ಕಲ್ಪ ಮೀಡಿಯಾ ಹೌಸ್ | ಮಂತ್ರಾಲಯ |
ಮಂತ್ರಾಲಯ ಮಹಾಕ್ಷೇತ್ರದ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಪವಿತ್ರ ಸನ್ನಿಧಾನದಲ್ಲಿ, ಡಿ.೧೨ರ ಸೋಮವಾರದಂದು ವಿಶ್ವಪ್ರಸಿದ್ಧ ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್(ರಿ) ಜಾಗತಿಕ ಸಂಸ್ಥೆಯು ಶ್ರೀಮಠದ ಸಹಯೋಗದಲ್ಲಿ ‘ರಾಷ್ಟ್ರೀಯ ವಿಷ್ಣುಸಹಸ್ರನಾಮ ಸಮ್ಮೇಳನ ಏರ್ಪಡಿಸಲಾಗಿದೆ.
ರಾಷ್ಟ್ರದ ನಾನಾ ಭಾಗಗಳಿಂದ ಆಗಮಿಸಲಿರುವ ಭಕ್ತವೃಂದದಿಂದ ರಾಯರ ಬೃಂದಾವನ ಪ್ರಾಕಾರದ ಪ್ರದಕ್ಷಿಣಾ ಪಥದಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದ್ದು, ಶ್ರೀ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದರು ದಿವ್ಯ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಗ್ಲೋಬಲ್ ವಿಷ್ಣುಸಹಸ್ರನಾಮ ಸತ್ಸಂಗ ಫೆಡರೇಷನ್(ರಿ) ಸಂಸ್ಥಾಪಕ ಅಂತರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಅರಳುಮಲ್ಲಿಗೆರವರು ರಚಿಸಿರುವ ‘ವಿಷ್ಣುಸಹಸ್ರನಾಮದ ಅರ್ಥಗಳು’ ಗ್ರಂಥದ ಐದನೆಯ ಆವೃತ್ತಿಯನ್ನು ಶ್ರೀಗಳವರು ಲೋಕಾರ್ಪಣೆಗೊಳಿಸಲಿದ್ದಾರೆ.

ಐವತ್ನಾಲ್ಕು ಗ್ರಂಥಗಳು ಹಾಗೂ ನಲವತ್ತು ಧ್ವನಿ ಮುದ್ರಿಕೆಗಳು, ನಾಲ್ಕು ಸಹಸ್ರಕ್ಕೂ ಹೆಚ್ಚು ದೇಶವಿದೇಶಗಳಲ್ಲಿ ಮಾಡಿರುವ ಅಪೂರ್ವ ಪ್ರವಚನಗಳಿಂದಾಗಿ ವಿಶ್ವವಿಖ್ಯಾತರಾಗಿರುವ ಅರಳುಮಲ್ಲಿಗೆ ಪಾರ್ಥಸಾರಥಿಯವರು ಜಗತ್ತಿನ ನಾನಾ ರಾಷ್ಟ್ರಗಳ ಗಣ್ಯಾತಿಗಣ್ಯರಿಂದ ಹಾಗೂ ಪ್ರತಿಷ್ಠಿತ ಸಂಘಸಂಸ್ಥೆಗಳಿಂದ ವಿಶೇಷ ಗೌರವ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಗ್ಲೋಬಲ್ ವಿಷ್ಣು ಸಹಸ್ರನಾಮ ಸತ್ಸಂಗ ಫೆಡರೇಷನ್ನಂತಹ ಅಂತರರಾಷ್ಟ್ರೀಯ ಮಹತ್ವದ ಸಂಸ್ಥೆಯ ಸಂಸ್ಥಾಪಕರಾಗಿ, ದಾಸಸಾಹಿತ್ಯ ಹಾಗೂ ವಿಷ್ಣುಸಹಸ್ರನಾಮಗಳ ಬೃಹತ್ ಸಂಚಲನವನ್ನು ವಿಶ್ವಮಟ್ಟದಲ್ಲಿ ಶ್ರೀಯುತರು ಮೂಡಿಸುತ್ತ ಆಧ್ಯಾತ್ಮಿಕ ಆಂದೋಲನದ ಪ್ರಮುಖ ಮಾರ್ಗದರ್ಶಕರಾಗಿದ್ದಾರೆ. ವಿವರಗಳಿಗೆ :98867 80215ಗೆ ಸಂಪರ್ಕಿಸಬಹುದು.











Discussion about this post