ಅಲೀಘರ್: ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ರಾಜ್ಯದೊಳಗೆ ಪ್ರವೇಶಿಸಲು ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಲು ಬಿಡದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಈ ಕೃತ್ಯಗಳಿಗೆ ಸರಿಯಾದ ಬೆಲೆ ತೆರುತ್ತಾರೆ ಎಂದು ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ಅಲೀಘರ್’ನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ದಿನೇ ದಿನೇ ಖ್ಯಾತಿಗಳಿಸುತ್ತಿದೆ. ಇದು ಮಮತಾ ಬ್ಯಾನರ್ಜಿಯಲ್ಲಿ ನಡುಕ ಹುಟ್ಟಿಸಿದ್ದು, ಇದಕ್ಕಾಗಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದರು.
ಆದರೆ, ಬ್ಯಾನರ್ಜಿ ಅವರು ನೆನಪಿಟ್ಟುಕೊಳ್ಳಲಿ: ಪಶ್ಚಿಮ ಬಂಗಾಳದಲ್ಲಿ 23 ರಿಂದ 42 ಸ್ಥಾನಗಳಿಗೆ ಜಿಗಿದು ಯಶಸ್ವಿಯಾಗುವ ಮುನ್ನ ನಾವು ಅಂದರೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ವಿರಮಿಸುವುದಿಲ್ಲ ಎಂದರು.
ನಿನ್ನೆ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ರಾಜ್ಯವನ್ನು ಪ್ರವೇಶಿಸಲು ಅನುಮತಿ ನೀಡಲಿಲ್ಲ. ಮಾತ್ರವಲ್ಲ ನನ್ನ ಹೆಲಿಕಾಪ್ಟರ್ ಸಹ ಲ್ಯಾಂಡ್ ಆಗಲು ಬಿಡಲಿಲ್ಲ. ಇದೇ ಅನುಭವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಸಹ ಆಗಿದೆ. ಎಲ್ಲಕ್ಕೂ ಮುಖ್ಯವಾಗಿ ಈ ದೇಶದ ಪ್ರಧಾನಿಯವರ ಹೆಲಿಕಾಪ್ಟರ್ ಲ್ಯಾಂಡ್ ಅಗಲು ತಡರಾತ್ರಿಯ ವೇಳೆ ಸಣ್ಣದೊಂದು ಮೈದಾನದಲ್ಲಿ ಇಳಿಸಲು ಅವಕಾಶ ನೀಡಲಾಯಿತು. ಇವೆಲ್ಲವನ್ನೂ ಸಹ ಗಮನಿಸಿದರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ನಿರಾಯಾಸವಾಗಿ ಗೆಲುವು ಸಾಧಿಸಲಿದೆ ಎಂದು ತೋರುತ್ತದೆ ಎಂದರು.
Discussion about this post