ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾರತ ಲಾಕ್ ಡೌನ್
ನಮಸ್ಕಾರ ಸ್ನೇಹಿತರೆ ನಾನು ನಿಮ್ಮ ರೋಹನ್ ಪಿಂಟೋ. ನಾನು ಲೇಖನಗಳನ್ನು ಬರೆಯೋಕೆ ಶುರು ಮಾಡಿದ್ದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮೂಲಕ. ಆದರೆ ಇತ್ತೀಚೆಗೆ ನನ್ನದೇ ಆದ ಒಂದಿಷ್ಟು ಕಾರಣಗಳಿಂದ ಲೇಖನ ಬರೆಯೋದು ನಿಲ್ಲಿಸಿದ್ದೆ. ಇವತ್ತು ಪುನಃ ನಿಮ್ಮೆದುರಿಗೆ ಬಂದಿದ್ದೇನೆ.
ಇವತ್ತು ಆಗ್ತಾ ಇರೋ ವಿದ್ಯಮಾನವನ್ನು ನೋಡ್ತಾ ಇದ್ದರೆ ಈ ವಿಶ್ವದ ಅಡಿಪಾಯವೇ ಅಲುಗಾಡ್ತಾ ಇದೆಯಾ ಅನ್ನಿಸ್ತಿದೆ. ಕಾರಣ ಸಾಲು ಸಾಲು ಜೀವಗಳನ್ನ ಬಲಿ ಪಡೀತೀರೋ ಕೋವಿಡ್ 19 ಎಂಬ ರಾಕ್ಷಸ.
ಚೀನಾದಲ್ಲಿ ಹುಟ್ಟಿದ ಇದು ಇವತ್ತು 6 ಖಂಡಗಳಲ್ಲೂ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದೆ. ಬೇಸರದ ವಿಚಾರ ಎಂದರೆ ಇದು ಇಂದು ಭಾರತ ದೇಶವನ್ನು ಕೂಡಾ ಆತಂಕದ ಕೂಪಕ್ಕೆ ತಳ್ಳಿದೆ. ಜೀವಗಳ ಬಲಿ ಪಡೆದಿದೆ. ಅಂಕಿ ಅಂಶಗಳನ್ನು ನಾನು ಹೊಸದಾಗಿ ಉಲ್ಲೇಖ ಮಾಡಲಾರೆ. ಅದು ಟಿವಿ ಹಾಕಿದರೆ ನಿಮ್ಮ ಗಮನಕ್ಕೆ ಬಂದೆಬರುತ್ತೆ.
ಆದರೆ ನಾನು ಈ ಲೇಖನ ಬರೆಯುವ ಉದ್ದೇಶ ಪ್ರಧಾನಿ ಕರೆ ಕೊಟ್ಟಿರೋ 21 ದಿನಗಳ ಲಾಕ್ ಡೌನ್ ಬಗ್ಗೆ ಕೆಲವು ಬಿಜೆಪಿ/ಮೋದಿ ವಿರೋಧಿಗಳು ಇದರ ಅವಶ್ಯಕತೆ ಏನಿದೆ ಅನ್ನೋ ರೀತಿಯಲ್ಲಿ ಮಾತನಾಡಬಹುದು. ಆದರೆ ಒಬ್ಬ ಪ್ರಧಾನಿಯಾಗಿ ಅವರು ಮಾಡಿರುವ ನಿರ್ಣಯ ಸರಿ ಇದೆ. ಅದನ್ನ ನಾನು ಸ್ವಾಗತ ಮಾಡುತ್ತೇನೆ. ಹಾಗೆಂದು ನಾನು ಬಿಜೆಪಿ ಕಾರ್ಯಕರ್ತನೂ ಅಲ್ಲ ಸಾಮಾನ್ಯವಾಗಿ ಹೇಳ್ತಾರಲ್ಲ ಮೋದಿ ಭಕ್ತ, ಹಾಗೆ ಗುಲಾಮ ಅಂತೂ ಕೂಡ ಅಲ್ಲ.. (ವೈಯಕ್ತಿಕವಾಗಿ ನಾನು ಯಾರ ಬೆಂಬಲಿಗನಾಗಿರಬಹುದು. ಆದರೆ ಈ ಲೇಖನದ ಲೇಖಕನಾಗಿ ಪೂರ್ವಾಗ್ರಹ ಪೀಡಿತನಾಗಿ ಬರೆಯೋದು ತಪ್ಪು) ಕಾರಣ ದಿಗ್ಬಂಧನ ಹಾಕಿದ್ದರ ಪರಿಣಾಮವೇ ಇವತ್ತು ಚೀನಾ ಕೊರೋನಾದಿಂದ ಮುಕ್ತಿ ಪಡೆಯತೊಡಗಿದೆ. ಹೀಗಿರುವಾಗ ಈ ನಿರ್ಣಯವನ್ನು ವಿರೋಧ ಮಾಡಿದರೆ ಅಂತಹ ಮೂರ್ಖರು ಮತ್ತು ರೋಗದ ಗಂಭೀರತೆ ಕುರಿತು ಅರಿವಿಲ್ಲದವರು ಬೇರೊಬ್ಬರಿಲ್ಲ ಎನ್ನಬಹುದು.
ಏಕೆಂದರೆ ಈ ವೈರಸ್ ಬಾರಿ ಅಪಾಯಕಾರಿ ಅನ್ನೋದು ಎಲ್ಲರಿಗೂ ಗೊತ್ತು. ಒಬ್ಬರಿಂದ ಒಬ್ಬರಿಗೆ ಇದು ವೇಗವಾಗಿ ಹರಡುತ್ತದೆ ಅನ್ನೋದು ಸಹ ಗೊತ್ತು. ಹೀಗಾಗಿ ನಮಗೆ ನಾವೇ ದಿಗ್ಬಂದನ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹೊರತಾಗಿ ಅದರಿಂದ ತಪ್ಪಿಸಿಕೊಳ್ಳೋದು ಅಸಾಧ್ಯ. ನೆನಪಿರಲಿ ವೈರಸ್’ಗೆ ಇನ್ನೂ ಲಸಿಕೆ ಕಂಡು ಹಿಡಿದಿಲ್ಲ. ಹೀಗಾಗಿ ಸಾಮಾಜಿಕ ಅಂತರವೇ ಇದಕ್ಕೆ ಈಗಿರುವ ಮದ್ದು.
ದಿಗ್ಬಂಧನದ ಪ್ರಾಮುಖ್ಯತೆ ತಿಳಿಯಬೇಕಾದರೆ ಇಟಲಿ ಚರ್ಚ್‌ಗಳಲ್ಲಿ ಇಟ್ಟಿರುವ ಸಾಲು ಸಾಲು ಶವ ಪೆಟ್ಟಿಗೆಗಳನ್ನು ಒಮ್ಮೆ ನೋಡಿ ಹಾಗೆ ಭಾರತದ ಪರಿಸ್ಥಿತಿಯನ್ನು ಒಮ್ಮೆ ಕಲ್ಪಿಸಿ ನೋಡಿ ವೈದ್ಯ ಲೋಕದ ಚಿಕಿತ್ಸೆಯಲ್ಲಿ ಇಟಲಿ ಟಾಪ್ ಮೋಸ್ಟ್ ಇದೆ. ಮುಂದುವರೆದ ದೇಶ ಜೊತೆಗೆ ಅಮೆರಿಕಾ, ಇರಾನ್ ಸೇರಿದಂತೆ ಯುರೋಪಿನ ಇತರ ದೇಶಗಳು ಕೂಡಾ ಬಲಿಷ್ಠವಾಗಿವೆ. ಆದರೆ ಅವರ ಕೈಯಿಂದ ಕೂಡಾ ಸಾವು ತಡೆಯಲು ಸಾಧ್ಯ ಆಗ್ತಾ ಇಲ್ಲ. ಹೀಗಿರುವಾಗ ಭಾರತದಲ್ಲಿ ಇದು ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದರೆ ಭಾರತದ ಪರಿಸ್ಥಿತಿ ಹೇಗಿರುತ್ತೆ ಅನ್ನೋದನ್ನ ಕಲ್ಪನೆ ಮಾಡೋಕೆ ಐನ್’ಸ್ಟೀನ್ ನ ಬುದ್ದಿ ಬೇಕಿಲ್ಲ.
ಆದಾರೂ ಸಣ್ಣ ಅಂಕಿ ನಿಮ್ಮೆದುರು ಅಂಶವನ್ನು ಇಡ್ತೀನಿ. ನಮ್ಮ ದೇಶದ ವೈದ್ಯರ-ರೋಗಿಗಳ ಅನುಪಾತ 1:1,457 (ಹೋಮಿಯೊಪತಿ ಅಲೋಪತಿ ಇತ್ಯಾದಿ ಇತ್ಯಾದಿ ವೈದ್ಯರನ್ನು ಸೇರಿದಂತೆ) ಇದು ಡಬ್ಲ್ಯೂಎಚ್’ಒ ಮಾಹಿತಿ.
ಇನ್ನೂ ಆಸ್ಪತ್ರೆ ವಿಚಾರಕ್ಕೆ ಬಂದರೆ 55,591 ರೋಗಿಗಳಿಗೆ ಒಂದು ಸರ್ಕಾರಿ ಆಸ್ಪತ್ರೆಲಭ್ಯವಿದೆ. 11,082 ಜನ ರೋಗಿಗಳಿಗೆ ಒಬ್ಬ ಸರ್ಕಾರಿ ವೈದ್ಯ ಇದ್ದರೆ 1844 ಜನ ರೋಗಿಗಳಿಗೆ ಒಂದು ಹಾಸಿಗೆ ವ್ಯವಸ್ಥೆ ನಮ್ಮಲಿದೆ (ಇನ್ನೂ ಕೇವಲ ಉತ್ತರ ಭಾರತವನ್ನು ತೆಗೆದುಕೊಂಡರೆ ಅಲ್ಲಿನ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ.) ಇದು ಪತ್ರಕರ್ತ ಮಿತ್ರರು ನೀಡಿದ ದತ್ತಾಂಶ. ಈ ರೀತಿಯಲ್ಲಿ ಇರುವಾಗ ಅಪ್ಪಿ ತಪ್ಪಿ ಇಟಲಿಯಲ್ಲಾದ ಅಪಾಯದ ಕಾಲು ಭಾಗದಷ್ಟು ಅಪಾಯ ಭಾರತಕ್ಕೆ ಆದರೆ ಪರಿಸ್ಥಿತಿ ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಾಗಾದ ಮಟ್ಟಿಗೆ ತಲುಪಿ ಬಿಡುತ್ತೆ. ಬೀದಿ ಬೀದಿಗಳಲ್ಲಿ ಹೆಣಗಳ ರಾಶಿ ಬೀಳುತ್ತೆ. ಹೀಗಾಗಿ ಅಪಾಯ ಎದುರಾಗುವ ಮುನ್ನ ಎಚ್ಚರ ವಹಿಸಿ. ಈಗಾಗಲೇ ವೈರಸ್ ಎರಡನೇ ಹಂತಕ್ಕೆ ತಲುಪಿದೆ ನಮ್ಮ ದೇಶದಲ್ಲಿ ಆದರೂ ನಿಯಂತ್ರಣ ಹೇರಲು ಈಗಲೂ ಸಾಧ್ಯ. ಇದಕ್ಕೆ ಜನ ಮನಸು ಮಾಡಬೇಕು ಅಷ್ಟೇ.
ಹಾ ಒಂದು ಮಾತು ಮೋದಿಯವರ ಈ ನಿರ್ಣಯವನ್ನು ವಿರೋಧಿಗಳು ಕೂಡಾ ಸ್ವಾಗತ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಜಾಸ್ತಿ ಖುಷಿ ಪಡೋಕೆ ಹೋಗಬೇಡಿ. ಏಕೆಂದರೆ ನಮ್ಮ ದೇಶದ ಕೆಲವು ಬುದ್ಧಿವಂತರು ಇದರಿಂದ ಕೆರಳಿ ಲಾಕ್ ಡೌನ್ ಧಿಕ್ಕರಿಸುವ ಸಾಧ್ಯತೆ ಕೂಡಾ ಇದೆ. ಅವರು ಕೂಡಾ ಈ ದೇಶದ ಪ್ರಜೆ. ಹೀಗಾಗಿ ಅವರ ಜೀವ ಕೂಡಾ ಅಷ್ಟೇ ಮುಖ್ಯ.
ಇನ್ನೂ ಮೊನ್ನೆಯ ಜನತಾ ನಿಷೇಧಾಜ್ಞೆ ಬಗ್ಗೆ ಉಲ್ಲೇಖ ಮಾಡಲೇ ಬೇಕು. ಪ್ರಧಾನಿಗಳು ಅಂದು ಸಂಜೆ ವೈದ್ಯರು ಸೇರಿದಂತೆ ಇನ್ನಿತರ ಸೇವೆ ಗೌರವಿಸುವ ರೀತಿಯಲ್ಲಿ ಚಪ್ಪಾಳೆ ತಟ್ಟಿ ಎಂದರೆ ಜನ ಗುಂಪುಗೂಡಿ ಒಳ್ಳೆ ದೊಂಬರಾಟ ಆಡೋ ರೀತಿಯಲ್ಲಿ ಆಡಿ ಬಿಟ್ಟರು. ಆ ಗುಂಪಿನ ಯಾವದಾದರೂ ಒಬ್ಬ ವ್ಯಕ್ತಿಗೆ ಕರೋನಾ ಇದ್ದಿದರೆ ಏನಾಗುತ್ತೆ ಅನ್ನುವ ಸಣ್ಣ ಕಲ್ಪನೆ ಇದೆಯಾ ನಿಮ್ಮಗಳಿಗೆ? ನಾನು ಅದನ್ನ ನೋಡಿ ದಿಗ್ಬ್ರಮೆಗೆ ಒಳಗಾಗಿ ಬಿಟ್ಟೆ.
ಇನ್ನೂ ಇದನ್ನು ತಮ್ಮ ರಾಜಕೀಯ ಹಾಗೂ ಧಾರ್ಮಿಕ ಬೇಳೆ ಬೇಯಿಸಿಕೊಳ್ಳೋಕೆ ನೋಡಬೇಡಿ. ಏಕೆಂದರೆ ಜನ ಉಳಿದರೆ ಮಾತ್ರ ಧರ್ಮ ಉಳಿಯುತ್ತದೆ. ಜನ ಉಳಿದರೆ ಮಾತ್ರ ದೇಶ ಉಳಿಯುತ್ತೆ. ದೇಶ ಉಳಿದರೆ ಮಾತ್ರ ರಾಜಕೀಯ ವ್ಯವಸ್ಥೆ ಉಳಿಯುತ್ತದೆ. ನಿನ್ನೆ ಒಂದು ಧರ್ಮ ಮತ್ತು ರಾಜಕೀಯ ಪ್ರೇರಿತ ಪೋಸ್ಟ್ ನೋಡಿದೆ. ಜೊತೆಗೆ ಅಂತಹದ್ದೇ ಟ್ವೀಟ್ ಸಹ ಕೆಲ ದಿನಗಳ ಹಿಂದೆ ನೋಡಿದ್ದೆ. ಹಾಗೆ ನಿನ್ನೆ ಮೋದಿ ಭಾಷಣದ ನೇರ ಪ್ರಸಾರ ಮಾಡ್ತಾ ಇದ್ದ ಚಾನಲ್ ಒಂದು ವ್ಯಕ್ತಿ ಪೂಜೆ ಮಾಡುವ ರೀತಿಯ ಶೀರ್ಷಿಕೆ ನೀಡಿತ್ತು. ಇದನ್ನ ನೋಡಿ ಬೇಸರವಾಯಿತು. ಹಾಗೆ ಆಗೋ ಎಲ್ಲಾ ಪ್ರಮಾದಗಳಿಗೆ ಕೇಂದ್ರವನ್ನ ಹೊಣೆ ಮಾಡಬೇಡಿ. ಈ ಅಪಾಯದ ಸಮಯದಲ್ಲಿ ಒಗ್ಗೂಡಿ ಕೆಲಸ ಮಾಡಬೇಕು.ನಮ್ಮ ನಾಗರಿಕರನ್ನ ರಕ್ಷಣೆ ಮಾಡಬೇಕು.
ಪ್ರಕೃತಿ ಮನುಷ್ಯನ ತಾಯಿ. ಅದನ್ನು ಆತ ಕಾಪಾಡಬೇಕು. ಅಂದಾಗ ಮಾತ್ರ ಮನುಷ್ಯ ಬದುಕಬಲ್ಲ ಅನ್ನೋದನ್ನು ತಿಳಿಸಲೆಂದೇ ಈ ಸ್ಥಿತಿ ಬಂದಿದೆಯೋ ಅನ್ನಿಸದಿರದು. ಆ ತಾಯಿ ಮಾನವ ತನ್ನ ಮೇಲೆ ಮಾಡುವ ದೌರ್ಜನ್ಯವನ್ನು ಎಷ್ಟು ಎಂದು ಸಹಿಸಿಕೊಂಡಾಳು?
ದಯವಿಟ್ಟು ಪೋಲೀಸರ ಮೇಲೆ ಗೌರವ ಇಟ್ಟು ಅವರು ಹೇಳಿದಂತೆ ನಡೆಯಿರಿ. ತಮ್ಮ ಮನೆಯಿಂದ ಹೊರಗೆ ಬೀಳದೇ ನಿಮ್ಮ ಮತ್ತು ಕುಟುಂಬದ ಹಾಗೂ ಇತರರ ಬಗ್ಗೆ ಕಾಳಜಿ ವಹಿಸಿ.
ಹಾಗೆ ತಮ್ಮ ಜೀವ ಒತ್ತೆ ಇತ್ತು ಚಿಕಿತ್ಸೆ ನೀಡುವ ವೈದ್ಯಕೀಯ ಸೇವೆ ನೀಡೋ ಸಿಬ್ಬಂದಿಗಳನ್ನು ಗೌರವದಿಂದ ಕಾಣಿ. ವಸ್ತುಗಳನ್ನು ಕೊಳ್ಳಲು ಮುಗಿ ಬೀಳಬೇಡಿ. 21 ದಿನಗಳಿಗೆ ಬೇಕಾದ ವಸ್ತುಗಳನ್ನು ಒಂದೇ ಬಾರಿ ಕೊಳ್ಳಲು ನೋಡಬೇಡಿ. ಈ ರೀತಿ ಮಾಡಿದರೆ ನಿಮಗೆ ಅಗತ್ಯ ವಸ್ತುಗಳು ಸಿಗಬಹುದು. ಆದರೆ ಮಿಕ್ಕವರು ಇದರಿಂದ ವಂಚಿತರಾಗುತ್ತಾರೆ ಅವರು ಕೂಡ ಮನುಷ್ಯರು. ಅವರು ಕೂಡ ಬದುಕಬೇಕು. ಅನ್ನೊ ಜ್ಞಾನ ಇರಲಿ. ವರ್ತಕರೇ ಸಿಕ್ಕಿದ್ದೇ ಸೀರುಂಡೆ ಎಂದುಕೊಂಡು ಬೆಲೆ ಏರಿಸಿಕೊಂಡು ಕೂರಬೇಡಿ. ಸಾಮಾನ್ಯ ವರ್ಗದ ಜನ ಬದುಕಬೇಕು.
ಹಾ. ಕೊಂಕಣಿ ಭಾಷೆಯಲ್ಲಿ ಒಂದು ಮಾತಿದೆ ವಾಂಚುನ್ ಉರ್ಲೇರ್ ವಿಂಚುನ್ ಖಾವೈತ್ (ಬದುಕಿ ಉಳಿದರೆ ಹೆಕ್ಕಿಕೊಂಡು ತಿಂದಾದರೂ ಬದುಕಬಹುದು ಎಂದು) ಹೀಗಾಗಿ ಈ ದಿನಗಳಲ್ಲಿ ಹಬ್ಬ ಆಚರಣೆಗಳಿಗೆ ಚೂರು ಕಡಿವಾಣ ಹಾಕಿ. ಬದುಕಿ ಉಳಿದರೆ ಮುಂದೆ ಹಬ್ಬ ಆಚರಣೆ ಮಾಡಬಹುದು. ಅಂದಂತೆ ಇದು ಕೇವಲ ಲಾಕ್ ಡೌನ್ ಮಾತ್ರವೇ ಹೊರತು ಶಟ್ ಡೌನ್ ಅಥವಾ ಕರ್ಫ್ಯೂ ಅಲ್ಲ ಕೇಂದ್ರ ಗೃಹ ಇಲಾಖೆ ಹೇಳಿದಂತೆ ಔಷಧಿ ಅಂಗಡಿ, ಔಷಧಿ ತಯಾರಿಕಾ ಕಂಪನಿ ಆಸ್ಪತ್ರೆ, ಹಣ್ಣು ಹೂವು, ತರಕಾರಿ ಕಿರಾಣಿ ಅಂಗಡಿ ಜೀವವಿಮಾ ಕಂಪನಿಗಳು ಗ್ಯಾಸ್ ವಿತರಕರು ಹಾಲಿನ ಡೈರಿಗಳು, ಬ್ಯಾಂಕ್, ಏಟಿಎಂ, ಪೆಟ್ರೋಲ್ ಬಂಕ್, ಎಲೆಕ್ಟ್ರಾನಿಕ್ ಮಾಧ್ಯಮ, ಇಂಟರ್ನೆಟ್, ವಿದ್ಯುತ್ ಉತ್ಪಾದನ ಸಂಪರ್ಕ ಕಂಪನಿ ಅಗ್ನಿಶಾಮಕ ದಳ, ಪೊಲೀಸ್, ಹೋಮ್ ಗಾರ್ಡ್ಸ್ ಕಾರಾಗೃಹಗಳು ಇ ಕಾಮರ್ಸ್ ಮೂಲಕ ಪೂರೈಕೆ ಆಗುವ ಅಗತ್ಯ ವಸ್ತುಗಳು ಇತ್ಯಾದಿ ಸೇವೆಗಳು ಲಭ್ಯ ಇವೆ. ಜೊತೆಗೆ ಯಾರಾದ್ರೂ ತೀರಿ ಹೋದರೆ ಗರಿಷ್ಠ 20 ಮಂದಿ ಸೇರಿ ಅಂತಿಮ ವಿಧಿ ವಿಧಾನ ಮಾಡಲು ಅವಕಾಶ ಇದೆ. ಹೀಗಾಗಿ ಗಾಬರಿಗೆ ಒಳಗಾಗಬೇಡಿ.
ಒಟ್ಟಾರೆ ಈ 21 ದಿನಗಳಲ್ಲಿ ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಯನ್ನು ಸುನಿಶ್ಚಿತ ಮಾಡಿ. ಮನೆಯಲ್ಲೇ ಇರುವ ಮೂಲಕ ಸಮಾಜದ ಸುರಕ್ಷೆಗೆ ಮತ್ತು ಕೊರೊನ ವೈರಸ್ ನಿವಾರಣೆಗೆ ಕಾಣಿಕೆ ನೀಡಿ.
ನಮಸ್ಕಾರ
Get in Touch With Us info@kalpa.news Whatsapp: 9481252093
Discussion about this post