕ್ಕಿ ಬೆಲ್ಲ ಅಥವಾ ಬಾಳೆಹಣ್ಣಿನೊಂದಿಗೆ ಬೆಲ್ಲ ನೀಡಿ ನಿತ್ಯವೂ ಸ್ತ್ರೀ ಗೋಪೂಜೆ ಮಾಡಬೇಕೆಂದು ಹೇಳಿದೆ ಅಷ್ಟೇ ಅಲ್ಲದೆ ದೀಪಾವಳಿಯ ಸಂದರ್ಭದಲ್ಲಿ ವಿಶೇಷವಾಗಿ ಅದರ ಹೆಸರಿನಲ್ಲಿ ಹಬ್ಬವೇ ಆಚರಿಸುವುದನ್ನು ಕಂಡಿದ್ದೇವೆ.
ಸಾಮಾಜಿಕವಾದ ದೃಷ್ಟಿಯಲ್ಲಿ ಹಸುವಿನ ಹಾಲು, ತುಪ್ಪ, ಮೊಸರು ಬೆಣ್ಣೆಗಳಿಂದ ಮಾನವನ ಪೋಷಣೆಯಾಗುತ್ತದೆ ಹೀಗಾಗಿ ಗೋಪಾಲನೆ ಸಮಾಜದ ಪೋಷಣೆಗೂ ಕಾರಣವಾಗಿದೆ. ಒಟ್ಟಿನಲ್ಲಿ ಗೋಪಾಲನೆ ಕೇವಲ ಕೃಷಿ ಆರ್ಥಿಕ, ಧಾರ್ಮಿಕ ಇಷ್ಟೇ ಇಲ್ಲದೆ ಇದೊಂದು ಆಧ್ಯಾತ್ಮಿಕ ಸಾಂಸ್ಕೃತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಒಳಗೊಂಡ ಮಹತ್ವ ಹೊಂದಿದ್ದು ಗೋವುಗಳನ್ನು ಕಾಪಾಡುವುದೆಂದರೆ ನಮ್ಮ ಭವಿಷ್ಯವನ್ನು ನಾವು ಕಾಪಾಡುವುದೇ ಆಗಿದೆ.
ಈಶ್ವರಪ್ಪನವರು ತಾವು ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದಾಗಲೇ ಗಾಜನೂರಿನ ಸಮೀಪ ಏಳು ಎಕರೆ ಜಮೀನನ್ನು ಗೋಪಾಲನಾ ಕಾರ್ಯಗಳಿಗಾಗಿ ಮಂಜೂರು ಮಾಡಿಸಿದ್ದು ಈಗ ಅಲ್ಲಿ ನಗರದ ಸುತ್ತಮುತ್ತಲಿನ ಗೋ ಸಂರಕ್ಷಣಾ ಕೇಂದ್ರದವರು ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ಪರಿಹಾರದ ಕಾರ್ಯ ಮಾಡುವಲ್ಲಿ ಸಜ್ಜಾಗಿದ್ದಾರೆ. ಮುಖ್ಯವಾಗಿ ಗೋವುಗಳಿಗೆ ಬೇಕಾದ ಮೇವು ಅದಕ್ಕಾಗಿ ಹುಲ್ಲಿನ ಬೀಜಗಳನ್ನು ನೆಟ್ಟು ಮೇವಿಗಾಗಿ ವ್ಯವಸ್ಥೆ ಮಾಡುವ ಕಾರ್ಯ ಭರದಿಂದ ಸಾಗಿದೆ.
ಮೊನ್ನೆ ಮೊನ್ನಯಷ್ಟೇ ಗೋವಿಗಾಗಿ ಅವುಗಳ ಆರೈಕೆಗಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಆಂಬುಲೆನ್ಸ್ ಸೇವೆ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವ ಶುಶ್ರೂಷ ಕೇಂದ್ರ ಹಾಗೂ ಸಿಬ್ಬಂದಿಗಳನ್ನು ಒದಗಿಸಿಕೊಡುವ ಯೋಜನೆಯನ್ನು ಹೊಂದಿ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಟ್ರಸ್ಟಿಗೆ ಒಪ್ಪಿಸಲಾಗಿದೆ. ನಗರದ ಬೀಡಾಡಿ ದನಗಳ ರಕ್ಷಣೆಯ ಜೊತೆಗೆ ಅವುಗಳಿಗೆ ಅಗತ್ಯವಿರುವ ಮೂಲ ಸೌಲಭ್ಯ ಒದಗಿಸುವ ಯೋಜನೆಯನ್ನು ಈ ಟ್ರಸ್ಟ್ ಹೊಂದಿದೆ. ಸುಮಾರು 5000 ಜನರನ್ನು ಬರುವ ಅಕ್ಟೋಬರ್ 8ರ ಒಳಗೆ ಗೋ ಸಂರಕ್ಷಣಾ ಗೃಹಕ್ಕೆ ನೋಂದಣಿ ಮಾಡಿಕೊಳ್ಳಬೇಕೆಂದು ಗುರಿ ಹೊಂದಿರುವ ಈ ಟ್ರಸ್ಟ್ ಈಗಾಗಲೇ 3000ಕ್ಕೂ ಅಧಿಕ ಜನರನ್ನ ತಲುಪಿದೆ.

ನಮೋ ಗೋಭ್ಯೋ ನಮೋ ನಿತ್ಯಂ ಸುರಭ್ಯೇ ಚ ನಮೋ ನಮಃ l
ಗೋವಿನಾ ನಂದಿತಂ ವಿಶ್ವಂ ಭವತು ಕ್ಷೇಮಮಂಗಲಮ್ ll
ನಾವು ಮಾಡುವ ಈ ಕಾರ್ಯದಿಂದ ಗೋಮಾತೆ ತೃಪ್ತವಾಗಿ ಸಂತೋಷಗೊಳ್ಳುತ್ತಾಳೆ. ಅದರಿಂದ ಜಗತ್ತು ಕ್ಷೇಮ ಹಾಗೂ ಮಂಗಳದಿಂದ ಕೂಡಿರುತ್ತದೆ. ಹಾಗಾಗಿ ಮನೆಯಲ್ಲಿ ಗೋವಿಲ್ಲವೆಂಬ ನೋವು ಬಿಟ್ಟು ಗೋವರ್ಧನ ಟ್ರಸ್ಟ್ ನ ಜೊತೆಗೂಡಿ.
ವಿಶೇಷವಾಗಿ ಈ ಗೋವರ್ಧನ ಟ್ರಸ್ಟ್ ನ ಉದ್ಘಾಟನೆಯನ್ನು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮಿಗಳವರು ಇದೇ ಅಕ್ಟೊಬರ್ 8 ರಂದು ಅಲ್ಲಮಪ್ರಭು ಮೈದಾನದಲ್ಲಿ ನಡೆಯುವ ನೆರವೇರಿಸಲಿದ್ದಾರೆ. ಈ ಒಂದು ಪುಣ್ಯ ಕಾರ್ಯಕ್ರಮಕ್ಕೆ ನಗರದ ಸಮಸ್ತ ಹಿಂದೂ ಬಾಂಧವರು ಅತೀ ಹೆಚ್ಚಿನ ಸಮಖ್ಯೆಯಲ್ಲಿ ಭಾಗಿಯಾಗಬೇಕೆಂಬ ಆಶಯ ಆಯೋಜಕರದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post