ಬೆಂಗಳೂರು: ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಪಿಂಚಣಿ ವಂಚಿನ ನೌಕರರು ನಡೆಸುತ್ತಿರುವ ಬೃಹತ್ ಪ್ರತಿಭಟನೆ ಚುರುಕುಗೊಂಡಿದೆ.
ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ಕೂಗು ಒಂದು ಕಡೆಯಾದರೆ ಅದೇ ಶಾಲೆಗಳಲ್ಲಿ ದುಡಿಯುತ್ತಿರುವ ಸುಮಾರು ನಾಲವತ್ತು ಸಾವಿರಕ್ಕೂ ಅಧಿಕ ಶಿಕ್ಷಕರು ಹಾಗೂ ನೌಕರರಿಗೆ ನಿವೃತ್ತಿ ಜೀವನದ ನಂತರ ದೊರೆಯಬೇಕಾದ ಪಿಂಚಣಿ ಹಾಗೂ ಮತ್ತಿತರ ಪ್ರಮುಖ ಸೌಲಭ್ಯಗಳನ್ನು ನೀಡದೆ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ನೌಕರರು ದೂರಿದ್ದಾರೆ.
ಇತ್ತೀಚೆಗಷ್ಟೇ ವೇತನಾನುದಾನಕ್ಕೊಳಪಟ್ಟಿರುವ ರಾಜ್ಯದ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನುದಾನ ರಹಿತ ಅವಧಿಯಲ್ಲಿ ಅನೇಕ ವರ್ಷಗಳ ಕಾಲ ವೇತನವಿಲ್ಲದೆ ದುಡಿದಿದ್ದಾರೆ. ಆದರೆ ಇವರ ಸೇವಾವಧಿಯನ್ನು ಪರಿಗಣಿಸಿ ವೇತನ ನಿಗದಿಗೊಳಿಸುವ ಸಲುವಾಗಿ ವಿಧಾನ ಪರಿಷತ್ತಿನ ಈಗಿನ ಸಭಾಪತಿ ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ನೀಡಿರುವ ಕಾಲ್ಪನಿಕ ವೇತನ ವರದಿಯನ್ನು ಯಥಾವತ್ತಾಗಿ ಜಾರಿ ಹಾಗೂ ನಿಶ್ಚಿತ ಪಿಂಚಣಿ ಯೋಜನೆ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಆದರೆ ಸರಕಾರ ಮಾತ್ರ ಇವರ ಕೂಗನ್ನು ಕೇಳಿಯೂ ಕೇಳದಂತೆ ವರ್ತಿಸುತ್ತಿರುವುದಕ್ಕೆ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ. ಹನುಮಂತಪ್ಪ ಮಾತನಾಡಿ 2006ರ ಎಪ್ರಿಲ್ 1ರ ನಂತರ ಅನುದಾನಕ್ಕೊಳ್ಪಟ್ಟು ವೇತನ ಪಡೆಯುತ್ತಿರುವ ಅನುದಾನಿತ ವಿದ್ಯಾ ಸಂಸ್ಥೆಗಳ ಸುಮಾರು ನಾಲವತ್ತು ಸಾವಿರಕ್ಕೂ ಹೆಚ್ಚು ನೌಕರರಿರಗೆ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಯಾಗಬೇಕು. ವೇತನಾನುದಾನಕ್ಕೊಳಪಟ್ಟು ಕೇವಲ ಬೆರಳೆಣಿಕೆಯಷ್ಟು ವರ್ಷ ಮಾತ್ರ ವೇತನ ಪಡೆದು ಈಗ ಕೊನೆ ತಿಂಗಳ ಸಂಬಳವನ್ನಷ್ಟೇ ಪಡೆದ ಸಾವಿರಾರು ನೌಕರರು ಬರಿಗೈಲಿ ನಿವೃತ್ತರಾಗಿದ್ದು ಅವರ ಸಂಧ್ಯಾಕಾಲದ ಆಸರಗೆ ಬಿಡಿಗಾಸು ಇಲ್ಲದೇ ಪರದಾಡುತ್ತಿದ್ದಾರೆ. ಅವರ ನಿವೃತ್ತಿ ಜೀವನ ನೆಮ್ಮದಿಯಾಗಿರಬೇಕೆಂದರೆ ಸರ್ಕಾರ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನ್ಯಾಯಯುತವಾಗಿರುವ ನಮ್ಮ ಈ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಗುರುವಾರ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಪ್ರೀಡಂ ಪಾರ್ಕವರೆಗೆ ರಾಜ್ಯದ ಸುಮಾರು 20,000 ಸಾವಿರ ಅನುದಾನಿತ ಪಿಂಚಣಿ ವಂಚಿತ ನೌಕರರು ಬೃಹತ್ ರ್ಯಾಲಿ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದೇವೆ. ಆದರೂ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ ಈ ಕಾರಣದಿಂದ ಈಗಾಗಲೇ ಸಾಕಷ್ಟು ಹೋರಾಟಗಳನ್ನು ಮಾಡಿ ರೋಸಿ ಹೋಗಿರುವ ನಾವು ಅ.15ರಿಂದ ಅನುದಾನಿತ ವಿದ್ಯಾ ಸಂಸ್ಥೆಗಳ ಸಾವಿರಾರು ಶಿಕ್ಷಕರು, ನೌಕರರು ಇದೇ ಪ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹದ ಮಾಡುವುದರ ಜತೆ ಹೋರಾಟವನ್ನು ತೀವ್ರಗೊಳಿಸಲು ತೀರ್ಮಾನಿಸಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಅನುದಾನಿತ ಪಿಂಚಣಿ ವಂಚಿತ ಸಂಘದ ಪದಾಧಿಕಾರಿಗಳು, ಪಿಂಚಣಿ ಹಾಗೂ ಕಾಲ್ಪನಿಕ ವೇತನ ವಂಚಿತ ಸಾವಿರಾರು ಶಿಕ್ಷಕರು, ನೌಕರರು ಪಾಲ್ಗೊಂಡಿದ್ದರು. ನೌಕರರ ಈ ಹೋರಾಟಕ್ಕೆ ರಾಜ್ಯದ ಎನ್‌ಪಿಎಸ್ ನೌಕರರ ಸಂಘಟನೆಯೂ ಸೇರಿದಂತೆ ನಾನಾ ಶಿಕ್ಷಕ, ಹಾಗೂ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿವೆ.
Discussion about this post