ಮಣ್ಣೆತ್ತಿನ ಅಮಾವಾಸ್ಯೆ ಎಂಬುದು ರೈತರ ಹಬ್ಬ. ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕ ಭಾಗಗಳಲ್ಲಿ ಮಣ್ಣೆತ್ತಿನ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಕೆರೆಯಿಂದ ತಂದ ಮಣ್ಣಿನಿಂದ ಎತ್ತುಗಳ ಪ್ರತಿರೂಪ ಮಾಡಿ ಪೂಜಿಸುವುದು ವಿಶೇಷ. ಮಣ್ಣಿಗೂ, ಎತ್ತಿಗೂ ಅವಿನಾಭಾವ ಸಂಬಂಧವಿದೆ. ಅಲ್ಲದೆ ಮಣ್ಣಿನ ಎತ್ತಿನ ಮೂರ್ತಿಗಳನ್ನು ಪೂಜಿಸಿದರೆ ಸಕಾಲದಲ್ಲಿ ಮಳೆ ಬೆಳೆ ಸಮೃದ್ಧಿಯಾಗುತ್ತದೆ ಎನ್ನುವ ನಂಬಿಕೆಯಿದೆ. ಈ ಹಬ್ಬದ(ಜುಲೈ 2) ಪರಿಚಯಾತ್ಮಕ ಬರಹವಿದು.
ಭಾರತ ಹಬ್ಬಹರಿದಿನಗಳ ನಾಡು. ಇಲ್ಲಿ ಸಂಸ್ಕೃತಿ ಸಂಸ್ಕಾರಗಳಿಗೆ ವಿಶೇಷ ಮಹತ್ವವಿದೆ. ನಾವೆಲ್ಲ ಕಲ್ಲು ಮಣ್ಣಿನಲ್ಲಿ, ಪ್ರಕೃತಿಯಲ್ಲಿ ದೈವತ್ವವನ್ನು ಕಾಣುತ್ತೇವೆ. ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಸಂಪ್ರದಾಯದ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ಇದು ಮುಂಗಾರಿನ ಆರಂಭದ ಹಬ್ಬ ಕೂಡ.
ತಮ್ಮ ಬದುಕಿಗೆ ಆಸರೆಯಾಗಿರುವ ಎತ್ತುಗಳನ್ನು ರೈತಾಪಿ ಜನರು ಪೂಜಿಸಿ ಸಂಭ್ರಮ ಪಡುವ ಈ ಹಅಬ್ಬ ಕಾರಹುಣ್ಣಿಮೆಯ ನಂತರ ಬರುತ್ತದೆ. ಮಣ್ಣಿನ ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ವರ್ಷಾರಂಭದಿಂದ ಐದು ಮುಖ್ಯ ಮಣ್ಣಿನ ಪೂಜೆಯನ್ನು ನೆರವೇರಿಸುವ ಸಂಪ್ರದಾಯವಿದೆ. ಅಷಾಢ ಶ್ರಾವಣ ಮತ್ತು ಭಾದ್ರಪದ ಮಾಸಗಳು ಮಣ್ಣಿನ ಪೂಜೆಯ ದ್ಯೋತಕಗಳಾಗಿವೆ. ಮಣ್ಣೆತ್ತು, ಗುಳ್ಳವ್ವ, ಹುತ್ತಪ್ಪ, ಗಣಪ್ಪ ಹಾಗೂ ಜೋಕುಮಾರ- ಈ ಐದೂ ಮಣ್ಣಿನಿಂದ ಮಾಡಿದ ದೈವಗಳನ್ನು ಮೂರು ಮಾಸಗಳಲ್ಲಿ ಪೂಜಿಸುತ್ತಾರೆ. ಕೃಷಿಕರ ಅತ್ಯಂತ ಒಡನಾಡಿಯಾಗಿರುವ ದನಕರುಗಳನ್ನು ಕಾರಹುಣ್ಣಿಮೆಯಲ್ಲಿ ವಿಶೇಷವಾಗಿ ಮೈತೊಳೆದು, ಬಣ್ಣ ಹಚ್ಚಿ, ವಿವಿಧ ಪರಿಕರಗಳಿಂದ ಸಿಂಗಾರ ಮಾಡುತ್ತಾರೆ. ಹೋಳಿಗೆ, ಕಡುಬು ಮುಂತಾದ ಮುಂತಾದ ಸಿಹಿ ತಿನಿಸುಗಳನ್ನು ಮಾಡಿ ಎಡೆ ಹಿಡಿದು ಸಂಜೆಗೆ ಕರಿ ಹರಿಯುವ ಸಂಭ್ರಮ ಹೇಳತೀರದು. ದನಕರುಗಳನ್ನು ಮನಬಂದಂತೆ ಓಡಾಡಿಸುವ ಮೂಲಕ ತಿಂಗಳೊಪ್ಪತ್ತಿನಿಂದ ವಿಶ್ರಾಂತಿಗೆ ಸರಿದಿದ್ದ ಅವುಗಳನ್ನು ಮತ್ತೆ ಕೃಷಿಕಾಯಕಕ್ಕೆ ಸಜ್ಜು ಮಾಡುತ್ತಾರೆ.
ಮಣ್ಣೆತ್ತಿಗೆ ಮಹಾ ಪೂಜೆ – ಮಳೆಗಾದ ನಾಂದಿಪದ
ಜೂನ್ ಜೇಷ್ಠಮಾಸ ಕೊನೆಗೊಳ್ಳುವ ದಿನ. ನಮ್ಮ ಗ್ರಾಮೀಣ ಭಾಗದಲ್ಲಿ ಈ ಅಮಾವಾಸ್ಯೆಯನ್ನು ಮಣ್ಣೆತ್ತಿನ ಅಮಾವಾಸ್ಯೆಯನ್ನಾಗಿ ಆಚರಿಸುವ ರೂಢಿ ಇದೆ.
ಮಳೆ ಬಂತೆಂದರೆ ಬಹುಶಃ ಎಲ್ಲರಿಗಿಂತ ಹೆಚ್ಚು ಸಂತೋಷ ಪಡುವುದು ರೈತಾಪಿ ವರ್ಗ. ಹಾಗೆಂದೇ ಮುಂಗಾರಿನ ಜ್ಯೇಷ್ಠ ಮಾಸದಲ್ಲಿ ರೈತರು ಹೆಚ್ಚು ಉಲ್ಲಾಸದಿಂದ ಇರುತ್ತಾರೆ. ಈ ಉಲ್ಲಾಸವನ್ನು ಹೆಚ್ಚಿಸುವಂತೆ ಕೃಷಿಗೆ ಸಂಬಂಧಿಸಿದ ಸಂಭ್ರಮಾಚರಣೆಗಳೂ ನಡೆಯುತ್ತವೆ. ಈ ನಿಟ್ಟಿನಲ್ಲಿ ಜ್ಯೇಷ್ಠ ಮಾಸದ ಮುಕ್ತಾಯದ ದಿನ, ಅಂದರೆ ಅಮಾವಾಸ್ಯೆಯ ದಿನ ಅತ್ಯಂತ ಮಹತ್ವದ್ದು. ಅಂದು ‘ಮಣ್ಣೆತ್ತಿನ ಅಮಾವಾಸ್ಯೆ’ ಅಥವಾ ‘ಬಸವಣ್ಣನ ಹಬ್ಬ’.
ಧಾನ್ಯಲಕ್ಷ್ಮೀಗೆ ಮನ್ನಣೆ
ಈ ಅಮಾವಾಸ್ಯೆಯು ಅಶ್ವೀಜ ಬಹುಳ ಅಮಾವಾಸ್ಯೆಯಷ್ಟೇ ಪ್ರಾಮುಖ್ಯತೆ ಪಡೆದಿದೆ. ದೀಪಾವಳಿ ಅಮಾವಾಸ್ಯೆಯಲ್ಲಿ ಧನಲಕ್ಷ್ಮಿ ಪೂಜೆಗೊಂಡರೆ, ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಧಾನ್ಯಲಕ್ಷ್ಮೀಯನ್ನು ತರುವ ಎತ್ತುಗಳು ಹಾಗೂ ಕೃಷಿಯ ಎಲ್ಲಾ ಉಪಕರಣಗಳು ಪೂಜೆಗೊಳ್ಳುತ್ತವೆ.
ಭೂಮಿ ಮತ್ತು ಎತ್ತುಗಳು ಕೃಷಿಯಲ್ಲಿ ಬಹು ಮುಖ್ಯ ಅಂಗಗಳು. ತಮ್ಮ ಬದುಕಿಗೆ ಕಾರಣೀಭೂತವಾದ ಮಣ್ಣು ಮತ್ತು ಎತ್ತು ಪವಿತ್ರವೆಂದು ರೈತರು ಭಾವಿಸುತ್ತಾರೆ. ಆದ್ದರಿಂದ ಭೂಮಿಯ ಅಂಗವಾದ ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಪರಿಪಾಠವಿದೆ.
ಈ ಹಬ್ಬವನ್ನು ಕರ್ನಾಟಕದ ಕೆಲವು ಕಡೆ ಅಂದರೆ ಬಯಲುಸೀಮೆ, ಉತ್ತರ ಕರ್ನಾಟಕ ಜಿಲ್ಲೆಗಳು ಅದರಲ್ಲೂ ಗುಲ್ಬರ್ಗ ಜಿಲ್ಲೆಯಲ್ಲಿ ವಿಶೇಷವಾಗಿ ಆಚರಿಸುವುದು ಕಂಡು ಬರುತ್ತದೆ. ಎತ್ತುಗಳು ಧರ್ಮ ಸ್ವರೂಪಿ. ಅವು ಧರ್ಮವನ್ನು ಬೋಧಿಸುತ್ತವೆ. ಅದರೆಂತೆ ನಡೆದರೆ ಒಳಿತಾಗುತ್ತದೆ ಎಂಬ ನಂಬಿಕೆ ಗ್ರಾಮೀಣರಲ್ಲಿದೆ. ಬೇಸಿಗೆಯಲ್ಲಿ ಹೊಲವನ್ನು ಸ್ವಚ್ಛಗೊಳಿಸಿ ಉಳುಮೆ, ಮುಂಗಾರಿನಲ್ಲಿ ಬಿತ್ತನೆ, ಅಷ್ಟೇ ಅಲ್ಲ ಬೆಳೆ ಬೆಳೆದು ಧಾನ್ಯ ಮನೆ ಸೇರುವ ತನಕ ತಮ್ಮ ಜೊತೆಗೆ ದುಡಿದ ಎತ್ತುಗಳನ್ನು ದೇವರೆಂದು ಭಾವಿಸುವುದು ಸಹಜ. ನಮ್ಮ ಬದುಕಿಗೆ ಸಹಾಯವಾಗುವ ಎಲ್ಲವನ್ನೂ ಪೂಜಿಸಿ ಕೃತಜ್ಞತೆ ಸಲ್ಲಿಸುವ ಸಂಸ್ಕೃತಿ ನಮ್ಮದು. ಕೃಷಿಗೂ ರೈತನಿಗೂ ಸಂಬಂಧಿಸಿದ ಈ ಹಬ್ಬವು ಜಗತ್ತಿನ ಸುಖ ಸಮೃದ್ಧಿಗೆ ನಾಂದಿ ಇದ್ದಂತೆ.
ಹಬ್ಬಕ್ಕೊಂದು ಕಥೆ
ಈ ಮಣ್ಣೆತ್ತಿನ ಹಬ್ಬಕ್ಕೆ ಸಂಬಂಧಿಸಿದಂತೆ ಒಂದು ರಮ್ಯವಾದ ಜನಪ್ರಿಯ ಕಥೆಯಿದೆ. ಒಮ್ಮೆ ಶಿವನು ಮಾರುವೇಷದಲ್ಲಿ ಬಂದು ನಿಮ್ಮ ಎತ್ತುಗಳನ್ನು ಕೆಲಕಾಲ ನನಗೆ ನೀಡಿ ಎಂದು ರೈತರನ್ನು ಕೇಳಿದನಂತೆ ಆಗ ಅವರು ಕುಹಕದಿಂದ ನಮ್ಮ ಎತ್ತುಗಳು ಮಣ್ಣಿನವು ಎಂದರಂತೆ. ನಂತರ ಕೊಟ್ಟಿಗೆಯಲ್ಲಿ ಹೋಗಿ ನೋಡಿದರೆ ಎತ್ತುಗಳೆಲ್ಲವೂ ಮಣ್ಣಿನವೇ ಆಗಿಬಿಟ್ಟಿದ್ದವು. ಅವರೆಲ್ಲಾ ಪಶ್ಚಾತ್ತಾಪದಿಂದ ಶಿವನನ್ನು ಪೂಜಿಸಿ ಪ್ರಾರ್ಥಿಸಿದಾಗ ಆ ಎತ್ತುಗಳೆಲ್ಲ ಮರಳಿ ಜೀವಂತವಾದವಂತೆ.
ಹಬ್ಬದ ದಿನ ಹಿರಿಯರು ಮಕ್ಕಳನ್ನು ಕುಳ್ಳಿರಿಸಿಕೊಂಡು ಈ ಕಥೆಯನ್ನು ಹೇಳುವ ಪರಿಪಾಠವಿದೆ. ಮುಂದೆ ಶ್ರಾವಣ ಭಾದ್ರಪದದಲ್ಲಿ ವ್ರತಾದಿಗಳನ್ನು ವಿಶೇಷವಾಗಿ ಆಚರಿಸುವುದರಿಂದ ವ್ರತಾದಿಗಳನ್ನು ಹೊತ್ತು ತರುವ ಹಬ್ಬವೆಂಬ ಪ್ರತೀತಿಯೂ ಇದೆ. ಈ ಹಬ್ಬದ ನಂತರ ಆಷಾಡದಲ್ಲಿ ಹಬ್ಬಗಳು ಯಾವುದೂ ಬರದೆ ರೈತರು ಕೃಷಿ ಚಟುವಟಿಕೆಗಳಲ್ಲಿ ಸಂಭ್ರಮದಿಂದ ಸಂಪೂರ್ಣವಾಗಿ ತೊಡಗುತ್ತಾರೆ. ಈ ಸಂದರ್ಭದಲ್ಲಿ ಮೈಮರೆತರೆ ಜೀವನಕ್ಕೆ ಕಷ್ಟವೆಂಬ ಎಚ್ಚರಿಕೆ ಈ ಆಚರಣೆಯಲ್ಲಿದೆ.
ಬೆಸುಗೆಯ ಕೊಂಡಿ
ಮಣ್ಣೆತ್ತಿನ ಅಮಾವಾಸ್ಯೆ ಪೂಜೆಗಾಗಿ ಕುಂಬಾರ ಅಥವಾ ವಿಶ್ವಕರ್ಮ ಜನಾಂಗದವರು ಒಂದು ದಿನ ಮುಂಚಿತವಾಗಿ ಮಣ್ಣಿನ ಎತ್ತುಗಳನ್ನು ಮಾಡಿ ಮರು ದಿನ ಮುಂಜಾನೆ ಮನೆಮನೆಗೆ ತಂದುಕೊಟ್ಟ ಅವರಿಂದ ವೀಳ್ಯದೊಂದಿಗೆ ಅಕ್ಕಿ ತೆಂಗಿನಕಾಯಿ ಮತ್ತು ಕಾಣಿಕೆ ಪಡೆಯುತ್ತಾರೆ. ನಗರ ಪ್ರದೇಶದಲ್ಲಿ ಈ ಹಬ್ಬ ಇಂದು ಮರೆಯಾಗಿದ್ದರೂ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ರೂಢಿಯಲ್ಲಿದ್ದು ಸಾಂಪ್ರದಾಯಿಕ ಉದ್ಯೋಗಿಗಳಿಗೆ ಆಧಾರವೂ ಆಗಿದೆ.
ವಿಭಿನ್ನ ಸಂಪ್ರದಾಯ
ಮಣ್ಣಿನ ಜೋಡೆತ್ತುಗಳನ್ನು ಪೂಜಿಸಿ ಚಕ್ಕುಲಿ ಕೋಡುಬಳೆ ಆಂಬೋಡೆ ಪಾಯಸ ನೈವೇದ್ಯ ಮಾಡಿ ನಂತರ ಊಟ ಮಾಡುವ ಆಚರಣೆಯಿದೆ. ಸಂಜೆ ಅಥವಾ ಮಾರನೆ ಬೆಳಿಗ್ಗೆ ಮಣ್ಣೆತ್ತುಗಳನ್ನು ನೀರಿನಲ್ಲಿ ಬಿಡುವುದು, ಹೊಲದಲ್ಲಿ ಇಡುವುದು ಅಥವಾ ಹೊಲದಲ್ಲಿ ಹೂಳುವುದು ಹೀಗೆ ಒಂದೊಂದು ಕಡೆ ಒಂದೊಂದು ಸಂಪ್ರದಾಯವಿದೆ. ಈ ಬಸವಣ್ಣಗಳು ಹುಲುಸಾದ ಬೆಳೆ ಬರುವಂತೆ ಮಾಡುತ್ತವೆ ಎಂಬ ನಂಬಿಕೆಯಿದೆ.
ಅಂದು ಮನೆಯಲ್ಲಿರುವ ಎತ್ತುಗಳಿಗೂ ದನಕರುಗಳಿಗೂ ಮೈತೊಳೆದು ಕೊರಳಿಗೆ ಗಂಟೆ ಕೋಡಿಗೆ ನಾನಾ ರೀತಿಯ ಅಲಂಕಾರ ಮಾಡಿ ಹೂವುಗಳಿಂದ ಅವುಗಳನ್ನು ಅಲಂಕರಿಸಿ, ಪೂಜಿಸಿ, ವಿವಿಧ ಧಾನ್ಯಗಳ ಉಸಳಿ ಮತ್ತು ದೋಸೆಗಳನ್ನು ತಿನ್ನಿಸುತ್ತಾರೆ. ಉದ್ಯೋಗ ನಿಮಿತ್ತ ಹೊಲಮನೆಯಿಂದ ದೂರವಿರುವವರು ಹಾಗೂ ದನಕರುಗಳಿಲ್ಲದವರು ಮಣ್ಣೆತ್ತುಗಳು ದೊರಕದಿದ್ದರೆ ತಾವೇ ಸ್ವತಃ ಸಿದ್ಧ ಮಾಡಿ ಪೂಜಿಸಿ, ಹೋಳಿಗೆ ಸೀಕರಣೆ ಅಥವಾ ಬೇರೆಬೇರೆ ಸಿಹಿ ಅಡುಗೆ ನೈವೇದ್ಯ ಮಾಡಿ ಸಂಜೆ ಹರಿಯುವ ನೀರಿನಲ್ಲಿ ವಿಸರ್ಜಿಸುತ್ತಾರೆ. ಕೆಲವರು ವಿಸರ್ಜಿಸದೆ ಅದನ್ನು ತುಳಸಿ ಕಟ್ಟೆಯಲ್ಲಿಡುತ್ತಾರೆ. ಇನ್ನು ಕೆಲವರು ಮಕ್ಕಳಿಗೆ ಆಡಲು ಕೊಡುತ್ತಾರೆ.
ಕೆಲವು ಊರುಗಳಲ್ಲಿ ಸಂಜೆ ವೇಳೆಯಲ್ಲಿ ಮಕ್ಕಳು ಎತ್ತುಗಳಂತೆ ವೇಷ ಧರಿಸಿ ಕೊರಳಿಗೆ ಗಂಟೆ ಕಟ್ಟಿಕೊಂಡು ಮನೆಮನೆಗೆ ಹೋಗಿ ಬೇಳೆಕಾಳುಗಳನ್ನು ಪಡೆಯುತ್ತಾರೆ. ಪೂಜಿಸಿದ ಮಣ್ಣೆತ್ತುಗಳನ್ನು ಜನರು ಆ ಮಕ್ಕಳ ಕೈಗೆ ಕೊಡುತ್ತಾರೆ. ಸಂಗ್ರಹವಾದ ಬೇಳೆಕಾಳುಗಳನ್ನು ಮಾರಿ ತನಗೆ ಬೇಕಾದ ತಿಂಡಿ ತಿನಿಸುಗಳನ್ನು ಕೊಂಡು ತಿನ್ನುತ್ತಾರೆ. ಮಣ್ಣೆತ್ತುಗಳೆಲ್ಲವನ್ನೂ ಸಂಗ್ರಹಿಸಿ ಕೆರೆಯಲ್ಲಿ ವಿಸರ್ಜಿಸುತ್ತಾರೆ.
ಜ್ಯೇಷ್ಠ ಆಷಾಡಗಳಲ್ಲಿ ಮಳೆ ಸುರಿದು ಧರೆ ನೆನೆದು ಆದ್ರವಾಗಿ ಹೊಸ ರೂಪವನ್ನು ಪಡೆದಿರುತ್ತದೆ. ಭೂದೇವಿಯ ಮಗನು ಭೂಮಿಗೆ ಜೀವವನ್ನುಣಿಸಲು, ಧಾನ್ಯಗಳನ್ನು ಬಿತ್ತಲು ಇದು ಸಕಾಲವಾಗಿದೆ. ಇದು ಸಸ್ಯ ಸಮೃದ್ಧಿಯ ಕಾಲವಷ್ಟೇ ಆಗಿರದೆ ಸಂತಾನ ಸಮೃದ್ಧಿಯ ಕಾಲವೂ ಆಗಿದೆ. ಸಮಗ್ರವಾದ ಸಂಪೂರ್ಣ ಸೃಷ್ಟಿಯ ಸಮೃದ್ಧಿಯ ಪ್ರತಿರೂಪವೇ ಮಣ್ಣೆತ್ತಿನ ಅಮಾವಾಸ್ಯೆ. ಸೃಷ್ಟಿಗೆ ಪ್ರಧಾನವಾದ ಈ ಹಬ್ಬವನ್ನು ಆಚರಿಸುವುದರಿಂದ ಕೃಷಿಯ ಫಲ ಸಮೃದ್ಧವಾಗಿ, ಅದ್ಭುತ ಅಭಿವೃದ್ದಿಯಾಗಿ ವರ್ಷವಿಡೀ ಸಂತೋಷ ದೊರಕುತ್ತದೆ ಎಂಬ ಪ್ರತೀತಿಯಿದೆ. ಮೂಕ ಬಸವಣ್ಣಗಳು ರೈತರ ಜೀವನದಲ್ಲಿ ವಹಿಸುವ ಪಾತ್ರದ ಹೆಗ್ಗಳಿಕೆಯನ್ನು ಈ ಹಬ್ಬವು ಸಾರುತ್ತದೆ.
ಮಣ್ಣಿನ ದೈವ- ಮರೆಯಾಗುತ್ತಿರುವ ಸಾಂಪ್ರದಾಯಿಕ ಹಬ್ಬ
ಮಣ್ಣು ನಮಗೆ ದೇವರ ಸಮಾನ. ಹಬ್ಬಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಮಾಡಿ ಪೂಜಿಸುವ ಸಂಪ್ರದಾಯ ಹಿಂದಿನಿಂದ ಇದೆ. ಋತುಮಾನಕ್ಕೆ ತಕ್ಕಂತೆ ಬರುವ ಹಬ್ಬಗಳು ನೆಲದ ಮಣ್ಣಿನ ಗುಣದ ಸುಗಂಧವನ್ನೂ ಸೂಸುತ್ತವೆ. ಅಂತೆಯೇ ನಮ್ಮಲ್ಲಿ ಪ್ರತಿ ಹಬ್ಬಕ್ಕೂ ಉಂಟು ಮೈತ್ರಿಕೆಯೊಂದಿಗಿನ ಬಿಡಿಸದ ನಂಟು. ಕೃಷಿ ಪ್ರಧಾನವಾದ ನಾಡಿನಲ್ಲಿ ನೆಲ ಅಥವಾ ಮಣ್ಣು ದೇವರೋಪಾದಿಯಲ್ಲಿ ನಮ್ಮ ಮನಸ್ಸಿನಲ್ಲಿ ಪವಿತ್ರ ಭಾವವಾಗಿ ನೆಲೆಗೊಂಡಿದೆ.
ಹಬ್ಬಗಳಲ್ಲಿ ಮಣ್ಣಿನ ಸಂಬಂಧದ ವ್ಯಕ್ತ ರೂಪವನ್ನು ಕಾಣಬಹುದು. ನಮ್ಮ ಅನೇಕ ಹಬ್ಬಗಳಲ್ಲಿ ಮಣ್ಣಿನ ಮೂರ್ತಿಗಳನ್ನು ಮಾಡಿ ಪೂಜಿಸುವುದು ಪರಂಪರೆಯಿಂದ ಸಾಗಿಬಂದಿದೆ. ಮಣ್ಣನ್ನು ಹೊನ್ನು ಎಂದೇ ಪರಿಭಾವಿಸಿದವರು ನಾವು. ‘ಏಳುತ ನೆನೆದೇನ ಏಳೆಂಟು ದೇವರ / ಎಳ್ಳು ಜೀರಿಗಿ ಬೆಳೆಯೋಳ/ ಭೂಮಿ ತಾಯಿನ/ ಎದ್ದೊಂದು ಗಳಿಗೆ ನೆನೆದೇನ’ ಎಂದು ನಿತ್ಯ ಎದ್ದ ತಕ್ಷಣ ಮೊದಲು ಭೂಮಿ ತಾಯಿಯನ್ನು ಸ್ಮರಿಸುತ್ತೇವೆ.
ಮುಂಗಾರು ಮಳೆಯ ಜಿನುಗು ಇಣುಕುತ್ತಿರುವಾಗಲೇ ರೈತನಿಗೆ ಮೊದಲ ಎದುರಾಗುವುದು ಕಾರ ಹುಣ್ಣಿಮೆ ಹಬ್ಬ. ಕಾದ ನೆಲ ಹದಗೊಳಿಸಿ ಬಿತ್ತನೆಗೆ ಅಣಿಯಾಗಿ ಕುಳಿತ ರೈತನಿಗೆ ಸಂಭ್ರಮದ ಕಾಲ. ಇನ್ನು ಅಷಾಡ ಮಾಸದ ಮಣ್ಣೆತ್ತಿನ ಅಮಾವಾಸ್ಯೆಗೆ, ಅನ್ನ ಕೊಡುವ ಮಣ್ಣು ಎತ್ತಿನ ರೂಪ ತಾಳಿ ದೈವತ್ವದ ಗುಣ ಪಡೆಯುತ್ತದೆ.
ಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ದಿನ ಮಣ್ಣೆತ್ತು ದೇವರಾಗುತ್ತದೆ. ಹಳ್ಳಿಯ ಸೊಗಡಿನ ಈ ಹಬ್ಬಕ್ಕೆ ತಿಂಗಳಿರುವಾಗಲೇ ಕುಂಬಾರನಿಗೆ ಕೆಲಸ. ಮಣ್ಣೆತ್ತನ್ನು ಹೂ-ಬಾಸಿಂಗದಿಂದ ಅಲಂಕರಿಸಿ, ಕೋಡಿಗೆ ಕೋಡುಬಳೆ ಹಾಕಿ ಕಡುಬು, ಹೋಳಿಗೆ, ನೈವೇದ್ಯ ಅರ್ಪಿಸುತ್ತಾರೆ. ನಮಗಾಗಿ ಹೆಗಲು ಕೊಟ್ಟು ದುಡಿವ ಎತ್ತುಗಳಿಗೆ ಹೀಗೆ ಶ್ರದ್ಧೆ, ಗೌರವಗಳು ಸಲ್ಲುತ್ತವೆ.
ಆಷಾಡದ ಮಂಗಳವಾರದಂದು ಗುಳ್ಳವ್ವನ ಹಬ್ಬಕ್ಕೆ ಪ್ರಾಶಸ್ತ್ಯ. ಹೊಳೆ-ಹಳ್ಳ ಇಲ್ಲವೆ ಗದ್ದೆಯಲ್ಲಿನ ಕೆಸರುಮುದ್ದೆ ಮನೆಯಲ್ಲಿ ಗುಳ್ಳವ್ವನಾಗಿ ಪೂಜಿಸಲ್ಪಡುತ್ತದೆ. ಮಂಗಳವಾರ ಬಂದು ಬುಧವಾರ ಹೋಗುವ (ಸಾಯುವ) ಗುಳ್ಳವನ ಬಗ್ಗೆ, ‘ಗುಳ್ಳವ್ವ ದೇವರಲ್ಲ ಜೋಕುಮಾರ ಗಂಡಸಲ್ಲ’ ಎಂಬ ಗಾದೆ ಪ್ರಚಲಿತವಿದ್ದರೂ ಮುಗ್ಧ ಜನರಿಗೆ ಮಣ್ಣಿನ ಮೇಲಿರುವ ನಿಷ್ಠೆ. ಶ್ರದ್ಧೆ ಕಡಿಮೆಯಾಗಿಲ್ಲ.
ಮಣ್ಣಿನ ಮೂರ್ತಿಗಳನ್ನು ಮಾಡಿ ದೇವರನ್ನು ಆರಾಧಿಸುವ ರೂಢಿ ಬಹು ವ್ಯಾಪಕ. ಆದಿಶೇಷನಾಗಿ ಭೂಮಿಯ ಭಾರವನ್ನೇ ಹೊತ್ತ ನಾಗದೇವನ ಮಣ್ಣಿನ ಮೂರ್ತಿಗೆ ಶ್ರಾವಣ ಪಂಚಮಿ ದಿನ ಹಾಲಿನ ಮಜ್ಜನ. ಶ್ರಾವಣ ಶುಕ್ರವಾರದ ಸಂಪತ್‍ಗೌರಿ ಪೂಜೆಗೆ ಬೇಕು ಮಣ್ಣಿನ ಮಡಕೆ. ಮಡಕೆಗೆ ಬಣ್ಣ ಬಳಿದು ಒಳಗೆ ಮಂಗಳದ್ರವ್ಯಗಳನ್ನು ತುಂಬಿ ತಿಂಗಳವರೆಗೆ ಕದಲಿಸದೇ, ಪೂಜಿಸುತ್ತಾರೆ.
ಭಾದ್ರಪದ ತೃತೀಯದಂದು ಸ್ವರ್ಣ ಗೌರಿ ಮೂರ್ತಿಯನ್ನು ಬರಮಾಡಿಕೊಳ್ಳುತ್ತಾರೆ. ದೇವತೆಗಳಲ್ಲಿ ಅಗ್ರ ಎನಿಸಿದ ವಿದ್ಯಾದೇವತೆ ಗಣೇಶ ಕೂಡ ಮಣ್ಣಿನಲ್ಲಿಯೇ ಮೈದಳೆದು ನಿಲ್ಲುತ್ತಾನೆ. ಇನ್ನು ನವರಾತ್ರಿ ಮಹಾನವಮಿ ವೇಳೆಯಲ್ಲಿ ಮಣ್ಣಲ್ಲಿ ಸಸಿ ಬೆಳೆಸಿ ದೇವಿಯನ್ನು ಆರಾಧಿಸುತ್ತಾರೆ. ಆಶ್ಲೀಜ ಮಾಸದಲ್ಲಿ ಆರಾಧಿಸುತ್ತಾರೆ. ಆಶ್ಲೀಜ ಮಾಸದಲ್ಲಿ ಪೂರ್ಣಿಮೆ ದಿನ ಮಣ್ಣಿನ ಶೀಗಿ ಮಾಡಿ ಆರತಿ ಬೆಳಗುವ ವಾಡಿಕೆ ಕೆಲವೆಡೆ ಇದೆ. ಗೌರಿ ಹುಣ್ಣಿಮೆಗೂ ಗೌರಿ ಮೂರ್ತಿ ಪ್ರತಿಷ್ಠಾಪಿಸಿ, ಐದು ದಿನಗಳ ನಂತರ ವಿಸರ್ಜಿಸುತ್ತಾರೆ. ಅಷ್ಟರಲ್ಲೇ ಎದುರಾಗುವುದು ದೀಪಾವಳಿ. ಈ ಹಬ್ಬದಲ್ಲಿ ಮಣ್ಣಿನ ಹಣತೆಗಳು ಭೂಲೋಕವನ್ನೇ ಬೆಳಗುತ್ತವೆ.
ಎಳ್ಳ ಅಮಾವಾಸ್ಯೆ ರೈತನಿಗೆ ದೊಡ್ಡ ಹಬ್ಬ. ಅಂದು ಉತ್ತರ ಕರ್ನಾಟಕದ ಜನರು ಬಂಡಿ ತುಂಬಿಕೊಂಡು ತೋಟ-ಗದ್ದೆಗಳಿಗೆ ತೆರಳುತ್ತಾರೆ. ಭೂತಾಯಿಗೆ ಪೂಜಿಸಿ, ‘ನೀನು ನೀಡಿದ್ದು ನಿನಗೆ ಅರ್ಪಿಸುವೆ’ ಎಂದು ಚರಗ ಚೆಲ್ಲಿ ಧನ್ಯರಾಗುತ್ತಾರೆ. ಹಬ್ಬದ ಶುಭ ಗಳಿಗೆಯಲ್ಲಿ ಮೃತ್ತಿಕೆಯು ಪಾವಿತ್ರ್ಯತೆಯೊಂದಿಗೆ ಪ್ರಾಶಸ್ತ್ಯವನ್ನೂ ಪಡೆದಿದೆ. ಮಣ್ಣಲ್ಲಿ ಹುಟ್ಟಿ, ಮಣ್ಣಿಗೆ ಸೇರುವ ಮಾನವನ ಮೇಲೆ ಮಣ್ಣಿನ ಋಣವಿದೆ. ಮಣ್ಣಿನ ಮಡಿಲಲ್ಲಿ ಬದುಕು ಅರಳಿಸಿಕೊಳ್ಳುವ ರೈತರು, ಹಬ್ಬಗಳ ನೆಪದಲ್ಲಿ ಮಣ್ಣನ್ನು ಪೂಜಿಸಿ ಧನ್ಯರಾಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೈತರು ಹಲವಾರು ಸಮಸ್ಯೆಯಲ್ಲಿ ಸಿಲುಕಿರುವುದು, ನಗರಕ್ಕೆ ವಲಸೆ ಬರುತ್ತಿರುವ ಕೃಷಿಕರು, ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿರುವ ಮಳೆಯ ಪ್ರಮಾಣ ಮುಂತಾದ ಕಾರಣಗಳಿಂದ ಮಣ್ಣೆತ್ತಿನ ಆಚರಣೆಯಲ್ಲಿ ಸಂಭ್ರಮ ಕಾಣುತ್ತಿಲ್ಲ.
ಭಕ್ತಿ ಭಾವದ ಅಮಾವಾಸ್ಯೆ
ಪ್ರತಿವರ್ಷ ಗ್ರೀಷ್ಮಋತುವಿನ ಜ್ಯೇಷ್ಠ ಬಹುಳದಲ್ಲಿ ಬರುವ ಮಣ್ಣೆತ್ತಿನ ಅಮಾವಾಸ್ಯೆಯು ಮಕ್ಕಳಿಗೆ ಸಾಂಸ್ಕೃತಿಕ ಹಬ್ಬವಾದರೆ, ರೈತರ ಪಾಲಿಗದು ಅಪ್ಪಟ ಕೃಷಿ ಹಬ್ಬ. ಅನ್ನದಾತನ ಭಕ್ತಿ ಭಾವದ ಪ್ರತೀಕ ಕೂಡ.
ಕಾರಹುಣ್ಣಿಮೆ ಮುಗಿಯುತ್ತಿದ್ದಂತೆಯೇ ಉತ್ತರ ಕರ್ನಾಟಕದ ಬಹುತೇಕ ಮಕ್ಕಳ ಮನದಲ್ಲಿ ಮಣ್ಣೆತ್ತು (ಮಣ್ಣಿನಿಂದಲೇ ತಯಾರು ಮಾಡಿರುವ ಎತ್ತು) ಕುಣಿಯುತ್ತದೆ. ಪ್ರತಿವರ್ಷ ಗ್ರೀಷ್ಮಋತುವಿನ ಜ್ಯೇಷ್ಠ ಬಹುಳದಲ್ಲಿ ಬರುವ ಮಣ್ಣೆತ್ತಿನ ಅಮಾವ್ಯಾಸೆಗಾಗಿ ರೈತನ ಮಕ್ಕಳು ಕಾಯುತ್ತಾರೆ. ಮಣ್ಣೆತ್ತುಗಳನ್ನು ಓಡಿಸಲು ಅವರು ಸಿದ್ಧತೆ ಮಾಡಿಕೊಳ್ಳುತ್ತಾರೆ. ಇದು ಸಾಂಸ್ಕøತಿಕ ಹಬ್ಬವೂ ಆಗಿರುವುದರಿಂದ ಹಳ್ಳಿಗೆ ಹಳ್ಳಿಯೇ ಮಣ್ಣೆತ್ತಿನ ಅಮಾವಾಸ್ಯೆಯನ್ನು ಅದ್ಧೂರಿಯಾಗಿ ಆಚರಿಸಲು ಸಿಂಗಾರಗೊಳ್ಳುತ್ತದೆ.
ನಮ್ಮದು ಕೃಷಿ ಪ್ರಧಾನ ದೇಶ. ಅದರಲ್ಲೂ ಎತ್ತುಗಳೀಗೂ ರೈತರಿಗೂ ಅವಿನಾಭಾವ ಸಂಬಂಧವಿದೆ. ಎತ್ತುಗಳನ್ನು ರೈತರು ತಮ್ಮ ಮಕ್ಕಳೆಂದೇ ಭಾವಿಸಿದ್ದಾರೆ. ಈ ಸಂಬಂಧ ಯಾವಾಗಲೂ ಗಟ್ಟಿಯಾಗಿರಬೇಕೆಂಬ ಉದ್ದೇಶದಿಂದ ಬಸವಣ್ಣನನ್ನು ಆರಾಧಿಸುತ್ತಾ ಬಂದಿದ್ದಾರೆ ನಮ್ಮ ಪೂರ್ವಿಕರು. ಅದರ ಮುಂದುವರಿಕೆಯೇ ಮಣ್ಣೆತ್ತಿನ ಹಬ್ಬ ಎಂದೂ ಹೇಳಬಹುದು.
ಜಾನಪದ ಆಟ
ಮಕ್ಕಳಿಗೆ ಮಣ್ಣೆತ್ತಿನ ಅಮಾವಾಸ್ಯೆ ಜಾನಪದ ಆಟವಾಗಿಯೂ ಕಂಡರೆ, ಉತ್ತರ ಕರ್ನಾಟಕ ಭಾಗದ ರೈತರಿಗೆ ಸಾಂಸ್ಕೃತಿಕ ಹಬ್ಬದ ಜತೆಗೆ ಭಕ್ತಿ-ಭಾವದಿಂದ ಆಚರಿಸುವ ಹಬ್ಬವೂ ಹೌದು. ಮುಂಗಾರು ಮಳೆ ನಿರೀಕ್ಷೆಯಲ್ಲಿರುವ ರೈತಾಪಿ ವರ್ಗ, ಬಿರುಸಿನ ಬಿತ್ತನೆ ನಡುವೆಯೂ ಈ ಅಮಾವಾಸ್ಯೆಯನ್ನು ಸಡಗರ ಮತ್ತು ಸಂಪ್ರದಾಯದಿಂದ ಆಚರಿಸುತ್ತಾ ಬಂದಿದ್ದಾರೆ. ಇಂದು ಸಮೃದ್ಧಿಯ ಫಸಲು ಸಿಗುತ್ತದೆ ಎಂಬ ನಂಬಿಕೆ ಕೂಡ ಅವರದ್ದು.
ತಯಾರಿಕೆಯೇ ಸೊಗಸು
ಈ ಹಬ್ಬಕ್ಕಾಗಿ ಮಾಡಿಕೊಳ್ಳುವ ತಯಾರಿಕೆಯೇ ಒಂದು ಸೊಗಸು. ಈ ಹಿಂದೆಯಾದರೆ ಕುಂಬಾರರು ಮಣ್ಣಿನ ಎತ್ತುಗಳನ್ನು ತಯಾರಿಸಿ, ಮಾರಾಟ ಮಾಡುತ್ತಿದ್ದರು. ಕುಂಬಾರಿಕೆ ನಶಿಸುತ್ತಿರುವ ಕಾರಣ, ಈಗ ಮನೆಯವರೇ ಮಣ್ಣು ತಂದು ಎತ್ತುಗಳನ್ನು ತಯಾರಿಸುತ್ತಾರೆ. ಹೊಲದಿಂದ ತಂದ ಒಣಮಣ್ಣಿಗೆ ನೀರು ಬೆರೆಸಿ ಹಸಿಮಣ್ಣು ತಯಾರಿಸಿಕೊಳ್ಳುವುದು ಅಥವಾ ಕೆರೆಗಳಿಂದ ನೇರವಾಗಿ ಹಸಿಮಣ್ಣು ತಂದು ಎತ್ತುಗಳನ್ನು ಮಾಡುವುದು ಸದ್ಯದ ವಾಡಿಕೆ. ಎತ್ತುಗಳ ತಯಾರಿಕೆಯ ಹಿಂದೆಯೂ ವೈಜ್ಞಾನಿಕ ಅಂಶವೊಂದಿದೆ. ತಮ್ಮ ಜಮೀನಿನ ಮಣ್ಣಿನಲ್ಲಿ ಎತ್ತಿನ ಗೊಂಬೆ ತಯಾರಿಸುವುದರಿಂದ ಆಯಾ ಹೊಲದ ಮಣ್ಣಿನ ಗುಣಧರ್ಮವನ್ನು ತಿಳಿಯಲು ಅದು ಸಹಕಾರಿ ಆಗಲಿದೆ.
ಹಬ್ಬದ ಹಿಂದೊಂದು ನಂಬಿಕೆ
ನಮ್ಮೆಲ್ಲಾ ಆಚರಣೆಗಳ ಹಿಂದೊಂದು ದೈವೀ ಪ್ರಜ್ಞೆಯಿದೆ. ಅವು ಮೂರು ಬಗೆಯ ನೆಲೆಗಳನ್ನು ಆಧರಿಸಿವೆ. ಅವೆಂದರೆ ಮೂಲಭೂತ ತತ್ವಗಳ ಅಥವಾ ಸಿದ್ಧಾಂತದ ನೆಲೆ, ಆ ತತ್ವಗಳನ್ನು ಜನಸಾಮಾನ್ಯರಿಗೆ ನಿರೂಪಿಸುವ ಪೌರಾಣಿಕ ನೆಲೆ ಮತ್ತು ಆ ತತ್ವಸಿದ್ಧಿಗಾಗಿ ಕಲ್ಪ ಅಂದರೆ ವಿಧಿ ವಿಧಾನಗಳನ್ನು ಒಳಗೊಂಡ ನಿತ್ಯ ನೈಮಿತ್ತಿಕ ಕರ್ಮಗಳ ಶ್ರದ್ಧಾಪೂರ್ಣ ಆಚರಣೆ.
ವ್ರತ, ಉತ್ಸವಗಳು ಆಚರಣೆಯ ಭಾಗವಾದರೂ ಅವುಗಳ ಮೂಲ ಉದ್ದೇಶ ಅನಿತ್ಯವಾದ ಲೌಕಿಕ ಸ್ತರದಿಂದ ನಮ್ಮನ್ನು ನಿತ್ಯವಾದ ಪಾರಮಾರ್ಥಿಕ ಸ್ತರಕ್ಕೆ ಏರಿಸುವುದಾಗಿದೆ. ಹಾಗಾಗಿ ಪ್ರತಿಯೊಂದು ಹಬ್ಬದ ಹಿನ್ನೆಲೆಯಲ್ಲೂ ಭೌಗೋಳಿಕ ನಿತ್ಯ ಸತ್ಯಗಳ ಪ್ರೇರಕಾಂಶಗಳಿವೆ. ಅದರಿಂದಾಗಿ ಚರಾಚರ ಜಗತ್ತಿನ ಸೂತ್ರದ ಕೊಂಡಿ ಸುಂದರವಾಗಿ ಹೆಣೆಯಲ್ಪಟ್ಟಿದೆ ಎನ್ನಬಹುದು.
ಕನ್ನಡಕದ ಕಾವ್ಯಾನಂದರು ತಮ್ಮ ವಚನೋದ್ಯಾನದಲ್ಲಿ ಹೀಗೆ ಹೇಳುತ್ತಾರೆ.
ತಂತಿಗಳಲ್ಲಿ ಸುನಾದವಿದೆ |
ಸೋರೆ ದಂಡಿಗಳಿಗೆ ಬಿಗಿದಾಗ ಮಾತ್ರ |
ವಾದ್ಯಗಳ ಮೈಗಳಿಗೆ ಬಿಗಿದಾಗ ಮಾತ್ರ |
ಬಿಲ್ಲಿನಲ್ಲಿ ಬಾಣ ಬಿಡುವ ಶಕ್ತಿಯಿದೆ |
ನಾರಿನಿಂದ ಬಿಗಿದಾಗ ಮಾತ್ರ |
ನನ್ನಲ್ಲಿಯೂ ನಿನ್ನರಿವ ಶಕ್ತಿಯಿದೆ |
ನಿನ್ನಡಿಗಳಿಗೆ ನನ್ನ ಬಿಗಿದಾಗ ಮಾತ್ರ ||
ಹೀಗೆ ಪರಮಾತ್ಮನ ಪಾದಾರವಿಂದಗಳಲ್ಲಿ ನಮ್ಮನ್ನು ನಾವು ಬಿಗಿದುಕೊಂಡು ಆರಾಧಿಸಲು ಹಬ್ಬ ಹರಿದಿನಗಳೇ ಸೇತುವೆಯಾಗಿವೆ. ರೈತರೋ ಮೊದಲೇ ಮಣ್ಣಿನ ಮಕ್ಕಳು. ಕೃಷಿಯನ್ನೇ ಆಧರಿಸಿ ಜೀವನ ನಡೆಸುವವರು. ಹಾಗೆಂದೇ ಜನಪದರು.
ಮಣ್ಣನ್ನೇ ನಂಬಿ ಮಣ್ಣಿಂದ ಬದುಕೇನ |
ಮಣ್ಣೆನಗೆ ಮುಂದೆ ಹೊನ್ನ ಅಣ್ಣಯ್ಯ |
ಮಣ್ಣೇ ಲೋಕದಲಿ ಬೆಲೆಯಾದ್ದು ||
ಎಂದು ರೈತರನ್ನು ಹಾಡಿ ಕೊಂಡಾಡುತ್ತಾರೆ. ಹಬ್ಬದಾಚರಣೆಯ ನೆವದಲ್ಲಿ ತಮ್ಮ ಕಾಯಕಕ್ಕೆ ನೆರವಾದವರನ್ನು ಒಂದಿಲ್ಲೊಂದು ರೀತಿಯಲ್ಲಿ ನೆನೆಯುವುದು ಜನಪದರ ಉದ್ದೇಶ. ಈ ಹಿನ್ನೆಲೆಯಲ್ಲಿ ಬಂದದ್ದೇ ಜಾನಪದರ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ. ಜಾನಪದರ ಪ್ರತಿಯೊಂದು ಆಚರಣೆಯ ಹಿಂದೊಂದು ನಂಬಿಕೆಯಿದೆ. ಅದಕ್ಕೆ ಮಣ್ಣೆತ್ತಿನ ಅಮಾವಾಸ್ಯೆಯು ಹೊರತಲ್ಲ. ಈ ದಿನದಂದು ರೈತರು ಆ ವರ್ಷ ಬೆಳೆಯಬಹುದಾದ ಬೆಳೆಯನ್ನು ನಿರ್ಧರಿಸುತ್ತಾರೆ.
ಕಾರಹುಣ್ಣಿಮೆಯ ಕರಿ ಹರಿದು ನಂತರ ಮನೆಗೆ ತರುವಾಗ ಮನೆಯ ಬಾಗಿಲಲ್ಲಿ ತಾವು ಆ ವರ್ಷ ತಮ್ಮ ಹೊಲಗಳಿಗೆ ಯಾವ ಬೆಳೆ ಬಿತ್ತಬೇಕು ಎಂದು ನಿರ್ಧರಿಸುವ ಸಲುವಾಗಿ ಒಂದಿಷ್ಟು ಧಾನ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಂತರ ಮನೆಯ ಎತ್ತು ಹಾದು ಹೋಗುವ ಬಾಗಿಲಲ್ಲಿ ಆ ಧಾನ್ಯಗಳನ್ನು ಸೇರಿನೊಳಗೆ ಹಾಕಿ ಇಡುತ್ತಾರೆ. ಹೀಗೆ ಹಾದುಹೋಗುವಾಗ ಎತ್ತು ಯಾವ ಸೇರನ್ನು ತಳ್ಳಿ ಮುಂದೆ ಸಾಗುತ್ತದೆಯೋ ಆ ಧಾನ್ಯದ ಬೆಳೆಯನ್ನು ಆ ವರ್ಷ ಬೆಳೆಯುತ್ತಾರೆ.
ಪ್ರತಿ ವರ್ಷದ ಉತ್ತರಾಯಣ-ದಕ್ಷಿಣಾಯನಗಳ ಹೊಸ್ತಿಲಲ್ಲಿ ಬರುವ ಜ್ಯೇಷ್ಠಮಾಸವು ನಮ್ಮ ಸಂಸ್ಕೃತಿಯಲ್ಲಿ ಬಹುಮುಖ್ಯ ಮಾಸವಾಗಿದೆ. ಫಾಲ್ಗುಣ ಮಾಸವು ಶುಕ್ಲವರ್ಣದ ‘ದ್ಯು’ ಎಂಬ ಆಕಾಶತತ್ತ್ವದ ಶುರುವಾದರೆ-ಜ್ಯೇಷ್ಠಮಾಸವು ಕೃಷ್ಣವರ್ಣದ ‘ಭೂ’ ಎಂಬ ಭೂತತ್ತ್ವದ ಶುರುವಾತನ್ನು ತರುತ್ತದೆ. ಈ ಮಾಸವು ನಿರ್ಜಲ ಏಕಾದಶಿ, ಸೌರ ನರಸಿಂಹ ಜಯಂತಿ, ಭೂಮಿ ಪೂರ್ಣಿಮೆ, ಶುಕ್ಲಾದೇವಿ-ಗಂಗಾವತರಣ ಅಷ್ಟಮಿ ಮೊದಲಾದ ಪವಿತ್ರ ಆಚರಣೆಗಳಿಂದ ಕೂಡಿ ಕೊನೆಗೆ ಮಣ್ಣೆತ್ತಿನ ಅಮಾವಾಸ್ಯೆಯಲ್ಲಿ ಮುಗಿಯುವುದು. ಜ್ಯೇಷ್ಠ-ಆಷಾಢಗಳು ದುರ್ಗಾಮಾಸವೆಂದೇ ಸಂಪ್ರದಾಯ ಖ್ಯಾತವಾಗಿದೆ. ಆಷಾಢದ ಗಾಳಿ-ಮಳೆಗೆ ಮುನ್ನ ಭೂಮಿ ಮಣ್ಣನ್ನು ಚಂದ್ರಕಲೆಗಳು ಬೆರೆತು ಫಲವತ್ತಾಗಿಸುತ್ತದೆ. ಅದರ ಸೌಲಭ್ಯವನ್ನು ಉತ್ತಿ ಬಿತ್ತಿ ಬೆಳೆ ತೆಗೆಯುವುದು ಮನುಷ್ಯರ ಕೆಲಸ ಮತ್ತು ಅದರಿಂದಲೇ ಸಮಸ್ತರಿಗೂ ಅನ್ನೋತ್ಪತ್ತಿ. ಈ ತೆರನಾದ ಕೊಂಡಿ-ತಂತು ಪ್ರಕೃತಿಗೂ-ಕಾಲಕೂ-ಭೂಮಿಗೂ ಇದೆ ಎಂಬ ವಿಸ್ಮಯ ವಿಚಾರವನ್ನು ಸಹಸ್ರಾರು ವರ್ಷದ ಹಿಂದೆಯೇ ನಮ್ಮ ದೇಶಿಗರು ಕಂಡುಕೊಂಡಿದ್ದರು. ಆ ಸಮಯದಲ್ಲಿ ತತ್‌ಸಂಬಂಧಿ ಪೂಜಾದಿಗಳನ್ನು, ವ್ರತಗಳನ್ನು ನಿರೂಪಿಸಿ ಸಮಸ್ತ ಜನರಿಗೆ ಆಯಾ ಕಾಲದ ಕರ್ತವ್ಯದ ಬಗ್ಗೆ ತಿಳಿವು ಮೂಡುವಂತೆ ಮಾಡಿದ್ದರು. ಈ ತಿಳಿವಿನ ಮೂಲ-ಜಾಲವೇ ನಮ್ಮ ಹಬ್ಬ-ಹರಿದಿನಗಳೆಂಬ ಭಾರತೀಯತೆಯಾಗಿದೆ.
ಆಧುನಿಕತೆಯ ಯಂತ್ರ ನಾಗಾಲೋಟದಲ್ಲಿ ಇದೆಲ್ಲ ಹೀಗಿದೆ ಎಂದು ಸಹ ತಿಳಿಯದೇ ಪರಕೀಯ ವಿಚಾರದಲ್ಲಿ ಜನಜೀವನ ನಡೆದಿದೆ. ಸೂರ್ಯನಿಂದ ಸಮಸ್ತ ಜಗ, ಶಾಖ, ಬೆಳಕು. ಚಂದ್ರನಿಂದ ನೀರು-ತಂಪು ಭೂಮಿಗೆ. ಇಂಥ ಭೂಮಣ್ಣನ್ನು ಜ್ಯೇಷ್ಠದ ಅಮಾವಾಸ್ಯೆಯಂದು ಪೂಜಿಸಿ, ಆ ಮಣ್ಣಿನಿಂದ ಉಳುವ ನೇಗಿಲು-ಎತ್ತುಗಳಿಗೆ ಲೇಪ ಮಾಡಿ-ಗೋಧೂಳಿ ಸಮಯದಲ್ಲಿ ಫಲಪುಷ್ಪ-ಆರತಿಗಳಿಂದಲೂ-ಬಲಿಹಿರಣದಿಂದಲೂ, ಹಣತೆಯಿಂದಲೂ ಪೂಜಿಸುವ ದಿನವಿದು. ಹೀಗೆ ಸೂರ್ಯ-ಚಂದ್ರ-ಭೂಮಿ-ಉಳುಮೆಗಳು ಪರಸ್ಪರ ಕೂಡಿಕೊಂಡಿದೆ. ಆ ಕೂಡಿಕೆಯಿಂದಲೇ ಅನ್ನ-ನೀರು ದೊರೆಯುವುದಲ್ಲವೇ?! ಹಾಗೆಂದೇ ಭೂದೇವಿಯನ್ನು ಪೂಜಿಸಬೇಕು. ಎತ್ತುಗಳು ಪರಮೇಶ್ವರನ ಸ್ವರೂಪ, ನೇಗಿಲು ಈಶ್ವರನ ಆಯುಧಗಳ ಸ್ವರೂಪ. ಹೀಗೆ ಜ್ಯೇಷ್ಠದ ಅಮಾವಾಸ್ಯೆಯ ಪೂಜಾದಿಗಳ ಹಿಂದಿನ ಅನು ಸಂಧಾನವಿದೆ. ಇನ್ನು ಈ ಪರ್ವ ಕಾಲವನ್ನು ಆಚರಣೆಯನ್ನು ಅಮಾವಾಸ್ಯೆಯೇ ಏಕೆ ಎಂದರೆ, ಅದು ಭೂಮಿಯ ಸಂಬಂಧಿ ದಿನ ಹುಣ್ಣಿಮೆ ಚಂದ್ರನ ಸಂಬಂಧಿ ದಿನ. ಆಯಾ ದಿನಗಳಿಗೆ ಅದರದೇ ಆದ ಮಹತ್ವವಿದೆ ಎಂದೂ ಈ ಪರ್ವ ದಿನಗಳ ಆಚರಣೆ ನಡೆದು ಬಂದಿದೆ.
ಲೇಖನ: ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು
Discussion about this post