ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾರತೀಯ ಆರಾಧನಾ ಪರಂಪರೆಯಲ್ಲಿ ಗಣಪತಿ ಅತ್ಯಂತ ಜನಪ್ರಿಯ ದೇವತೆ. ವಿಘ್ನ ಬೀರುಗಳಾದ ಎಲ್ಲರಿಗೂ ಅವನ ಕಾರುಣ್ಯದ ರಕ್ಷೆ ಬೇಕೇ ಬೇಕು. ಗಣಪತಿಯಂಥ ದೇವರನ್ನು ಸೃಷ್ಟಿಸಿದ ಜನಾಂಗ ಜಡವಲ್ಲ. ಅದು ಜೀವಂತ ಜನಾಂಗ, ಗಣಪತಿ ಆ ಜೀವಂತಿಕೆಯ ಪ್ರತೀಕ.
ಜಡದಿಂದ ಎಚ್ಚರವಾಗುವ ವ್ಯಕ್ತಿಗೆ ಯಾವುದಾದರೊಂದು ಪ್ರೇರಕ ಚೇತನ ಅಗತ್ಯವೆಂದು ವಿಶ್ವದ ಎಲ್ಲ ವೇದಾಂತ ಮತ್ತು ವಿಚಾರವಾಙ್ಮಯಗಳ ಅಭಿಪ್ರಾಯ. ಹೀಗಾಗಿ ಅರಿವನೀವ ಗುರು ಗಣಪ, ನಂಬಿದವರಿಗೆ ಈತ ದೇವನಷ್ಟೆ ಅಲ್ಲ. ಆತ್ಮಿಯ ಅವಿಭಾಜ್ಯ.
ನಿತ್ಯ ಜೀವನದ ಕಣಕಣದಲ್ಲಿಯೂ ಗಣಪತಿಯನ್ನು ಕಾಣುವ ವೈಶಾಲ್ಯದೃಷ್ಟಿ ನಮ್ಮದು. ದೇವನೊಬ್ಬ ನಾಮ ಹಲವು, ಗಣಪತಿ ವಿಷಯದಲ್ಲಂತೂ ಇದು ಎಷ್ಟು ನಿಜವಾದ ಮಾತು. ಆಕೃತಿಯಂತೆ ಅವನ ಸಾಹಸಗಳು, ನಾಮರೂಪಗಳು ವಿಸ್ಮಯಗಳ ಸರಮಾಲೆ. ಪ್ರಕೃತಿಯಾರಾದನೆ, ಪ್ರಾಣಿ ಪೂಜೆ, ಸಹಬಾಳ್ವೆಗೆ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಸ್ಥಾನ ತಂದಿತ್ತ ನಮ್ಮ ಗಣಪತಿ ಸರ್ವ ಜನಾದರಣೀಯ, ಸದಾ ಸ್ಮರಣೀಯ, ಪ್ರಥಮ ಪೂಜಿತ ವಿಶ್ವವಂದಿತ.
ವಿನಾಯಕನನ್ನು ಹಸ್ತಿ ಮುಖ ಅನ್ನುತ್ತಾರೆ. ಹಸ್ತಿ ಎಂದರೆ ಆನೆ, ವಿನಾಯಕನು ಹುಟ್ಟಿದ್ದು ಹಸ್ತಾ ನಕ್ಷತ್ರದಲ್ಲಿ. ಆ ವಿಶೇಷತೆಯನ್ನು ನೆನಪಿಸಿಕಳ್ಳುವುದಕ್ಕೆ ಆತನನ್ನು ಹಸ್ತಿ ಮುಖನನ್ನಾಗಿ ಮಾಡಿದರು. ಹಸ್ತಾ ನಕ್ಷತ್ರದವ ರಾಶಿ ಕನ್ಯಾ ಆಗಿರುತ್ತದೆ. ಕನ್ಯಾ ಅಂದರೆ ವಿವಾಹ ಆಗದಿರುವವನೆಂದು ಅರ್ಥ. ಆದ್ದರಿಂದಲೇ ಆತ ಬ್ರಹ್ಮಚಾರಿ. ಈ ಕನ್ಯಾ ರಾಶಿಗೆ ಅಧಿಪತಿ-ನವಗ್ರಹಗಳಲ್ಲಿ ಒಬ್ಬನಾದ ಬುಧ. ಅಂದರೆ ಪಂಡಿತನೆಂದು ಅರ್ಥ. ಆದ್ದರಿಂದಲೇ ಮಹಾ ಪಾಂಡಿತ್ಯ ಬೇಕೆಂದರೆ ವಿನಾಯಕೋಪಾಸನೆ ಮಾಡಬೇಕೆನ್ನುತ್ತಾರೆ ಹಿರಿಯರು.
ಈ ರಾಶ್ಯಾಧಿಪತಿ ಆದ ಬುಧನು ಎಲೆ ಹಸಿರು ಬಣ್ಣದವನಾಗಿರುತ್ತಾನೆ. ಆದ್ದರಿಂದ ಹಸಿರು ಪತ್ರೆಗಳಿಂದ ಗಣಪತಿಯನ್ನು ಪೂಜಿಸುತ್ತಾರೆ. ಹೆಸರು ಕಾಳನ್ನು ನೈವೇದ್ಯವಾಗಿಡುತ್ತಾರೆ.
ಗಣಪತಿ-ಮಧುಮೇಹಿ
ಪಂಚಭೂತಗಳಲ್ಲಿ ಉಂಟಾದ ಶರೀರವುಳ್ಳವನಾದ ಶ್ರೀ ಗಣಪತಿಯು ಮಧುರ ಭಕ್ಷ ಸೇವನೆಯಿಂದ ಗಣಪತಿಯ ಶರೀರವು ಬಹಳ ಸ್ಥೂಲವಾಗಿ ಸಿಹಿ ಮೂತ್ರರೋಗ ಪೀಡಿತವಾಗುತ್ತದೆ.
ಆಗ ಗಣಪತಿಯು ತನ್ನ ದಿವ್ಯ ದೃಷ್ಟಿಯಿಂದ ಈ ರೀಗ ನಿವಾರಣೆಗಾಗಿ ನೋಡಿದಾಗ ಬೇಲದ ಹಣ್ಣು ಮತ್ತು ನೇರಳೆ ಹಣ್ಣುಗಳು ಗೋಚರವಾಗುತ್ತದೆ. ಆಯುರ್ವೇದದಲ್ಲಿ ಸಿಹಿ ಮೂತ್ರರೋಗ ನಿವಾರಣೆಗೆ ಕಪಿತ್ಥ ಮತ್ತು ಜಂಬೂಫಲಗಳು ದಿವ್ಯೌಷಧಗಳಾಗಿವೆ. ಈ ಕಥೆಯು ಕಟ್ಟು ಕಥೆಯಂತೆ ತೋರಿದರು ರೋಗ ನಿವಾರಣೆಯ ಸೂತ್ರವನ್ನು ಹೊಂದಿರುವುದು ಅಷ್ಟೇ ಸತ್ಯವಾಗಿದೆ.
ಗಜಾನನಂ ಭೂತ ಗಣಾಧಿ ಸೇವಿತಂ ಕಪಿತ್ಥ ಜಂಬೂಫಲ ಸಾರಭಕ್ಷಕಂ/
ಉಮಾಸುತಂ ಶೋಕವಿನಾಸ ಕಾರಣಂ-ನಮಾಮಿ ವಿಘೇಶ್ವರ ಪಾದಪಂಕಜಂ//
ಈ ಶ್ಲೋಕವು ಶ್ರೀ ಗಣಪತಿಯ ಪ್ರಾರ್ಥನೆಗಳಲ್ಲಿ ಅತ್ಯಂತ ಲೋಕಪ್ರಿಯವು ಜೊತೆಗೆ ಸಿಹಿ ಮೂತ್ರರೋಗ ನಿವಾರಣ ಸೂತ್ರವೂ ಅಗಿರುತ್ತದೆ.
ಸಿದ್ಧಿ ಬುದ್ಧಿ ರಮಣ
ಕೆಲವು ಪುರಾಣಗಳಲ್ಲಿ ಸಿದ್ಧಿ ಬುದ್ಧಿಯೆಂಬ ಕನ್ಯೆಯರಿದ್ದು ಗಣಪತಿಯೊಂದಿಗೆ ಅವರೀರ್ವರ ವಿವಾಹ ಮಾಡಿ ಕ್ಷೇಮ ಲಾಭರೆಂಬ ಎರಡು ಮಕ್ಕಳನ್ನು ಕೊಟ್ಟು ಅವನನ್ನು ಅಂದವಾಗಿ ಕೌಟುಂಬಿಕ ವ್ಯಕ್ತಿಯನ್ನಾಗಿ ಚಿತ್ರಿಸಿದ್ದಾರೆ ನಮ್ಮ ಪ್ರಾಚೀನರು.
ಅವನನ್ನು ಸಂಸಾರಿಯನ್ನಾಗಿಯೂ ಸಂಸಾರಾತೀತನನ್ನಾಗಿಯೂ ಮಾಡಿ, ಜಗದ ಜಂಜಡದ ನೋವು ನಲಿವುಗಳಲ್ಲಿ ಜಯಾಪಜಯಗಳಲ್ಲಿ ಆ ದೇವನನ್ನೂ ನೂಕಿ, ಅಂಥ ಪರಿಸ್ಥಿತಿಗಳಿಗೆ ಆತನಿಂದ ಉದ್ಭವಿಸುವ ಕ್ರಿಯೆ-ಪ್ರಕ್ರಿಯೆಗಳನ್ನು ನೋಡಿ ಮೋಜಿಸುವ ಭಕ್ತ ಭಾವುಕನದು. ಕೊನೆಯಲ್ಲಿ ಜೀವನದ ಅರ್ಥವನ್ನು ತಾನೆ ಅರಿತು ಅನಿತ್ಯಂ ಅಸುಖಂ ಲೋಕಂ, ಇಮಂ ಪ್ರಾಪ್ಯ ಭಜಸ್ವಮೇ ಎಂದು ದೇವನ ಕರೆಗೆ ಓಗೊಟ್ಟು ಶರಣಾಗತಿಯಾಗುವುದು ಕೊನೆಯ ಹಂತ.
ಭವಚಕ್ರದ ಸಂಕೇತ ಸ್ವಸ್ತಿಕ್
ಸ್ವಸ್ತಿಕ್ವನ್ನು ಗಣಪತಿಯ ಪ್ರತೀಕವೆಂತಲೂ, ಭವಚಕ್ರದ ಸಂಕೇತವೆಂದೂ ಗುರುತಿಸಲಾಗುತ್ತದೆ. ಯಾವ ಸ್ಥಳದಲ್ಲಿ ಆನಂದ ಉಲ್ಲಾಸ, ಶುಭ್ರತೆಗಳಿವೆಯೋ ಆ ಸ್ಥಳದಲ್ಲೆಲ್ಲ ನಾವು ಈ ಸ್ವಸ್ತಿಕ್‌ನ್ನು ಕಾಣುತ್ತೇವೆ. ಪಾಠ ಕಲಿಯುವ ಮಕ್ಕಳು ಓಂ ನಮಃ ಸಿದ್ಧಂ ಎಂದು ಹೇಳುವ ರೂಢಿ ಒಂದು ಕಾಲಕ್ಕೆ ಇತ್ತು. ಇದು ಬರುಬರುತ್ತಾ ಬಾಲ ಭಾಷೆಯಲ್ಲಿ ಕನಾಮಾಸೀದವಾಗಿ ಪರಿಣಮಿಸಿತು. ಈ ಸಿದ್ಧಂ ಅಥವಾ ಸ್ವಸ್ತಿ ಎನ್ನುವುದರ ಸಂಕೇತವೇ ಮುಂದೆ ಗಣಪತಿ ರೂಪವಾಗಿ ಮೈದೆಳೆಯಿತು. ಸ್ವಸ್ತಿಕದ ಆಕಾರ ಚತುಷ್ಕೋಣ ಘಟಚಕ್ರ ನಿರೂಪಣೆಯ ಪ್ರಕಾರ ಚತುಷ್ಕೋಣ ಚಕ್ರವು ಮೂಲಾಧಾರ. ಅದಕ್ಕೆ ಅಧಿದೇವತೆ ಗಣಪತಿ.
ಗಣಪತಿ ಉಪಾಸನೆ: ಏಕೆ? ಹೇಗೆ?
ನಮ್ಮ ದೇಶದಲ್ಲಿ ಗಣಪತಿಯ ಗುಡಿಯಿಲ್ಲದ ಗ್ರಾಮವಿಲ್ಲ. ಗಣಪತಿಯ ಮೂರ್ತಿಯಿರದ ಮನೆಯಿಲ್ಲ. ಯಾವುದೇ ಕೆಲಸ ಕೈಗೊಳ್ಳುವ ಮೊದಲು ಗಣಪನನ್ನು ನೆನೆಯುತ್ತೇವೆ. ಬಯಕೆಗಳು ತೀರಬೇಕೆಂದು ಗಜಮುಖನನ್ನು ಬೇಡಿಕೊಳ್ಳುತ್ತೇವೆ. ಸಂಸ್ಕಾರಗಳನ್ನು ನಡೆಸುವಾಗ, ಪರೀಕ್ಷೆಗೆ ಕೂಡುವಾಗ, ಮಗುವಿಗೆ ಅಕ್ಷರಾಭ್ಯಾಸ ಮಾಡಿಸುವಾಗ, ಪ್ರಯಾಣಕ್ಕೆ ಹೊರಡುವಾಗ, ತಪ್ಪದೇ ಗಣೇಶನನ್ನು ಪ್ರಾರ್ಥಿಸುತ್ತೇವೆ. ಎಲ್ಲಾ ಜಾತಿ, ಪಂಥ ಸಂಪ್ರದಾಯದವರು ಗಣೇಶನ ಪೂಜೆಯಲ್ಲಿ ಭಾಗಿಗಳಾಗುತ್ತಾರೆ. ಗಣಪತಿಯಷ್ಟು ಜನಪ್ರಿಯ ದೇವತೆ ಮತ್ತೊಂದಿಲ್ಲ.
ಗಣೇಶ ಎಂದರೆ ಆನೆಮೊಗದ ಕುಳ್ಳು ಗಾತ್ರದ ಡೊಳ್ಳು ಹೊಟ್ಟೆಯ, ಪಾಶಾಂಕುಶ ಹಾಗೂ ನಾಗಯಜ್ಞೋಪವೀತ ಧರಿಸಿ ಇಲಿಯ ಮೇಲೇರಿ ಬರುವ ದೇವತೆ. ದುಷ್ಟರ ಕೆಲಸಗಳಿಗೆ ವಿಘ್ನವನ್ನೊಡ್ಡುವುದು ಶಿಷ್ಟರ ಕಾರ್ಯಗಳನ್ನು ನಿರ್ವಿಘ್ನವಾಗಿ ನೆರವೇರಿಸಿ ಕೊಡುವವನು ಈ ಗಣಪತಿ.
ಗಣಪತಿಯ ಉಪಾಸನೆಗೆ ಸಂಬಂಧಿಸಿದ ಕೆಲವು ಪ್ರಮುಖ ಅಂಶಗಳು ಇಂತಿವೆ:
ಗಣಪತಿಗೆ ಪ್ರಿಯವಾದ ಸಂಖ್ಯೆ 21. ಆತನಿಗೆ 21 ವಿಧವಾದ ಪತ್ರಗಳಿಂದ ಗರಿಕೆಯ 21 ಜೋಡಿದಳಗಳಿಂದ ಪ್ರಜೆ ಸಲ್ಲಿಸುವುದು ವಾಡಿಕೆ. 21 ಮೋದಕಗಳನ್ನು ನೈವೇದ್ಯ ಮಾಡುವುದು ಪದ್ಧತಿ. 21 ಸಂಖ್ಯೆಗೂ ಈ ಗಣಪತಿಗೂ ಏನು ಸಂಬಂಧ? ಇದು ಸಂಖ್ಯಾಶಾಸ್ರ್ತಕ್ಕೆ ಸಂಬಂಧಪಟ್ಟ ಮಾತು. ಸಂಖ್ಯಾ ಆಧ್ಯಾತ್ಮ ತತ್ವಗಳನ್ನು ನಾನಾ ಬಗೆಯಿಂದ ಪ್ರಾಚೀನರು ವಿಭಾಗಿಸಿದ್ದುಂಟು. ಪ್ರಪಂಚವನ್ನು ತುಂಬಿರುವ ತತ್ವಗಳು ಇಪ್ಪತ್ತೈದು. ಚೇತನ, ಚಿತ್ತ, ಅಹಂಕಾರ, ಬುದ್ಧಿ, ಮನಸ್ಸು, ಶ್ರೋತೃ, ತ್ವಕ್, ಚಕ್ಷು, ರಸನೆ, ಪ್ರಾಣ, ವಾಕ್, ಪಾಣಿ, ಪಾದ, ಪಾಯು, ಉಪಸ್ಥ, ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಆಕಾಶ, ವಾಯು, ಅಗ್ನಿ, ಜಲ, ಪ್ಲಥ್ವಿ, ಇದೇ ಆ ತತ್ವಗಳು.
ಆಕಾಶ ತತ್ವ
ಇವುಗಳಲ್ಲಿ ಮೊದಲನೆಯದು ಅಂತಃಕರಣ ಪಂಚಕ, ಎರಡನೆಯದು ಜ್ಞಾನೇಂದ್ರಿಯಪಂಚಕ, ಮೂರನೆಯದು ಕರ್ಮಪಂಚಕ, ನಾಲ್ಕನೆಯದು ತನ್ಮಾತ್ರಪಂಚಕ, ಐದನೆಯದು ಭೂತಪಂಚಕ, ಹೀಗೆ ಪಂಚಪಂಚಕಗಳಿಂದ ಪ್ರಪಂಚ ನಿರ್ಮಾಣವಾಗಿದೆ. ಇದರಲ್ಲಿ 21 ನೇ ತತ್ವವೇ ಆಕಾಶ ತತ್ವ. ಇದರ ಅಭಿಮಾನಿ ದೇವತೆ ಗಣಪತಿ. ಆದ್ದರಿಂದ ಆತನಿಗೆ 21 ಬಗೆಯ ಭಕ್ಷ. ಭೋಜ್ಯ, ಫಲ-ಪುಷ್ಟ ಪ್ರಿಯವಾದುದು.
ಗಣಪತಿಗೆ ತೆಂಗಿನಕಾಯಿ ತುಂಬಾ ಇಷ್ಟ. ಹಾಗಾಗಿ ಗಣಪತಿಗೆ ಕಾಯಿ ಒಡೆಯುವ ಪದ್ಧತಿ ಇದೆ. ಇದು ನಮ್ಮ ಸ್ವಾರ್ಥದ ಗಟ್ಟಿತನವನ್ನು ಒಡೆದು ತಿರುಳಾದ ಆತ್ಮವನ್ನು ಸಮರ್ಪಿಸುವ ಸಂಕೇತವೂ ಹೌದು.
ತ್ರಿಪುರಾಸುರನ ಸಂಹಾರ ಕಾಲದಲ್ಲಿ ಶಿವನಿಗೆ ಎಷ್ಟು ಪ್ರಯತ್ನಪಟ್ಟರೂ, ತ್ರಿಪುರಾಸುರನನ್ನು ಸಂಹರಿಸಲಾಗಲಿಲ್ಲ. ಆಗ ಶಿವನಿಗೆ ತಾನು ವಿನಾಯಕನನ್ನು ಪೂಜಿಸಲ್ಲ ಎಂದು ನೆನಪಾಯಿತು. ಗಣಪತಿಗೆ ತನ್ನನ್ನೇ ಸಮರ್ಪಿಸುವನೆಂದು ನಿರ್ಧರಿಸಿದ. ಅದಕ್ಕಾಗಿ ಸಾಂಕೇತಿಕವಾಗಿ ತನ್ನ ಬದಲಿಗೆ ಮೂರು ಕಣ್ಣುಳ್ಳ ತೆಂಗಿನಕಾಯಿಯನ್ನು ಒಡೆದು ಒಪ್ಪಿಸಿದ. ತ್ರಿಪುರನ ಸಂಹಾರವಾಯಿತು. ಗಣಪತಿಗೆ ಕಾಯಿ ಒಡೆಯುವಾಗ ಮೂರು ಅಥವಾ ಅದಕ್ಕಿಂತ ಹೆಚ್ಚಿನ ತುಂಡಾಗಬೇಕಂತೆ. ಇದೂ ಒಂದು ಸಂಪ್ರದಾಯ. ಗಣಪತಿಗೆ 108, 1008 ಅಥವಾ ಅದಕ್ಕಿಂತ ಹೆಚ್ಚು ತೆಂಗಿನಕಾಯಿಯನ್ನು ಒಡೆದು ರಾಶಿ ಹಾಕಿ ಸಮ್ಮತಿಸುವ ಪದ್ಧತಿ ಇದೆ.
ಗರಿಕೆ ಪ್ರಿಯ
ಗಣಪತಿಗೆ ಪ್ರಿಯವೆನೆಸಿದ ದೂರ್ವೆಯ ಕುರಿತು ಅನೇಕ ಪುರಾಣ ಕಥೆಗಳಿವೆ. ಬ್ರಹ್ಮನು ದೂರ್ವೆಗೆ ಅನ್ನದ ಅಧಿಪತಿಯಾಗು ಎಂದು ವರನನ್ನು ಕೊಟ್ಟನಂತೆ. ಅನ್ನ ಸ್ವರೂಪಳಾದ ದೂರ್ವಾ ದೇವಿಗೂ ಪಾರ್ವತಿಗೂ ಒಮ್ಮೆ ಕಲಹವಾದಾಗ ಪಾರ್ವತಿಯೂ ತೃಣ ರೂಪದಿಂದ ಪೃಥ್ವಿಯಲ್ಲಿ ಜನಿಸುವಂತೆ ದೂರ್ವಾದೇವಿಗೆ ಶಪಿಸಿದಳು. ಮುಂದೆ ದೂರ್ವೆಯು ಗಣಪತಿಯನ್ನು ಒಲಿಸಿಕೊಂಡು ಶತಾಂಕುರ ಅಮೃತ ಸ್ವರೂಪ ಪಡೆದುಕೊಂಡಿತು. ಅಂದಿನಿಂದ ಮಂಗಳದಾಯಿನಿ ಎನಿಸಿದ್ದು. ಗಣಪತಿಗೆ ವಿಶೇಷವಾಗಿ ದೂರ್ವಾರ್ಪಣ ಮಾಡುವ ಸಂಪ್ರದಾಯ ಬಂತು. ಅಂದಿನಿಂದ ಎಲ್ಲಾ ಮಂಗಲ ಕಾರ್ಯಗಳಲ್ಲಿ ದೂರ್ವೆಗೆ ಅಗ್ರಸ್ಥಾನ.
ಅನಲಾಸುರ ಎಂಬ ದಾನವ ಗಣಪತಿಯ ಉದರವನ್ನು ಹೊಕ್ಕು ಕುಳಿತಾಗ ಗಣೇಶನ ಶಿರಸ್ಸು ಮತ್ತು ಹೊಟ್ಟೆಯಲ್ಲಿ ತಡೆಯಲಾಗದ ಬೆಂಕಿಯೆದ್ದಿತು. ಚಂದ್ರಕಿರಣಗಳು, ಕಮಲಪುಷ್ಪಗಳು, ಸರ್ಪಗಳು, ಮುಣತಾದವುಗಳಿಂದ ಶೈತ್ಯೋಪಚಾರ ಮಾಡಿದರೂ ಪ್ರಯೋಜನವಾಗಲಿಲ್ಲ. ಕೊನೆಗೆ 80,000 ಮಹರ್ಷಿಗಳು ಪ್ರತಿಯೊಬ್ಬರು 21 ಗರಿಕೆ ಹುಲ್ಲಿನಿಂದ ಗಣೇಶನನ್ನು ಪೂಜಿಸಲು ಆ ದೂರ್ವೆಗಳು ಅವನ ದೇಹವನ್ನು ಅಚ್ಚಾದಿಸಿ ತಂಪನ್ನುಂಟು ಮಾಡಿತು. ಗಣಪತಿಗೆ ಅರ್ಪಿತವಾದ ದೂರ್ವೆಯ ತೂಕ ಇಡೀ ದೇವಲೋಕಕ್ಕೂ ಮಿಗಿಲಾಯಿತಂತೆ. ಕೊನೆಗೆ ಗಣಪತಿಗರ್ಪಿತ ದೂರ್ವೆಯ ಮಹಿಮೆ ತಿಳಿದು ದೇವತೆಗಳಿಗೆ ದೂರ್ವೆಯ ಬಗ್ಗೆ ಭಕ್ತಿ-ಅಭೀಮಾನ ಮೂಡಿತು ಎಂದು ಪುರಾಣಗಳಲ್ಲಿ ವರ್ಣಿಸಲಾಗಿದೆ. ಮಕ್ಕಳಾಗದವರು, ಬಂಜೆಯರು ಭಾದ್ರಪದ ಶುದ್ಧ ಅಷ್ಟಮಿಯಂದು ದೂರ್ವೆ ಪ್ರಜೆ ಮಾಡುವ ಸಂಪ್ರದಾಯವಿದೆ.
ಪ್ರಣವ ಸ್ವರೂಪಿ
ಪ್ರಣವ (ಓಂಕಾರ) ಮತ್ತು ಗಣಪತಿಗೆ ಇರುವ ಸಂಬಂಧ ತಂತ್ರಶಾಸ್ತ್ರದಲ್ಲಿ ವಿವರವಾಗಿ ವರ್ಣಿತವಾಗಿದೆ. ಅದರ ಪೌರಣಿಕ ವರ್ಣನೆ ಹೀಗಿದೆ: ಕೈಲಾಸ ಪರ್ವತ ಮಂಟಪವೊಂದರಲ್ಲಿ ಸಪ್ತಕೋಟಿ ಮಂತ್ರಗಳ ಮೇಲೆ ಶಿವ ಪಾರ್ವತಿಯರ ದೃಷ್ಟಿ ಬೀಳುತ್ತದೆ. ಈ ಯುಗಳ ಪ್ರಣವ ಮಂತ್ರದಿಂದ ಭಗವಾನ್ ಶ್ರೀ ಮಹಾಗಣಪತಿ ಅವಿರ್ಭವಿಸುತ್ತಾನೆ.
ಆದ್ದರಿಂದಲೇ ಗಣೇಶನಿಗೆ ಪ್ರಣವ ಸ್ವರೂಪನೆಂದು ಹೇಳುತ್ತಾರೆ. ಗಣಪತಿಯ ಮುಖವು ಪ್ರಣವಾಕಾರವಾಗಿಯೇ ಇದೆ. ಪ್ರಣವ ಮೂರು ಅಕ್ಷರಗಳನ್ನು (ಅ, ಉ, ಮ) ಒಳಗೊಂಡಿದೆ. ಬ್ರಹ್ಮ ವಿಷ್ಣು ಮಹೇಶ್ವರ, ಸೃಷ್ಟಿ – ಸ್ಥಿತಿ – ಲಯ, ಸತ್ವ ರಜಸ್ಸು ತಮಸ್ಸು ಹೀಗೆ ತ್ರಿಗಣಗಳಿಗೂ ಸಂಕೇತ.
ಶ್ರೀ ಮಹಾಗಣಪತಿಯಲ್ಲಿ ಈ ತ್ರಿಪ್ಮಟಗಳು ಏಕಾಕಾರವಾಗಿಯೂ ಮತ್ತು ಅತೀತವಾಗಿಯೂ ನೆಲೆಗೊಂಡಿವೆ. ಸಮಸ್ತ ಗಣಗಳು ಈ ಓಂಕಾರದಲ್ಲಿಯೇ ಅಡಗಿವೆ. ಪ್ರತಿಯೊಂದು ಮಂತ್ರ ಉಚ್ಚಾರಣೆಗೆ ಮೊದಲು ಓಂಕಾರವನ್ನು ಸೇರಿಸಿಯೇ ಹೇಳಬೇಕು. ಇದರಿಂದ ಆ ಮಂತ್ರವು ಸಿದ್ಧಿಸುತ್ತದೆ. ಮಂತ್ರ, ವೈಷ್ಣವ, ಶೈವ, ಶಾಕ್ಷ ಇವುಗಳಲ್ಲಿ ಯಾವ ಸಂಪ್ರದಾಯದ್ದಾದರೂ ಓಂಕಾರಸಹಿತವೇ ಉಚ್ಚರಿಸಬೇಕು.
ಉದಾರಹಣೆಗೆ : ಓಂ ನಮಃ ಶಿವಾಯ, ಓಂ ನಮೋ ನಾರಾಯಣಾಯ ಹೀಗೆ.
ಸಿಂಧೂರ ವರ್ಣ
ಗಣಪತಿಯು ಮೂಲಾಧಾರ ಕ್ಷೇತ್ರಸ್ಥಿತ ದೇವತೆ, ಮೂಲಾಧಾರ ತತ್ವವು ಪೃಥ್ವೀತತ್ವ, ರಕ್ತವರ್ಣ, ಇವೆರಡಕ್ಕೂ ಗಣಪತಿಗೂ ನಿಕಟ ಸಂಬಂಧ. ಗಣಪತಿ ಮಣ್ಣಿನ ಮಗ. ಪಾರ್ವತಿಯ ಮೈಯ ಮಣ್ಣಿನಿಂದ ಸೃಷ್ಟನಾದವನು. ಪ್ಲಥ್ವೀತತ್ವವು ಮಣ್ಣಿಗೆ ಸಂಬಂಧಿಸಿದ್ದಾಗಿದೆ. ಮೂಲಾಧಾರ ಚಕ್ರದ ದಳಗಳ ಬಣ್ಣ ಕೆಂಪು. ಆದ್ದರಿಂದಲೇ ಆ ಕ್ಷೇತ್ರ ಸ್ಥಿತನಾದ ಗಣಪತಿ ರಕ್ತವರ್ಣ ಪ್ರಿಯ. ಆದ್ದರಿಂದಲೇ ರಕ್ತಗಂಧಾನುಲಿಪ್ತಾಂಗ, ರಕ್ತಪುಷ್ಪಪೂಜಿತ, ತಾಂತ್ರಿಕ ಸಾಧಕರು ಕೆಂಪು ಬಣ್ಣದ ವಸ್ತ್ರಗಳನ್ನುಟ್ಟು ಗಣಪತಿಯ ಉಪಾಸನೆ ಮಾಡುತ್ತಾರೆ. ಶಾಂತಿ, ವಶ್ಯ, ಸ್ತಂಭನ, ವಿದ್ವೇಷಣ, ಉಚ್ಚಾಟನ, ಮಾರಣಾದಿ ಷಟ್‌ಕರ್ವ್ಮಗಳಲ್ಲಿ ದೇವತೆಗೂ ಸಾಧಕನಿಗೂ ಬೇರೆ ಬೇರೆ ಬಣ್ಣಗಳು ಹೇಳಲ್ಪಟ್ಟಿವೆ.
ಇವೆಲ್ಲ ಪ್ರಿಯ
ಗಣಪತಿಗೆ ಮೋದಕ, ಲಡ್ಡು, ಎಳ್ಳು, ಅರಳು, ಕಬ್ಬು, ತೆಂಗಿನಕಾಯಿ, ಬಾಳೆಹಣ್ಣು ಮತ್ತು ಬೀಜಾಪೂರಾ ಫಲಗಳು ಪ್ರಿಯ. ಇವು ನೈವೇದ್ಯ ಮತ್ತು ಹೋಮದ್ರವ್ಯಗಳಿಗೆ ಪ್ರಶಸ್ತ್ರ. ಗಣಪತಿಯ ಬೀಜಾಕ್ಷರ ಗಂ. ಗಣಪತಿ ಮಂತ್ರೋಪಾಸನೆಯಲ್ಲಿ ಈ ಬೀಜಯುಕ್ತ ಮಂತ್ರಜಪ ವಿಧಿಸಲ್ಪಟ್ಟಿದೆ. ಅಂಗನ್ಯಾಸಕ್ಕೆ ಗಾಂ, ಗೀಂ ಎಂಬುದು ವಿಧಿ. ಏಕಾಕ್ಷರಿಯಿಂದಾರಂಭಿಸಿ 22 ವಿಧವಾದ ಗಣಪತಿ ಮಂತ್ರಗಳುಂಟು. ಗುರುಮುಖದಿಂದ ಇವುಗಳಲ್ಲಿ ಯಾವುದಾದರೊಂದು ಪಡೆದು ಅನುಷ್ಟಾನ ಮಾಡಬಹುದು. ಗಣಪತಿ ಉಪಾಸನೆಯಲ್ಲಿ ದಂತ, ಪಾಶ, ಅಂಕುಶ, ವಿಘ್ನ, ಲಡ್ಡುಕ, ಬೀಜಾಪೂರಾ ಮುದ್ರೆಗಳ ವಿನಿಯೋಗ ಹೇಳಲಾಗಿದೆ. ಬಿಲ್ವಪತ್ರೆ, ಎಕ್ಕದ ಹೂವು ಸಹ ಗಣಪತಿಗೆ ಪ್ರಿಯ.
ಚತುರ್ಥಿ ಪ್ರಶಸ್ತ
ಗಣಪತಿಯು ಭಾದ್ರಪದ ಶುದ್ಧ ಚತುರ್ಥಿಯಂದು ಜನಿಸಿದ್ದರಿಂದ ಅವನ ಪೂಜೆ ಉಪಾಸನೆಗಳಿಗೆ ಈ ತಿಥಿ ಪ್ರಶಸ್ತ. ಆದರೆ ಎಲ್ಲಾ ಚತುರ್ಥಿ ದಿನಗಳಲ್ಲೂ ಗಣಪತಿಯನ್ನು ಆರಾಧಿಸಬಹುದು. ಶ್ರಾವಣ ಶುಕ್ಲ ಚತುರ್ಥಿ ಮತ್ತು ಮಾಘ ಶುಕ್ಲ ಚತುರ್ಥಿಯಂದು ಸಹ ಗಣೇಶನ ವ್ರತಗಳು ವಿಧಿಸಲ್ಪಟ್ಟಿವೆ.
ಇದಕ್ಕೊಂದು ಹಿನ್ನೆಲೆ ಇದೆ: ಒಮ್ಮೆ ಸೃಷ್ಟಿಕರ್ತನು ಪ್ರಕೃತಿಯನ್ನು ಅಹ್ವಾನಿಸಿ, ಷಡಾಕ್ಷರ ಗಣೇಶ ಮಂತ್ರ ಜಪದಿಂದ ಪ್ರಕೃತಿ ಚತುರ್ಥಿ ದೇವತೆಯಾದಳು. ಅವಳ ಒಂದು ಭಾಗ ಕಪ್ಪಾಗಿಯೂ ಮತ್ತೊಂದು ಭಾಗ ಬಿಳುಪಾಗಿಯು ಇದ್ದಿತು. ಅವಳ ಅಂಗಾಂಗಗಳಿಂದ ಚಂದ್ರನ ಕಲೆಗಳು ಹುಟ್ಟಿದವು. ಶುದ್ಧ ಚತುರ್ಥಿಯಂದು ಹಗಲೂ, ಕೃಷ್ಣ ಚತುರ್ಥಿಯಂದು ರಾತ್ರಿಯೂ ತನ್ನನ್ನು ಪೂಜಿಸಿದವರ ಇಷ್ಟಾರ್ಥ ಸಿದ್ಧಿಸುತ್ತದೆ. ಎಂದು ಗಣಪತಿ ಅವಳಿಗೆ ವರವಿತ್ತನು ಎಂದು ಮುದ್ಗಲ ಪುರಾಣದಲ್ಲಿ ಹೇಳಲಾಗಿದೆ.
ಮಂಗಳವಾರ ಚತುರ್ಥಿ ತಿಥಿ ಇರುವಾಗ ಅಂಗಾರಕ ಚತುರ್ಥಿ ವ್ರತ ಆಚರಣೆ ಶ್ರೇಷ್ಟವಿದ್ದು ಕುಜ-ಕೇತುಗ್ರಹಗಳ ಕೆಟ್ಟ ಪ್ರಭಾವ ದೂರವಾಗುವುದೆಂದು ಪ್ರತೀತಿ.
ಪರಬ್ರಹ್ಮನನ್ನು ಯಾವ ರೂಪದಲ್ಲಿ ಉಪಾಸನೆ ಮಾಡಿದರೂ ಸಿದ್ಧಿಯಾಗುವುದು. ಆದರೂ ಕಲಿಯುಗದಲ್ಲಿ ಚಂಡೀ (ದುರ್ಗೆ) ಮತ್ತು ವಿನಾಯಕ ರೂಪಗಳಿಂದ ಉಪಾಸನೆ ಮಾಡಿದರೆ ಕ್ಷಿಪ್ರ ಪ್ರಸಾದವು ಲಭಿಸುತ್ತದೆ ಎಂಬುದು ಬಲ್ಲವರ ಅಭಿಮತ.
ಗಾಣಾಪತ್ಯರು
ಗಣಪತಿಯನ್ನೇ ‘ಪರಮದೈವ’ ಎಂದು ದೃಢವಾಗಿ ನಂಬಿ, ಅವನೇ ತಮ್ಮ ‘ಆರಾಧ್ಯ ದೈವ’ ಎಂದು ಪೂಜಿಸಿ, ಆತನಿಗೆ ಅನನ್ಯ ಶರಣರಾಗಿ, ಕಾಯೇನ ವಾಚಾ ಮನಸಾ (ತ್ರಿಕರಣಪೂರ್ವಕ) ನಿಷ್ಠೆಯಿಂದ ಗಣಪತಿಯ ಮಂತ್ರಜಪ, ಅನುಷ್ಠಾನ, ಪೂಜನ ಹಾಗೂ ಅರ್ಚನ ಕಾರ್ಯಗಳಲ್ಲಿ ಸದಾ ನಿರತರಾದವರು ‘ಗಾಣಾಪತ್ಯರು’. ಗಾಣಾಪತ್ಯರು ಒಂದು ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿದ್ದರು.
ವಾಸ್ತವವಾಗಿ ಗಾಣಾಪತ್ಯ ಪಂಥ ಉತ್ತರಭಾರತದಲ್ಲಿ ಪ್ರಾರಂಭವಾಗಿ, ಮಧ್ಯಭಾರತದಲ್ಲಿ ಪ್ರಬಲವಾಗಿ ಬೆಳೆದು, ದಕ್ಷಿಣಕ್ಕೂ ಹಬ್ಬಿತು. ಆದಿ ಶಂಕರರು ಗಾಣಾಪತ್ಯ ಪಂಥವನ್ನು ಷಣ್ಮತಗಳಲ್ಲಿ ಒಂದೆಂದು ಒಪ್ಪಿಕೊಂಡು, ಗಣಪತಿಗೆ ಪಂಚಾಯತನದಲ್ಲಿ ಸ್ಥಾನ ಕಲ್ಪಿಸಿದುದೇ ಗಾಣಾಪತ್ಯರ ಪ್ರಾಬಲ್ಯಕ್ಕೆ ನಿದರ್ಶನ.
ಗಾಣಾಪತ್ಯ ಸಾಹಿತ್ಯ
ಗಾಣಾಪತ್ಯ ಸಾಹಿತ್ಯದಲ್ಲಿ ಪ್ರಾಚೀನ ಸಾಹಿತ್ಯವೆಲ್ಲವೂ ಸ್ತೋತ್ರ, ಮಂತ್ರ, ವ್ರತ, ಧ್ಯಾನಗಳಿಂದ ತುಂಬಿದೆ. ಇದು ಸಂಸ್ಕೃತದಲ್ಲಿರುವುದೇ ಹೆಚ್ಚು. ದೇಶಭಾಷೆಗಳಲ್ಲಿ ಮರಾಠಿಗೆ ಮೊದಲ ಸ್ಥಾನ. ವಿದೇಶಿ ವಿದ್ವಾಂಸರು ಭಾರತೀಯ ಸಂಸ್ಕೃತಿಯ ಅಭ್ಯಾಸ ಮಾಡಲಾರಂಭಿಸಿದ ಮೇಲೆ, ಆಂಗ್ಲ ಹಾಗೂ ಇನ್ನಿತರ ವಿದೇಶಿ ಭಾಷೆಗಳಲ್ಲಿ ಗಣಪತಿಯನ್ನು ಕುರಿತು ಸಂಶೋಧನಾತ್ಮಕ ಗ್ರಂಥಗಳು, ಲೇಖನಗಳು ಸಾಕಷ್ಟು ಪ್ರಕಟವಾಗಿವೆ.
‘ಗಣೇಶ ಭಾಗವತಂ’ ಎಂಬ ಮತ್ತೂ ಒಂದು ಪುರಾಣವುಂಟು. ಇದು ಅಪ್ರಕಟಿತ. ‘ವಿನಾಯಕ ಸೂತ್ರಾಣಿ’ ಎಂಬ ಅಪ್ರಕಟಿತ ಗ್ರಂಥದಲ್ಲಿ ಗಣೇಶನ ಪೂಜಾತತ್ವವನ್ನು 800 ಸೂತ್ರಗಳಲ್ಲಿ ವಿವರಿಸಲಾಗಿದೆ ಎಂದು ತಿಳಿದು ಬರುತ್ತದೆ. ಗಣೇಶನೇ ಪರಬ್ರಹ್ಮ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವ ಈ ಸೂತ್ರ ಗ್ರಂಥದಲ್ಲಿನ ಅನೇಕ ಸೂತ್ರಗಳು ಬ್ರಹ್ಮಸೂತ್ರದ ಅನೇಕ ಸೂತ್ರಗಳ ಅನುಕರಣೆಯಾಗಿದೆ ಎಂದು ಹೇಳಲಾಗಿದೆ.
ಗಣಪತಿಯ ಅನುಷ್ಠಾನವನ್ನು ವಿವರಿಸುವ ತಂತ್ರಗಳಲ್ಲಿ ‘ಶಾರದಾ ತಿಲಕ’ ತಂತ್ರ ಮುಖ್ಯವಾದುದು. ಇದರಲ್ಲಿ ‘ಗಣೇಶ ಪಟಲ’ ಎಂಬ ವಿಭಾಗವೇ ಇದ್ದು, ಅನೇಕ ಮಂತ್ರಾನುಷ್ಠಾನ ವಿಧಿಗಳು ಈ ವಿಭಾಗದಲ್ಲಿ ವಿವರಿಸಲ್ಪಟ್ಟಿವೆ. 10ನೇ ಶತಮಾನದಲ್ಲಿ ಲಕ್ಷ್ಮಣ ದೇಶಿಕ ಎಂಬುವರು ರಚಿಸಿದ ಈ ತಂತ್ರ ಗ್ರಂಥ ಉತ್ತರಭಾರತದಲ್ಲಿ ತಾಂತ್ರಿಕರ ಕೈಪಿಡಿಯಾಗಿದೆ.
‘ಪ್ರಾಣತೋಷಿಣಿ ತಂತ್ರ’ ಎಂಬುದು ಕಳೆದ ಶತಮಾನದಲ್ಲಿ (1820) ರಚಿತವಾದರೂ, ವಿವಿಧ ತಂತ್ರ-ಮಂತ್ರ ಶಾಸ್ತ್ರಗಳಿಂದ ಅನೇಕ ವಿಷಯಗಳಲ್ಲಿ ಸಂಗ್ರಹವಾಗಿದ್ದು, ಗಣಪತಿ ಪೂಜಾನುಷ್ಠಾನದ ಬಗ್ಗೆ ಮುಖ್ಯ ತಂತ್ರ ಗ್ರಂಥವೆನಿಸಿದೆ. ಬೇರೆ ಕಡೆ ದೊರೆಯದಿರುವ ಅಭಿಚಾರ ಮತ್ತು ಷಟ್ಕರ್ಮಗಳ ಸಾಧನೆ ಇದರಲ್ಲಿ ಸವಿವರವಾಗಿದೆ. ಅಲಭ್ಯವಾದ ‘ಗಣೇಶ ವಿಮರ್ಶಿಣಿ’ ಎಂಬ ತಂತ್ರದಲ್ಲಿನ ವಿಶೇಷಾಂಶಗಳೆಲ್ಲಾ ಇದರಲ್ಲಿ ಸೇರಿಸಲ್ಪಟ್ಟಿವೆ ಎನ್ನಲಾಗಿದೆ.
ದಕ್ಷಿಣ ಭಾರತದ ಶೈವ ಸಂಪ್ರದಾಯದಲ್ಲಿ ಉಪಯುಕ್ತ ಕೈಪಿಡಿ ಎನಿಸಿದ ಅಘೋರ ಶಿವಾಚಾರ್ಯರ ‘ಕ್ರಿಯಾಕ್ರಮದ್ಯೋತಿ’ ಯಲ್ಲಿ ಗಾಣಾಪತ್ಯ ಅನುಷ್ಠಾನಕ್ಕೆ ಸಂಬಂಧಿಸಿದ ಅನೇಕ ವಿಷಯಗಳುಂಟು.
‘ಪರಶುರಾಮ ಕಲ್ಪಸೂತ್ರ’, ‘ಮಂತ್ರಮಹೋದಧಿ’, ‘ನಿತ್ಯೋತ್ಸವ ಪದ್ಧತಿ’ ಮೊದಲಾದವು ಗಾಣಾಪತ್ಯ ವಿಧಿ-ವಿಧಾನಗಳನ್ನು ವಿವರಿಸುವ ಗ್ರಂಥಗಳಲ್ಲಿ ಮುಖ್ಯವಾದವು. ‘ಮೇರು ತಂತ್ರ’ ದಲ್ಲಿ ಆಮ್ನಾಯಗಳ ಅನ್ವಯ ಗಣೇಶ ಪ್ರಭೇದವನ್ನು ವಿವರಿಸಲಾಗಿದೆ.
ನಾಳೆ: ಗಣಪತಿ ತತ್ವ, ಗಣೇಶ ವಿದ್ಯೆ ಎಂದರೇನು?
Get In Touch With Us info@kalpa.news Whatsapp: 9481252093
Discussion about this post