ಬೆಂಗಳೂರು: ಭಾರತೀಯ ರಂಗ ಭೂಮಿಯ ಅನರ್ಘ್ಯ ರತ್ನ, ಹಿರಿಯ ನಟ, ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಇಂದು ವಿಧಿವಶರಾಗಿದ್ದಾರೆ.
ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ಹಿರಣ್ಣಯ್ಯ, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಬಿಜಿಎಸ್ ಆಸ್ಪತ್ರೆಯಿಂದ ಪಾರ್ಥಿವ ಶರೀರರನ್ನು ಬನಶಂಕರಿಯಲ್ಲಿರುವ ನಿವಾಸಕ್ಕೆ ತರಲಾಗುತ್ತಿದ್ದು, ಅಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎನ್ನಲಾಗಿದೆ.
1934 ಫೆಬ್ರವರಿ 15 ರಂದು ಮೈಸೂರಿನಲ್ಲಿ ಜನಿಸಿದ್ದ ಮಾಸ್ಟರ್ ಹಿರಣ್ಣಯ್ಯ ಮಾತಿನ ಮಲ್ಲ ಎಂದೇ ಚಿರಪರಿಚಿತರಾಗಿದ್ದು, ಅವರ ಮೂಲಕ ಹೆಸರು ನರಸಿಂಹಮೂರ್ತಿ. ವೃತ್ತಿ ರಂಗಭೂಮಿಯಲ್ಲಿ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದರು. ಲಂಚಾವತರ ನಾಟಕದಲ್ಲಿನ ಅಭಿನಯ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತ್ತು.
ತಮ್ಮ ತಂದೆಯವರ ಹಿರಣ್ಣಯ್ಯ ಮಿತ್ರಮಂಡಳಿಯನ್ನು ಮುಂದುವರೆಸಿಕೊಂಡು ಬಂದ ಇವರು ಸಾವಿರಾರು ಕಡೆಗಳಲ್ಲಿ ಪ್ರದರ್ಶನ ನೀಡಿದ ಹಿರಿಮೆ ಹೊಂದಿದ್ದಾರೆ.
ಸಮಾಜದ ಅಂಕು ಡೊಂಕುಗಳನ್ನು ಮುಲಾಜಿಲ್ಲದೆ ಟೀಕಿಸುತ್ತಿದ್ದ ಹಿರಣ್ಣಯ್ಯ ಅವರು ಯಾವ ರಾಜಕಾರಣಿಯನ್ನು ಟೀಕಿಸಲು ಹಿಂಜರಿದವರಲ್ಲ ಎಂಬುದನ್ನು ಇಡಿಯ ದೇಶವೇ ಕಂಡಿದೆ.
ರಾಜಕಾರಣಿಗಳ ಬಗ್ಗೆ ವೇದಿಕೆಯಲ್ಲಿ ಟೀಕಿಸಿ ಕೇಸುಗಳನ್ನುಮೈಮೇಲೆ ಎಳೆದುಕೊಂಡಿದ್ದ ಗಟ್ಟಿಗ ಹಿರಣ್ಣಯ್ಯ ಸುಪ್ರೀಂಕೋರ್ಟ್ ಮೆಟ್ಟಿಲನ್ನೂ ಏರಿ ನ್ಯಾಯ ಪಡೆದಿದ್ದು, ಇವರಿಗೆ ಇವರೇ ಸಾಟಿ ಎಂಬಂತೆ ಬದುಕಿದ್ದವರು.
ನಡುಬೀದಿ ನಾರಾಯಣ, ಪಶ್ಚಾತಾಪ, ಭ್ರಷ್ಟಾಚಾರ, ಲಂಚಾವತಾರ, ಡಬ್ಬಲ್ ತಾಳಿ, ಲಾಟರಿ ಸರ್ಕಾರ, ಸನ್ಯಾಸಿ ಸಂಸಾರ , ಎಚ್ಚಮ ನಾಯಕ ಮೊದಲಾದವು ಜನಮನಗೆದ್ದ ನಾಟಕಗಳಾದರೆ, ಕೇರ್ ಆಫ್ ಪುಟ್ ಪಾತ್, ನಂ.73 ಶಾಂತಿ ನಿವಾಸ, ಗಜ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಅಭಿನಯಿಸಿದ್ದ ಚಿತ್ರಗಳು.
ಇವರ ಅಪ್ರತಿಮ ಪ್ರತಿಭೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಮಾಸ್ಟರ್ ಹಿರಣ್ಣಯ್ಯ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
Discussion about this post