ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ನಾಡಿನ ಜೀವನದಿ, ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಇದೇ ಅಕ್ಟೋಬರ್ 17 ರಂದು ರಾತ್ರಿ 7.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಕಾವೇರಿ Cauveri ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ ಸಂಭವಿಸಲಿದೆ.
ಸೆಪ್ಟೆಂಬರ್ 27 ರಂದು ಬೆಳಗ್ಗೆ 11.05 ನಿಮಿಷಕ್ಕೆ ಸಲ್ಲುವ ವೃಚ್ಛಿಕ ಲಗ್ನದಲ್ಲಿ “ಪತ್ತಾಯಕ್ಕೆ ಅಕ್ಕಿ ಹಾಕುವುದು”, ಅಕ್ಟೋಬರ್ 05 ರಂದು ಬೆಳಗ್ಗೆ 09.35 ನಿಮಿಷಕ್ಕೆ ಸಲ್ಲುವ ವೃಚ್ಛಿಕ ಲಗ್ನದಲ್ಲಿ “ಆಜ್ಞಾ ಮುಹೂರ್ತ”. ಅಕ್ಟೋಬರ್ 15 ರಂದು ಬೆಳಿಗ್ಗೆ 11.45 ನಿಮಿಷಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ “ಅಕ್ಷಯ ಪಾತ್ರೆ ಇರಿಸುವುದು” ಮತ್ತು 04.15 ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ “ಕಾಣಿಕೆ ಡಬ್ಬಿಗಳನ್ನು ಇಡುವುದು”. ಅಕ್ಟೋಬರ್ 17 ರ ಸೋಮವಾರ ರಾತ್ರಿ 07.21 ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ “ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ” ಜರುಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳ ಆಡಳಿತಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ.
ನಗರದ ಜಿ.ಪಂ.ಭವನದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್, ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಮತ್ತು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಜೀವ ವೈವಿದ್ಯ ಮಂಡಳಿ ರಾಜ್ಯ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು.
ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವಕ್ಕೆ ಎಲ್ಲಾ ಭಕ್ತಾಧಿಗಳಿಗೂ ಅವಕಾಶ ಮಾಡಬೇಕು. ಯಾವುದೇ ನಿರ್ಬಂಧ ಇರಬಾರದು ಎಂದರು.
ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಅವರು ವಾಹನ ನಿಲುಗಡೆಗೆ ಇರುವ ಸ್ಥಳಾವಕಾಶ ನೋಡಿಕೊಂಡು ಅವಕಾಶ ಮಾಡಲಾಗುವುದು, ಉಳಿದಂತೆ ಬಸ್ ಮೂಲಕ ಸಂಚಾರ ಮಾಡಬಹುದಾಗಿದೆ ಎಂದರು.
ಭಾಗಮಂಡಲ ತಲಕಾವೇರಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಮನುಮುತ್ತಪ್ಪ ಅವರು ಮಾತನಾಡಿ ತಲಕಾವೇರಿಯಲ್ಲಿ ವಾಹನ ನಿಲುಗಡೆ ಸಂಬಂಧಿಸಿದಂತೆ ಹಿಂದೆ ನೀಲನಕಾಶೆ ತಯಾರಿಸಲಾಗಿದ್ದು, ಅದನ್ನು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಭಾಗಮಂಡಲ ಗ್ರಾ.ಪಂ.ಉಪಾಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಅವರು ಮಾತನಾಡಿ ಗ್ರಾ.ಪಂ.ವತಿಯಿಂದ ಸ್ವಚ್ಚತೆ ಹಾಗೂ ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮವಹಿಸಲಾಗುವುದು ಎಂದರು. ಪರವಾನಗಿ ಇರುವ ಖಾಸಗಿ ಬಸ್‍ಗಳ ಸಂಚಾರಕ್ಕೆ ಅವಕಾಶ ಮಾಡಬೇಕು ಎಂದು ಮನವಿ ಮಾಡಿದರು.
ಭಾಗಮಂಡಲ-ತಲಕಾವೇರಿ, ಮಡಿಕೇರಿ-ಭಾಗಮಂಡಲ, ಕಡಂಗ-ಭಾಗಮಂಡಲ ಮತ್ತು ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಗಿಡಗಳನ್ನು ಕಡಿಯುವಂತಾಗಬೇಕು ಎಂದು ಅವರು ಮನವಿ ಮಾಡಿದರು.
ಈ ಬಗ್ಗೆ ಮಾತನಾಡಿದ ಶಾಸಕರಾದ ಕೆ.ಜಿ. ಬೋಪಯ್ಯ ಅವರು ಅರಣ್ಯ ಇಲಾಖೆಯವರು ಭಾಗಮಂಡಲ ಕರಿಕೆ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು.
ಉಳಿದಂತೆ ಗಿಡಗಳನ್ನು ಕಡಿಯುವಂತೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‍ಗೆ ಕೆ.ಜಿ.ಬೋಪಯ್ಯ ಅವರು ನಿರ್ದೇಶನ ನೀಡಿದರು.
ತಲಕಾವೇರಿ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವುದರಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕಷ್ಟವಾಗುತ್ತದೆ ಎಂದು ವಾಹನ ನಿಲುಗಡೆ ಬಗ್ಗೆ ಮಾಹಿತಿ ನೀಡಿದರು.
ಭಕ್ತಾಧಿಯೊಬ್ಬರು ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋಧ್ಬವ ಭಕ್ತಾಧಿಗಳು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದೀಪದೊಂದಿಗೆ ತೆರಳುತ್ತಾರೆ. ಇಂತಹ ಭಕ್ತಾಧಿಗಳಿಗೆ ಕಿರಿಕಿರಿ ಉಂಟುಮಾಡಬಾರದು ಎಂದರು.
ಎಂ.ಬಿ.ದೇವಯ್ಯ ಅವರು ಮಾತನಾಡಿ ಭಕ್ತಾಧಿಗಳಿಗೆ ತೊಂದರೆ ನೀಡಬಾರದು. ವಾಹನ ಪಾಸನ್ನು ನೀಡಬೇಕು ಎಂದು ಅವರು ಕೋರಿದರು.
ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ತಲಕಾವೇರಿಯ ಕೊಳದ ಬಳಿಗೆ ಭಕ್ತಾಧಿಗಳನ್ನು ಸಾಲಾಗಿ ಕಳುಹಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.
ಭಾಗಮಂಡಲ ಶ್ರೀಭಗಂಡೇಶ್ವರ-ತಲಕಾವೇರಿ ದೇವಾಲಯಗಳ ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ, ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ, ರಮೇಶ್ ಹೊಳ್ಳ, ಲೋಕೋಪಯೋಗಿ ಇಲಾಖೆಯ ಇಇ ನಾಗರಾಜು, ಸೆಸ್ಕ್ ಇಇ ಅನಿತಾ ಬಾಯಿ ಅವರು ಹಲವು ಮಾಹಿತಿ ನೀಡಿದರು.
ಜೀವ ವೈವಿದ್ಯ ಮಂಡಳಿ ರಾಜ್ಯ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಇದ್ದರು.
ಮತ್ತಷ್ಟು ಮಾಹಿತಿ: ಭಾಗಮಂಡಲ ಶ್ರೀ ಭಗಂಡೇಶ್ವರ ತಲಕಾವೇರಿ ದೇವಾಲಯಗಳಲ್ಲಿ ಅಕ್ಟೋಬರ್ 17 ರಂದು ಜರುಗಲಿರುವ ಕಾವೇರಿ ತುಲಾ ಸಂಕ್ರಮಣ ತೀರ್ಥೋದವದ ಪ್ರಯುಕ್ತ ಪೊಲೀಸ್ ಇಲಾಖೆ ಬಂದೋಬಸ್ತ್ ವ್ಯವಸ್ಥೆ ಮಾಡುವುದು, ವಾಹನಗಳ ಸುಗಮ ಸಂಚಾರಕ್ಕಾಗಿ ಅಗತ್ಯ ಕ್ರಮ, ತುರ್ತು ಸಂದರ್ಭಗಳನ್ನು ನಿರ್ವಹಿಸಲು ಅಗ್ನಿಶಾಮಕ ದಳ ನಿಯೋಜನೆ, ಗೃಹರಕ್ಷಕ ದಳ ಸಿಬ್ಬಂದಿಯ ನಿಯೋಜನೆ ಮಾಡುವುದು.
ಸ್ಥಳೀಯ ಸಂಸ್ಥೆಗಳು ಭಾಗಮಂಡಲ-ತಲಕಾವೇರಿಗಳಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯ ಸೌಲಭ್ಯ ಒದಗಿಸುವುದು, ಪಂಚಾಯಿತಿ ವ್ಯಾಪ್ತಿಯಲ್ಲಿ ನೈರ್ಮಲ್ಯ ಕಾಪಾಡುವುದು, ಬೀದಿ ದೀಪಗಳ ವ್ಯವಸ್ಥೆ, ಭಾಗಮಂಡಲ ತಲಕಾವೇರಿ ಕಾಲುದಾರಿ ದುರಸ್ತಿ ಹಾಗೂ ಇತರೇ ಕಾರ್ಯಗಳು, ಭಗಂಡೇಶ್ವರ-ತಲಕಾವೇರಿ ಕ್ಷೇತ್ರಗಳಲ್ಲಿ ನೈರ್ಮಲ್ಯ ಕಾಪಾಡಲು ನಗರ ಸಭೆಯ ವತಿಯಿಂದ ಪೌರಕಾರ್ಮಿಕರನ್ನು ನಿಯೋಜಿಸುವುದು.
ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ವತಿಯಿಂದ ಭಾಗಮಂಡಲಕ್ಕೆ ಸೇರುವ ಎಲ್ಲಾ ರಸ್ತೆಗಳ ದುರಸ್ತಿ ಕಾರ್ಯ, ಅಗತ್ಯ ಸ್ಥಳಗಳಲ್ಲಿ ಮಾರ್ಗಸೂಚಿ ಅಳವಡಿಸುವುದು, ಸೇತುವೆಗಳಿಗೆ ಸುಣ್ಣ ಬಣ್ಣ ಬಳಿಯುವುದು, ಅಗತ್ಯ ಸ್ಥಳಗಳಲ್ಲಿ ಬ್ಯಾರಿಕೇಡ್‍ಗಳ ರಚನೆ, ರಸ್ತೆಯ ಎರಡೂ ಬದಿಗಳಲ್ಲಿ ಕಾಡು ಕಡಿಯುವುದು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಭಾಗಮಂಡಲ ತಲಕಾವೇರಿ ಕ್ಷೇತ್ರಗಳಲ್ಲಿ ತುರ್ತು ಚಿಕಿತ್ಸಾ ಘಟಕಗಳನ್ನು ತೆರೆಯುವುದು. ಅಂಬ್ಯುಲೆನ್ಸ್, ನುರಿತ ವೈದ್ಯರು, ಸಿಬ್ಬಂದಿಯವರೊಂದಿಗೆ ಉತ್ತಮ ಔಷಧಿಗಳನ್ನು ಒದಗಿಸುವುದು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ವತಿಯಿಂದ ಜಾತ್ರಾ ದಿನಗಳಂದು ಸಮರ್ಪಕವಾಗಿ ನಿರಂತರ ವಿದ್ಯುತ್ ಪೂರೈಕೆ ಅಗತ್ಯ ಸಿಬ್ಬಂದಿಗಳ ನಿಯೋಜನೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಿಂದ ಬಸ್ ವ್ಯವಸ್ಥೆ. ತುಲಾ ಮಾಸದ ಒಂದು ತಿಂಗಳು ಭಾಗಮಂಡಲ-ತಲಕಾವೇರಿಗೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸುವುದು. ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಖಾಸಗಿ ಬಸ್‍ಗಳ ಓಡಾಟಕ್ಕೆ ಪರವಾನಗಿ ನೀಡುವುದು.
ಅರಣ್ಯ ಇಲಾಖೆ ವತಿಯಿಂದ ಭಾಗಮಂಡಲಕ್ಕೆ ಸೇರುವ ರಸ್ತೆಗಳ ಎರಡೂ ಬದಿಗಳಲ್ಲಿ ಇರಬಹುದಾದ ಅಪಾಯದ ಸ್ಥಿತಿಯಲ್ಲಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸುವುದು. ತಲಕಾವೇರಿಯಲ್ಲಿ ವನ್ಯ ಪ್ರಾಣಿಗಳಿಂದ ಭಕ್ತಾದಿಗಳು/ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ವಹಿಸುವುದು.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು. ಕೃಷಿ ಇಲಾಖೆ/ ತೋಟಗಾರಿಕೆ ಇಲಾಖೆಗಳ ವತಿಯಿಂದ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅನುಕೂಲಕ್ಕಾಗಿ ವಸ್ತು ಪ್ರದರ್ಶನ ಏರ್ಪಡಿಸುವುದು. ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪೆÇಲೀಸ್ ಬಂದೋಬಸ್ತ್‍ಗೆ ಆಗಮಿಸುವ ಪೆÇೀಲೀಸ್ ಸಿಬ್ಬಂದಿಗಳಿಗೆ ಭಾಗಮಂಡಲ ಸರ್ಕಾರಿ ಶಾಲೆಗಳಲ್ಲಿ ವಸತಿ ಸೌಕರ್ಯ, ವಿದ್ಯುತ್ ಬೆಳಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post