ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ: ಶಿವಮೊಗ್ಗ ರಾಮ್ |
ಪ್ರಥಮೋ ಹನುಮನ್ನಾಮ
ದ್ವಿತೀಯೋ ಭೀಮ ಏವಚ
ಪೂರ್ಣಪ್ರಜ್ಞ ತೃತೀಯಸ್ತು
ಭಗವತ್ಕಾರ್ಯ ಸಾಧಕಃ
ಮೊದಲು ತ್ರೇತಾಯುಗದಲ್ಲಿ ಹನುಮಂತನಾಗಿ, ರಾಮಬಂಟನೆನಿಸಿ ನಂತರ ದ್ವಾಪರ ಯುಗದಲ್ಲಿ ಭೀಮಸೇನರಾಗಿ, ಕಲಿಯುಗದಿ `ಪೂರ್ಣಪ್ರಜ್ಞ’ ರೆನಿಸಿ ವೇದವ್ಯಾಸರ ಸೇವೆ ಮಾಡಿ ಭಗವತ್ಕಾರ್ಯ ಸಾಧನೆ ಮಾಡಿದವರು ಶ್ರೀ ಮಧ್ವಾಚಾರ್ಯರು.
ಸನಾತನ ಧರ್ಮಕ್ಕೆ ಹೊಸ ಆಯಾಮ ನೀಡಿದ ಧೀರೋದ್ಧಾತ ಸನ್ಯಾಸಿ ಎಂದೇ ಹೆಸರಾದವರು ಆಚಾರ್ಯ ಶ್ರೀ ಮಧ್ವರು. ತತ್ವಜ್ಞಾನ ಪ್ರಪಂಚಕ್ಕೆ ಮೇರು ಕೊಡುಗೆ ಸಲ್ಲಿಸಿರುವ ಮೂವರು (ಶಂಕರ, ರಾಮಾನುಜ, ಮಧ್ವ) ಶ್ರೇಷ್ಠ ಆಚಾರ್ಯರಲ್ಲಿ ದ್ವೈತ ಮತ ಸಂಸ್ಥಾಪನಾಚಾರ್ಯ ಶ್ರೀ ಮಧ್ವರು ಮಾತ್ರ ಅಪ್ಪಟ ಕನ್ನಡ ನಾಡಿನವರು ಎಂಬುದು ನಮಗೆ ಬಹಳ ದೊಡ್ಡ ಹೆಮ್ಮೆ.

ಅವತಾರ ಪುರುಷರು
ಸಜ್ಜನರ ತತ್ತಜ್ಞಾನದ ಹಸಿವನ್ನು ಹಿಂಗಿಸಲು ವಾಯುದೇವರೇ ಮಧ್ವಾಚಾರ್ಯರಾಗಿ ಅವತರಿಸಿದರು ಎನ್ನುತ್ತದೆ `ಸುಮಧ್ವ ವಿಜಯ’ ಗ್ರಂಥ. ಆಶ್ರಮ ಸ್ವೀಕರಿಸಿ ಒಂದೂವರೆ ತಿಂಗಳಲ್ಲಿ ತರ್ಕಶಾಸದ ಪ್ರಕಾಂಡ ಪಂಡಿತನ್ನು ಸೋಲಿಸಿದರು. ಅವರ ತರ್ಕ ಸಾಮರ್ಥ್ಯ ಸಾಮಾನ್ಯರ ತರ್ಕಕ್ಕೆ ನಿಲುಕದ್ದಾಗಿತ್ತು. ಅವರನ್ನು ಅನುಸರಿಸಿ ಬಂದವರಿಗೆ ಜಗತ್ತಿನ `ಸತ್ಯ’ವನ್ನು ತಿಳಿಸಿದರು. ಭಗವಂತನನ್ನು ಕಾಣುವ ಮಾರ್ಗದ ದರ್ಶನ ಮಾಡಿಸಿದರು. ಇವರ ಶಿಷ್ಯತ್ವವನ್ನು ವಹಿಸುವ ಮುನ್ನ ಪ್ರಪಂಚವನ್ನು ಮಸುಕಾಗಿ ಕಂಡವವರಿಗೆ ದಿವ್ಯ ದೃಷ್ಟಿ ನೀಡಿದರು. ಜಗತ್ತಿನ ಬಗ್ಗೆ ಜನರಿಗಿದ್ದ ತಪ್ಪು ತಿಳಿವಳಿಕೆ ಇದರಿಂದ ದೂರವಾಯಿತು. ಮಹಾಗುರುಗಳು ಜಗಕೆ ನೀಡಿದ ಅನಂತ ಉಪಕಾರವೆಂದರೆ ಇದೇ.
ಮೌಢ್ಯಗಳಿಗೆ ಖಂಡನೆ
ಅಧ್ಯಾತ್ಮ ಮತ್ತು ವೇದಾಂತದ ಮಹಾನ್ ಪಥದಲ್ಲಿ ಸುವರ್ಣಾಕ್ಷರದ ಮೈಲಿಗಲ್ಲುಗಳನ್ನೇ ಸ್ಥಾಪಿಸಿದ ಶ್ರೀ ಮಧ್ವರು ಮೌಢ್ಯ ಮತ್ತು ಗೊಡ್ಡು ಸಂಪ್ರದಾಯಗಳನ್ನು ಖಂಡಿಸಿದರು. ಸಂಪೂರ್ಣ ವೈಜ್ಞಾನಿಕ ಹಿನ್ನೆಲೆಯ ತತ್ತಜ್ಞಾನ ಬೋಧಿಸುವಾಗ ಅವರಿಗೆ ವಿರೋಧವೂ ವ್ಯಕ್ತವಾಯಿತು. ಅದಕ್ಕೆ ಅಂಜಲಿಲ್ಲ. ಅವರನ್ನು ನಂಬಿದವರಿಗೆ ಇಂದಿಗೂ ಅಂಜಿಕೆಯಿಲ್ಲ. ಮಧ್ವರು ಇಟ್ಟ ಹೆಜ್ಜೆಯನ್ನು ಎಂದೂ ಹಿಂದಿಡಲಿಲ್ಲ.
ಗ್ರಂಥ ರಚನೆಯಲ್ಲಿ ಅಗ್ರಗಣ್ಯ
ಮಧ್ವಾಚಾರ್ಯರು ದ್ವೈತ ತತ್ವ ಸಿದ್ಧಾಂತ ಸಾರಲು 37 ಗ್ರಂಥ ರಚಿಸಿದರು. ಅವರು ಬಾಲ್ಯದಲ್ಲಿ ಚೆಂಡಾಡುತ್ತಾ ರಚಿಸಿದ ಕಂದುಕ ಸ್ತುತಿಯನ್ನೂ ಸೇರಿಸಿದರೆ ಒಟ್ಟು 38 ಆಗುತ್ತದೆ. ವೇದ, ಉಪನಿಷತ್, ಸೂತ್ರ ಇತಿಹಾಸ, ಪುರಾಣ, ತಂತ್ರ, ಪ್ರಕರಣ, ಆಚಾರ ಮುಂತಾದ ಶಾಸ್ತ್ರದ ಸರ್ವವಿಭಾಗಗಳನ್ನೂ ಉಪಯೋಗಿಸಿಕೊಂಡು ಮಧ್ವರು ಗ್ರಂಥಗಳನ್ನು ರಚಿಸಿದರು. ಆ ಮೂಲಕ ಅಗ್ರಗಣ್ಯ ಗ್ರಂಥ ಕರ್ತರ ಸಾಲಿನಲ್ಲಿ ಮೇರು ಪರ್ವತವೇ ಆದರು. ಅವರ 37 ಮಹಾನ್ ಕೃತಿಗಳು `ಸರ್ವಮೂಲ’ ಗ್ರಂಥಗಳೆಂದೇ ಪ್ರಸಿದ್ಧಿ ಪಡೆದವು. ಈ ಮಹೋನ್ನತ ಕೊಡುಗೆಯನ್ನು ವೇದಾಂತ ಕ್ಷೇತ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಮರೆತರೂ ಅವು ಮತ್ತೆ ಮತ್ತೆ ಚಿಂತನೆಗೆ ಹಚ್ಚಿ ಚಿರನೂತನವಾಗಿವೆ ಎಂಬುದೇ ವಿಶೇಷ.

ಸಂದೇಶವೇನು
ಶ್ರೀಹರಿಯೇ ಸರ್ವೋತ್ತಮ. ವಾಯುವೇ ಜೀವೋತ್ತಮ. ಕಣ್ಣಿಗೆ ಕಾಣುವ ಜಗತ್ತು ಸತ್ಯ. ಜಗದೊಳಗಿರುವ ಜೀವಿಗಳು, ಜಡಗಳು ಹಾಗೂ ಅವುಗಳ ಸೃಷ್ಟಿಗೆ ಕಾರಣನಾದ ಜಗನ್ನಾಥನ ನಡುವೆ ಪರಸ್ಪರ ಭೇದವಿದೆ ಎಂಬ ದ್ವೈತ ತತ್ವ ವಿಷಯಗಳೇ ಮಧ್ವರ ಗ್ರಂಥಗಳ ಸಾರ. ಕಾಲ ಉರುಳಿದಂತೆ ಈ ಸರ್ವಮೂಲ ಗ್ರಂಥಗಳ ಸಾರವನ್ನು ತಿಳಿಯುವುದು ಸಾಮಾನ್ಯರಿಗೆ ಕಠಿಣವಾಗುತ್ತದೆಂದು ಮೊದಲೇ ಮಧ್ವರು ನಿರೀಕ್ಷಿಸಿದ್ದರು ಎನ್ನಬಹುದು. ಹಾಗಾಗಿ ವೇದ ಪರಂಪರೆಯನ್ನು ಕನ್ನಡದಲ್ಲಿ ಕೊಂಡಾಡುವAತೆ ತಮ್ಮ ಶಿಷ್ಯ ನರಹರಿತೀರ್ಥರಿಗೆ ಆದೇಶ ಇತ್ತರು. ಅದು ದಾಸ ಸಾಹಿತ್ಯದ ಉಗಮಕ್ಕೆ ಹಾಗೂ ಕನ್ನಡದ ಸಾಹಿತ್ಯದ ಶ್ರೀಮಂತಿಕೆಗೂ ಪ್ರೇರಕವಾಯಿತು. ಕನ್ನಡ ಸಾರಸ್ವತ ಲೋಕಕ್ಕೆ ಮಧ್ವರು ಹೀಗೆ ಅನನ್ಯ ಕೊಡುಗೆ ನೀಡಿದರು. ಹಾಗಾಗಿ ಅವರು ಸಂಸ್ಕೃತ-ತುಳು-ಕನ್ನಡ ಸಾಹಿತ್ಯಲೋಕದ ಮಹಾನ್ ಆಸ್ತಿಯೂ ಹೌದು.
ಅಕ್ಷರ ತಿಳಿಯದ ವರ್ಗವನ್ನೂ ಆಚಾರ್ಯ ಮಧ್ವರು ಅಭಿಮಾನದಿಂದಲೇ ಕಂಡರು. ಅವರೂ ಭಗವಂತನ ಸ್ವರೂಪವನ್ನು ತಮ್ಮ ಜ್ಞಾನಕ್ಕನುಗುಣವಾಗಿ ಕಾಣಲು (ದರ್ಶನ ಮಾಡಲು) ಸಾಂಸ್ಕೃತಿಕ-ಧಾರ್ಮಿಕ ನಾಟಕ, ರೂಪಕ, ಆಟ ಗಳನ್ನು ರಚಿಸುವಂತೆ ಶಿಷ್ಯರಿಗೆ ಸೂಚಿಸಿದರು. ಇದೇ ಯಕ್ಷಗಾನಕ್ಕೂ ಮೂಲ ಪ್ರೇರಣೆಯಾಯಿತು. ಕನ್ನಡ ನಾಡಿನ ಕಲೆ ಸಾಗರದಾಚೆಗೂ ವಿಖ್ಯಾತವಾಗಿ ಲೋಕ ಸಂಚಾರ ಮಾಡಿತು. ಮಧ್ವರು ತಮಿಳು, ತೆಲುಗು, ತುಳು, ಕೊಂಕಣಿ, ಮರಾಠಿ ಮತ್ತಿತರ ಭಾಷೆಯ ಶಿಷ್ಯರನ್ನೂ ಹೊಂದಿದ್ದರು ಎಂಬುದು ಇನ್ನೊಂದು ಹೆಗ್ಗಳಿಕೆ.

ಭರತಭೂಮಿಯನ್ನು ಅನೇಕ ಬಾರಿ ಕಾಲ್ನಡಿಗೆಯಲ್ಲೇ ಸುತ್ತಿ ಮಧ್ವಮತ ಸಿದ್ಧಾಂತಗಳನ್ನು ಜನ ಮಾನಸದಲ್ಲಿ ಪ್ರತಿಷ್ಠಾಪಿಸಿದರು. ಸಾವಿರಾರು ಜನ ಅವರ ಪ್ರಖರ ವಾಗ್ಝರಿಗೆ ಮನಸೋತು ಶಿಷ್ಯತ್ವ ಪಡೆದರು. ಮಹಾನ್ ಪಂಡಿತರೆನಿಸಿದ್ದವರು ವಾದದಲ್ಲಿ ಸೋಲನುಭವಿಸಿ ಶರಣಾದರು. ಮಧ್ವತತ್ವ ಅನುಯಾಯಿಗಳಾದರು. ಮಧ್ವರದ್ದು 79 ವಸಂತಗಳ ಸಾರ್ಥಕ ಜೀವನ. ಇಹದ ಬದುಕಿಗೆ ಮಂಗಳ ಹಾಡಬೇಕು ಎನಿಸುತ್ತಿದ್ದಂತೆ ಅವರು ಉಡುಪಿಯ ಶ್ರೀ ಅನಂತೇಶ್ವರ ದೇಗುಲದಲ್ಲಿ ಪ್ರವಚನ ನೀಡುವಾಗ ಪುಷ್ಪವೃಷ್ಟಿಯ ನಡುವೆ ಅದೃಶ್ಯರಾದರು. ಬೃಹತ್ ಭಕ್ತಗಣವೇ ಇದಕ್ಕೆ ಸಾಕ್ಷಿಯಾಗಿದ್ದು ಇತಿಹಾಸ. ಅವರು ಮಹಾಬದರಿಯಲ್ಲಿ ವೇದವ್ಯಾಸ ದೇವರ ಸಮೀಪವೇ ಇನ್ನೂ ಇದ್ದಾರೆ ಎಂಬುದು ಮಾಧ್ವ ಸಮುದಾಯದ ನಂಬಿಕೆ. ಮಧ್ವಾಚಾರ್ಯರು ಭವ ಜೀವಿಗಳ ಕಣ್ಣಿಗೆ ಅದೃಷ್ಯರಾದ ಆ ಪುಣ್ಯ ದಿನವೇ ಮಾಘ ಶುದ್ಧ ನವಮಿ. ಅರ್ಥಾತ್ `ಮಧ್ವ ನವಮಿ’. ಆಚಾರ್ಯ ಮಧ್ವರನ್ನು ಅತ್ಯಂತ ಧನ್ಯತೆಯಿಂದ ಸ್ಮರಿಸಬೇಕಾದ ಪುಣ್ಯದಿನ. ಮಧ್ವರು ಇಂದು ನಮ್ಮ ಕಣ್ಣಿಗೆ ಅಗೋಚರ. ಆದರೂ ಪರಿಪೂರ್ಣ ಜೀವನವನ್ನು ನಾವು ರೂಪಿಸಿಕೊಳ್ಳಲು ಅವರ ಗ್ರಂಥಗಳು ಭವ ಜೀವಿಗಳಿಗೆ ಮಹಾಬೆಳಕಾಗಿವೆ.
ಪುಣ್ಯಕ್ಷೇತ್ರವಾಯಿತು ಉಡುಪಿ
ಶ್ರೀ ಮಧ್ವಾಚಾರ್ಯರು ಉಡುಪಿಯಲ್ಲಿ ಬಾಲ ಕೃಷ್ಣನನ್ನು ಸ್ಥಾಪಿಸಿದ ಕಾರಣಕ್ಕಾಗಿ ಇದು ನಮ್ಮ ನಾಡಿನ ಪವಿತ್ರ ತೀರ್ಥ ಕ್ಷೇತ್ರವಾಯಿತು. ಅಷ್ಟ ಯತಿಗಳನ್ನು ಕೃಷ್ಣನ ಪೂಜೆಗೆ ಅವರು ನೇಮಿಸಿದರು. ಪರ್ಯಾಯ ಪೂಜಾ ವ್ಯವಸ್ಥೆ ಜಾರಿಗೆ ತಂದರು. ದಿನವೂ ಬಾಲ ಯತಿಗಳಿಂದ ಜಗದೋದ್ಧಾರಕನ ಪೂಜೆ ನಡೆಯುವ ವಿಶ್ವದ ಏಕೈಕ ಸನ್ನಿಧಿಯಾಯಿತು ಉಡುಪಿ. ಗೀತಾಚಾರ್ಯರ ಕ್ಷೇತ್ರವೆಂದೇ ಪ್ರಖ್ಯಾತವಾಯಿತು.
ಮಧ್ವರು ಸರ್ವಕಾಲಿಕ ಸಂತ
ಶ್ರೀ ಮಧ್ವಾಚಾರ್ಯರು ಅದೃಷ್ಯರಾಗಿ 700 ವರ್ಷ ಗತಿಸಿದರೂ ಅವರು ಗ್ರಂಥರೂಪದಲ್ಲಿ ಸಜ್ಜನರ ರಕ್ಷಣೆಗೆ ಸದಾ ಬದ್ಧವಾಗಿದ್ದಾರೆ. ಭವದ ಜನರಿಗೆ ಸುಂದರ ಬದುಕು ರೂಪಿಸಿಕೊಟ್ಟಿದ್ದಾರೆ. ಮಾನವೀಯ ಬಂಧುತ್ವ ಬೆಸೆದಿದ್ದಾರೆ. ಮಧ್ವಮತದ ಎಲ್ಲ ಆಚರಣೆಯೂ ಸಂಪೂರ್ಣ ವೈಜ್ಞಾನಿಕ ಎಂದು ಹಲವು ಸಂಶೋಧನೆಗಳು ದೃಢಪಡಿಸಿವೆ. ದೇಶ- ಕಾಲಗಳು ಏನೇ ಬದಲಾದರೂ ಆಚಾರ್ಯರ ಸಿದ್ಧಾಂತ ಎಂದಿಗೂ ನಿತ್ಯ ನೂತನ. ಸದಾ ಹಸಿರು. ನಂಬಿದವರ ಬದುಕು ಉಲ್ಲಾಸದ ಚಿಗುರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post