ಕಲ್ಪ ಮೀಡಿಯಾ ಹೌಸ್ | ಮಂಡ್ಯ |
ಕೆ.ಆರ್.ಪೇಟೆಯ ಅಂಬಿಗರಹಳ್ಳಿಯಲ್ಲಿ ಇದೇ ಅಕ್ಟೋಬರ್ 13 ರಿಂದ 16 ರವರೆಗೆ ನಡೆಯಲಿರುವ ಕುಂಭ ಮೇಳದ ಯಶಸ್ವಿಗೆ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಅಂದಾಜು 6 ಲಕ್ಷಕ್ಕೂ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ. ಗೋಪಾಲಯ್ಯ Minister Gopalaiah ಹೇಳಿದರು.
ಮಲೈ ಮಹದೇಶ್ವರ ಬೆಟ್ಟದಲ್ಲಿ 3 ಜ್ಯೋತಿ ರಥಯಾತ್ರೆಗೆ ರೇಷ್ಮೇ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ ಅವರೊಂದಿಗೆ ಚಾಲನೆ ನೀಡಿ ಮಾತನಾಡಿದರು. ಲಕ್ಮಣ ತೀರ್ಥ, ಹೇಮಾವತಿ ಹಾಗೂ ಕಾವೇರಿ ಮೂರು ನದಿಗಳು ಸೇರಿರುವ ತ್ರಿವೇಣಿ ಸಂಗಮಕ್ಕೆ ಮಹದೇಶ್ವರ ಬಂದು ಹೋಗಿದ್ದರು ಎಂದು ಹಿರಿಕರು ಹೇಳುತ್ತಾರೆ. ಈ ತ್ರಿವೇಣಿ ಸಂಗಮದಲ್ಲಿ ನಡೆಯುವ ಪುಣ್ಯಸ್ನಾನ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಆಗಮಿಸಬೇಕಾಗಿ ಕೋರಿದರು.
ಅ.13 ರಂದು ತ್ರಿವೇಣಿ ಸಂಗಮದಲ್ಲಿ ಮಹದೇಶ್ವರ ದೇಸ್ಥಾನದ ಉದ್ಘಾಟನೆ ನಡೆಯಲಿದೆ. ಅ.14 ರಂದು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು, ಅ.16 ರಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ 35 ರಿಂದ 40 ಸಮುದಾಯದ ವಿವಿಧ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದರು.
ಜ್ಯೋತಿ ಯಾತ್ರೆ ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಮೂರು ಜಿಲ್ಲೆಯಲ್ಲಿ ನಡೆಯಲಿದೆ. ಭಗವಂತನ ಯಾತ್ರೆಯನ್ನು ಜನರಿಗೆ ಶಾಂತಿ, ಸುಖ, ಆರೋಗ್ಯ ನೀಡಲಿ ಎಂದು ನಡೆಸಲಾಗುತ್ತಿದೆ ಎಂದು ಹೇಳಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಅಕ್ಟೋಬರ್ 13 ರಿಂದ 16ರವರಿಗೆ ಮಹಾ ಕುಂಭಮೇಳ ಕಾರ್ಯಕ್ರಮವು ಶ್ರೀಶ್ರೀಶ್ರೀ ಡಾ.ನಿರ್ಮಲಾನಂದ ಮಹಾಸ್ವಾಮಿಗಳು,ಸುತ್ತೂರು ಕ್ಷೇತ್ರದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ ಎಂದರು.
Also read: ಡಿ.15ರ ವೇಳೆಗೆ ರಾಜ್ಯದಲ್ಲಿ 438 “ನಮ್ಮ ಕ್ಲಿನಿಕ್” ಕಾರ್ಯಾರಂಭ: ಸಚಿವ ಡಾ.ಕೆ. ಸುಧಾಕರ್
ಮಹಾ ಕುಂಭಮೇಳ ಕಾರ್ಯಕ್ರಮದಲ್ಲಿ ಸಾಧುಸಂತರು, ಸ್ವಾಮೀಜಿಗಳು, ಇನ್ನಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬರುವಂತಹ ಭಕ್ತಾಧಿಗಳಿಗೆ ಊಟೋಪಚಾರದ ವ್ಯವಸ್ಥೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದರು.
ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಗಳಿಗೆ ಸಂಚರಿಸುವ ಮೂರು ಜ್ಯೋತಿ ರಥಗಳಿಗೆ ಇಂದು ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಚಾಲನೆಯನ್ನು ನೀಡಲಾಗಿದೆ. ಜ್ಯೋತಿರಥಗಳು ಮೂರು ಜಿಲ್ಲೆಗಳಲ್ಲಿ ಸಂಚರಿಸಿ ಗ್ರಾಮದ ದೇವಸ್ಥಾನ,ಮಠ ಹಾಗೂ ಜನ ಸಾಮಾನ್ಯರಿಗೆ ಕುಂಭಮೇಳ ಕಾರ್ಯಕ್ರಮದ ಬಗ್ಗೆ ತಿಳಿಸುವಂತಹ ಕೆಲಸವನ್ನು ಮಾಡುತ್ತದೆ. ಈ ಕಾರ್ಯಕ್ರಮಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಸಾಲೂರುಮಠದ ಶ್ರೀಗಳಾದ ಶಾಂತಾ ಮಲ್ಲಿಕಾರ್ಜುನ ಸ್ವಾಮೀಜಿ, ಹನೂರು ವಿಧಾನಸಭಾ ಶಾಸಕ ಆರ್.ನರೇಂದ್ರ, ಕಾಡಾ ಅಧ್ಯಕ್ಷ ಜಿ.ನಿಜಗುಣ ರಾಜು, ಜಿಲ್ಲಾಧಿಕಾರಿ ಎಸ್.ಅಶ್ವತಿ, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್.ನಾಗರಾಜು,ಜಿ.ಪಂ. ಸಿಇಒ ಶಾಂತಾ ಎಲ್.ಹುಲ್ಮನಿ, ಉಪವಿಭಾಗಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ,ತಹಶೀಲ್ದಾರ್ ರೂಪ,ಸಣ್ಣಸ್ವಾಮಿ ಗೌಡ,ರಂಗನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
(ವರದಿ: ಡಿ.ಎಲ್. ಹರೀಶ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post