ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ವಿಜಯನಗರ ಜಿಲ್ಲೆಯ ಹಂಪಿಯ ನಡುಗಡ್ಡೆಯಲ್ಲಿ ವಿಜಯ ವಿಠ್ಠಲ ದೇವಾಲಯದ ಸಮೀಪ ದೊಡ್ಡ ಬಂಡೆಯ ಮೇಲಿರುವ ಶ್ರೀ ನರಹರಿ ತೀರ್ಥರು ಬೃಂದಾವನ #Shri Narahari Thirtha’s Brindavana ವಿಚಾರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನ್ಯಾಯಾಲಯದಲ್ಲಿ ಜಯ ಸಂದಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು #Subudhendra Shri of Mantralaya ತಿಳಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಶ್ರೀಗಳು, ಮಧ್ವಾಚಾರ್ಯರ ನೇರ ಶಿಷ್ಯರಾದ ಶ್ರೀ ನರಹರಿ ತೀರ್ಥರ ಮೂಲ ಬೃಂದಾವನ ವಿಚಾರದಲ್ಲಿ ಬೇರೆ ಮಠದವರು ನಮ್ಮ ಮೇಲೆ ಪ್ರಕರಣ ಮಾಡಿದ್ದರು. ಇದು ನಮ್ಮ ಪರಮ ಗುರುಗಳಾದ ಶ್ರೀಸುಶಮೀಂಧ್ರರ ಕಾಲದಿಂದಲೇ ಪ್ರಕರಣ ನ್ಯಾಯಾಲಯದಲ್ಲಿತ್ತು. ಸುದೀರ್ಘ ವಿಚಾರಣೆ ನಂತರ ಶ್ರೀಮಠದ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ ಎಂದು ತಿಳಿಸಿದ್ದಾರೆ.
ಕೆಳಗಿನ ನ್ಯಾಯಾಲಯದಲ್ಲಿ ನಮ್ಮ ಮಠಕ್ಕೆ ವಿರುದ್ಧವಾಗಿ ತೀರ್ಪು ಬಂದಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಧಾರವಾಡ ಪೀಠಕ್ಕೆ ಮೇಲ್ಮನವಿ ಹಾಕಿ ಎಲ್ಲ ದಾಖಲೆಗಳನ್ನು ಸಲ್ಲಿಸಿ ಪ್ರಶ್ನೆ ಮಾಡಿದ್ದೆವು ಎಂದರು.
Also read: ಗಿಡಮೂಲಿಕೆಗಳಿಂದ ಜಾನುವಾರು ರೋಗ ನಿಯಂತ್ರಣ ಸಾಧ್ಯ: ಡಾ. ವಿಲಾಸ್
ಕೆಳಗಿನ ನ್ಯಾಯಾಲಯದ ಆದೇಶದ ತಾಂತ್ರಿಕ ಹಾಗೂ ಕಾನೂನಾತ್ಮಕ ದೋಷವನ್ನು ಎತ್ತಿ ಹಿಡಿದ ಉಚ್ಚ ನ್ಯಾಯಾಲಯ, ನಮ್ಮ ಮನವಿಯನ್ನು ಪುರಸ್ಕರಿಸಿ, ಕೆಳಗಿನ ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಈ ಮೂಲಕ ಉತ್ತಮ ತೀರ್ಪು ನೀಡಿದೆ ಎಂದರು.
ಪ್ರಮುಖವಾಗಿ, ನರಹರಿ ತೀರ್ಥರ ದೈನಂದಿನ ಪೂಜೆ, ಆರಾಧನೆ ಸೇರಿದಂತೆ ಮತ್ತಿತರ ವಿಚಾರಗಳ ವಿವಾದಗಳು ಇಲ್ಲಿಗೆ ಇತ್ಯರ್ಥವಾಗಿದ್ದು, ಇನ್ನು ಮುಂದೆ ಯಾವುದೇ ರೀತಿಯ ಗೊಂದಲಗಳು ಇರುವುದಿಲ್ಲ ಎಂದರು.
ಈ ಪ್ರಕರಣದ ಸುದೀರ್ಘ ಹಾದಿಯಲ್ಲಿ ಯಶಸ್ಸಿಗೆ ಕಾರಣಕರ್ತರಾದ ವಕೀಲರಾದ ಕೃಷ್ಣಶಾಸ್ತ್ರೀ, ದತ್ತಾತ್ರೇಯ, ಶ್ರೀಮಠದ ಕೃಷ್ಣಮೂರ್ತಿ, ತಹಶೀಲ್ದಾರ್ ಶ್ರೀನಿವಾಸ ಮೂರ್ತಿ, ವಕೀಲರಾದ ಬಿಸಲಳ್ಳಿ ರಾಮಮೂರ್ತಿ, ನಮ್ಮ ಮಠದ ಕೃಷ್ಣಮೂರ್ತಿ, ರಾಜಾಕೃಷ್ಣಾಚಾರ್ಯರು, ಗಿರಿಯಾಚಾರ್ಯರು, ರಾಜಗೋಪಾಲಾಚಾರ್ಯರು, ಸುಯತೀಂದ್ರಾಚಾರ್ಯರು, ಹಿರಿಯ ನ್ಯಾಯವಾದಿಗಳಾದ ಪ್ರಭುಲಿಂಗ ನಾವಡಗಿ, ಕೆ. ಸುಮನ್, ಅಡಿಗರು, ಕಶ್ಯಪ್, ನ್ಯಾಯಾಧೀಶರಾದ ಶ್ರೀಧರರಾಯರು, ಹಿರಿಯ ವಕೀಲ ನಾಗೇಶ್, ಬಳ್ಳಾರಿ ಠಾಣಾಪುರ ಶ್ರೀನಿವಾಸ್, ವಿಜಯೀಂದ್ರ, ಮೋಹಿತ್ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೆ ಅಭಿನಂದನೆಗಳು. ಈ ತೀರ್ಪನ್ನು ಗುರುರಾಜರಿಗೆ ಎಲ್ಲರ ಪರವಾಗಿ ಸಮರ್ಪಣೆ ಮಾಡಿದ್ದೇವೆ ಎಂದರು.
ನಾವು ಈ ಎಲ್ಲ ವಿಚಾರಗಳನ್ನು ಯಾರಿಗೂ ನೋವಾಗುವ ಮಾಹಿತಿಯಾಗಿ ತಿಳಿಸಿಲ್ಲ. ಶ್ರೀಮಠದ ಭಕ್ತರಿಗೆ ಇದನ್ನು ತಿಳಿಸಬೇಕಾದ್ದರಿಂದ ತಿಳಿಸಿದ್ದೇವೆ ಅಷ್ಟೇ. ಯಾರೂ ಅನ್ಯಥಾ ಭಾವಿಸಬಾರದು ಎಂದು ಶ್ರೀ ಸುಬುಧೇಂದ್ರ ತೀರ್ಥರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post