ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮನುಷ್ಯ ಯಾವಾಗಲೂ ದ್ವೇಷಾಸೂಯೆಗಳ ಮೂಟೆಯಲ್ಲ. ಪರಿಸ್ಥಿತಿಗಳು ಆತನನ್ನು ಸಹಜ ಪ್ರೀತಿ ಸೌಹಾರ್ದ ಮರೆತು ಮನಸ್ಸಿನಲ್ಲಿ ಕೋಲಾಹಲವೆಬ್ಬಿಸುತ್ತವೆ. ಈ ಮಾತು ಹಲವು ನ್ಯಾಯ ತೀರ್ಪುಗಳ ಹಿನ್ನೆಲೆಯಲ್ಲೂ ನೋಡಿದ್ದೇವೆ. ಮನಃಶ್ಶಾಸ್ತ್ರದ ಹಿನ್ನೆಲೆಯಲ್ಲೂ ಕೇಳಿದ್ದೇವೆ.
ಜೀವಮಾನದಲ್ಲಿ ಸಿಗುವ ಅವಕಾಶವನ್ನು ಸಾರ್ಥಕವಾಗಿ ಬಳಸಿಕೊಳ್ಳುವವ ಕುಶಲಿಗ. ಏಕೆಂದರೆ ಅವಕಾಶಗಳ ಬಾಗಿಲು ಎಲ್ಲರಿಗೂ ಒಂದೊಂದು ರೀತಿಯದ್ದಾಗಿರುತ್ತದೆ. ಅದನ್ನು ಛಂಗನೆ ಹಿಡಿದು ಕೊಳ್ಳುವ ಚೈತನ್ಯ ಬೇಕಷ್ಟೆ! ಆತ್ಮವಿಶ್ವಾಸವೇ ಆ ಚೈತನ್ಯದ ಗೊಂಚಲನ್ನು ರೂಪಿಸುತ್ತದೆ. ಕೆಲವರು ಸುಲಭವಾಗಿ ಅವಕಾಶ ದಕ್ಕಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಹೋರಾಟ ಮಾಡಿ ಪಡೆಯುತ್ತಾರೆ. ಈಗ ಪ್ರಮುಖ ವಿಷಯಕ್ಕೆ ಪ್ರವೇಶ ಮಾಡುತ್ತೇನೆ. ಶ್ರೀ ಬಿ.ಎಸ್. ಯಡಿಯೂರಪ್ಪನವರ ಎಪ್ಪತ್ತೆಂಟನೆಯ ವರ್ಷದ ಪಾದಾರ್ಪಣೆ ಸಂದರ್ಭದ ಜನ್ಮ ದಿನಾಚರಣೆ ವರದಿ ನೋಡಿದೆ. ಮಾಧ್ಯಮಗಳು ಕೆಲವು ಒಂದು ಅಚ್ಚರಿಯನ್ನೇ ವ್ಯಕ್ತಪಡಿಸಿದವು.
ರಾಜಕೀಯ ಮರೆತು ಒಂದೇ ವೇದಿಕೆಯಲ್ಲಿ ಹಲವು ಪಕ್ಷದ ನಾಯಕರು ಉಪಸ್ಥಿತರಿದ್ದರು. ಅದರಲ್ಲಂತೂ ವಿರೋಧ ಪಕ್ಷದ ನಾಯಕ ಶ್ರೀ ಸಿದ್ಧರಾಮಯ್ಯ ಅವರ ಉಪಸ್ಥಿತಿ ಬಹಳಷ್ಟು ರೀತಿಯಲ್ಲಿ ವ್ಯಾಖ್ಯಾನಕ್ಕೆ ಕಾರಣವಾಯಿತು. ಇಲ್ಲಿ ಮಾಧ್ಯಮಗಳು ಹಾರೈಸಿದ ಒಂದು ಒಳ್ಳೆಯ ಅಭಿಪ್ರಾಯ ನಿಜಕ್ಕೂ ಪ್ರಸ್ತುತ ವರದಿಗಾರಿಕಾ ವೃತ್ತಿಯ ಪಾವಿತ್ರ್ಯವನ್ನು ಎತ್ತಿ ಹಿಡಿಯುವಂತಿತ್ತು. ಅದಕ್ಕೆ ಸಿದ್ದು ಅವರ ಮಾತುಗಳೂ ಕೂಡ ಕಿರೀಟಪ್ರಾಯ.
ರಾಜಕಾರಣ ಸಿದ್ಧಾಂತಗಳು ಬೇರೆ. ಮನುಷ್ಯ ಸಂಬಂಧಗಳು ಬೇರೆ. ಪ್ರಜೆಗಳ ಎದುರು ನಮ್ಮ ನಮ್ಮ ಪಕ್ಷಗಳ ಸಿದ್ಧಾಂತಗಳನ್ನು ಮುಂದಿಡುತ್ತೇವೆ. ಕೊನೆಗೆ ತೀರ್ಮಾನ ಕೊಡುವವರು ಪ್ರಜೆಗಳು. ರಾಜಕಾರಣ ಯಾವಾಗಲೂ ಮನುಷ್ಯ ಸಂಬಂಧಕ್ಕೆ ಅಡ್ಡಿಬರಬಾರದು. ಸಿದ್ದರಾಮಯ್ಯನವರ ಈ ನುಡಿಗಳು ಇಂದಿನ ರಾಜಕಾರಣದ ನೈತಿಕ ಪಠ್ಯಕ್ಕೆ ಸೇರಬೇಕಾದ ವಾಕ್ಯಗಳಾಗಿವೆ.
ಈ ಸಂದರ್ಭವನ್ನು ಕರ್ನಾಟಕ ಕಂಡ ರಾಜಕೀಯ ಇತಿಹಾಸದ ಒಂದು ಅಪರೂಪದ ಕ್ಷಣ ಎಂದು ಭಾವಿಸಲಾಗುತ್ತಿದೆ.
ಹೌದು !. ಪಕ್ಷ ಪಕ್ಷಗಳು ಪರಸ್ಪರ ಮಸೆಯುವ ಮನೋಭಾವವಿರುವಾಗ ನಾಯಕರ ಈ ರೀತಿಯ ನಡವಳಿಕೆಗಳು ರಾಜಕಾರಣದ ನವೀನ ಭಾಷ್ಯಗಳನ್ನೇ ದಾಖಲಿಸುತ್ತವೆ.
ಇಲ್ಲಿ ಬಿಎಸ್ ವೈ ಅವರದ್ದು ತಲಸ್ಪರ್ಶಿಯಾದ ರಾಜಕೀಯ ಪಯಣ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದು ಹಂತಹಂತವಾಗಿ ಪಕ್ಷವನ್ನೇ ಭದ್ರ ಮಾಡಿದ ಪ್ರಕ್ರಿಯೆ. ಪಕ್ಷಕ್ಕೆ ಮತ್ತೆ ಮರುಹುಟ್ಟು ನೀಡಿದೆ ಅವರ ಸಮಯಾವಧಾನ ರಾಜಕಾರಣ. ಕುಮಾರಣ್ಣ ಅವರಿಗೆ ಪಟ್ಟಗಟ್ಟಿದ ಅವರ ಚಾಣಾಕ್ಷತನ ಮೆಚ್ಚುವಂಥದ್ದು. ಪಕ್ಷಕ್ಕೆ ರಾಜ್ಯವ್ಯಾಪಿ ಇಮೇಜನ್ನು ತರುವಲ್ಲಿ ಅಂದಿನ ನಡೆ ಬಿಎಸ್ ವೈ ಪ್ರಯತ್ನಶೀಲತೆಗೆ ಸಾಕ್ಷಿ.
ವಿರೋಧ ಪಕ್ಷದ ನಾಯಕರಾಗಿ ಅವರಿಗೆ ರಾಜ್ಯದ ರೈತರ, ಎಲ್ಲ ಸಮುದಾಯದ ನಾಡಿಮಿಡಿತ ಬಲ್ಲವರು. ರಾಜ್ಯ ನಾಯಕತ್ವದ ಚರಿಷ್ಮಾ ಅವರಿಗಿದೆ. ಬಂದ ಒಂದೊಂದೂ ಅವಕಾಶವನ್ನ ಬಿಗಿಯಾಗಿ ಹಿಡಿಯುತ್ತಲೇ ನಡೆದವರು. ಪಕ್ಷದ ಕಾರ್ಯಕರ್ತ, ಪುರಸಭಾ ಸದಸ್ಯ, ಶಾಸಕ, ಉಪಮುಖ್ಯಮಂತ್ರಿ, ಸಂಸದ ಕೊನೆಗೆ ಮುಖ್ಯಮಂತ್ರಿ. ಈ ಪಯಣ ಅವರ ಛಲವನ್ನೇ ಅನುಸರಿಸಿದೆ. ಜೈಲಿಗೆ ಹೋಗಿಬಂದ ಕಪ್ಪು ಚುಕ್ಕೆಯನ್ನೂ ಕೂಡ ಈಗ ಜನ ಪಕ್ಕಕ್ಕೆ ಸರಿಸಿ ಅವರ ವ್ಯಕ್ತಿತ್ವ ನೋಡಿದ್ದಾರೆ. ಕೆಲವೊಮ್ಮೆ ಸಮುದಾಯ ಕೆಲವರ ಬಗ್ಗೆ ಬಹಳ ಉದಾರಿಯಾಗಿ ಬಿಡುತ್ತದೆ. ಆ ಗ್ರೇಸ್ ಮಾರ್ಕ್ಸ್ ಬಿಎಸ್’ವೈ ಅವರಿಗೆ ಸಿಕ್ಕಿರುವುದು ಒಂದು ಅದೃಷ್ಟವೇ ಸರಿ.ಇದು ಎಲ್ಲರಿಗೂ ಸಿಗುವುದು ಅಪರೂಪ.
ಪಕ್ಷದ ಒಳ ಬೆಳವಣಿಗೆಗಳ ಕಾರಣ ಅವರು ಬೇರೆ ಪಕ್ಷದ ಅಸ್ತಿತ್ವ ಕಂಡುಕೊಳ್ಳ ಬೇಕಾಯಿತು. ಆದರೆ ಅದೇ ಕೊನೆಯಾಗಲಿಲ್ಲ. ಮತ್ತೆ ರಾಜಿಯಾಗಿ ಮಾತೃ ಪಕ್ಷಕ್ಕೇ ಬಂದರು. ಈ ಇತಿಹಾಸವನ್ನು ಮಾತ್ರ ಹಿರಿಯ ನಾಯಕರು ಭೂತಗಣ್ಣಿನಿಂದ ನೋಡುತ್ತಿದ್ದಾರೆ. ಅದೊಂದು ಪ್ರಸ್ತುತ ವಿದ್ಯಮಾನದ ವಿಪರ್ಯಾಸ.
ಅನರ್ಹರ ಮರುಚುನಾವಣಾ ಪ್ರವೇಶ. ಅವರ ಗೆಲುವು, ರಾಜ್ಯದಲ್ಲಿ ಇನ್ನೂ ಬಿಎಸ್ ವೈ ಪ್ರಭಾವವಿದೆ ಎನ್ನುವ ಸಂದೇಶವನ್ನು ದೆಹಲಿಗೆ ಮುಟ್ಟಿಸಿದೆ. ಇಂತಹ ನಾಯಕನ ಬಗ್ಗೆ ಸಿದ್ದು ತೋರಿದ ಸ್ನೇಹ , ಪ್ರೀತಿ ಬಹಳ ದೊಡ್ಡದೇ.
ಇಲ್ಲಿ ಬಿಎಸ್ ವೈ ಅಂತಹ ಹಿರಿಯರೆದುರು ಸಿದ್ದು ತಮ್ಮ ವರ್ತನೆಯಿಂದ ಇನ್ನಷ್ಟೂ ದೊಡ್ಡತನ ಪಡೆದರು. ಪಕ್ಷವೇನೂ ಬಡವಾಗಲಿಲ್ಲ. ಬಿಜೆಪಿಯೂ ಜಂಭ ಕೊಚ್ಚಿಕೊಳ್ಳಲಿಲ್ಲ. ಆದರೆ ಕಾಂಗ್ರೆಸ್’ನ ಕೆಲವರು ಮುಖ ಕಿವುಚಿಕೊಂಡು ಸಣ್ಣವರಾದರಷ್ಟೆ. ಜನ್ಮದಿನ, ಮದುವೆ, ಇತ್ಯಾದಿಗಳು ವ್ಯಕ್ತಿಗಳ ನಡುವಿನ ಮನುಷ್ಯ ಸಂಬಂಧಗಳನ್ನು ಉಜ್ಜಿ ನೋಡುವ ಸಾಣೆಯಂತೆ. ಈ ಸಂಗತಿಯನ್ನು ಒಬ್ಬ ಮನುಷ್ಯನಾಗಿ ಮಾತಾಡಿದ ಅವರ ಅನಿಸಿಕೆಗಳನ್ನ ಸಹಮನುಷ್ಯರೇ ತೆರೆದ ಮನಸ್ಸಿನಿಂದ ಒಪ್ಪಿಕೊಳ್ಳದಿರುವುದು ದುರಂತವೇ ಸರಿ!
ಈಗ ಮತ್ತೆ ಪಕ್ಷಕ್ಕೆ ಹೊಸ ಧಿರಿಸು ತೊಡಿಸುವ ಪ್ರಮುಖ ಪ್ರಾಸಾಧನ ಕೆಲಸ ಬಿಎಸ್’ವೈ ಮಾಡಬೇಕಿದೆ. ಏಕೆಂದರೆ ಮಹದಾಯಿ ಒಲಿದು ಬಂದಿದ್ದಾಳೆ. ಉಕದ ಮಂದಿಯ ಕರುಕಲಾದ ಮನಸ್ಸಿಗೆ ಮುಲಾಮು ಸವರಿ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳಬೆಕು. ಘನವಾದ ನೀಲನಕ್ಷೆ ಸಿದ್ಧವಾಗಲಿ ಎಂದು ಹಾರೈಸೋಣ.
Get in Touch With Us info@kalpa.news Whatsapp: 9481252093
Discussion about this post